AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕಾಯುಕ್ತಕ್ಕೆ ಅವಹೇಳನಕಾರಿ ಪತ್ರ: ಬಳ್ಳಾರಿ ವ್ಯಕ್ತಿಗೆ 6 ತಿಂಗಳ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್!

ಕರ್ನಾಟಕ ಲೋಕಾಯುಕ್ತ ಮತ್ತು ಉಪಲೋಕಾಯುಕ್ತ ಸಂಸ್ಥೆಯ ವಿರುದ್ಧ ಅವಹೇಳನಕಾರಿ ಪತ್ರಗಳನ್ನು ಬರೆದು ನಿಂದಿಸಿದ ಬಳ್ಳಾರಿಯ ಎಸ್‌ಜಿ ಶಂಕರ್ ಎಂಬುವವರಿಗೆ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯವು 6 ತಿಂಗಳ ಜೈಲು ಶಿಕ್ಷೆ ಹಾಗೂ 5,000 ರೂ. ದಂಡ ವಿಧಿಸಿದೆ. ಮುಜರಾಯಿ ಇಲಾಖೆಯ ದೂರಿನ ವಿಚಾರಣೆ ವೇಳೆ ಲೋಕಾಯುಕ್ತ ಸಂಸ್ಥೆಗೆ ಅಪಕೀರ್ತಿ ತಂದ ಹಿನ್ನೆಲೆಯಲ್ಲಿ ಈ ತೀರ್ಪು ಹೊರಬಿದ್ದಿದೆ.

ಲೋಕಾಯುಕ್ತಕ್ಕೆ ಅವಹೇಳನಕಾರಿ ಪತ್ರ: ಬಳ್ಳಾರಿ ವ್ಯಕ್ತಿಗೆ 6 ತಿಂಗಳ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್!
ಲೋಕಾಯುಕ್ತ ಸಂಸ್ಥೆಯನ್ನು ನಿಂದಿಸಿದ ಬಳ್ಳಾರಿಯ ಎಸ್‌ಜಿ ಶಂಕರ್‌ಗೆ ಜೈಲು ಶಿಕ್ಷೆ
ಭಾವನಾ ಹೆಗಡೆ
|

Updated on:Jul 11, 2026 | 8:19 AM

Share

ಮುಖ್ಯಾಂಶಗಳು

  • ಲೋಕಾಯುಕ್ತ ಸಂಸ್ಥೆಯನ್ನು ನಿಂದಿಸಿದ ಬಳ್ಳಾರಿಯ ಎಸ್‌ಜಿ ಶಂಕರ್‌ಗೆ ಜೈಲು ಶಿಕ್ಷೆ
  • ನ್ಯಾಯಾಲಯವು ಆರೋಪಿಗೆ 6 ತಿಂಗಳು ಜೈಲು, 5,000 ರೂ ದಂಡ ವಿಧಿಸಿದೆ.
  • ಸುಳ್ಳು ದೂರು ನೀಡಿ, ನೋಟಿಸ್‌ಗೂ ಅವಹೇಳನಕಾರಿ ಪತ್ರ ಬರೆದಿದ್ದಕ್ಕೆ ಈ ಕ್ರಮವಾಗಿದೆ.

ಬೆಂಗಳೂರು, ಜುಲೈ 11: ಕರ್ನಾಟಕ ಲೋಕಾಯುಕ್ತ ಮತ್ತು ಉಪಲೋಕಾಯುಕ್ತ ಸಂಸ್ಥೆಯ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿ ನಿಂದಿಸಿದ ಆರೋಪದ ಮೇಲೆ ಬಳ್ಳಾರಿ ನಿವಾಸಿಯೊಬ್ಬರಿಗೆ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯವು 6 ತಿಂಗಳ ಜೈಲು ಶಿಕ್ಷೆ ಮತ್ತು 5,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. ಬಳ್ಳಾರಿಯ ಹಾವಿನಾಳ ಬಸಣ್ಣ ಕಾಂಪೌಂಡ್ ನಿವಾಸಿ ಎಸ್‌ಜಿ ಶಂಕರ್ ಶಿಕ್ಷೆಗೊಳಗಾದ ಆರೋಪಿಯಾಗಿದ್ದಾರೆ.

