AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಡೇ ಕೇರ್​ನಲ್ಲಿ ಮಕ್ಕಳ ಮೇಲಿನ ಕ್ರೌರ್ಯ: ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡ NHRC, ರಾಜ್ಯ ಸರ್ಕಾರಕ್ಕೆ ತುರ್ತು ನೋಟಿಸ್

ಬೆಂಗಳೂರಿನ ಐಟಿ ಕಂಪನಿಯೊಂದರ ಶಿಶುವಿಹಾರದಲ್ಲಿ ಪುಟ್ಟ ಮಕ್ಕಳ ಮೇಲೆ ನಡೆಸಿರುವ ಅಮಾನವೀಯ ಕ್ರೌರ್ಯದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ. ಈ ಕುರಿತು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿದ್ದು, ಎರಡು ವಾರಗಳಲ್ಲಿ ವರದಿ ನೀಡುವಂತೆ ಕಡಕ್ ಸೂಚನೆ ನೀಡಿದೆ.

ಬೆಂಗಳೂರು ಡೇ ಕೇರ್​ನಲ್ಲಿ ಮಕ್ಕಳ ಮೇಲಿನ ಕ್ರೌರ್ಯ: ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡ NHRC, ರಾಜ್ಯ ಸರ್ಕಾರಕ್ಕೆ ತುರ್ತು ನೋಟಿಸ್
ಡೇ ಕೇರ್​ನಲ್ಲಿ ಮಕ್ಕಳ ಮೇಲಿನ ಕ್ರೌರ್ಯ: ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡ NHRCImage Credit source: tv9
ಗಣಪತಿ ಶರ್ಮಾ
|

Updated on: Jul 04, 2026 | 7:04 AM

Share

ಮುಖ್ಯಾಂಶಗಳು

  • ಮಕ್ಕಳ ಮೇಲಿನ ದೌರ್ಜನ್ಯಕ್ಕೆ NHRC ಕಳವಳ
  • ರಾಜ್ಯ ಸರ್ಕಾರಕ್ಕೆ ಆಯೋಗದಿಂದ ತುರ್ತು ನೋಟಿಸ್
  • ಎರಡು ವಾರಗಳಲ್ಲಿ ವರದಿ ನೀಡಲು ಸೂಚನೆ

ಬೆಂಗಳೂರು, ಜುಲೈ 4: ರಾಜಧಾನಿ ಬೆಂಗಳೂರಿನ (Bengaluru) ಐಟಿ ಕಂಪನಿಯೊಂದರ ಆವರಣದಲ್ಲಿ ನಡೆಯುತ್ತಿದ್ದ ಶಿಶುವಿಹಾರದಲ್ಲಿ (ಡೇ ಕೇರ್) ಪುಟ್ಟ ಮಕ್ಕಳ ಮೇಲೆ ದಾದಿಯರು ಎಸಗಿರುವ ಅಮಾನವೀಯ ಮತ್ತು ಕ್ರೂರ ದೌರ್ಜನ್ಯದ ಘಟನೆ ಈಗ ದೇಶಾದ್ಯಂತ ಸದ್ದು ಮಾಡುತ್ತಿದೆ. ಈ ದಿಗಿಲು ಹುಟ್ಟಿಸುವ ಘಟನೆಯನ್ನು ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಸ್ವಯಂಪ್ರೇರಿತವಾಗಿ (Suo Motu) ಪ್ರಕರಣ ದಾಖಲಿಸಿಕೊಂಡಿದೆ. ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಗಳು ನಿಜವೇ ಆಗಿದ್ದರೆ, ಇದು ಮಕ್ಕಳ ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ಆಯೋಗ ಆತಂಕ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ (DGP) ಆಯೋಗ ನೋಟಿಸ್ ಜಾರಿ ಮಾಡಿದ್ದು, ಮುಂದಿನ ಎರಡು ವಾರಗಳಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ವಿವರವಾದ ವರದಿ ಸಲ್ಲಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ.

