ಡೇಟಿಂಗ್ ಆ್ಯಪ್ ಪರಿಚಯವಾದ ಯುವತಿಯಿಂದ ವಂಚನೆ: ಪಬ್‌ಗೆ ಕರೆದು ಯುವಕನ ಕಿಡ್ನ್ಯಾಪ್!
ಬೆಂಗಳೂರಿನಲ್ಲಿ ಡೇಟಿಂಗ್ ಆಪ್ ಮೂಲಕ ಯುವಕನನ್ನು ಬಲೆಗೆ ಕೆಡವಿ 3.7 ಲಕ್ಷ ರೂಪಾಯಿ ದೋಚಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಯುವತಿಯೊಬ್ಬಳು ಯುವಕನನ್ನು ಪಬ್‌ಗೆ ಆಹ್ವಾನಿಸಿ, ಗ್ಯಾಂಗ್ ಸಹಾಯದಿಂದ ಅಪಹರಿಸಿ ಹಣ ಲೂಟಿ ಮಾಡಿದ್ದಾಳೆ. ಈ ಕುರಿತು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಖ್ಯಾಂಶಗಳು
- ಡೇಟಿಂಗ್ ಆಪ್‌ನಲ್ಲಿ ಪರಿಚಯವಾದ ಯುವತಿಯಿಂದ ಯುವಕನ ಅಪಹರಣ ನಡೆದು ಸುಲಿಗೆಯಾಗಿದೆ.
- ಎಲೆಕ್ಟ್ರಾನಿಕ್ಸ್ ಸಿಟಿ ಬಳಿ ಕಾರಿನಲ್ಲಿ ಕರೆದೊಯ್ದು ಬೆದರಿಸಿ ಕಿಡಿಗೇಡಿಗಳು ದರೋಡೆ ಮಾಡಿದ್ದಾರೆ.
- ಯುವಕನಿಂದ 3.7 ಲಕ್ಷ ರೂಪಾಯಿ ದೋಚಿದ್ದು, ಹೆಬ್ಬಗೋಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು, ಆಗಸ್ಟ್ 30: ನಗರದಲ್ಲಿ (Bengaluru) ಡೇಟಿಂಗ್ ಆಪ್ ಬಳಸಿ ಯುವಕರನ್ನು ಬಲೆಗೆ ಕೆಡವಿ ಲಕ್ಷಾಂತರ ರೂಪಾಯಿ ದೋಚುವ ಭೀಕರ ಜಾಲವೊಂದು ಬೆಳಕಿಗೆ ಬಂದಿದೆ. ಡೇಟಿಂಗ್ ಆಪ್ ಮೂಲಕ ಪರಿಚಯವಾದ ಯುವತಿಯೊಬ್ಬಳು ಯುವಕನನ್ನು ಅಪಹರಿಸಿ, ಆತನಿಂದ ಬರೋಬ್ಬರಿ 3.7 ಲಕ್ಷ ರೂಪಾಯಿ ದೋಚಿರುವ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಡೇಟಿಂಗ್ ಆಪ್‌ನಲ್ಲಿ ಶುರುವಾದ ಪರಿಚಯ!
ಚಂದಾಪುರ ನಿವಾಸಿಯೂ ಹಾಗೂ ಖಾಸಗಿ ಕಂಪನಿ ಉದ್ಯೋಗಿಯಾಗಿರುವ 33 ವರ್ಷದ ಜೇಕಬ್ (ಹೆಸರು ಬದಲಾಯಿಸಲಾಗಿದೆ) ಎಂಬ ಯುವಕ ಕಳೆದ ಕೆಲವು ತಿಂಗಳುಗಳಿಂದ ಡೇಟಿಂಗ್ ಆಪ್ ಬಳಸುತ್ತಿದ್ದರು. ಇತ್ತೀಚೆಗೆ ಆತನಿಗೆ ಪೂನಂ ಎಂಬ ಹೆಸರಿನ ಯುವತಿಯ ಪರಿಚಯವಾಗಿತ್ತು. ತಾನು ಎಲೆಕ್ಟ್ರಾನಿಕ್ಸ್ ಸಿಟಿಯ ನಿವಾಸಿ ಎಂದು ಪರಿಚಯಿಸಿಕೊಂಡಿದ್ದ ಯುವತಿ, ಜೇಕಬ್ ಜೊತೆ ಮೊಬೈಲ್ ಸಂಖ್ಯೆ ಹಂಚಿಕೊಂಡು ಮಾತುಕತೆ ನಡೆಸುತ್ತಿದ್ದಳು.
ಆಗಸ್ಟ್ 19 ರಂದು ರಾತ್ರಿ ಎಲೆಕ್ಟ್ರಾನಿಕ್ಸ್ ಸಿಟಿಯ ಹುಲಿಮಂಗಲ ಮುಖ್ಯರಸ್ತೆಯಲ್ಲಿರುವ ಪಬ್ ಒಂದರ ಬಳಿ ಸಿಗುವಂತೆ ಪೂನಂ ಆತನನ್ನು ಆಹ್ವಾನಿಸಿದ್ದಳು. ಅದರಂತೆ ರಾತ್ರಿ 9.45 ರ ಸುಮಾರಿಗೆ ಜೇಕಬ್ ಸ್ಥಳಕ್ಕೆ ತಲುಪಿದ್ದಾಗ, ಯುವತಿಯು ಬಿಳಿ ಬಣ್ಣದ ಎಸ್‌ಯುವಿ ಕಾರಿನಲ್ಲಿ ಬಂದಿದ್ದಳು. ಕಾರಿಗೆ ಇಂಧನ ತುಂಬಿಸಿಕೊಂಡು ಬರೋಣ ಎಂದು ಹೇಳಿ ಜೇಕಬ್‌ನನ್ನು ಕಾರಿಗೆ ಹತ್ತಿಸಿಕೊಂಡಿದ್ದಳು.
ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕಿಡ್ನಾಪ್!
ಪ್ರಯಾಣದ ಮಧ್ಯೆ, ಶೌಚಾಲಯಕ್ಕೆ ಹೋಗಬೇಕೆಂದು ನೆಪ ಹೇಳಿ ಯುವತಿಯು ಕಾರನ್ನು ಕತ್ತಲಾದ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದಳು. ಈ ವೇಳೆ ಇದ್ದಕ್ಕಿದ್ದಂತೆ ಬಂದ ನಾಲ್ವರು ಅಪರಿಚಿತ ವ್ಯಕ್ತಿಗಳು ಜೇಕಬ್‌ನನ್ನು ಬೆದರಿಸಿ ಅದೇ ಕಾರಿನಲ್ಲಿ ಬಲವಂತವಾಗಿ ಕರೆದೊಯ್ದಿದ್ದಾರೆ. ನಂತರ ಆತನನ್ನು ಮತ್ತೊಂದು ಬೂದು ಬಣ್ಣದ ಕಾರಿಗೆ ಸ್ಥಳಾಂತರಿಸಿ, ನಗರದ ವಿವಿಧೆಡೆ ಸುತ್ತಾಡಿಸಿದ್ದಾರೆ.
ಆರೋಪಿಗಳು ಜೇಕಬ್‌ಗೆ ಕೊಲೆ ಬೆದರಿಕೆ ಹಾಕಿ, ಆತನ ಬಳಿಯಿದ್ದ 7,000 ರೂ. ನಗದು ಸಹಿತ ಪರ್ಸ್, ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳನ್ನು ಕಸಿದುಕೊಂಡಿದ್ದಾರೆ. ಎಟಿಎಂ ಕೇಂದ್ರಕ್ಕೆ ಕರೆದೊಯ್ದು ಬಲವಂತವಾಗಿ ಪಿನ್ ನಂಬರ್ ಪಡೆದು 45,000 ರೂ. ನಗದು ಡ್ರಾ ಮಾಡಿಕೊಂಡಿದ್ದಾರೆ. ಅಲ್ಲದೆ, ಆತನ ಕ್ರೆಡಿಟ್ ಕಾರ್ಡ್ ಬಳಸಿ ಕಾರಿಗೆ ಪೆಟ್ರೋಲ್ ಹಾಕಿಸಿಕೊಂಡಿದ್ದಾರೆ.
3.7 ಲಕ್ಷ ರೂ. ದೋಚಿ ಎಸ್ಕೇಪ್!
ಆಗಸ್ಟ್ 20 ರ ಬೆಳಗಿನ ಜಾವ, ಕಿಡಿಗೇಡಿಗಳು ಜೇಕಬ್‌ನ ಕ್ರೆಡಿಟ್ ಕಾರ್ಡ್ ಪಾಸ್‌ವರ್ಡ್ ಬದಲಿಸಿ, ಬರೋಬ್ಬರಿ 3.2 ಲಕ್ಷ ರೂಪಾಯಿಯನ್ನು ಬೇರೊಂದು ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಕೊನೆಗೆ ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಎಲೆಕ್ಟ್ರಾನಿಕ್ಸ್ ಸಿಟಿ ಮೆಟ್ರೋ ನಿಲ್ದಾಣದ ಹಿಂಭಾಗದ ರಸ್ತೆಯಲ್ಲಿ ಜೇಕಬ್‌ನನ್ನು ಇಳಿಸಿ, ಪೊಲೀಸರಿಗೆ ದೂರು ನೀಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ.
ಬಳಿಕ ತನಗೆ ಯುವತಿಯು ಮೋಸ ಮಾಡಿದ್ದಾಳೆ ಎಂಬ ವಿಷಯ ಜೇಕಬ್‌ಗೆ ತಿಳಿಯಿತು. ಮನೆಗೆ ಮರಳಿದ ಯುವಕ ಕುಟುಂಬದವರಲ್ಲಿ ವಿಷಯ ತಿಳಿಸಿ, ಬ್ಯಾಂಕ್ ಖಾತೆಯ ಸ್ಟೇಟ್‌ಮೆಂಟ್ ಪಡೆದು ಆಗಸ್ಟ್ 25 ರಂದು ಹೆಬ್ಬಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ದೂರಿನ ಆಧಾರದ ಮೇಲೆ ಪೊಲೀಸರು ಅಪಹರಣ ಮತ್ತು ಸುಲಿಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುವತಿಯ ಮೊಬೈಲ್ ಸಂಖ್ಯೆ, ಎಟಿಎಂ ಹಾಗೂ ಪೆಟ್ರೋಲ್ ಬಂಕ್‌ಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ವಂಚಕ ಜಾಲದ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




