ತ್ಯಾಮಗೊಂಡ್ಲು: ಮದುವೆಯಾಗಿ ಮಗುವಾದ ಮೇಲೆ ಪತ್ನಿಪೀಡಕನಾದ ಗಂಡನಿಂದ ವರದಕ್ಷಿಣೆ ಕಿರುಕುಳ
ಒಂದೇ ಕೋಮಿನವರಾದ್ದರಿಂದ ಹಿರಿಯರು ಮಾತುಕತೆ ನಡೆಸಿ ಕಾಲಾಂತರದಲ್ಲಿ ಭರ್ಜರಿಯಾಗಿ ಮದುವೆ ಮಾಡಿ ಮನೆ ತುಂಬಿಸಿಕೊಂಡಿದ್ದರು. ಬಳಿಕ ಮಗಳು ಗರ್ಭಿಣಿಯಾದಾಗ ಸೀಮಂತ ಕೂಡ ಭರ್ಜರಿಯಾಗಿ ಮಾಡಿದ್ದರು ತಂದೆ ಹನುಮಂತರಾಜು. ಆದರೆ ಗಂಡನ ಕರಾಳ ಮುಖ ಆಗ ಅನಾವರಣಗೊಂಡಿದೆ.

ಅವರಿಬ್ಬರೂ ಪ್ರೀತಿಗೆ ಮನಸೋತು ಮನೆಯವರಿಗೆ ಗೊತ್ತಾಗದಂತೆ ಮದುವೆಯಾಗಿದ್ರು (Love Marriage). ಆದರೂ, ಒಂದೇ ಕೋಮಿನವರಾದ್ದರಿಂದ ಎರಡೂ ಮನೆಯವರು ಒಪ್ಪಿಕೊಂಡು, ಆ ಯುವತಿಯನ್ನ ಮನೆ ತುಂಬಿಸಿಕೊಂಡಿದ್ದರು. ಆದರೆ, ಒಂದು ಹೆಣ್ಣು ಮಗು ಜನಿಸುತ್ತಿದ್ದಂತೆ ಮದುವೆಯಾದ ಪತಿರಾಯನ ಗೋಮುಖ ವ್ಯಾಘ್ರತನ (Dowry Harassment) ಗೊತ್ತಾಗಿದೆ. ಅಷ್ಟಕ್ಕೂ ಎನಾಯ್ತು ಅಂತೀರಾ? ಈ ಸ್ಟೋರಿ ನೋಡಿ. ಚಿತ್ರದಲ್ಲಿರುವಂತೆ ಮಗುವನ್ನ ಕೈಯಲ್ಲಿ ಹಿಡಿದುಕೊಂಡು ತಂದೆ ಜೊತೆ ನಿಂತಿರುವ ಮಹಿಳೆ, ಫೋಟೋದಲ್ಲಿ ಪರೋಡಿ ತರಹ ಕಾಣಿಸ್ತಾ ಇದ್ದಾನಲ್ಲ ಆ ಹುಡುಗನನ್ನ ಪ್ರೀತಿಸಿ ಮದುವೆಯಾದವಳು. ಹೌದು ಈ ನತದೃಷ್ಟೆಯ ಹೆಸರು ನೇತ್ರಾವತಿ. ಈಕೆಯದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ (Nelamangala) ತಾಲೂಕಿನ ಬಳಗೆರೆ. ಪಕ್ಕದ ಬಿದಲೂರಿನ ನಿವಾಸಿ ವೆಂಕಟೇಶ್ (Husband). ಈತ ಬಳೆಗೆರೆಗೆ ಸೌಮ್ಯ ಎನ್ನುವವರ ಮನೆಗೆ ಬಂದು ಹೋಗ್ತಿದ್ದ. ಆಗ ನೇತ್ರಾವತಿಯನ್ನ ಪಟಾಯಿಸಿ ಪ್ರೀತಿಸಿ ತನ್ನ ಬುಟ್ಟಿಗೆ ಹಾಕಿಕೊಂಡು ನೇತ್ರಾವತಿ ಮನೆಯವರಿಗೆ ಗೊತ್ತಿಲ್ಲದಂತೆ ಓಡಿ ಹೋಗಿ ಅವಳನ್ನ ತುಮಕೂರು ಜಿಲ್ಲೆಯ ದಿಬ್ಬೂರಿನ ಚಿಕ್ಕಣ್ಣಸ್ವಾಮಿ ದೇವಸ್ಥಾನದಲ್ಲಿ ಮದುವೆಯಾಗಿದ್ದ.
