ಬೆಂಗಳೂರಿನ ವಾಯುಮಾಲಿನ್ಯದಿಂದ ಬಿಎಂಟಿಸಿ ಚಾಲಕರು, ಟ್ರಾಫಿಕ್ ಪೊಲೀಸರಿಗೆ ಶ್ವಾಸಕೋಶ ಸಮಸ್ಯೆ: ಅಧ್ಯಯನದಲ್ಲಿ ಆತಂಕಕಾರಿ ಮಾಹಿತಿ
ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವ ನಡುವೆ ವಾಯುಮಾಲಿನ್ಯವೂ ಏರಿಕೆಯಾಗುತ್ತಿದೆ. ಮೂರು ವರ್ಷಗಳ ಅಧ್ಯಯನದಲ್ಲಿ ಬಿಎಂಟಿಸಿ ಚಾಲಕರು, ಸಂಚಾರ ಪೊಲೀಸರು, ಕಟ್ಟಡ ಹಾಗೂ ಪೌರಕಾರ್ಮಿಕರಲ್ಲಿ ಉಸಿರಾಟ ಸಮಸ್ಯೆ ಹೆಚ್ಚುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಈ ಸಿಬ್ಬಂದಿ ಮಾಸ್ಕ್ ಬಳಕೆ ಮಾಡದೇ ಇರುವುದೂ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.

ಮುಖ್ಯಾಂಶಗಳು
- ವಾಯುಮಾಲಿನ್ಯದಿಂದ ಹೊರಾಂಗಣ ಸಿಬ್ಬಂದಿಗೆ ಆರೋಗ್ಯದ ಆತಂಕ
- ಬಿಎಂಟಿಸಿ ಚಾಲಕರಲ್ಲಿ ಉಸಿರಾಟ ಸಮಸ್ಯೆ ಹೆಚ್ಚು ಪತ್ತೆ
- ಸಾವಿರಾರು ಸಿಬ್ಬಂದಿಯಲ್ಲಿ ಮಾಸ್ಕ್ ಬಳಕೆ ಅತ್ಯಂತ ಕಡಿಮೆ
ಬೆಂಗಳೂರು, ನವೆಂಬರ್ 2: ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದರೊಂದಿಗೆ ವಾಯುಮಾಲಿನ್ಯದ ಪ್ರಮಾಣವೂ ಏರಿಕೆಯಾಗುತ್ತಿದೆ. ನಗರದ ರಸ್ತೆಗಳಲ್ಲಿ ದೀರ್ಘಕಾಲ ಕೆಲಸ ಮಾಡುವ ಬಿಎಂಟಿಸಿ ಚಾಲಕರು, ನಿರ್ವಾಹಕರು, ಸಂಚಾರ ಪೊಲೀಸ್ ಸಿಬ್ಬಂದಿ, ಕಟ್ಟಡ ಕಾರ್ಮಿಕರು ಹಾಗೂ ಪೌರಕಾರ್ಮಿಕರ ಆರೋಗ್ಯದ ಮೇಲೆ ವಾಯುಮಾಲಿನ್ಯದ ಪರಿಣಾಮ ಹೆಚ್ಚಾಗುತ್ತಿರುವ ಆತಂಕಕಾರಿ ಮಾಹಿತಿ ಅಧ್ಯಯನವೊಂದರಲ್ಲಿ ಬೆಳಕಿಗೆ ಬಂದಿದೆ.
ಈ ಹಿಂದೆ ಬೆಂಗಳೂರಿನಲ್ಲಿ ಪ್ರತಿದಿನ ಸುಮಾರು 2,500 ಹೊಸ ವಾಹನಗಳು ನೋಂದಣಿಯಾಗುತ್ತಿದ್ದರೆ, ಇದೀಗ ಪ್ರತಿದಿನ ಸುಮಾರು 3,000 ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ. ನಗರದಲ್ಲಿ ಹಳೆಯ ವಾಹನಗಳ ಸಂಖ್ಯೆಯೂ 1 ಕೋಟಿ 40 ಲಕ್ಷ ದಾಟಿದೆ ಎಂದು ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಾಹನಗಳ ಹೆಚ್ಚಳದೊಂದಿಗೆ ವಾಯುಮಾಲಿನ್ಯವೂ ಹೆಚ್ಚುತ್ತಿದ್ದು, ಹೊರಾಂಗಣದಲ್ಲಿ ಅಥವಾ ರಸ್ತೆಗಳಲ್ಲಿ ನಿರಂತರವಾಗಿ ಕೆಲಸ ಮಾಡುವ ಸಿಬ್ಬಂದಿ ಹೆಚ್ಚಿನ ಅಪಾಯಕ್ಕೆ ಒಳಗಾಗುತ್ತಿದ್ದಾರೆ.
ಮೂರು ವರ್ಷಗಳ ಅಧ್ಯಯನದಲ್ಲಿ ಬಹಿರಂಗವಾದ ಮಾಹಿತಿ
‘ವಾಯು ಆಕ್ಯುಪೇಷನಲ್ ಅಂಡ್ ಎನ್ವಿರಾನ್‌ಮೆಂಟಲ್’ ಸಂಸ್ಥೆ ಮೂರು ವರ್ಷಗಳ ಕಾಲ ನಡೆಸಿದ ಅಧ್ಯಯನದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಸುಮಾರು 10 ಸಾವಿರಕ್ಕೂ ಹೆಚ್ಚು ಕಾರ್ಮಿಕರನ್ನು ಒಳಗೊಂಡ ಸಮೀಕ್ಷೆಯಲ್ಲಿ, ವಿವಿಧ ವೃತ್ತಿಯ ಸಿಬ್ಬಂದಿಯ ಆರೋಗ್ಯದ ಮೇಲೆ ವಾಯುಮಾಲಿನ್ಯದ ಪರಿಣಾಮವನ್ನು ಪರಿಶೀಲಿಸಲಾಗಿದೆ.
