ಬೇಡ್ತಿ, ಅಘನಾಶಿನಿ ನದಿ ಯೋಜನೆ ಕೈಬಿಡಿ: ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ: ಪ್ರತಿಭಟನಾಕರರು ಕೈಗೊಂಡ ನಿರ್ಣಯಗಳೇನು?
ಉತ್ತರ ಕನ್ನಡ ಜಿಲ್ಲೆಯ ಬೇಡ್ತಿ-ಅಘನಾಶಿನಿ ನದಿ ಜೋಡಣೆ ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಬೆಂಗಳೂರಿನಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಪರಿಸರ ತಜ್ಞರು ಭಾಗವಹಿಸಿದ್ದರು. ಪಶ್ಚಿಮ ಘಟ್ಟದ ಪರಿಸರ, ರೈತರು, ಮೀನುಗಾರರ ಬದುಕು ನಾಶವಾಗಲಿದೆ ಎಂದು ಆತಂಕ ವ್ಯಕ್ತವಾಗಿದ್ದು, ಯೋಜನೆ ಕೈಬಿಡುವಂತೆ ಸರ್ಕಾರಕ್ಕೆ ಆಗ್ರಹಿಸಲಾಗಿದೆ.

ಮುಖ್ಯಾಂಶಗಳು
- ಬೇಡ್ತಿ, ಅಘನಾಶಿನಿ ನದಿ ಜೋಡಣೆ ಯೋಜನೆ ಕೈಬಿಡುವಂತೆ ಆಗ್ರಹ
- ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ
- ಪ್ರತಿಭಟನೆಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳು ಏನು?
ಬೆಂಗಳೂರು, ಅಕ್ಟೋಬರ್ 10: ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ ಹರಿಯುವ ಬೇಡ್ತಿ ಮತ್ತು ಅಘನಾಶಿನಿ ನದಿಗಳ ಜೋಡಣೆ ಹಾಗೂ ನದಿ ತಿರುವು ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲದೆ ಯೋಜನೆ ಕೈಬಿಡುವಂತೆ ಆಗ್ರಹಿಸಿ ಇಂದು ನಗರದ ಫ್ರೀಡಂಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ನಿವೃತ್ತ ನ್ಯಾ. ಸಂತೋಷ್ ಹೆಗ್ಡೆ, ಪರಿಸರ ತಜ್ಞ ಎ.ಎನ್.ಯಲ್ಲಪ್ಪ ರೆಡ್ಡಿ, ತೇಜಸ್ವಿನಿ ಅನಂತಕುಮಾರ್ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
‘ಪಶ್ಚಿಮಘಟ್ಟ ಉಳಿಸಿ ಉತ್ತರ ಕನ್ನಡ ರಕ್ಷಿಸಿ’ ಶೀರ್ಷಿಕೆಯಡಿ ಬೇಡ್ತಿ ಅಘನಾಶಿನಿ ಕೊಳ್ಳಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆದ ಜನಾಕ್ರೋಶದ ಸಭೆಯಲ್ಲಿ ಬೆಂಗಳೂರಿನಲ್ಲಿರುವ ಸಾವಿರಾರು ಉತ್ತರ ಕನ್ನಡದ ಜನರು ಭಾಗವಹಿಸಿದ್ದರು. ಈ ಮೂಲಕ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದ ಕಡೆಯಿಂದ ನಡೆಯುತ್ತಿರುವ ಡಿಪಿಎಆರ್‌ನ್ನು ಕೂಡಲೇ ರದ್ದುಪಡಿಸಿ, ಉತ್ತರ ಕನ್ನಡದ ನದಿಗಳು ಹಾಗೂ ಜನರ ಜೀವ ಸಂರಕ್ಷಿಸಬೇಕು ಎನ್ನುವ ನಿರ್ಣಯಕೈಗೊಂಡರು. ಇನ್ನು ಪ್ರತಿಭಟನಾ ಸಭೆಯಲ್ಲಿ 11 ಪ್ರಮುಖ ನಿರ್ಧಾರಗಳನ್ನು ಒಕ್ಕೋರಲಿನಿಂದ ತೆಗೆದುಕೊಳ್ಳಲಾಗಿದೆ.
