Last Shravana Shanivara 2022: ಮಧುರೆ ಶ್ರೀ ಶನಿದೇವರ ದೇವಾಲಯದಲ್ಲಿ ಜನವೋ ಜನ
ಈ ಶನಿವಾರ ಅಮಾವಾಸ್ಯೆ ಕೂಡಿ ಬರುವುದರಿಂದ ಶನೈಶ್ಚರಿ ಅಮವಾಸ್ಯೆ ಎಂದು ಕರೆಯುತ್ತಾರೆ. ಸುಮಾರು 14 ವರ್ಷಗಳ ನಂತರ ಶ್ರಾವಣ ಮಾಸದ ಅಮಾವಾಸ್ಯೆಯಂದು ಈ ಯೋಗ ರೂಪುಗೊಂಡಿದೆ. ಇದಾದ ಎರಡು ವರ್ಷಗಳ ನಂತರ 2025ರಲ್ಲಿ ಈ ಯೋಗ ನಡೆಯಲಿದೆ.
ನೆಲಮಂಗಲ: ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿಯಲ್ಲಿರುವ ಕನಸವಾಡಿ ಪುಣ್ಯಕ್ಷೇತ್ರದ ಶ್ರೀ ಶನಿದೇವರ ದೇವಾಲಯ ಸೇರಿದಂತೆ ವಿವಿಧೆಡೆಗಳಲ್ಲಿ ಕಡೆಯ ಶ್ರಾವಣ ಮಾಸದ(Shravana Masa) ವಿಶೇಷ ಪೂಜೆಗಳು ನಡೆದಿವೆ. ಶ್ರಾವಣ ಮಾಸವು 27ನೇ ಆಗಸ್ಟ್ 2022 ರಂದು (ಶನಿವಾರ) ಕೊನೆಗೊಳ್ಳುತ್ತದೆ. ಕಾಕತಾಳೀಯವೆಂಬಂತೆ ಶ್ರಾವಣ ಮಾಸದ ಕೊನೆಯ ಅಮಾವಾಸ್ಯೆ ಶನಿವಾರದಂದು ಬಂದಿದ್ದು, ಶ್ರಾವಣ ಮಾಸದ ಐದನೇ ಶನಿವಾರ(Shravana Shanivara) ಸಾವಿರಾರು ಜನ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಶನಿದೇವರ ದರ್ಶನ ಪಡೆದರು.
ಈ ಶನಿವಾರ ಅಮಾವಾಸ್ಯೆ ಕೂಡಿ ಬರುವುದರಿಂದ ಶನೈಶ್ಚರಿ ಅಮವಾಸ್ಯೆ ಎಂದು ಕರೆಯುತ್ತಾರೆ. ಸುಮಾರು 14 ವರ್ಷಗಳ ನಂತರ ಶ್ರಾವಣ ಮಾಸದ ಅಮಾವಾಸ್ಯೆಯಂದು ಈ ಯೋಗ ರೂಪುಗೊಂಡಿದೆ. ಇದಾದ ಎರಡು ವರ್ಷಗಳ ನಂತರ 2025ರಲ್ಲಿ ಈ ಯೋಗ ನಡೆಯಲಿದೆ.
ಮಧುರೆ ಹೋಬಳಿಯಲ್ಲಿರುವ ಕಾರಣದಿಂದಾಗಿ ಇದಕ್ಕೆ ಮಧುರೆ ದೇವಸ್ಥಾನ ಅಥವಾ ಚಿಕ್ಕಮಧುರೆ ಶ್ರೀ ಶನಿಮಹಾತ್ಮ ದೇವಸ್ಥಾನ ಎಂದೇ ಜನ ಜನಿತವಾಗಿದೆ. ಈ ಪ್ರಸಿದ್ಧ ದೇವಾಲಯವು ರಾಜ್ಯದಾದ್ಯಂತ ಭಕ್ತಾದಿಗಳನ್ನು ಸೆಳೆಯುತ್ತಿದ್ದು, ವಿಶೇಷವಾಗಿ ಶ್ರಾವಣ ಮಾಸದ ಶನಿವಾರಗಳಂದು ಇಲ್ಲಿ ಜಾತ್ರೆಯ ವಾತಾವರಣವಿರುತ್ತದೆ. ಸಹಸ್ರಾರು ಭಕ್ತಾದಿಗಳು ಶ್ರೀ ಶನಿಮಹಾತ್ಮಸ್ವಾಮಿ ಹಾಗೂ ಜೇಷ್ಠಾದೇವಿಯ ದರ್ಶನ ಪಡೆಯುತ್ತಾರೆ.