ಅಧ್ಯಯನದ ಭಾಗವಾಗಿ 4,517 ಬಿಎಂಟಿಸಿ ಚಾಲಕರು, 3,285 ಸಂಚಾರ ಪೊಲೀಸ್ ಸಿಬ್ಬಂದಿ, 2,169 ನಿರ್ಮಾಣ ಕಾರ್ಮಿಕರು ಮತ್ತು 379 ಪೌರಕಾರ್ಮಿಕರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.
ಯಾರಲ್ಲಿ ಎಷ್ಟು ಪ್ರಮಾಣದ ಉಸಿರಾಟದ ಸಮಸ್ಯೆ?
ಅಧ್ಯಯನದ ಪ್ರಕಾರ, ಬಿಎಂಟಿಸಿ ಚಾಲಕರಲ್ಲಿ ಶೇ 2.6ರಷ್ಟು ಮಂದಿಗೆ ಉಸಿರಾಟ ಸಂಬಂಧಿತ ಸಮಸ್ಯೆ ಕಂಡುಬಂದಿದೆ. ಪೌರಕಾರ್ಮಿಕರಲ್ಲಿ ಈ ಪ್ರಮಾಣ ಶೇ 2.3, ನಿರ್ಮಾಣ ಕಾರ್ಮಿಕರಲ್ಲಿ ಶೇ 2.1 ಹಾಗೂ ಸಂಚಾರ ಪೊಲೀಸ್ ಸಿಬ್ಬಂದಿಯಲ್ಲಿ ಶೇ. 1ರಷ್ಟು ಸಮಸ್ಯೆ ಕಂಡುಬಂದಿದೆ.
ನಗರದ ರಸ್ತೆಗಳಲ್ಲೇ ಹೆಚ್ಚಿನ ಸಮಯ ಕಳೆಯುವ ಮತ್ತು ಧೂಳು, ಹೊಗೆ ಹಾಗೂ ವಾಯುಮಾಲಿನ್ಯಕ್ಕೆ ನಿರಂತರವಾಗಿ ಒಡ್ಡಿಕೊಳ್ಳುವ ಸಿಬ್ಬಂದಿಯ ಆರೋಗ್ಯದ ಬಗ್ಗೆ ಈ ಅಧ್ಯಯನ ಗಮನ ಸೆಳೆದಿದೆ.
ಮಾಸ್ಕ್ ಬಳಕೆಯಲ್ಲೂ ಆತಂಕಕಾರಿ ಅಂಕಿಅಂಶ
ಸಮೀಕ್ಷೆಯಲ್ಲಿ ಹಲವು ಸಿಬ್ಬಂದಿ ಕೆಲಸದ ಸಂದರ್ಭದಲ್ಲಿ ಮಾಸ್ಕ್ ಬಳಸುವುದಿಲ್ಲ ಎಂಬ ಮಾಹಿತಿಯೂ ಹೊರಬಿದ್ದಿದೆ. ಶೇ 88.2ರಷ್ಟು ಬಿಎಂಟಿಸಿ ಚಾಲಕರು ತಾವು ಎಂದಿಗೂ ಮಾಸ್ಕ್ ಬಳಸಿಲ್ಲ ಎಂದು ತಿಳಿಸಿದ್ದಾರೆ. ಸಂಚಾರ ಪೊಲೀಸ್ ಸಿಬ್ಬಂದಿಯಲ್ಲಿ ಈ ಪ್ರಮಾಣ ಶೇ 55, ನಿರ್ಮಾಣ ಕಾರ್ಮಿಕರಲ್ಲಿ ಶೇ 37.9 ಹಾಗೂ ಪೌರಕಾರ್ಮಿಕರಲ್ಲಿ ಶೇ 16.3ರಷ್ಟಿದೆ.
ಇದನ್ನೂ ಓದಿ: ಕರ್ನಾಟಕ ವಾಯು ಗುಣಮಟ್ಟ: ಬೆಂಗಳೂರು ಮತ್ತು ಪ್ರಮುಖ ನಗರಗಳ ಇಂದಿನ ಗಾಳಿಯ ಗುಣಮಟ್ಟ ಹೀಗಿದೆ
ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದು, ಧೂಳು ಮತ್ತು ಹೊಗೆ ಹೆಚ್ಚಾಗುತ್ತಿರುವುದು ನಗರದ ವಾಯುಮಾಲಿನ್ಯಕ್ಕೆ ಕಾರಣವಾಗುತ್ತಿದ್ದು, ರಸ್ತೆ ಹಾಗೂ ಹೊರಾಂಗಣದಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಆರೋಗ್ಯ ರಕ್ಷಣೆ ಕುರಿತು ಹೆಚ್ಚಿನ ಗಮನ ಅಗತ್ಯವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




