ಇರಾನ್‌ನಲ್ಲಿ ಸಿಲುಕಿದ್ದ ಕನ್ನಡಿಗರು ತಾಯ್ನಾಡಿಗೆ: ಒಂದೇ ಗ್ರಾಮದ 16 ಜನ ವಾಪಸ್
Iran-Israel Conflict: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಇರಾನ್‌ನಲ್ಲಿ ಸಿಲುಕಿದ್ದ 18 ಮಂದಿ ಕನ್ನಡಿಗರು ಕರ್ನಾಟಕಕ್ಕೆ ಮರಳಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರಿಗೆ ಅದ್ದೂರಿ ಸ್ವಾಗತ ದೊರೆಯಿತು. ಶಾಸಕ ಪುಟ್ಟಸ್ವಾಮಿಗೌಡ ಅವರು ಭಾವುಟ ನೀಡಿ ಸ್ವಾಗತಿಸಿದರು. ಇರಾನ್‌ನಲ್ಲಿನ ಅಪಾಯಕಾರಿ ಪರಿಸ್ಥಿತಿಯಿಂದಾಗಿ ಅವರು ತಾಯ್ನಾಡಿಗೆ ಮರಳಲು ನಿರ್ಧರಿಸಿದರು ಎಂದು ತಿಳಿದುಬಂದಿದೆ. ಉಳಿದ ಕನ್ನಡಿಗರನ್ನು ಕೂಡ ಶೀಘ್ರದಲ್ಲೇ ವಾಪಸ್ ಬರಲಿದ್ದಾರೆ.

ಬೆಂಗಳೂರು, ಜೂನ್ 21: ಇರಾನ್ ಮತ್ತು ಇಸ್ರೇಲ್ (Iran and Israel) ನಡುವಿನ ಯುದ್ಧ ಮುಂದುವರೆಯುತ್ತಿದ್ದು ದಿನದಿಂದ ದಿನಕ್ಕೆ ಪರಿಸ್ಥಿತಿ ಉದ್ವಿಗ್ನವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇರಾನ್‌ನಲ್ಲಿ ಸಿಲುಕಿದ್ದ 18 ಜನ ಕನ್ನಡಿಗರು (Kannadigas) ಶನಿವಾರ (ಜೂ.21) ಕರ್ನಾಟಕಕ್ಕೆ (Karnataka) ವಾಪಸ್ ಆಗಿದ್ದಾರೆ. ಇರಾನ್‌ನಿಂದ ಬೆಂಗಳೂರಿಗೆ ಆಗಮಿಸಿದ ಕನ್ನಡಿಗರಿಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಳಿಯ ಶಾಸಕ ಹಾಗೂ ಕುಟುಂಬಸ್ಥರು ಅದ್ದೂರಿಯಾಗಿ ಸ್ವಾಗತಕೋರಿದರು. ತಾಯ್ನಾಡಿಗೆ ಮರಳಿದ ಕನ್ನಡಿಗರು ಮತ್ತು ಇವರ ಪೋಷಕರಿಗೆ ಶಾಸಕ ಪುಟ್ಟಸ್ವಾಮಿಗೌಡ ಅವರು ಭಾವುಟ ನೀಡಿ ಭಾರತ್ ಮಾತಾಕಿ ಜೈ ಎನ್ನುವ ಮೂಲಕ ಸಂತಸ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಫುರ ಜಿಲ್ಲೆ ಗೌರಿಬಿದನೂರು ತಾಲೂಜಿನ ಅಲಿಪುರ ಗ್ರಾಮದ ನೂರಾರು ಜನರು ಈಗಾಗಲೆ ಇರಾನ್‌ನಲ್ಲಿ ಕೆಲಸ, ಸ್ವಯಂ ಉದ್ಯೋಗ ಸೇರಿದಂತೆ ವಿದ್ಯಾಭ್ಯಾಸಕ್ಕಾಗಿ ತೆರಳಿದ್ದರು. ಆದರೆ, ಈಗ ಇರಾನ್‌ನಲ್ಲಿ ಯುದ್ಧ ಆರಂಭವಾದ ಹಿನ್ನೆಲೆಯಲ್ಲಿ ಅಲಿಪುರದ 16 ಜನರು ಶನಿವಾರ ಬೆಳಗ್ಗೆ ಇರಾನ್‌ನಿಂದ ದೆಹಲಿಗೆ ಆಗಮಿಸಿದರು. ದೆಹಲಿಯಿಂದ ಮದ್ಯಾಹ್ನ 12 ಗಂಟೆ ಸುಮಾರಿಗೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 16 ಜನ ಆಗಮಿಸುತ್ತಿರುವುದು ಗೊತ್ತಾಗುತ್ತಿದ್ದಂತೆ ಗೌರಿಬಿದನೂರು ಶಾಸಕ ಪುಟ್ಟಸ್ವಾಮಿಗೌಡ, ಕುಟುಂಬಸ್ಥರು ಮತ್ತು ಗ್ರಾಮದ ಮುಖಂಡರು ಹಾರು ಶಾಲು ಕೈಲಿಡಿದು ವಿಮಾನ ನಿಲ್ದಾಣಕ್ಕೆ ಬಂದರು. ವಿಮಾನ ನಿಲ್ದಾಣದಲ್ಲಿ 16 ಜನರಿಗೆ ಹಾರ ಹಾಕಿ ಸ್ವಾಗತಕೋರುವ ಮೂಲಕ ತಾಯ್ನಾಡಿಗೆ ವಾಪಸ್ ಬರಮಾಡಿಕೊಂದರು.