ನಡೆದಿದ್ದೇನು?

ಲೋಕಾಯುಕ್ತ ಪ್ರಕಟಣೆಯ ಪ್ರಕಾರ, ಎಸ್‌ಜಿ ಶಂಕರ್ ಅವರು 2015 ರಲ್ಲಿ ಬಳ್ಳಾರಿಯ ಮುಜರಾಯಿ ಇಲಾಖೆಯ ಜಂಟಿ ಕಮಿಷನರ್ ವಿರುದ್ಧ ಅಧಿಕಾರ ದುರುಪಯೋಗದ ದೂರು ನೀಡಿದ್ದರು. ಜಂಟಿ ಕಮಿಷನರ್ ಅವರು ಬಳ್ಳಾರಿಯ ದೇವಸ್ಥಾನವೊಂದರ ಸಮೀಪದಲ್ಲಿದ್ದ ಅಂಗಡಿಗಳನ್ನು ಕಾನೂನುಬಾಹಿರವಾಗಿ ತೆರವುಗೊಳಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಆದರೆ, ಲೋಕಾಯುಕ್ತ ತನಿಖೆ ಮತ್ತು ಪರಿಶೀಲನೆ ನಡೆಸಿದಾಗ ಜಂಟಿ ಕಮಿಷನರ್ ಅವರು ಸಂಪೂರ್ಣವಾಗಿ ಕಾನೂನುಬದ್ಧವಾಗಿಯೇ ಅಂಗಡಿಗಳನ್ನು ತೆರವುಗೊಳಿಸಿರುವುದು ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಉಪಲೋಕಾಯುಕ್ತರು ಪ್ರಕರಣವನ್ನು ಮುಕ್ತಾಯಗೊಳಿಸಿ ಶಂಕರ್‌ಗೆ ಪತ್ರ ಕಳುಹಿಸಿದ್ದರು.

ನೋಟಿಸ್‌ಗೂ ನಿಂದನೆ

ಇದರಿಂದ ಅಸಮಾಧಾನಗೊಂಡ ಶಂಕರ್, 2022ರಲ್ಲಿ ಉಪಲೋಕಾಯುಕ್ತರಿಗೆ ಮತ್ತು 2023ರಲ್ಲಿ ಲೋಕಾಯುಕ್ತರಿಗೆ ಅತ್ಯಂತ ಅವಹೇಳನಕಾರಿ ಮತ್ತು ನಿಂದನಾತ್ಮಕ ಪದಗಳನ್ನು ಬಳಸಿ ಎರಡು ಪತ್ರಗಳನ್ನು ಬರೆದಿದ್ದರು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಸಂಸ್ಥೆಯು ಕಾನೂನು ಕ್ರಮ ಏಕೆ ಜರುಗಿಸಬಾರದು ಎಂದು ಶಂಕರ್‌ಗೆ ಕಾನೂನು ನೋಟಿಸ್ ಜಾರಿ ಮಾಡಿತ್ತು. ಆದರೆ, ಆರೋಪಿ ಶಂಕರ್ ಆ ನೋಟಿಸ್‌ಗೂ ದರ್ಪದಿಂದ ಮತ್ತೊಂದು ನಿಂದನಾತ್ಮಕ ಪತ್ರ ಬರೆಯುವ ಮೂಲಕ ಉದ್ಧಟತನ ಪ್ರದರ್ಶಿಸಿದ್ದರು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಕಚೇರಿಯಿಂದ ಅವರ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಬೆಂಗಳೂರಿನ ನ್ಯಾಯಾಲಯವು ಆರೋಪಿ ತಪ್ಪಿತಸ್ಥ ಎಂದು ಘೋಷಿಸಿ ಜೈಲು ಶಿಕ್ಷೆ ಪ್ರಕಟಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:16 am, Sat, 11 July 26

Follow Us