ವೋಟರ್​ ಐಡಿ ಹಗರಣದಲ್ಲಿ ಬಿಬಿಎಂಪಿ ಅಧಿಕಾರಿಗಳೇ ಶಾಮೀಲು, 4 ಆರ್​ಓಗಳು ಸಸ್ಪೆಂಡ್​​

ಬೆಂಗಳೂರಲ್ಲಿ ವೋಟರ್​ ಐಡಿ ಪರಿಷ್ಕರಣೆ ಅಕ್ರಮ ಪ್ರಕರಣದ ತನಿಖಾ ವರದಿ ಈಗಾಗಲೇ ಬಿಬಿಎಂಪಿ ಕೈ ಸೇರಿದ್ದು, ಈ ಹಗರಣದಲ್ಲಿ ಬಿಬಿಎಂಪಿ ಅಧಿಕಾರಿಗಳೇ ಶಾಮೀಲಾಗಿರುವುದು ಬಟಾ ಬಯಲಾಗಿದೆ.

ವೋಟರ್​ ಐಡಿ ಹಗರಣದಲ್ಲಿ ಬಿಬಿಎಂಪಿ ಅಧಿಕಾರಿಗಳೇ ಶಾಮೀಲು, 4 ಆರ್​ಓಗಳು ಸಸ್ಪೆಂಡ್​​
ಬಿಬಿಎಂಪಿ
TV9kannada Web Team

| Edited By: Vivek Biradar

Nov 21, 2022 | 3:14 PM

ಬೆಂಗಳೂರು: ಬೆಂಗಳೂರಲ್ಲಿ (Bengaluru) ನಡೆದ ವೋಟರ್​ ಐಡಿ ಪರಿಷ್ಕರಣೆ ಅಕ್ರಮ (Voter ID refinement Scam) ಪ್ರಕರಣದ ತನಿಖಾ ವರದಿ ಈಗಾಗಲೇ ಬಿಬಿಎಂಪಿ (BBMP) ಕೈ ಸೇರಿದ್ದು, ಈ ಹಗರಣದಲ್ಲಿ ಬಿಬಿಎಂಪಿ ಅಧಿಕಾರಿಗಳೇ ಶಾಮೀಲಾಗಿರುವುದು ಬಟಾ ಬಯಲಾಗಿದೆ. ತನಿಖಾ ವರದಿಯಲ್ಲಿ ಬಿಬಿಎಂಪಿ ಅಧಿಕಾರಿಗಳು ಚಿಲುಮೆ (Chilume) ಸಂಸ್ಥೆಗೆ ಬಿಎಲ್​ಒ ಎಂದು ಐಡಿ ಕಾರ್ಡ್ ಹಂಚಿಕೆ‌ ಮಾಡಿರುವುದು ತಿಳಿದುಬಂದಿದೆ.

ಈ ಹಿನ್ನೆಲೆ ಮಹಾದೇವಪುರ ವಿಧಾನಸಭಾ ಕ್ಷೇತ್ರದ ಆರ್​ಓ ಚಂದ್ರಶೇಖರ್, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಆರ್​ಓ ಭೀಮಾಶಂಕರ್, ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಆರ್​ಓ ಸುಹೇಲ್ ಅಹ್ಮದ್​​ನ್ನು ಅಮಾನತು ಮಾಡಲಾಗಿದೆ. ಇನ್ನೂ ಸಾಕಷ್ಟು ಅಧಿಕಾರಿಗಳು ಅಮಾನತ್ತಾಗುವ ಸಾಧ್ಯತೆ ಇದೆ.