ಈ ವೇಳೆ ಇರಾನ್‌ನಿಂದ ವಾಪಸ್ ಆದ ಕನ್ನಡಿಗರು ಮಾತನಾಡಿದ್ದು, ಇರಾನ್‌ನಲ್ಲಿ ಸುತ್ತಾಡೋಣ, ವ್ಯಾಪಾರ ಮಾಡೋಣ ಅಂತ ಹೋಗಿದ್ವಿ. ಆದರೆ, ಅಲ್ಲಿ ಬೀಳುತ್ತಿರುವ ಬಾಂಬ್ಗಳ ಸದ್ದು ಕೇಳಿ ವಾಪಸ್ ತಾಯ್ನಾಡಿಗೆ ಹೋಗುತ್ತೇವೆಯೋ, ಇಲ್ಲವೋ ಎಂಬ ಆತಂಕ ಎದುರಾಗಿತ್ತು. ಆದರೆ, ನಮ್ಮ ಭಾರತೀಯ ರಾಯಭಾರಿ ಅಧಿಕಾರಿಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯದಿಂದ ವಾಪಸ್ ತಾಯ್ನಾಡಿಗೆ ಬಂದು ಕುಟುಂಬಸ್ಥರನ್ನು ಸೇರಿದ್ದೇವೆ ಅಂತ ತಮ್ಮ ಸಂತಸ ವ್ಯಕ್ತಪಡಿಸಿದರು.
ಇರಾನ್‌ನಲ್ಲಿ ಎಂಬಿಬಿಎಸ್ ವ್ಯಾಸಾಂಗ ಮಾಡಲು ಮತ್ತು ದೇವಸ್ಥಾನಗಳನ್ನು ಸುತ್ತಾಡಲು ಅಂತ ಹೋಗಿದ್ದ ಒಂದೇ ಕುಟುಂಬದ ನಾಲ್ಕೈದು ಜನ ಸುರಕ್ಷಿತವಾಗಿ ಬಂದಿದ್ದನ್ನು ಕಂಡು ವಿಮಾನ ನಿಲ್ದಾಣದಲ್ಲಿ ಕುಟುಂಬಸ್ಥರು ಭಾವುಕರಾದರು. ಇರಾನ್ಗೂ ಗೌರಿಬಿದನೂರಿಗೂ ಅವಿನಾಭವ ಸಂಬಂಧವಿರುವ ಕಾರಣ ವ್ಯಾಪಾರ ವಹಿವಾಟು ಸೇರಿದಂತೆ ಸಾಕಷ್ಟು ವಿಚಾರಗಳಿಗೆ ಗ್ರಾಮದ ನೂರಾರು ಜನ ಹೋಗಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ನೇಪಾಳ, ಶ್ರೀಲಂಕಾ ನಾಗರಿಕರ ಸ್ಥಳಾಂತರಕ್ಕೆ ಭಾರತ ಸಿದ್ಧತೆ, 517 ಭಾರತೀಯರ ಸ್ಥಳಾಂತರ
ಇರಾನ್‌ನಲ್ಲಿ 80 ಕ್ಕೂ ಅಧಿಕ ಜನ ಅಲಿಪುರ ಗ್ರಾಮಸ್ಥರು ಇದ್ದು, ಎರಡು ಮೂರು ದಿನಗಳಲ್ಲಿ ಅವರೂ ಕೂಡ ವಾಪಸ್ ತಾಯ್ನಾಡಿಗೆ ಕರೆದುಕೊಂಡು ಬರುವ ವಿಚಾರವಾಗಿ ಸಿಎಂ ಮತ್ತು ಕೇಂದ್ರ ಸಚಿವರ ಜೊತೆ ಮಾತನಾಡಿದ್ದು ಅವರು ಸಹ ಶೀಘ್ರದಲ್ಲೇ ರಾಜ್ಯಕ್ಕೆ ಬರುತ್ತಾರೆ ಎಂದು ಗೌರಿಬಿದನೂರು ಶಾಸಕ ಪುಟ್ಟಸ್ವಾಮಿಗೌಡ ಹೇಳಿದರು. ಒಟ್ಟಾರೆಯಾಗಿ ಇರಾನ್‌ನಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿರುವ ಹೊತ್ತಿನಲ್ಲಿ ಹೊರ ದೇಶಕ್ಕೆ ಹೋಗಿದ್ದ ಮಕ್ಕಳು ಒಬ್ಬೊಬ್ಬರಾಗಿ ತಾಯ್ನಾಡಿಗೆ ವಾಪಸ್ ಆಗುತ್ತಿರುವುದು, ಆತಂಕದಲ್ಲಿರುವ ಕುಟುಂಬಸ್ಥರ ನಿಟ್ಟುಸಿರು ಬಿಡುವಂತೆ ಮಾಡಿದೆ.