ಬೆಂಗಳೂರು: ಹೀಟ್ ಸ್ಟ್ರೋಕ್ ಬಗ್ಗೆ ಇರಲಿ ಎಚ್ಚರ, ತುರ್ತು ಸ್ಥಿತಿಯಲ್ಲಿ ಈ ಸಂಖ್ಯೆಗೆ ಕರೆ ಮಾಡಿ
ಕೂಲ್ ಸಿಟಿ ಎಂದೇ ಕರೆಸಿಕೊಳ್ಳೊತ್ತಿದ್ದ ರಾಜಧಾನಿ ಬೆಂಗಳೂರು ಸದ್ಯ ಹಾಟ್ ಸಿಟಿಯಾಗಿ ಬದಲಾಗಿದೆ. ಉರಿಯುವ ಬಿಸಿಲಿಗೆ ಹೀಟ್ ಸ್ಟ್ರೋಕ್ ಭೀತಿ ಒಂದು ಕಡೆಯಾದರೆ, ಖಾಯಿಲೆಗಳ ಏರಿಕೆಯ ಆತಂಕ ಶುರವಾಗಿದೆ. ತಾಪಮಾನ ಏರಿಕೆ ಬೆನ್ನಲ್ಲೇ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಸಹಾಯವಾಣಿಯನ್ನೂ ಒದಗಿಸಿದೆ.

ಬೆಂಗಳೂರು, ಮಾರ್ಚ್ 4: ಈ ವರ್ಷ ಬೇಸಿಗೆ ಅಂದುಕೊಂಡದ್ದಕಿಂತ ಪ್ರಬಲವಾಗಿಯೇ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬೆಂಗಳೂರು ತಾಪಮಾನದಲ್ಲಿ ಮತ್ತಷ್ಟು ಏರಿಕೆ ಕಂಡುಬಂದಿದೆ. ಬಿರು ಬಿಸಿಲಿಗೆ ಜನ ಬಸವಳಿದು ಹೋಗಿದ್ದಾರೆ. ಬೆಂಗಳೂರಿನಲ್ಲಿ ತಾಪಮಾನ ಏರಿಕೆ ಕಂಡಿದ್ದು, ಇದರ ಬೆನ್ನಲ್ಲೇ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಮುಂದಿನ ಕೆಲ ವಾರಗಳ ಕಾಲ ಇದೇ ರೀತಿಯ ಗರಿಷ್ಠ ಬಿಸಿಲು ಇರಲಿದ್ದು, ಬೆಳಗ್ಗೆ 11 ರಿಂದ 4 ಗಂಟೆಯವರೆಗೂ ಹೆಚ್ಚು ಬಿಸಿಲಿಗೆ ಮೈ ಒಡ್ಡದಂತೆ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.
ಬೆಂಗಳೂರಿನಲ್ಲಿ ಮಾರ್ಚ್ 3 ರಂದು ಗರಿಷ್ಟ ತಾಪಮಾನ 33 ಡಿಗ್ರಿ ಸೆಲ್ಸಿಸಿಯಸ್ ದಾಖಲಾಗಿದೆ. ಈ ಹಿನ್ನೆಲೆ ಮತ್ತೆ ಹೀಟ್ ವೇವ್ ಆತಂಕ ಎದುರಾಗಿದೆ. ಹೀಗಾಗಿ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ರಾಜಧಾನಿ ಬೆಂಗಳೂರಿನಲ್ಲಿ ಬಿಸಿಲಿಗೆ ಕಂಗೆಟ್ಟ ಜನರು ಇಂದು ಛತ್ರಿ, ಟೋಪಿ, ಮಾಸ್ಕ್, ದುಪ್ಪಟ್ಟಾ ಮೋರೆಹೋಗಿದ್ದಾರೆ.