ದೇವಾಲಯದ ವೈಶಿಷ್ಟ್ಯ
ಸುಮಾರು 82 ವರ್ಷಗಳ ಹಿಂದೆ ಗ್ರಾಮದ ಕೃಷಿಕ ಗಂಗಹನುಮಯ್ಯರಿಂದ ಶನೇಶ್ವರ ದೇವಸ್ಥಾನ ನಿರ್ಮಾಣವಾಗಿದೆ ಎಂಬ ಮಾಹಿತಿಯಿದೆ. ರಾಜ ಗೋಪುರ, ಕಲ್ಲು ಮಂಟಪದ ಆವರಣ ಹಾಗೂ ದೇವಾಲಯದಲ್ಲಿನ ಗರ್ಭಗುಡಿಯಲ್ಲಿ ಶನಿದೇವರ ಮೂಲ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ಮುಂಭಾಗದಲ್ಲಿ ಉತ್ಸವ ಮೂರ್ತಿಯಿದ್ದು, ಪೂಜೆ ಸಲ್ಲಿಸಲಾಗುತ್ತದೆ. ಆವರಣದಲ್ಲಿ ಗಣಪತಿ ಹಾಗೂ ಜೇಷ್ಠಾದೇವಿಯ 2 ದೇವಸ್ಥಾನಗಳಿವೆ.
ಇಷ್ಟಾರ್ಥ ಈಡೇರಿಸುವ ದೈವ
ಕನಸವಾಡಿಯ ಶ್ರೀ ಶನೇಶ್ವರ ಸ್ವಾಮಿ ಭಕ್ತರ ಇಷ್ಟಾರ್ಥ ಸಿದ್ಧಿ ಹಾಗೂ ಬದುಕಿನಲ್ಲಿ ಎದುರಾಗುವ ಎಲ್ಲಾ ರೀತಿಯ ಸಂಕಷ್ಟಗಳನ್ನು ನಿವಾರಿಸುತ್ತಾನೆ ಎಂದು ಇಲ್ಲಿನ ಭಕ್ತರು ನಂಬುತ್ತಾರೆ. ವಿಶೇಷವಾಗಿ ಶ್ರಾವಣ ಮಾಸದಲ್ಲಿ ಶನಿದೇವರ ದರ್ಶನ ಮಾಡಿದರೆ ಕಷ್ಟ ಕಾರ್ಪಣ್ಯಗಳು ನಿವಾರಣೆಯಾಗಿ ಸಂಕಲ್ಪ ಸಿದ್ಧಿಯಾಗುತ್ತದೆ ಎಂಬುದು ಭಕ್ತರ ನಂಬಿಕೆ.
ಎಳ್ಳು ದೀಪ ಹಚ್ಚಿ ತಮ್ಮ ಇಷ್ಟಾರ್ಥಗಳನ್ನು ನಿವೇದಿಸಿಕೊಳ್ಳುತ್ತಾರೆ. ಶ್ರಾವಣ ಮಾಸದ ಶನಿವಾರಗಳಂದು ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಪ್ರತಿವರ್ಷ ಶಿವರಾತ್ರಿ ದಶಮಿಯಲ್ಲಿ ಶ್ರೀ ಶನಿದೇವರ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ರಥೋತ್ಸವದ ನಿಮಿತ್ತ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ದೇವರ ಉತ್ಸವಗಳು ನಡೆಯುತ್ತವೆ.
ವರದಿ: ಬಿ.ಮೂರ್ತಿ, ಟಿವಿ9 ನೆಲಮಂಗಲ
Published On - 8:15 pm, Sat, 27 August 22