AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆ: ದಾಳಿಂಬೆ ಬೆಳೆಗೆ ಅಂಟಿದ ವಿಚಿತ್ರ ರೋಗ; ಬೆಳೆ ಬೆಳೆಯಲು ರೈತರ ಹಿಂದೇಟು

ಅದು ಹಣ್ಣು ಬೆಳೆಯೋದಕ್ಕೆ ಹೆಸರಾದ ಪ್ರದೇಶ. ಅದರಲ್ಲೂ ದಾಳಿಂಬೆ ಬೆಳೆಯುವುದಕ್ಕೆ ಅಲ್ಲಿನ ರೈತರದ್ದು ಎತ್ತಿದ ಕೈ. ಅಲ್ಲಿ ಬೆಳೆದ ದಾಳಿಂಬೆ ವಿದೇಶಕ್ಕೂ ರವಾನೆಯಾಗುತ್ತದೆ. ಆದರೆ, ಅದೊಂದು ರೋಗ ದಾಳಿಂಬೆಗೆ ಬಿಟ್ಟು ಬಿಡದೆ ಕಾಡುತ್ತಿದೆ. ಇದರಿಂದ ಅದೆಷ್ಟೋ ರೈತರು ದಾಳಿಂಬೆಯಿಂದ ವಿಮುಖವಾಗಿದ್ದಾರೆ. ಹಣ್ಣಿನ ನಾಡಲ್ಲಿ‌ ದಾಳಿಂಬೆ ಬೆಳೆಯುವವರ ಸಂಖ್ಯೆ ಬಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಅಷ್ಟಕ್ಕೂ ಇದಕ್ಕೆ ಏನು ಕಾರಣ ಅಂತೀರಾ? ಇಲ್ಲಿದೆ ನೋಡಿ ಡಿಟೇಲ್ಸ್.

ಬಾಗಲಕೋಟೆ: ದಾಳಿಂಬೆ ಬೆಳೆಗೆ ಅಂಟಿದ ವಿಚಿತ್ರ ರೋಗ; ಬೆಳೆ ಬೆಳೆಯಲು ರೈತರ ಹಿಂದೇಟು
ಬಾಗಲಕೋಟೆ
ರವಿ ಹೆಚ್ ಮೂಕಿ, ಕಲಘಟಗಿ
| Updated By: ಕಿರಣ್ ಹನುಮಂತ್​ ಮಾದಾರ್|

Updated on: Aug 29, 2023 | 6:49 PM

Share

ಬಾಗಲಕೋಟೆ, ಆ.29: ಕೊಳೆತು ಹಾಳಾಗುತ್ತಿರುವ ದಾಳಿಂಬೆ ಹಣ್ಣುಗಳು. ಹೊಲದಲ್ಲಿ ಒಣಗಿದ ದಾಳಿಂಬೆ (Pomegranate) ಗಿಡದ ರೆಂಬೆ ಕೊಂಬೆಗಳನ್ನು ಕಟಾವ್‌ ಮಾಡುತ್ತಿರುವ ಕಾರ್ಮಿಕರು. ಅಂದ ಹಾಗೆ ಈ ದೃಶ್ಯ ಕಂಡುಬಂದಿದ್ದು ಬಾಗಲಕೋಟೆ (Bagalakote) ತಾಲ್ಲೂಕಿನ ಕಲಾದಗಿ ಗ್ರಾಮದಲ್ಲಿ. ಕಲಾದಗಿ ಗ್ರಾಮ ಅಂದ ತಕ್ಷಣ ಉತ್ತರ ಕರ್ನಾಟಕ ಭಾಗದ ಎಲ್ಲರಿಗೂ ನೆನಪಾಗುವುದು ಹಣ್ಣುಗಳು. ಯಾಕೆಂದರೆ ಕಲಾದಗಿ ಹಾಗೂ ಸುತ್ತಮುತ್ತಲ ಏಳೆಂಟು ಹಳ್ಳಿಗಳ ಭಾಗದಲ್ಲಿ ಹಣ್ಣು ಪ್ರಮುಖ ಬೆಳೆ. ದಾಳಿಂಬೆ, ಪೇರು, ಚಿಕ್ಕು ಸೇರಿದಂತೆ ಬೆಳೆಯೋದಕ್ಕೆ ಕಲಾದಗಿ ಪ್ರಸಿದ್ಧ. ಇಲ್ಲಿ ಬೆಳೆದ ದಾಳಿಂಬೆ ವಿದೇಶಕ್ಕೂ ರವಾನೆಯಾಗುತ್ತದೆ. ಅಷ್ಟೊಂದು ಬೇಡಿಕೆ ಇರುವ ದಾಳಿಂಬೆ ಬೆಳೆಯುವ ಪ್ರದೇಶದಲ್ಲಿ, ವರ್ಷದಿಂದ ವರ್ಷಕ್ಕೆ ದಾಳಿಂಬೆ ಬೆಳೆಯುವ ಪ್ರದೇಶ ಕಡಿಮೆಯಾಗುತ್ತಾ ಹೊರಟಿದೆ.