ಹೀಟ್ ವೇವ್ ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ, ಮುಂದಿನ ಒಂದು ತಿಂಗಳ ಕಾಲ ಮತ್ತಷ್ಟು ತಾಪಮಾನ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ಜನರಿಗೆ ಹೊರಗೆ ಓಡಾಡದಂತೆ ಸೂಚನೆ ನೀಡಿದೆ. ಹೆಚ್ಚು ನೀರು ಕುಡಿಯುವಂತೆ ಸಲಹೆ ನೀಡಿದೆ. ಗರ್ಭಿಣಿಯರು ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕು, ವೃದ್ಧರು ಹಾಗೂ ರೋಗಿಗಳು ಆರೋಗ್ಯದ ಬಗ್ಗೆ ಸೂಚನೆ ವಹಿಸಬೇಕು ಎಂದು ಸಲಹೆ ನೀಡಲಾಗಿದ್ದು, ಛತ್ರಿ, ಟೋಪಿ ಬಳಸುವಂತೆ ಸೂಚಿಸಲಾಗಿದೆ. ದೇಹದ ಉಷ್ಟಾಂಶದಲ್ಲಿ ಏರುಪೇರಾದರೆ ಸಹಾಯವಾಣಿಗೆ ಕರೆ ಮಾಡಲು ತಿಳಿಸಲಾಗಿದೆ.
ಆರೋಗ್ಯ ಇಲಾಖೆ ಸಲಹೆಗಳೇನು?
ಆರೋಗ್ಯ ಇಲಾಖೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಉಷ್ಣಾಂಶ ಹೆಚ್ಚಳದ ಕಾರಣ ಕಾರ್ಮಿಕರು ಏನು ಮಾಡಬೇಕು? ಯಾವ ರೀತಿಯಲ್ಲಿ ರಕ್ಷಣೆ ಪಡೆದುಕೊಳ್ಳಬೇಕು? ಹೇಗೆ ಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದೆ. ಹೈ ಬಿಪಿ, ಹೃದಯ ಸಂಬಂಧಿ ಖಾಯಿಲೆ ಇರುವವರು, ಗರ್ಭಿಣಿಯರು, ವೃದ್ಧರು ಮತ್ತು ಮಕ್ಕಳು ರಣ ಬಿಸಿಲಿಗೆ ಮೈ ಒಡ್ಡದಂತೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
ಕೆಲವು ಸಂದರ್ಭಗಳಲ್ಲಿ ಹೀಟ್ ಸ್ಟ್ರೋಕ್ ಸಾಧ್ಯತೆ ಕೂಡಾ ಇದ್ದು, ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವಂತೆ ವೈದ್ಯರು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಮಲೆನಾಡಿನಲ್ಲಿ ದಟ್ಟ ಮಂಜು, ಕರಾವಳಿಯಲ್ಲಿ ಉಷ್ಣ ಅಲೆ
ದೇಹದ ತಾಪಮಾನ ಏರಿಕೆಯಿಂದ ನಿರ್ಜಲೀಕರಣ ಹಾಗೂ ಉಸಿರಾಟದ ಸಮಸ್ಯೆ ಎದುರಾಗುವ ಸಮಸ್ಯೆ ಇದ್ದು, ದೇಹವನ್ನು ಹೈಡ್ರೇಟ್ ಮಾಡಿಕೊಳ್ಳಲು ತಿಳಿಸಲಾಗಿದೆ. ನೀರು, ಮಜ್ಜಿಗೆ, ಫ್ರೆಶ್ ಫ್ರೂಟ್ ಜ್ಯೂಸ್, ಸೀಸನಲ್ ಹಣ್ಣುಗಳನ್ನು ಹೆಚ್ಚು ಹೆಚ್ಚು ಸೇವಿಸಲು ವೈದ್ಯರು ಸಲಹೆ ನೀಡಿದ್ದಾರೆ. ಜೊತೆಗೆ ಯಾರದರೂ ಹೆಚ್ಚಿದ ಉಷ್ಣಾಂಶದಿಂದ ಆರೋಗ್ಯ ಸಮಸ್ಯೆ ಎದುರಿಸಿದರೆ ಹಾಗೂ ಪ್ರಜ್ಞೆ ತಪ್ಪುವ ಸ್ಥಿತಿಯಲ್ಲಿ ಇದ್ದರೆ ಸಹಾಯವಾಣಿ ಸಂಖ್ಯೆ 108 / 102 ಕ್ಕೆ ಕರೆ ಮಾಡುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.