ಬೆಂಗಳೂರು: ಅಂದರಹಳ್ಳಿಯಲ್ಲಿ ಬೇಸಿಗೆ ಆರಂಭದಲ್ಲೇ ಜಲಕ್ಷಾಮ, ಬತ್ತಿ ಹೋದ ಬೋರ್ ವೆಲ್, ಟ್ಯಾಂಕರ್ ನೀರೇ ಗತಿ
ಬೆಂಗಳೂರಿನ ಅಂದರಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೇಸಿಗೆ ಆರಂಭದಲ್ಲೇ ತೀವ್ರ ನೀರಿನ ಕೊರತೆ ಎದುರಾಗಿದೆ. ಬೋರ್‌ವೆಲ್‌ಗಳು ಹಾಳಾಗಿರುವುದು ಮತ್ತು ಕಾವೇರಿ ನೀರಿನ ಪೈಪ್‌ಲೈನ್ ಸಂಪರ್ಕವಿಲ್ಲದಿರುವುದು ಇದಕ್ಕೆ ಕಾರಣ. ಜಲಮಂಡಳಿಯ ನಿರ್ಲಕ್ಷ್ಯದಿಂದ ಜನರು ಟ್ಯಾಂಕರ್ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಟಿವಿ9 ವರದಿಯಿಂದ ಗೊರಗುಂಟೆಪಾಳ್ಯದ ಸ್ಲಂ ಪ್ರದೇಶಕ್ಕೆ ನೀರು ಪೂರೈಕೆಯಾಗಿದೆ.

ಬೆಂಗಳೂರು, ಮಾರ್ಚ್ 04: ಕಳೆದ ವರ್ಷ ಬೇಸಿಗೆಯಲ್ಲಿ (Summer) ರಾಜಧಾನಿ ಬೆಂಗಳೂರಿನಲ್ಲಿ (Bengaluru) ನಿರಿಗಾಗಿ ಜನರು ಸಾಕಷ್ಟು ಪರದಾಡಿದ್ದರು. ಇದೀಗ ಮತ್ತೆ ಬೇಸಿಗೆ ಆರಂಭದಲ್ಲೇ ಬೆಂಗಳೂರಿನ ಅಂದರಹಳ್ಳಿ ಸುತ್ತಮುತ್ತಲಿನ ಜನರು ನೀರಿಗಾಗಿ ಬವಣಿಸುತ್ತಿದ್ದಾರೆ. ಬೇಸಿಗೆ ಆರಂಭದಲ್ಲೇ ಜಲ ಬವಣೆಗೆ ನಿವಾಸಿಗಳು ಸುಸ್ತಾಗಿದ್ದಾರೆ. ಬೋರ್ ವೆಲ್ಗಳೆಲ್ಲ ಹಾಳಾಗಿದ್ದರಿಂದ, ನಿತ್ಯ ಬಳಕೆಗೂ ಟ್ಯಾಂಕರ್ ನೀರನ್ನೇ ಅವಲಂಬಿಸುವ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ವರ್ಷ ಬೇಸಿಗೆಯಲ್ಲಿ ನೀರಿನ ಸಮಸ್ಯೆ ತಾಂಡವವಾಡುತ್ತಿದ್ದರೂ ಜಲಮಂಡಳಿ ತಲೆಕೆಡಿಸಿಕೊಂಡಿರಲಿಲ್ಲ. ಹಾಳಾಗಿದ್ದ ಬೋರ್ವೆಲ್ಗಳನ್ನು ರಿಪೇರಿ ಮಾಡಿಸಲು ಸಹ ಮುಂದಾಗಲಿಲ್ಲ. ಇದರ ಪರಿಣಾಮ ಈ ವರ್ಷ ಬೇಸಿಗೆ ಆರಂಭದಲ್ಲಿ ನೀರು ಸಿಗದೆ ಜನರು ಪರದಾಡುವಂತಾಗಿದೆ. ಇನ್ನು, ಕಾವೇರಿ ನೀರಿನ ಪೈಪ್ ಲೈನ್ ಕನೆಕ್ಷನ್ ಕೂಡ ಆಗದಿರುವುದು ಬೇಸಿಗೆ ಶುರುವಿನಲ್ಲೇ ಜಲಕಂಟಕ ತಂದಿಟ್ಟಿದೆ.