 ಪ್ರಕರಣ ಸಂಬಂಧ 4 ತಂಡಗಳ ರಚನೆ, ತನಿಖಾ ವರದಿ ಬಿಬಿಎಂಪಿ ಕೈಸೇರಿದೆ: ತುಷಾರ್​ ಗಿರಿನಾಥ್

ಪ್ರಕರಣ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್​ ಗಿರಿನಾಥ್  ಮಾತನಾಡಿ 4 ತಂಡಗಳ ತನಿಖಾ ವರದಿ ಬಿಬಿಎಂಪಿ  ಕೈಸೇರಿದೆ. ಈ ವರದಿಗಳನ್ನು ಆಧರಿಸಿ ಬಿಬಿಎಂಪಿ ಅಂತಿಮ ವರದಿ ಸಿದ್ಧಪಡಿಸುತ್ತದೆ ಎಂದು ತಿಳಿಸಿದ್ದಾರೆ.

ಈ ಕುರಿತು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಪ್ರಕರಣ ಸಂಬಂಧ 4 ತಂಡಗಳನ್ನು ರಚನೆ ಮಾಡಲಾಗಿತ್ತು. ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಒಂದು ತಂಡ ರಚನೆ ಮಾಡಿದ್ದೆವು. ಹೆಚ್ಚುವರಿ ಜಿಲ್ಲಾ ಚುಣಾವಣಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆದಿತ್ತು. ಎಷ್ಟು ಜನರಿಗೆ ಬಿಎಲ್​ಒ, ಬಿಎಲ್​ಸಿ ಕಾರ್ಡ್​ ನೀಡಲಾಗಿದೆ? ವೈಯಕ್ತಿಕ ಮಾಹಿತಿ ಸಂಗ್ರಹ ಮಾಡಿದ್ದಾರಾ? ಎಂಬುವುದರ ಕುರಿತು ಸಮಗ್ರ ತನಿಖೆಯಾಗಿದೆ. ವರದಿಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಹುಬ್ಬಳ್ಳಿ, ದಾವಣಗೆರೆ, ಕನಕಗಿರಿಯಲ್ಲಿಯೂ ಅಕ್ರಮ ಪತ್ತೆ

ಅಕ್ರಮಗಳನ್ನು ಎಸಗಿರುವ ‘ಚಿಲುಮೆ’ ಸಂಸ್ಥೆಯ ಐವರನ್ನು ಪೊಲೀಸರು ಬಂಧಿಸಿ ವಿಚಾರಣೆ ಚುರುಕುಗೊಳಿಸಿದ್ದಾರೆ. ಚಿಲುಮೆಯ ಮುಖ್ಯಸ್ಥರಾದ ಕೆಂಪೇಗೌಡ, ರವಿಕುಮಾರ್, ನಿರ್ದೇಶಕ ರೇಣುಕಾ ಪ್ರಸಾದ್, ಮ್ಯಾನೇಜರ್ ಎಚ್.ಆರ್.ಧರ್ಮೇಶ್, ಮೇಲ್ವಿಚಾರಕರಾದ ಪ್ರಜ್ವಲ್ ಬಂಧಿತರು. ಹಲವು ಆಯಾಮದಲ್ಲಿ ಪ್ರಕರಣದ ತನಿಖೆ ಮುಂದುವರಿಸಿರುವ ಪೊಲೀಸರು ಇಂದಿನಿಂದ (ನ 21) ಬಿಬಿಎಂಪಿಯ ಕಂದಾಯ ಅಧಿಕಾರಿಗಳ ವಿಚಾರಣೆ ಚುರುಕುಗೊಳಿಸಿದ್ದಾರೆ.

ಈ ಕುರಿತು ನೀಡಿರುವ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ಮಾಹಿತಿ ನೀಡಿದ್ದಾರೆ. ಕೆಂಪೇಗೌಡ ಎನ್ನುವಾತ ಆ್ಯಪ್​​​ ಮೂಲಕ ಸಂಗ್ರಹಿಸಿದ ಮಾಹಿತಿಯನ್ನು ರವಿಕುಮಾರ್‌ಗೆ ನೀಡುತ್ತಿದ್ದ. ಈ ಮಾಹಿತಿಯನ್ನು ಬೇರೆ ರೀತಿಯಲ್ಲಿ ಬಳಸುತ್ತಿದ್ದ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ವಿಚಾರಣೆ ವೇಳೆ ಆರೋಪಿ ಕೆಂಪೇಗೌಡ ಈ ಬಗ್ಗೆ ಮಾಹಿತಿ ನೀಡಿದ್ದಾನೆ. ಪ್ರಕರಣ ಸಂಬಂಧ ಈವರೆಗೆ ಮೂವರನ್ನು ಬಂಧಿಸಿ, 15 ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹೇಳಿದ್ದಾರೆ.

