ಮಳೆ ಹಾನಿ ಪ್ರದೇಶಗಳ ಮೇಲೆ ನಿಗಾ ಇಡಲು ಡ್ರೋನ್ ಮೊರೆ ಹೋದ ಬಿಬಿಎಂಪಿ!

ಮುಂಗಾರು ಮಳೆಯ ಅಬ್ಬರ ಅವಧಿಗೂ ಮುನ್ನವೇ ಜೋರಾಗಿದೆ. ಇತ್ತ ಮಳೆಗಾಲದಲ್ಲಿ ಸಾಲು ಸಾಲು ಅವಾಂತರ ಸೃಷ್ಟಿಯಾಗುವ ಬೆಂಗಳೂರಿನ ಸ್ಥಿತಿಗತಿಗಳನ್ನ ಪರಿಶೀಲಿಸಬೇಕಿದ್ದ ಪಾಲಿಕೆ, ಇದೀಗ ದಿನಕ್ಕೊಂದು ಹೊಸ ಯೋಜನೆ ಬಗ್ಗೆ ಚಿಂತನೆ ಮಾಡುತ್ತಿದೆ. ಆ ಮೂಲಕ ಮಳೆಯ ಅವಾಂತರಗಳನ್ನು ನಿಯಂತ್ರಿಸಲು ಕಸರತ್ತು ನಡೆಸುತ್ತಿದೆ. ಶುಕ್ರವಾರವಷ್ಟೇ ಬೋಟ್ ಖರೀದಿಗೆ ಟೆಂಡರ್ ಕರೆದಿದ್ದ ಪಾಲಿಕೆ ಇದೀಗ ರಾಜಧಾನಿಯ ಮಳೆ ಹಾನಿ ಪ್ರದೇಶಗಳ ಮೇಲೆ ನಿಗಾ ಇಡಲು ಡ್ರೋನ್ ಹಾರಿಸಲು ಸಜ್ಜಾಗಿದೆ!

ಮಳೆ ಹಾನಿ ಪ್ರದೇಶಗಳ ಮೇಲೆ ನಿಗಾ ಇಡಲು ಡ್ರೋನ್ ಮೊರೆ ಹೋದ ಬಿಬಿಎಂಪಿ!
ಸಾಂದರ್ಭಿಕ ಚಿತ್ರ
Edited By:

Updated on: Jun 01, 2025 | 11:02 AM

ಬೆಂಗಳೂರು, ಜೂನ್ 1: ಮಳೆ ಬಂದರೆ ಹೊಳೆಯಂತಾಗುವ ಬೆಂಗಳೂರಿನ ಸ್ಥಿತಿಗೆ ಪರಿಹಾರ ಕಂಡುಕೊಳ್ಳಲು ಸುಸ್ತಾದ ಪಾಲಿಕೆ (BBMP) ಇದೀಗ ಮಳೆ ಅವಾಂತರಗಳನ್ನು ನಿಯಂತ್ರಿಸಲು ದಿನಕ್ಕೊಂದು ಹೊಸ ಪ್ರಯೋಗ ಮಾಡುತ್ತಿದೆ. ಮೊನ್ನೆ ಮೊನ್ನೆಯಷ್ಟೇ ಬೋಟ್, ಲೈಫ್ ಜಾಕೆಟ್ ಖರೀದಿಗೆ ಟೆಂಡರ್ ಕರೆದಿದ್ದ ಬಿಬಿಎಂಪಿ ಇದೀಗ ರಾಜಧಾನಿಯ ಮಳೆ ಹಾನಿ ಪ್ರದೇಶಗಳ ಮೇಲೆ ನಿಗಾ ಇಡಲು ಡ್ರೋನ್ (Drone) ಮೊರೆಹೋಗಲು ಮುಂದಾಗಿದೆ. ಬೆಂಗಳೂರಿನಲ್ಲಿ ಮಳೆ ಬಂದಾಗ ಜಲಾವೃತ ಆಗುವ ಪ್ರದೇಶಗಳು ಹಾಗೂ ಮಳೆಹಾನಿ ಪ್ರದೇಶಗಳಲ್ಲಿ ಡ್ರೋನ್ ಹಾರಿಸಿ ಮಾಹಿತಿ ಕಲೆ ಹಾಕಲು ಸಿದ್ಧತೆ ನಡೆಸಿದೆ.

ಸದ್ಯ ಪೊಲೀಸ್ ಇಲಾಖೆಯ ಜೊತೆ ಸೇರಿ ಡ್ರೋನ್ ಕಾರ್ಯಾಚರಣೆ ಮೂಲಕ ಮಳೆ ಹಾನಿ ಪ್ರದೇಶಗಳ ಪತ್ತೆಗೆ ಚಿಂತನೆ ನಡೆಸಲಾಗಿದೆ. ಡ್ರೋನ್ ಹಾರಾಟ ನಿರ್ವಹಣೆಗೆ ಪೊಲೀಸ್ ಹಾಗೂ ಬಿಬಿಎಂಪಿಯ ಅಧಿಕಾರಿಗಳ ತಂಡದಿಂದ ನೋಡಲ್ ಆಫೀಸರ್​ಗಳನ್ನು ನೇಮಿಸಲಾಗಿದೆ. ಮಳೆ ಬಂದಾಗ ಯಾವ್ಯಾವ ಪ್ರದೇಶಗಳಲ್ಲಿ ಹಾನಿಯಾಗುತ್ತದೆ ಎಂಬುದನ್ನು ಡ್ರೋನ್ ಮೂಲಕ ಬಿಬಿಎಂಪಿಯ ಕಂಟ್ರೋಲ್ ರೂಮ್​ನಲ್ಲಿ ಕುಳಿತುಕೊಂಡೇ ಮಾಹಿತಿ ಕಲೆಹಾಕಲು ಉದ್ದೇಶಿಸಲಾಗಿದೆ. ಇದರಿಂದ, ಎಲ್ಲಿ ಸಮಸ್ಯೆಯಾಗಿದೆ ಎಂಬುದನ್ನು ಪತ್ತೆಹಚ್ಚಿ ಸೂಕ್ತ ಸಮಯಕ್ಕೆ ನೆರವು ನೀಡುವುದಕ್ಕೆ ಅನುಕೂಲವಾಗಲಿದೆ.