ವಾಷಿಂಗ್ ಮಷಿನ್ ಒಳಗೆ ಇಟ್ಟು ಅಮಾನವೀಯ ಕ್ರೌರ್ಯ

ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ಆಘಾತಕಾರಿ ದೃಶ್ಯಗಳ ಪ್ರಕಾರ, ಈ ಶಿಶುವಿಹಾರದಲ್ಲಿ ದಾದಿಯರು ಅಳುವ ಪುಟ್ಟ ಮಕ್ಕಳನ್ನು ಸುಮ್ಮನಿರಿಸಲು ಅತಿ ಕ್ರೂರ ವಿಧಾನಗಳನ್ನು ಬಳಸುತ್ತಿದ್ದರು. ಅಳುವ ಮಕ್ಕಳನ್ನು ವಾಷಿಂಗ್ ಮಷಿನ್ ಒಳಗಡೆ ಇಡುವುದು, ಶೌಚಾಲಯದ ಜೆಟ್ ಸ್ಪ್ರೇ ಮೂಲಕ ಬಾಯಿಗೆ ಬಲವಂತವಾಗಿ ನೀರು ಸಿಂಪಡಿಸುವುದು, ಹಾಗೂ ಶೌಚಾಲಯದೊಳಗೆ ಹಾಕಿ ಬೀಗ ಹಾಕುವ ಮೂಲಕ ಮಕ್ಕಳನ್ನು ಮೌನವಾಗಿಸಲು ಯತ್ನಿಸುತ್ತಿದ್ದ ದೃಶ್ಯಗಳು ಬೆಚ್ಚಿಬೀಳಿಸಿದ್ದವು. ಮಕ್ಕಳು ಅಳಲು ಆರಂಭಿಸಿದರೆ ವೆಸ್ಟರ್ನ್ ಕಮೋಡ್‌ಗಳ ಮೇಲೆ ಬಲವಂತವಾಗಿ ಕೂರಿಸಿ ಸುಮ್ಮನಿರಬೇಕು ಎಂದು ಬೆದರಿಸಲಾಗುತ್ತಿತ್ತು. ಈ ಐಟಿ ಕಂಪನಿಯ ಉದ್ಯೋಗಿಗಳು ತಮ್ಮ ಮಕ್ಕಳನ್ನು ನಂಬಿಕೆಯಿಂದ ಇಲ್ಲಿಗೆ ಬಿಡುತ್ತಿದ್ದರು. ಮಕ್ಕಳ ಸಹಾಯವಾಣಿ ಅಧಿಕಾರಿಯೊಬ್ಬರಿಗೆ ಈ ವಿಡಿಯೋಗಳು ತಲುಪಿದ ನಂತರ ಕ್ರೌರ್ಯ ಬೆಳಕಿಗೆ ಬಂದಿದೆ. ಸದ್ಯ ಮುನ್ನೆಚ್ಚರಿಕಾ ಕ್ರಮವಾಗಿ ಈ ಶಿಶುವಿಹಾರವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ಡೇ ಕೇರ್ ಕ್ರೌರ್ಯ: ಇತ್ತೀಚಿನ ಬೆಳವಣಿಗೆಗಳು

  • ಮುಖ್ಯ ಆರೋಪಿ ಬಂಧನ: ಈ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿಯಾದ ವಿಜಯಲಕ್ಷ್ಮಿ ಎಂಬಾಕೆಯನ್ನು ಹೆಚ್‌ಎಎಲ್ (HAL) ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
  • ಸಿಎಂಗೆ ಪತ್ರ ಹಾಗೂ ಕಟ್ಟುನಿಟ್ಟಿನ ಮಾರ್ಗಸೂಚಿಗೆ ಆಗ್ರಹ: ಈ ಕ್ರೌರ್ಯವನ್ನು ಜಗತ್ತಿಗೆ ಮುನ್ನೆಲೆಗೆ ತಂದ ವಿಸ್ಲ್‌ಬ್ಲೋವರ್ (ಮಾಹಿತಿ ನೀಡಿದ ಸಿಬ್ಬಂದಿ) ಅವರನ್ನು ಕೆಲಸದಿಂದ ವಜಾಗೊಳಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (KSCPCR) ಅಧ್ಯಕ್ಷರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕೃತ ಪತ್ರ ಬರೆದಿದ್ದು, ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಎಲ್ಲಾ ಶಿಶುವಿಹಾರ ಹಾಗೂ ಡೇ ಕೇರ್‌ಗಳಿಗೆ ಕಟ್ಟುನಿಟ್ಟಿನ ಕಡ್ಡಾಯ ಮಾರ್ಗಸೂಚಿಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ವಾಷಿಂಗ್ ಮಷಿನ್​​ಗೆ ಹಾಕಿ ಮಕ್ಕಳಿಗೆ ಹಿಂಸೆ: ಕ್ರೌರ್ಯದ ಬಗ್ಗೆ ಮಾಹಿತಿ ನೀಡಿದ್ದ ಸಿಬ್ಬಂದಿಯ ವಜಾಗೊಳಿಸಿದ್ದ ಡೇ ಕೇರ್ ಸೆಂಟರ್

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us