ಏರೋ ಶೋ ರಿಹರ್ಸಲ್ ವೇಳೆ ಪೊಲೀಸರಿಗೆ ನೀಡಿದ್ದ ಊಟದಲ್ಲಿ ಜಿರಳೆ ಪತ್ತೆ
ಏರೋ ಇಂಡಿಯಾ ಏರ್ ಶೋ ಸಿದ್ಧತೆ ನಡೆಯುತ್ತಿದ್ದು ಭದ್ರತೆಗೆ ನಿಯೋಜಿಸಿದ್ದ ಪೊಲೀಸರಿಗೆ ನೀಡಿದ್ದ ಊಟದಲ್ಲಿ ಜಿರಳೆ ಪತ್ತೆಯಾಗಿದೆ.ಯಲಹಂಕ ಪೊಲೀಸ್ ಠಾಣೆಯಿಂದ ಊಟ ಒದಗಿಸಲಾಗಿದೆ. ಊಟದ ಗುಣಮಟ್ಟದ ಬಗ್ಗೆ ಪೊಲೀಸರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಇದೇ ರೀತಿಯ ಘಟನೆ ಎರಡು ವರ್ಷಗಳ ಹಿಂದೆ ನಡೆದಿತ್ತು, ಅಂದು ಉಪಾಹಾರದಲ್ಲಿ ಸತ್ತ ಇಲಿ ಪತ್ತೆಯಾಗಿತ್ತು.

ಬೆಂಗಳೂರು, ಪೆಭ್ರವರಿ 09: ಏರೋ ಇಂಡಿಯಾ ಏರ್ ಶೋಗೆ (Aero India Airshow) ಸಿದ್ಧತೆ ನಡೆಯುತ್ತಿದ್ದು, ಭದ್ರತೆಗೆ ನಿಯೋಜಿಸಿದ್ದ ಪೊಲೀಸರಿಗೆ (Police) ನೀಡಿದ್ದ ಊಟದಲ್ಲಿ ಜಿರಳೆ ಪತ್ತೆಯಾಗಿದೆ. ಭದ್ರತೆಗೆ ನಿಯೋಜಿಸಲಾಗಿದ್ದ ಸಿಬ್ಬಂದಿಗೆ ಯಲಹಂಕ ಪೊಲೀಸ್ ಠಾಣೆವತಿಯಿಂದ ಊಟದ ವ್ಯವಸ್ಥೆ ಮಾಡಿಸಲಾಗಿತ್ತು. ಮಧ್ಯಾಹ್ನ ಪಾರ್ಸೆಲ್ ಬಾಕ್ಸ್ ತೆರೆದಾಗ ಓರ್ವ ಪೊಲೀಸ್ ಅಧಿಕಾರಿಗೆ ಊಟದಲ್ಲಿ ಜಿರಳೆ ಸಿಕ್ಕಿದೆ. ಜಿರಳೆ ಕಂಡು ಪೊಲೀಸರು ಊಟ ಮಾಡದೆ ಬಾಕ್ಸ್ ಅನ್ನು ಹಾಗೇ ಬಿಟ್ಟು ತೆರಳಿದ್ದಾರೆ. ಗುಣಮಟ್ಟದ ಊಟ ನೀಡದಿದ್ದಕ್ಕೆ ಪೊಲೀಸ್ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು, ಎರಡು ವರ್ಷಗಳ ಹಿಂದೆ 2023ರಲ್ಲೂ ಇಂತಹದ್ದೇ ಘಟನೆ ನಡೆದಿತ್ತು. 2023ರ ಸೆಪ್ಟೆಂಬರ್ 26ರಂದು ವಿವಿಧ ಸಂಘಟನೆಗಳು ಬೆಂಗಳೂರು ಬಂದ್ಗೆ ಕರೆ ಕೊಟ್ಟಿದ್ದವು. ಈ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭದ್ರತೆಗೆ ಯಶವಂತಪುರ ಟ್ರಾಫಿಕ್ ಪೊಲೀಸರನ್ನು ನಿಯೋಜಿಸಲಾಗಿತ್ತು. ಯಶವಂತಪುರ ಟ್ರಾಫಿಕ್ ಪೊಲೀಸರಿಗೆ ತಂದಿದ್ದ ಉಪಾಹಾರದಲ್ಲಿ (ರೈಸ್ ಬಾತ್) ಸತ್ತ ಇಲಿ ಪತ್ತೆಯಾಗಿತ್ತು. ಪೊಲೀಸ್ ಇಲಾಖೆಯಿಂದ ಸರಬರಾಜು ಮಾಡಿದ ಊಟದ ಪ್ಯಾಕೆಟ್ ತೆರೆದಾಗ ಅದರಲ್ಲಿ ಇಲಿ ಕಂಡುಬಂದಿತ್ತು. ಅದನ್ನು ನೋಡಿ ಪೊಲೀಸ್ ಸಿಬ್ಬಂದಿ ಹೌಹಾರಿದ್ದರು.
ಇದನ್ನೂ ಓದಿ: ಬೆಂಗಳೂರು ಏರ್ ಶೋ: ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗ, ಪಾರ್ಕಿಂಗ್, ಏರ್ಪೋರ್ಟ್ಗೆ ಬದಲಿ ಮಾರ್ಗ ವಿವರ ಇಲ್ಲಿದೆ
ಇನ್ನು, ಹಬ್ಬ ಹರಿದಿನಗಳು, ವಿಶೇಷ ಹಾಗೂ ಚುನಾವಣಾ ಸಂದರ್ಭಗಳಲ್ಲಿ ಬಂದೋಬಸ್ತ್ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿ ಅಥವಾ ಸಿಬ್ಬಂದಿಗಳಿಗೆ 200 ರೂ. ನೀಡುವಂತೆ ಆಯಾ ಠಾಣಾಧಿಕಾರಿಗಳಿಗೆ ಸೂಚಿಸಿ ಡಿಜಿ ಆ್ಯಂಡ್ ಐಜಿ ಕಚೇರಿಯಿಂದ ಇದೇ ವರ್ಷ ಫೆಬ್ರವರಿ 4 ರಂದು ಆದೇಶ ಹೊರಡಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:14 pm, Sun, 9 February 25