ಪ್ರತಿಭಟನೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು ಹೀಗಿವೆ
- ದಕ್ಷಿಣ ಭಾರತದ ಆಹಾರ ಸುರಕ್ಷತೆಯ ತಾಣ ಸಹ್ಯಾದ್ರಿ. ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಹರಿಯುವ 22 ಪ್ರಮುಖ ನದಿ ಕಣಿವೆಗಳ ಸಂರಕ್ಷಣೆಗೆ ಸರ್ಕಾರ ವಿಶೇಷ ಸುಸ್ಥಿರ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಲಾಗಿದೆ.
View this post on Instagram
- ಪಶ್ಚಿಮ ಘಟ್ಟದ ಹೃದಯ ಭಾಗವಾದ ಬೇಡ್ತಿ ಮತ್ತು ಅಘನಾಶಿನಿ ನದಿ ಕಣಿವೆಗಳಲ್ಲಿ 4 ಸ್ಥಳಗಳಲ್ಲಿ ಆಣೆಕಟ್ಟು ಕಟ್ಟಿ ನೀರನ್ನು ಬೇರೆಡೆ ಸಾಗಿಸುವ ವಿನಾಶಕಾರಿ ಯೊಜನೆಗಳು ಕಣಿವೆಗಳ ರೈತರು, ಮೀನುಗಾರರು, ವನವಾಸಿಗಳು, ಸೇರಿ ಲಕ್ಷಾಂತರ ಜನರ ಬದುಕು ನಾಶವಾಲಿದೆ.
- ಎತ್ತಿನ ಹೊಳೆಯ ವಿಫಲ ನದಿ ತಿರುವು ಯೋಜನೆಯಂತೆ ಬೇಡ್ತಿ ಅಘನಾಶಿನಿ ನದಿಗಳ ದಿಕ್ಕು ತಿರುಗಿಸುವ ಯೋಜನೆಗಳು ವ್ಯರ್ಥ, ನೀರಿಲ್ಲದ ನೀರಾವರಿ ಯೋಜನೆಗಳಾಗಲಿವೆ ಎಂದು ಎಚ್ಚರಿಕೆ ನೀಡಲಾಗಿದೆ.
View this post on Instagram
- ಬೇಡ್ತಿ ನದಿಯಲ್ಲಿ ಹೆಚ್ಚುವರಿ ನೀರಿಲ್ಲ. ನದಿಗಳನ್ನು ತಿರುಗಿಸುವ ಹುಚ್ಚು ಸಾಹಸ ನಡೆಸಿದರೆ ಬೇಡ್ತಿ ಅಘನಾಶಿನಿ ಜೀವ ನದಿಗಳು ಸಾಯುತ್ತವೆ ಎಂಬ ಗಂಭೀರ ಎಚ್ಚರಿಕೆಯನ್ನ ವಿಜ್ಞಾನಿಗಳು ನೀಡಿದ್ದಾರೆ.
- ಪಶ್ಚಿಮ ಘಟ್ಟ ಈಗಾಗಲೇ ಭೂಕುಸಿತದ ಭಾರಿ ಅಪಾಯಗಳಿಗೆ ಸಿಲುಕಿದೆ, ಬೇಡ್ತಿ ಅಘನಾಶಿನಿ ಕಣಿವೆಗಳು ಭೂಕುಸಿತ ಸೂಕ್ಷ್ಮ ವಲಯಗಳಾಗಿವೆ. ಇಲ್ಲಿ ನದಿ ಜೋಡಣೆಯಂತಹ ಬೃಹತ್ ಯೋಜನೆ ಖಂಡಿತ ಅಲ್ಲ ಎಂದು ಧರಣಿ ನಿರತ ಸಾವಿರಾರು ಜನ ಒಕ್ಕೊರಲ ಅಭಿಪ್ರಾಯ ನೀಡಿದ್ದಾರೆ.