ಹಲವು ತಿಂಗಳುಗಳು ಕಳೆದ ನಂತರ ಒಂದೇ ಕೋಮಿನವರಾದ್ದರಿಂದ ಹಿರಿಯರು ಮಾತುಕತೆ ನಡೆಸಿ 2021 ರ ಮಾರ್ಚ್ ತಿಂಗಳ 8ನೇ ತಾರೀಖಿನಂದು ಭರ್ಜರಿಯಾಗಿ ಮದುವೆ ಮಾಡಿ ಮನೆ ತುಂಬಿಸಿಕೊಂಡಿದ್ದರು. ಬಳಿಕ ಗರ್ಭಿಣಿಯಾದಾಗ ಸೀಮಂತ ಕೂಡ ಭರ್ಜರಿಯಾಗಿ ಮಾಡಿಕೊಂಡು ತಂದೆ ಹನುಮಂತರಾಜು ಮನೆಗೆ ಬಂದಳು.
ಅದೇ ವೇಳೆ ನನಗೆ 5 ಲಕ್ಷ ನಗದು, ಒಂದು ಆಟೋ, ಒಂದು ಮನೆ ಸೇರಿದಂತೆ ಒಡವೆಯಲ್ಲಿ ಅರ್ಧ ಪಾಲು ಕೊಡುವಂತೆ ಕೇಳಿದ್ದಾನೆ ಗಂಡ ವೆಂಕಟೇಶ್. ಆದರೆ ಯುವತಿಯ ಮನೆಯವರು ನಾವು ಕೊಡಲು ಸಾಧ್ಯವಿಲ್ಲ ಅಂದಿದ್ದಾರೆ. ಆಗ ಸುಮ್ಮನಿದ್ದವನು ಹೆಣ್ಣು ಮಗು ಆಗುತ್ತಿದ್ದಂತೆ ತನ್ನ ಚಾಳಿ ಶುರು ಮಾಡಿದ್ದಾನೆ. ಆದರೆ ಮುಂದೆ ಪತಿ ವೆಂಕಟೇಶ್ ಕಿರುಕುಳ ತಾಳಲಾಗದೇ, ಸ್ವತಂತ್ರವಾಗಿ ಬಾಳುಬದುಕಲು ನಿರ್ಧರಿಸಿ, ತನ್ನ ಪುಟ್ಟ ಮಗಳನ್ನೂ ತಾನೇ ಸಾಕುವೆ ಎನ್ನುತ್ತಿದ್ದಾಳೆ ನೇತ್ರಾವತಿ.
ಇದೀಗ ಪತಿ ವೆಂಕಟೇಶ ವರದಕ್ಷಿಣೆ ಕೂಡು, ಇಲ್ಲದಿದ್ದರೆ ಡೈವೋರ್ಸ್ ಕೊಡು ಎನ್ನುತ್ತಾನೆ. ಆಗ ಕಿರುಕುಳದಿಂದ ಬೇಸತ್ತ ನೇತ್ರಾವತಿ ಗಂಡನ ಆಣತಿಯಂತೆ ಡೈವೋರ್ಸ್ ಗೆ ಮುಂದಾಗಿದ್ದು ಈಗಾಗಲೆ ಡೈವೋರ್ಸ್ ಗೆ ಅಪ್ಲೈ ಮಾಡಿದ್ದು ಮಗು ಮತ್ತು ಅವಳು ತವರುಮನೆ ಸೇರಿದ್ದಾರೆ. ಹೀಗಿದ್ದರೂ ಕೂಡ ಪ್ರತಿನಿತ್ಯ ಸಾಯಂಕಾಲ ಕಂಠಪೂರ್ತಿ ಕುಡಿದುಬರುವ ವೆಂಕಟೇಶ, ಪತ್ನಿ ನೇತ್ರಾವತಿ ಮನೆಗೆ ಬಂದು ಬಾಗಿಲು ಬಡಿಯುವುದು, ಮಾವನಿಗೆ ಕೊಲೆ ಬೆದರಿಕೆ ಹಾಕೋದು, ಅದಲ್ಲದೆ ತನ್ನ ಪುಟ್ಟ ಮಗುವಿನ ಮುಖವನ್ನ ನೋಡೋದಕ್ಕೆ ಬಂದಿದ್ದೇನೆ ಅಂತ ಹೇಳಿಕೊಂಡು ಬರುತ್ತಾನಂತೆ.
ಅದಾದಮೇಲೆ, ಹೆಂಡತಿಗೆ ಹೊಡೆಯುವುದು ಬಡಿಯುವುದು ಮಾಡುತ್ತಾನಂತೆ. ಇದೆಲ್ಲಾ ನಡೆಯುತ್ತಿದ್ದಂತೆ ಸ್ಥಳೀಯ ತ್ಯಾಮಗೊಂಡ್ಲು ಪೊಲೀಸ್ ಠಾಣೆಗೆ (Thyamagondlu police) ಐದಾರು ಬಾರಿ ದೂರು ಸಲ್ಲಿಸಿದ ಬಳಿಕ, ವೆಂಕಟೇಶ್‌ನನ್ನ ಠಾಣೆಗೆ ಕರೆಯಿಸಿ ಸಂಧಾನ ಮಾಡಿಸಲಾಗಿದೆ. ಆದರೂ ಕೂಡ ವೆಂಕಟೇಶ್ ತನ್ನ ಚಾಳಿಯನ್ನು ಮುಂದುವರೆಸಿದ್ದು, ಠಾಣೆ ಮೆಟ್ಟಿಲೇರಿದರು ಕೂಡ ಎನೂ ಪ್ರಯೋಜನವಾಗಿಲ್ಲ ಎಂದು ನೇತ್ರಾವತಿ ತಂದೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಮನೆಯವರಿಗೆ ಗೊತ್ತಿಲ್ಲದೆ ಪ್ರೀತಿ ಮಾಡಿ ವೆಂಕಟೇಶ್‌ನನ್ನು ನಂಬಿ ಮದುವೆಯಾಗಿದ್ದು ಈಗ ಹೆಣ್ಣು ಮಗು ಜನಿಸಿದ ಮೇಲೆ ಗಂಡನ ನಿಜರೂಪ ಬಯಲಾಗಿದೆ. ಒಟ್ಟಿನಲ್ಲಿ ಈಗಿನ ಯುವಕ ಯುವತಿಯರು ಎನೂ ಅರಿಯದ ವಯಸ್ಸಿನಲ್ಲಿ ಹುಚ್ಚು ಪ್ರೀತಿಗೆ ಮನಸೋತು ಈ ರೀತಿ ಪಡಿಪಾಟಲು ಅನುಭವಿಸುವುದು ಸಾಕಷ್ಟು ನಡೆಯುತ್ತಿದೆ. ಹೀಗಾಗಿ ವಯಸ್ಸಿಗೆ ಬಂದ ಮಕ್ಕಳಿಗೆ ಪೋಷಕರ ಮಾರ್ಗದರ್ಶನದ ಅವಶ್ಯಕತೆ ಇದೆ. ಹುಷಾರು, ಹುಚ್ಚುಕೋಡಿ ಮನಸು!
ವರದಿ: ವಿನಾಯಕ್ ಗುರವ್, ಟಿವಿ9, ನೆಲಮಂಗಲ