ಡಿಜಿಟಲ್ ಆ್ಯಪ್​​​ ಡೆವಲಪ್‌ ಮಾಡಿದವರನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ. ಲ್ಯಾಪ್‌ಟಾಪ್‌ಗಳನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ. ಆ್ಯಪ್​ಗೆ ಸಂಬಂಧಿಸಿದ ಸರ್ವರ್ ಡೌನ್ ಮಾಡಿರುವುದರಿಂದ ಪೂರ್ಣ ಮಾಹಿತಿ ಲಭ್ಯವಾಗುತ್ತಿಲ್ಲ. ಆದರೆ ಆರೋಪಿ ಕೆಂಪೇಗೌಡ ಸಂಗ್ರಹಿಸಿದ ದತ್ತಾಂಶಗಳ ಬಗ್ಗೆ ಕೆಲ ಮಾಹಿತಿ ನೀಡಿದ್ದಾನೆ. ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತದಾರರ ಜಾತಿ, ಉಪಜಾತಿ, ಲಿಂಗ ಸೇರಿ ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಡಿಸಿಪಿ ಶ್ರೀನಿವಾಸ ಗೌಡ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿಯೂ ಮತದಾರರ ಮಾಹಿತಿ ಸಂಗ್ರಹ

ಬೆಂಗಳೂರಿನಲ್ಲಿ ಚಿಲುಮೆ ಸಂಸ್ಥೆ ನಡೆಸಿರುವ ಅಕ್ರಮದಂಥದ್ದೇ ಮಾದರಿಯ ಅವ್ಯವಹಾರ ಹುಬ್ಬಳ್ಳಿಯಲ್ಲಿಯೂ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ. ಬೆಂಗಳೂರು ಮೂಲದ ಐಐಎಂಟಿ ಸಂಸ್ಥೆಯು ಧಾರವಾಡ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ 6 ತಿಂಗಳ ಹಿಂದೆಯೇ ಮಾಹಿತಿ ಸಂಗ್ರಹಿಸಲಾಗಿದೆ. ಈ ಕುರಿತು ಕಾಂಗ್ರೆಸ್ ಮಹಾನಗರ ಪಾಲಿಕೆ ಸದಸ್ಯರ ಕ್ಷೇತ್ರಗಳ ವ್ಯಾಪ್ತಿಯಲ್ಲಿಯೇ ಮತದಾರರ ಮಾಹಿತಿ ಸಂಗ್ರಹ ಮಾಡಲಾಗಿದೆ. ‘ಸ್ಮಾರ್ಟ್​ ಸಿಟಿ’ ವಿಭಾಗದಿಂದ ಸರ್ವೆಗೆ ಬಂದಿರುವುದಾಗಿ ತಂಡದ ಸದಸ್ಯರು ಹೇಳಿಕೊಂಡಿದ್ದರು. ಗಾರ್ಡನ್​ ರೀಸರ್ಚ್​​ ಸೊಸೈಟಿ ಕೇಳಿದ್ದ ಪಾಲಿಕೆ ಅನುಮತಿ ಪತ್ರಕ್ಕೆ ಆಯುಕ್ತರು ಕೇವಲ ಸ್ವೀಕೃತಿ ಪತ್ರ ಮಾತ್ರ ನೀಡಿದ್ದರು. ಅನುಮತಿ ಪತ್ರ ನೀಡಿರಲಿಲ್ಲ ಎಂದು ಸದಸ್ಯರು ವಿವರಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada