ಬೆಂಗಳೂರು ಏರೋ ಶೋ 2025: ಯಲಹಂಕ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧ, ಕ್ರೇನ್ ಸ್ಥಗಿತಕ್ಕೆ ಸೂಚನೆ
Bengaluru Aero Show 2025: ಏರೋ ಇಂಡಿಯಾ 2025ರ ಏರ್ ಶೋಗಾಗಿ ಯಲಹಂಕದಲ್ಲಿ ಜನವರಿ 23 ರಿಂದ ಫೆಬ್ರವರಿ17 ರವರೆಗೆ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ. ವಿಮಾನಗಳ ರಿಹರ್ಸಲ್ ಹಾಗೂ ಏರ್ ಶೋ ಸಮಯದಲ್ಲಿ ಸುರಕ್ಷತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಯಲಹಂಕದ ಸುತ್ತಮುತ್ತ 13 ಕಿ.ಮೀ ವ್ಯಾಪ್ತಿಯಲ್ಲಿ ಈ ನಿಷೇಧ ಜಾರಿಯಲ್ಲಿದೆ. ನಿಷೇಧ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ.
ಬೆಂಗಳೂರು, ಜನವರಿ 18: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಲೋಹದ ಹಕ್ಕಿಗಳ ಕಲರವ ಶುರುವಾಗಲಿದೆ. ಏರೋ ಇಂಡಿಯಾ ಏರ್ ಶೋಗೆ (Air Show) ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಇದಕ್ಕಾಗಿ ಈಗಾಗಲೇ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಯಲಹಂಕ ವ್ಯಾಪ್ತಿಯ ವಾಯುಸೇನಾ ನೆಲೆಯಲ್ಲಿ ಫೆ.2 ರಿಂದ 14ರವರೆಗೆ ಅಂತರಾಷ್ಟ್ರೀಯ ಮಟ್ಟದ ‘ಏರೋ ಇಂಡಿಯಾ-2025’ ನಡೆಯಲಿದೆ. ಈ ನಿಟ್ಟಿನಲ್ಲಿ ಜನವರಿ 23 ರಿಂದ ಫೆಬ್ರವರಿ 17 ರವರೆಗೂ ಮಾಂಸ ಮಾರಾಟಕ್ಕೆ ಬಿಬಿಎಂಪಿ ನಿಷೇಧಿಸಿದ್ದು, ಕ್ರೇನ್ಗಳನ್ನು ಬಳಸದಂತೆ ಸೂಚಿಸಲಾಗಿದೆ.
ಯಲಹಂಕ ವಾಯುನೆಲೆಯಲ್ಲಿ ರಿಹರ್ಸಲ್ಗಾಗಿ ವಿಮಾನಗಳು ಹಾರಾಟ ನಡೆಸಲಿವೆ. ಹಾಗಾಗಿ ಯಲಹಂಕದ 13 ಕಿ.ಮಿ ಸುತ್ತಮುತ್ತ ಮಾಂಸ ಮಾರಾಟ ಹಾಗೂ ಉದ್ದಿಮೆಗಳನ್ನು ಬಂದ್ ಮಾಡಲು ಸೂಚನೆ ನೀಡಲಾಗಿದೆ. ಒಂದು ವೇಳೆ ನಿಮಯ ಉಲ್ಲಂಘನೆ ಮಾಡಿದರೆ ಬಿಬಿಎಂಪಿ ಕಾಯ್ದೆ 2020 ಮತ್ತು ಏರ್ ಕ್ರಾಫ್ಟ್ ರೂಲ್ಸ್ 1937 ಪ್ರಕಾರ ಕಾನೂನು ಕ್ರಮಕ್ಕೆ ಯಲಹಂಕ ವಲಯ ಜಂಟಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಜನರಿಗೆ ಸಿಹಿ ಸುದ್ದಿ: 2 ಹೊಸ ರೈಲು ನಿಲ್ದಾಣ ನಿರ್ಮಾಣ!
ಏಷ್ಯಾದ ಪ್ರಮುಖ ಏರೋಸ್ಪೇಸ್ ಮತ್ತು ರಕ್ಷಣಾ ಪ್ರದರ್ಶನವಾದ ಏರೋ ಇಂಡಿಯಾ 2025, ಫೆಬ್ರವರಿ 10 ರಿಂದ 14 ರವರೆಗೆ ಬೆಂಗಳೂರಿನ ಯಲಹಂಕ ವಾಯುಪಡೆ ನಿಲ್ದಾಣದಲ್ಲಿ ನಡೆಯಲಿದೆ. ಈ ದ್ವೈವಾರ್ಷಿಕ ಕಾರ್ಯಕ್ರಮವು ಅತ್ಯಾಧುನಿಕ ಏರೋಸ್ಪೇಸ್ ತಂತ್ರಜ್ಞಾನಗಳ ಜೊತೆಗೆ ವೈವಿಧ್ಯಮಯ ಮಿಲಿಟರಿ ಮತ್ತು ನಾಗರಿಕ ವಿಮಾನಗಳ ಪ್ರದರ್ಶನವಾಗಿದೆ.
ಈ ಪ್ರದರ್ಶನವು ಉದ್ಯಮದ ವೃತ್ತಿಪರರು, ವಾಯುಯಾನ ಉತ್ಸಾಹಿಗಳು ಮತ್ತು ಸಾರ್ವಜನಿಕರನ್ನು ಆಕರ್ಷಿಸುವ ನಿರೀಕ್ಷೆಯಿದೆ. ಇದು ನೆಟ್ವರ್ಕಿಂಗ್, ಸಹಯೋಗ ಮತ್ತು ಏರೋಸ್ಪೇಸ್ ವಲಯದ ಇತ್ತೀಚಿನ ಪ್ರಗತಿಗಳನ್ನು ಅನ್ವೇಷಿಸಲು ಒಂದು ಉತ್ತಮ ವೇದಿಕೆ ಆಗಿದೆ.
ಈ ಏರ್ ಶೋ ಮೊದಲ ಮೂರು ದಿನಗಳು ಅಂದರೆ ಫೆಬ್ರವರಿ 10 ರಿಂದ 12ರ ವರೆಗೆ ಉದ್ಯಮಿಗಳಿಗೆ ಮೀಸಲಾಗಿರುತ್ತದೆ. ಅಂತಿಮ ಎರಡು ದಿನಗಳು ಅಂದರೆ ಫೆಬ್ರವರಿ 13 ರಿಂದ 14ರ ವರೆಗೆ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಆ ಮೂಲಕ ಸಾರ್ವಜನಿಕರು ರೋಮಾಂಚಕಾರಿ ಏರ್ ಶೋ ವನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಬಹುದಾಗಿದೆ. ಜೊತೆಗೆ ಉದ್ಯಮಿಗಳೊಂದಿಗಿನ ಸಂವಾದದಲ್ಲಿ ಭಾಗಿಯಾಗಬಹುದಾಗಿದೆ.
ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ: ನೇರಳೆ ಮಾರ್ಗದ ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ
ಇನ್ನು ಏರ್ ಶೋ ಗೆ ಬಿಸಿನೆಸ್ ವಿಸಿಟರ್, ಜನರಲ್ ಮತ್ತು ಏರ್ ಡಿಸ್ಪ್ಲೇ ವ್ಯೂಯಿಂಗ್ ಏರಿಯಾ (ಎ. ಡಿ. ವಿ. ಎ) ಸೇರಿದಂತೆ ಬೇರೆ ಬೇರೆ ವಿಭಾಗಗಳಲ್ಲಿ ಟಿಕೆಟ್ ನಿಗದಿಪಡಿಸಲಾಗಿದೆ. ಪ್ರತಿಯೊಂದೂ ಕಾರ್ಯಕ್ರಮಕ್ಕೂ ವಿವಿಧ ಹಂತದ ಟಿಕೆಟ್ ಅನ್ನು ನೀಡಲಾಗುತ್ತದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:32 pm, Sat, 18 January 25