ಮತ್ತೊಂದೆಡೆ, ಗುಂಡಿಗಳು, ನೀರು ನಿಲ್ಲುವ ಜಾಗ ಸರಿಪಡಿಸದೇ ಬೋಟ್, ಡ್ರೋನ್ ಎಂದು ಕತೆ ಹೇಳುತ್ತಿರುವ ಪಾಲಿಕೆ ನಡೆಗೆ ನಗರದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ
ಅಂಧರು ಬಟನ್ ಪ್ರೆಸ್ ಮಾಡಿದ್ರೆ ಸಾಕು, ಇದ್ದಲ್ಲಿಗೆ ಬರುತ್ತೆ ಬಿಎಂಟಿಸಿ ಬಸ್
ಮಲ್ಲಸಂದ್ರ ಬಳಿ ಚಿರತೆ ಪ್ರತ್ಯಕ್ಷ: ಭಯಭೀತರಾದ ಜನ, ಕ್ಯಾಮರಾ ಅಳವಡಿಕೆ
ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನ ಕೆಲವೆಡೆ ಮುಂದಿನ ಐದು ದಿನ ಮಳೆ
ವಿದ್ಯಾರ್ಥಿಗಳು KSRTC ಬಸ್ ಪಾಸ್ ವಿತರಣೆ ಆರಂಭ: ಅರ್ಜಿ ಸಲ್ಲಿಕೆ ಹೇಗೆ?

ಹೇಗಿರಲಿದೆ ಡ್ರೋನ್ ಕಾರ್ಯಾಚರಣೆ?

  • ಮಳೆ ಅವಾಂತರ ಆಗಿರೋ ಜಾಗದ ಬಗ್ಗೆ ಮಾಹಿತಿ ಸಂಗ್ರಹ.
  • ಮಳೆ ನೀರು ಇರೋ ಕಡೆ ಡ್ರೋನ್ ಹಾರಿಸಲಿರುವ ತಂಡ.
  • ಡ್ರೋನ್ ಹಾರಾಟದ ದೃಶ್ಯಗಳು ಬಿಬಿಎಂಪಿಯ ಕಂಟ್ರೋಲ್ ರೂಮ್​​ನಲ್ಲಿ ಡಿಸ್​​ಪ್ಲೇ.
  • ಜಲಾವೃತವಾದ ಜಾಗದಲ್ಲಿ ಎಲ್ಲಿ ನೀರು ಹರಿಯಲು ಜಾಗ ಇದೆ ಎಂಬುದನ್ನು ಗುರುತಿಸಲಾಗುತ್ತದೆ.
  • ಅವಾಂತರ ಆದ ಜಾಗಕ್ಕೆ ಏನು ಕ್ರಮ ಕೈಗೊಳ್ಳಬೇಕು ಎಂಬುದರ ರೂಪುರೇಷೆ ಸಿದ್ಧತೆ.
  • ರಕ್ಷಣಾ ಕಾರ್ಯಾಚರಣೆ, ನೀರು ತೆರವು ಕಾರ್ಯಾಚರಣೆಗೆ ಕ್ರಮ ರೂಪಿಸಲು ಪ್ಲಾನ್.

ಇದನ್ನೂ ಓದಿ: ವಿದ್ಯಾರ್ಥಿಗಳು KSRTC ಬಸ್ ಪಾಸ್ ವಿತರಣೆ ಆರಂಭ: ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ವಿವರ

ಒಟ್ಟಿನಲ್ಲಿ ಪ್ರತಿ ಬಾರಿ ಮಳೆ ಬಂದಾಗಲೂ ಮುಂದಿನ ಬಾರೀ ಹೀಗೆ ಆಗಲ್ಲ ಅಂತಾ ಭರವಸೆ ಕೊಡುತ್ತಲೇ ಬಂದಿರುವ ಪಾಲಿಕೆ, ಇದೀಗ ಬ್ರ್ಯಾಂಡ್ ಬೆಂಗಳೂರಿನ ಮಳೆ ಅವಾಂತರಗಳ ತಡೆಗೆ ದಿನಕ್ಕೊಂದು ಹೊಸ ಪ್ಲಾನ್ ಹುಡುಕುತ್ತಿದೆ. ಈ ಹೊಸ ಯೋಜನೆಗಳೆಲ್ಲ ಎಷ್ಟರಮಟ್ಟಿಗೆ ಸಮಸ್ಯೆಗಳನ್ನು ಬಗೆಹರಿಸುತ್ತವೆ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