ಹಣ್ಣುಗಳಿಗೆ ಅಂಟಿದ ರೋಗ, ಬೆಳೆ ಬೆಳೆಯಲು ರೈತರ ಹಿಂದೇಟು

ಕಲಾದಗಿ ಭಾಗದ ವ್ಯಾಪ್ತಿಯಲ್ಲಿ ಪ್ರತಿವರ್ಷ ಕನಿಷ್ಟ 5 ಸಾವಿರ ಎಕರೆ ದಾಳಿಂಬೆ ಬೆಳೆಯಲಾಗುತ್ತಿತ್ತು. ಆದರೆ, ಈಗ ಅದು ಮೂರು ಸಾವಿರ ಎಕರೆಗೆ ಬಂದು ತಲುಪಿದೆ. ಇದಕ್ಕೆಲ್ಲ ಕಾರಣ, ದಶಕಗಳಿಂದ ಕಾಡುತ್ತಿರುವ ದುಂಡಾಣು ಅಂಡಮಾರಿ ರೋಗ. ಬಿಟ್ಟು ಬಿಡದೆ ಕಾಡುತ್ತಿರುವ ರೋಗದಿಂದ ದಾಳಿಂಬೆ ಹಣ್ಣುಗಳಿಗೆ ಕಂಟಕ ಶುರುವಾಗಿದೆ. ಇದರಿಂದ ಕಲಾದಗಿ ಭಾಗದಲ್ಲೇ ಎರಡು ಸಾವಿರ ಎಕರೆಯಷ್ಟು ದಾಳಿಂಬೆ ಪ್ರದೇಶ ಕಡಿಮೆಯಾಗಿದೆ. ಇನ್ನು ಪಕ್ಕದಲ್ಲೇ ತೋಟಗಾರಿಕೆ ವಿಶ್ವ ವಿದ್ಯಾಲಯ ಇದ್ದು, ವಿಜ್ಞಾನಿಗಳಿದ್ದಾರೆ. ಆದರೂ, ಔಷಧಿಯಿಲ್ಲ. ಆದಷ್ಟು ಬೇಗ ಮಹಾಮಾರಿಗೆ ಔಷಧ ಕಂಡು ಹಿಡಿದು ರೈತರಿಗೆ ಅನುಕೂಲ ಕಲ್ಪಿಸಿ ಅಂತಿದ್ದಾರೆ ರೈತರು.

ಇದನ್ನೂ ಓದಿ:ಇದೇನಿದು ಬಂದೂಕು ಹಿಡಿದು ದಾಳಿಂಬೆ ತೋಟ ಕಾಯುವ ಪರಿಸ್ಥಿತಿ ಬಂದುಬಿಟ್ಟಿತೇ ರೈತನಿಗೆ!? ದಾಳಿಂಬೆಗೆ ಬಂದಿದೆ ಚಿನ್ನದ ಬೆಲೆ

ದೇಶ- ವಿದೇಶಗಳಿಗೂ ಹಣ್ಣುಗಳು ರಫ್ತು

ದಾಳಿಂಬೆ ಬೆಳೆಯಲ್ಲಿ ಕಲಾದಗಿ ವಿದೇಶದಲ್ಲೂ ಹೆಸರಾಗಿದೆ. ಕಲಾದಗಿ ಗ್ರಾಮದಿಂದ ಅಮೇರಿಕಾ ,ಇಂಗ್ಲೆಂಡ್ ಚೀನಾ ಅಪಘಾನಿಸ್ತಾನದವರೆಗೂ ದಾಳಿಂಬೆ ಹಣ್ಣುಗಳು ರಪ್ತಾಗುತ್ತವೆ. ರೈತರು ದಾಳಿಂಬೆ ಬೆಳೆದು ಆರ್ಥಿಕ ಸ್ವಾವಲಂಭನೆ ಹೊಂದಿದ್ದಾರೆ. ಕಲಾದಗಿ ಹಾಗೂ ಅಕ್ಕಪಕ್ಕದ ಗ್ರಾಮಗಳ ವ್ಯಾಪ್ತಿಯಲ್ಲಿ ದಾಳಿಂಬೆ ತೋಟಗಳು ಕಣ್ಣು ಹಾಯಿಸಿದ ಕಡೆ ಕಾಣುತ್ತವೆ. ಆದರೆ, ಈಗ ಬಹುತೇಕ ಕಡೆ ಒಣಗಿದ ಸ್ಥಿತಿಯಲ್ಲಿ ದಾಳಿಂಬೆ ಗಿಡಗಳು ಕಾಣುತ್ತಿದ್ದು, ನಿರಾಸೆ ಮೂಡಿಸುತ್ತವೆ. ದುಂಡಾಣು ಅಂಡಮಾರಿ ‌ರೋಗದ ಹಿನ್ನೆಲೆ ರೈತರು ದಾಳಿಂಬೆ ಬಿಟ್ಟು ಕಬ್ಬನ್ನು ಬೆಳೆಯುತ್ತಿದ್ದಾರೆ. ಇನ್ನು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಪ್ರಕಾರ ಜಿಲ್ಲೆಯಲ್ಲಿ ಮೂರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ದಾಳಿಂಬೆ ಬೆಳೆಯಲಾಗುತ್ತದೆ. ಆದರೆ, ಅದರಲ್ಲಿ 500ರಿಂದ 600 ಹೆಕ್ಟೇರ್ ‌ಮಾತ್ರ ಕಡಿಮೆಯಾಗಿದೆ. ಒಟ್ಟಿನಲ್ಲಿ ದಾಳಿಂಬೆ ನಾಡಲ್ಲಿಯೇ ದಾಳಿಂಬೆ ಅವನತಿಯತ್ತ ಸಾಗುತ್ತಿದೆ. ಮಹಾಮಾರಿಗೆ ಸೂಕ್ತ ಔಷಧಿ ಕಂಡು ಹಿಡಿದು ರೈತರಲ್ಲಿ‌ ಮತ್ತೆ ಹೆಚ್ಚಿನ ಪ್ರಮಾಣದಲ್ಲಿ ದಾಳಿಂಬೆ ಬೆಳೆಸಲು ಉತ್ತೇಜನ ನೀಡಬೇಕಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