ಬೆಂಗಳೂರು ವಿವಿಯಲ್ಲಿ ಏರ್ ಆಂಬ್ಯುಲೆನ್ಸ್ ಹೆಲಿಪ್ಯಾಡ್ ನಿರ್ಮಾಣಕ್ಕೆ ಪರ ವಿರೋಧ: ಏನಿದು ವಿವಾದ?
ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣದಲ್ಲಿ ರೋಗಿಗಳ ತುರ್ತು ಚಿಕಿತ್ಸೆಗೆ ಏರ್ ಆಂಬುಲೆನ್ಸ್ ಹೆಲಿಪ್ಯಾಡ್ ನಿರ್ಮಾಣಕ್ಕೆ MLC ದಿನೇಶ್ ಗೂಳಿಗೌಡ ಒತ್ತಾಯಿಸಿದ್ದಾರೆ. ವಿವಿ ಜಾಗವನ್ನು ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಮೀಸಲಿಡಬೇಕೆಂದು ವಿದ್ಯಾರ್ಥಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಪ್ರಸ್ತಾವನೆಯು ವಿಶಾಲವಾದ ಜ್ಞಾನಭಾರತಿ ಆವರಣದ ಸದ್ಬಳಕೆ ಕುರಿತು ಚರ್ಚೆಗೆ ಕಾರಣವಾಗಿದೆ.

ಬೆಂಗಳೂರು, ಏಪ್ರಿಲ್ 14: ಬೆಂಗಳೂರು ವಿಶ್ವವಿದ್ಯಾಲಯ (Bangaluru University) ಜ್ಞಾನಭಾರತಿ ಆವರಣ ನಗರಕ್ಕೆ ಒಂದು ರೀತಿ ಆಕ್ಸಿಜನ್ ಪ್ಲಾಂಟ್ ಇದ್ದಂತೆ. ಈ ಆವರಣದಲ್ಲಿ ಈಗಾಗಲೇ ಸಾಕಷ್ಟು ಸಂಸ್ಥೆಗಳಿಗೆ ಜಾಗ ನೀಡಲಾಗಿದೆ. ಇದೀಗ ಇಲ್ಲಿ ರೋಗಿಗಳ ತುರ್ತು ಚಿಕಿತ್ಸೆಗೆ ನೆರವಾಗಲು ಏರ್ ಆಂಬುಲೆನ್ಸ್ ಹೆಲಿಪ್ಯಾಡ್ (Air Ambulance Helipad) ನಿರ್ಮಾಣ ಮಾಡಲು ಒತ್ತಾಯ ಕೇಳಿಬಂದಿದೆ.
ಏರ್ ಆಂಬುಲೆನ್ಸ್ ಹೆಲಿಪ್ಯಾಡ್ಗೆ ಶಾಸಕ ಒತ್ತಾಯ
ಬೆಂಗಳೂರಿನಲ್ಲಿ 1100 ಎಕರೆಗಳ ವಿಶಾಲ ವ್ಯಾಪ್ತಿ ಹೊಂದಿರುವ ಬೆಂಗಳೂರು ವಿಶ್ವವಿದ್ಯಾಲಯ ಈಗ ಕಿರಿದಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಲವು ಸಂಸ್ಥೆಗಳಿಗೆ ಜಾಗ ನೀಡಲಾಗಿದೆ. ಇನ್ನು ಇದೇ ಕ್ಯಾಂಪಸ್ನಲ್ಲಿ ರೋಗಿಗಳ ತುರ್ತು ಚಿಕಿತ್ಸೆಗೆ ನೆರವಾಗಲು ಏರ್ ಆಂಬುಲೆನ್ಸ್ ಹೆಲಿಪ್ಯಾಡ್ ನಿರ್ಮಾಣ ಮಾಡಬೇಕು ಅಂತ ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ ಒತ್ತಾಯಿಸಿದ್ದಾರೆ. ಈ ವಿಚಾರವಾಗಿ ಉನ್ನತ ಶಿಕ್ಷಣ ಸಚಿವ ಸುಧಾಕರ್ ಅವರಿಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: 49 ಲಕ್ಷ ರೂ. ಟಿಕೆಟ್ ಇದ್ದರೂ ವಿಮಾನವೇರಲು ಬಿಡಲಿಲ್ಲ! ಕೋರ್ಟ್ ಮೆಟ್ಟಿಲೇರಿತು ಬೆಂಗಳೂರು ವಿಮಾನ ನಿಲ್ದಾಣದ ಅಪರೂಪದ ಪ್ರಕರಣ
ಇನ್ನು ಹೆಲಿಪ್ಯಾಡ್ ನಿರ್ಮಾಣ ಮಾಡುವ ಪ್ರಸ್ತಾವನೆ ಬಗ್ಗೆ ವಿವಿ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಸಂಘ ಆಕ್ಷೇಪ ಎತ್ತಿದೆ. ವಿವಿ ಜಾಗವನ್ನು ಶೈಕ್ಷಣಿಕ ಉದ್ದೇಶಕ್ಕೆ ಮಾತ್ರ ಬಳಸಬೇಕು. ಏರ್ ಆಂಬುಲೆನ್ಸ್ ಹೆಲಿಪ್ಯಾಡ್ ಮಾಡಲು ನಮ್ಮ ತಕರಾರು ಇಲ್ಲ, ಆದರೆ ಬೇರೆ ಎಲ್ಲಾದರೂ ಜಾಗ ನೀಡಿದರೆ ಉತ್ತಮ ಎಂದಿದ್ದಾರೆ.
ಇದನ್ನೂ ಓದಿ: ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬಿಗ್ ಶಾಕ್: ಸತತ 2ನೇ ವರ್ಷವೂ ಶುಲ್ಕ ಏರಿಕೆ; ಪೋಷಕರ ಜೇಬಿಗೆ ಕತ್ತರಿ!
ಇನ್ನು ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ ಬರೆದ ಪತ್ರಕ್ಕೆ ಸ್ಪಂದಿಸಿರುವ ಉನ್ನತ ಶಿಕ್ಷಣ ಸಚಿವ ಎಂ ಸಿ ಸುಧಾಕರ್, ಪರಿಶೀಲಿಸಿ ವರದಿ ನೀಡಿ ಅಂತ ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿಗಳಿಗೆ ಸೂಚನೆ ನೀಡಿದ್ದಾರೆ. ಒಟ್ಟಾರೆ ನಗರಕ್ಕೆ ಏರ್ ಆಂಬುಲೆನ್ಸ್ ಹೆಲಿಪ್ಯಾಡ್ ಅವಶ್ಯಕತೆ ಇದೆ. ಆದರೆ ಅದು ನಿರ್ಮಾಣ ಮಾಡಲು ಜಾಗ ಇಲ್ಲಿ ಸಿಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




