ವೇತನವಿಲ್ಲದೆ ನರೇಗಾ ನೌಕರರ ಪರದಾಟ: ತಾಳಿ ಅಡವಿಟ್ಟು ಮಕ್ಕಳ ಫೀಜು ಕಟ್ಟಿದ ಮಹಿಳಾ ಸಿಬ್ಬಂದಿ
ನರೇಗಾ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಇದರಿಂದ ಅನೇಕ ಗ್ರಾಮೀಣ ಬಡ ಜನರು ಬದುಕು ಕಟ್ಟಿಕೊಂಡಿದ್ದಾರೆ. ನರೇಗಾ ಯೋಜನೆಗೆ ಹೊರಗುತ್ತಿಗೆ ಆಧಾರದ ಮೇಲೆ ನೌಕರರನ್ನು ನೇಮಕ ಮಾಡಿಕೊಳ್ಳಲಾಗಿದೆ. ನರೇಗಾ ಯಶಸ್ವಿಯಾಗಲು ಹೊರಗುತ್ತಿಗೆ ನೌಕರರ ಶ್ರಮ ಸಾಕಷ್ಟಿದೆ. ಆದರೆ, ಈ ನೌಕರರಿಗೆ ಕಳೆದ ಏಳು ತಿಂಗಳಿಂದ ವೇತನ ನೀಡಿಲ್ಲ. ಹೀಗಾಗಿ, ನೌಕರರು ಹೋರಾಟದ ಹಾದಿ ಹಿಡಿದಿದ್ದಾರೆ.

ಬಾಗಲಕೋಟೆ, ಜು.10: ಮಹಾತ್ಮಾಗಾಂಧಿರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (NREGA scheme)ಯಡಿ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಬಾಗಲಕೋಟೆ (Bagalkot)ಯ ನೌಕರರಿಗೆ ಕಳೆದ ಏಳು ತಿಂಗಳಿಂದ ವೇತನ ಆಗಿಲ್ಲ. ವೇತನಕ್ಕಾಗಿ ಹೊರಗುತ್ತಿಗೆ ನೌಕರರು ಅಲೆದಾಡಿ, ಕೊನೆಗೆ ಅಸಹಕಾರ ಚಳುವಳಿ ನಡೆಸುತ್ತಿದ್ದಾರೆ. ನಮಗೆ ಸಕಾಲಕ್ಕೆ ವೇತನ ನೀಡಿ, ವಿಮಾ ಸೌಲಭ್ಯ ಕಲ್ಪಿಸಿ ಹಾಗೂ ಒಳಗುತ್ತಿಗೆ ಅಂತ ಪರಿಗಣಿಸಿ ಎಂದು ನೌಕರರು ಆಗ್ರಹಿಸಿದ್ದಾರೆ.
“ಮಕ್ಕಳ ಶಾಲಾ ಶುಲ್ಕ ಕಟ್ಟಲು ತಾಳಿ ಅಡವಿಟ್ಟಿದ್ದೇನೆ. ಕಳೆದ ಆರು ತಿಂಗಳಿಂದ ಹಾಲಿನ ಹಣ ಕೊಡುವುದಕ್ಕೆ ದುಡ್ಡಿಲ್ಲದಂತಾಗಿದೆ. ಮನೆ ಬಾಡಿಗೆ ಕಟ್ಟಲು ಹಣವಿಲ್ಲದೆ ಮನೆ ಬದಲಾಯಿಸುತ್ತಿದ್ದೇನೆ. ವೇತನ ಇಲ್ಲದಿದ್ದಕ್ಕೆ ಎಲ್ಲಿಯೂ ಒಂದು ರೂಪಾಯಿ ಸಾಲ ದೊರೆಯುತ್ತಿಲ್ಲ. ಆದಷ್ಟು ಬೇಗ ನಮಗೆ ವೇತನ ನೀಡಿ ನಮ್ಮ ಕುಟುಂಬ ರಕ್ಷಿಸಿ” ಎಂದು ಮಹಿಳಾ ಸಿಬ್ಬಂದಿ ರೇಣುಕಾ ಅಳಲು ತೋಡಿಕೊಂಡಿದ್ದಾರೆ.
ಕೆಲ ನೌಕರರು ವಿವಿಧ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ತಮ್ಮ ಕಷ್ಟ ನೆನೆದು ಕಣ್ಣೀರು ಹಾಕಿದ್ದಾರೆ. ನೌಕರ ಪುಂಡಲೀಕ ಲಮಾಣಿ ಎಂಬುವರ ಪುತ್ರನಿಗೆ ಥಲೆಸೀಮಿಯಾ ಕಾಯಿಲೆ ಇದೆ. , ಚಿಕಿತ್ಸೆ ಕೊಡಿಸಬೇಕು, 15 ದಿನಕ್ಕೊಮ್ಮೆ ರಕ್ತ ಬದಲಾವಣೆ ಮಾಡಬೇಕು. ಆದರೆ, ಸಕಾಲಕ್ಕೆ ವೇತನ ಬಾರದೆ, ಹಣವಿಲ್ಲದೆ ಪರದಾಡುವಂತಾಗಿದೆ ಎಂದು ದುಃಖ ತೋಡಿಕೊಂಡರು.
ಇದನ್ನೂ ಓದಿ: ನರೇಗಾ ಯೋಜನೆ ಹಣ ಲೂಟಿ ಮಾಡಲು ಪುರುಷರಿಗೆ ಮಹಿಳೆ ವೇಷ ಹಾಕಿಸಿದ ಅಧಿಕಾರಿಗಳು!
ಒಟ್ಟಿನಲ್ಲಿ ಹೊರಗುತ್ತಿಗೆ ನೌಕರರ ಪರದಾಟ ಯಾರಿಗೂ ಕಾಣುತ್ತಿಲ್ಲ. ಮೇಲಾಧಿಕಾರಿಗಳನ್ನು ಕೇಳಿದರೆ ಸರ್ಕಾರಕ್ಕೆ ತಿಳಿಸಿದ್ದೇವೆ, ನಮ್ಮ ಕೈಯಲ್ಲಿ ಏನು ಇಲ್ಲ ಹೇಳಿದ್ದಾರೆ. ವೇತನವಿಲ್ಲದೆ ನೌಕರರು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸರ್ಕಾರ ಆದಷ್ಟು ಬೇಗ ವೇತನ ನೀಡಿ ಆಸರೆಯಾಗಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:34 pm, Thu, 10 July 25