- ಕರಾವಳಿ ಪ್ರದೇಶವಾದ ಕುಮಟಾ, ಅಂಕೋಂಲಾ ಪ್ರದೇಶದಲ್ಲಿ ನದಿ ತಿರುವು ಯೋಜನೆ ಜಾರಿಯಾದರೆ ಉಪ್ಪು ನೀರು ಒಳನುಗ್ಗಲಿದೆ. ಮೀನುಗಾರಿಕೆ, ಕೃಷಿ ಬದುಕು ನಾಶವಾಗಲಿದೆ.
- ಲಕ್ಷಾಂತರ ಗಿಡಮರ ನಾಶದಿಂದ ಬೃಹತ್ ಯೋಜನೆಗಳು ಪಶ್ಚಿಮ ಘಟ್ಟದಲ್ಲಿ ಮಾನವ ವನ್ಯ ಜೀವಿ ಸಂಘರ್ಷ ಹೆಚ್ಚಲು ಕಾರಣವಾಗುತ್ತವೆ. ಅಮೂಲ್ಯ ಸಸ್ಯ ವನ್ಯ ಸಂಪತ್ತು ಕಣ್ಮರೆ ಆಗಲಿದೆ.
View this post on Instagram
- ಬೇಡ್ತಿ, ಅಘನಾಶಿನಿ ಮತ್ತು ಶಾಲ್ಮಲಾ ನದಿ ಕಣಿವೆಗಳನ್ನು ವನ್ಯ ಜೀವಿ ಸಂರಕ್ಷಿತ ಪ್ರದೇಶ ಎಂದು ರಾಜ್ಯ ವನ್ಯ ಜೀವಿ ಇಲಾಖೆ 2012 ರಲ್ಲಿ ಘೋಷಿಸಿದೆ ಎಂಬುದನ್ನು ಸರ್ಕಾರ ಪರಿಗಣಿಸಬೇಕು. ರಾಜ್ಯ ಸರ್ಕಾರ ಕೈಗೊಂಡ ಉತ್ತರ ಕನ್ನಡ ಜಿಲ್ಲೆ ಪರಿಸರ ಧಾರಣಾ ಸಾಮರ್ಥ್ಯ ಅಧ್ಯಯನ ಬೃಹತ್ ಯೋಜನೆಗಳಿಗೆ ಉತ್ತರ ಕನ್ನಡದಲ್ಲಿ ಅವಕಾಶ ಸಲ್ಲದು ಎಂದು ವರದಿ ನೀಡಿದೆ.
- ಮಲೆನಾಡಿಗೆ ಸುಸ್ಥಿರ ನೀರಾವರಿ ಯೋಜನೆ ಇಲ್ಲ. ಉತ್ತರ ಕನ್ನಡ ಜಿಲ್ಲೆಯ ರೈತರಿಗೆ ಸುಸ್ಥಿರ ನೀರಾವರಿ ಯೋಜನೆಯನ್ನು ವಿನಾಶರಹಿತವಾಗಿ ಸರ್ಕಾರ ರೂಪಿಸಬೇಕು ಎಂದು ಬೇಡಿಕೆ ಮಂಡಿಸಲಾಗಿದೆ.
- ವಿಜ್ಞಾನಿಗಳು, ಸ್ಥಳೀಯ 120 ಗ್ರಾಮ ಪಂಚಾಯತಗಳು, 160 ಗ್ರಾಮೀಣ ಸಹಕಾರ ಸಂಘಗಳು, ಉತ್ತರ ಕನ್ನಡ ಜಿಲ್ಲಾ ಕೆಡಿಪಿ ಸಭೆಯಲ್ಲಿ ಎಲ್ಲಾ ಧಾರ್ಮಿಕ ಮುಖಂಡರು, ಬೇಡ್ತಿ ಮತ್ತು ಅಘನಾಶಿನಿ ನದಿ ತಿರುವು ಯೋಜನೆಗಳನ್ನು ಕೇಂದ್ರ, ರಾಜ್ಯ ಸರ್ಕಾರಗಳು ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ ಎಂಬ ಸಂಗತಿಯನ್ನು ಧರಣಿಯಲ್ಲಿ ಎತ್ತಿ ಹೇಳಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:21 pm, Sat, 10 October 26