ಸದ್ಯ ಕಾವೇರಿ ನೀರಾಗಲಿ, ಬೋರ್ವೆಲ್ ನೀರಾಗಲಿ ಬಾರದೆ ಕಂಗಾಲಾಗಿರುವ ನಿವಾಸಿಗಳು, ಹಣ ಕೊಟ್ಟು ಟ್ಯಾಂಕರ್ ನೀರು ಖರೀದಿಸುತ್ತಿದ್ದಾರೆ. ನಿತ್ಯ ಬಳಕೆಗೂ ನೀರಿಲ್ಲದೇ ಮನೆ ಮಾಲೀಕರು ನೀರಿಗೆ ದುಪ್ಪಟ್ಟು ಹಣ ಕೇಳುತ್ತಿರುವುದರಿಂದ ಬಾಡಿಗೆದಾರರು ಮನೆ ಖಾಲಿ ಮಾಡುತ್ತಿದ್ದಾರೆ. ಪ್ರತಿ ಬಾರಿ ಬೇಸಿಗೆಗೆ ಇದೇ ಸಮಸ್ಯೆ ತಲೆದೂರುತ್ತಿದ್ದರೂ ಇತ್ತ ತಿರುಗಿನೋಡದ ಜಲಮಂಡಳಿ, ಸ್ಥಳೀಯ ಶಾಸಕರ ನಡೆಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಿವಿ9 ಬಿತ್ತರಿಸಿದ ವರದಿಗೆ ಫಲಶೃತಿ
ಅಂದರಹಳ್ಳಿ ಕತೆ ಹೀಗಾದರೇ, ಇತ್ತ ರವಿವಾರ ಟಿವಿ9 ಬಿತ್ತರಿಸಿದ್ದ ವರದಿಗೆ ಫಲಶೃತಿ ಸಿಕ್ಕಿದೆ. ಗೊರಗುಂಟೆಪಾಳ್ಯದ ಜ್ಯೋತಿಬಾಫುಲೆ ಸ್ಲಂನಲ್ಲಿ ನೂರು ಮನೆಗಳಿವೆ. ಆದರೆ, ಇಲ್ಲಿ ಎರಡೇ, ಎರಡು ನಲ್ಲಿಗಳಿದ್ದು, ನೀರು ತುಂಬಿಸಲು ಮಹಿಳೆಯರು ಪರದಾಡುತ್ತಿದ್ದರು. ಅಲ್ಲದೇ ನೀರಿಗಾಗಿ ನಿತ್ಯ ಗಲಾಟೆ, ಜಗಳ ನಡೆಯುತ್ತಿತ್ತು. ಈ ಬಗ್ಗೆ ಟಿವಿ9 ವರದಿ ಪ್ರಸಾರ ಮಾಡಿ ಅಧಿಕಾರಿಗಳ ಗಮನಸೆಳೆದಿತ್ತು. ಸದ್ಯ ಟಿವಿ9 ವರದಿ ಬಳಿಕ ಅಲರ್ಟ್ ಆದ ಜಲಮಂಡಳಿಯ ಅಧಿಕಾರಿಗಳು ಈ ಏರಿಯಾಗೆ ಸಿಂಟೆಕ್ಸ್ ಟ್ಯಾಂಕ್ ಇಟ್ಟು ಉಚಿತ ನೀರು ಸರಬರಾಜು ಮಾಡಿದ್ದಾರೆ. ಅಲ್ಲದೇ ನಿತ್ಯ ಉಚಿತವಾಗಿ ನೀರು ಪೂರೈಸುವ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: Car Mileage: ಬೇಸಿಗೆಯಲ್ಲಿ ಕಾರು ಕಡಿಮೆ ಮೈಲೇಜ್ ನೀಡುವುದೇಕೆ? ಇಲ್ಲಿದೆ ನೋಡಿ ಕಾರಣ
ಒಟ್ಟಿನಲ್ಲಿ ಕಳೆದ ಬಾರಿ ಬೇಸಿಗೆ ಬೇಗೆಯ ಜೊತೆಗೆ ಜಲಕ್ಷಾಮದಿಂದ ಬೆಂದಿದ್ದ ಬೆಂಗಳೂರಿಗೆ ಈ ಬಾರಿ ನೀರಿನ ಸಮಸ್ಯೆ ಬರಲ್ಲ ಅಂತ ಸರ್ಕಾರ ಹಾಗೂ ಜಲಮಂಡಳಿ ಆರಾಮಾಗಿತ್ತು. ಆದ್ರೆ ಇದೀಗ ಬೇಸಿಗೆ ಶುರುವಾಗುವ ಮೊದಲೇ ಹಲವು ಏರಿಯಾಗಳಲ್ಲಿ ನೀರಿನ ಬವಣೆ ಕೂಡ ಸದ್ದುಮಾಡುತ್ತದೆ. ಸದ್ಯ ಮುಂದಿನ ಮೂರು ತಿಂಗಳಿನ ಬಿರುಬೇಸಿಗೆಗೆ ಜಲಮಂಡಳಿ ಯಾವ ರೀತಿ ತಯಾರಾಗಿದೆ ಅನ್ನೋದನ್ನ ಕಾದುನೋಡಬೇಕಿದೆ.