ಕೆ.ಆರ್. ಮಾರುಕಟ್ಟೆಗೆ ಎಂಟ್ರಿ ಫೀಸ್: ಗ್ರಾಹಕರ ಜೇಬಿಗೂ ಕತ್ತರಿ ಬೀಳುವ ಸಾಧ್ಯತೆ!
ಬೆಂಗಳೂರಿನ ಕೆ.ಆರ್. ಮಾರುಕಟ್ಟೆಗೆ ಪ್ರವೇಶಿಸುವ ಸರಕು ವಾಹನಗಳು ಹಾಗೂ ಪ್ರತಿಯೊಂದು ತರಕಾರಿ ಮೂಟೆಗಳ ಮೇಲೆ ಪ್ರತ್ಯೇಕ ಪ್ರವೇಶ ಶುಲ್ಕ ವಿಧಿಸಲು ನಗರ ಪಾಲಿಕೆ ಮುಂದಾಗಿದೆ. ವ್ಯಾಪಾರಿಗಳು ಮತ್ತು ಸಾಗಣೆದಾರರ ಮೇಲಾಗುವ ಈ ಹೆಚ್ಚುವರಿ ವೆಚ್ಚದಿಂದಾಗಿ ದಿನನಿತ್ಯದ ತರಕಾರಿ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಲಿದ್ದು, ಅಂತಿಮವಾಗಿ ಸಾಮಾನ್ಯ ಗ್ರಾಹಕರಿಗೆ ಭಾರೀ ಆರ್ಥಿಕ ಹೊರೆಯಾಗುವ ಆತಂಕ ಎದುರಾಗಿದೆ.

ಮುಖ್ಯಾಂಶಗಳು
- ಕೆ.ಆರ್. ಮಾರುಕಟ್ಟೆ ಸರಕು ವಾಹನಗಳ ಪ್ರವೇಶಕ್ಕೆ ನಗರ ಪಾಲಿಕೆ ಹೊಸ ಶುಲ್ಕ.
- ಸರಕು ಮತ್ತು ವಾಹನಗಳಿಗೆ ಪ್ರತ್ಯೇಕ ಶುಲ್ಕದಿಂದ ತರಕಾರಿ ಬೆಲೆ ಏರಿಕೆ ಆತಂಕ.
- ವ್ಯಾಪಾರಿಗಳ ಹೆಚ್ಚುವರಿ ವೆಚ್ಚದಿಂದ ಸಾಮಾನ್ಯ ಗ್ರಾಹಕರ ಜೇಬಿಗೆ ನೇರ ಹೊರೆ.
ಬೆಂಗಳೂರು, ಸೆಪ್ಟೆಂಬರ್ 04: ನಗರದ ಐತಿಹಾಸಿಕ ಕೆ.ಆರ್. ಮಾರುಕಟ್ಟೆಯ ನಿರ್ವಹಣೆ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಬೆಂಗಳೂರು ಕೇಂದ್ರ ನಗರ ಪಾಲಿಕೆಯು ಹೊಸ ಪ್ರವೇಶ ಶುಲ್ಕ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ. ಇಷ್ಟು ದಿನ ಉಚಿತವಾಗಿದ್ದ ಮಾರುಕಟ್ಟೆ ಪ್ರವೇಶಕ್ಕೆ ಈಗ ಡಿಜಿಟಲ್ ಟೋಲ್ ಸ್ಮಾರ್ಟ್ ಗೇಟ್‌ಗಳನ್ನು ಅಳವಡಿಸಿ, ಸರಕು ವಾಹನಗಳು ಹಾಗೂ ಮಾರುಕಟ್ಟೆಗೆ ಬರುವ ಕೃಷಿ ಉತ್ಪನ್ನಗಳಿಗೆ ಶುಲ್ಕ ವಿಧಿಸಲು ಟೆಂಡರ್ ಆಹ್ವಾನಿಸಲಾಗಿದೆ.
ಪ್ರತಿ ಬಾಕ್ಸ್ಗಳ ಮೇಲೂ 10 ರೂ. ರವರೆಗೆ ಪ್ರವೇಶ ಕರ
ಈ ಹೊಸ ನಿಯಮದಿಂದಾಗಿ ಸರಕು ಸಾಗಣೆ ವಾಹನಗಳಿಗೆ 75 ರಿಂದ 350 ರೂ. ರವರೆಗೆ ವಾಹನ ಪ್ರವೇಶ ಶುಲ್ಕ ನಿಗದಿಯಾಗಿದೆ. ಅಷ್ಟೇ ಅಲ್ಲದೆ, ತರಕಾರಿ, ಹಣ್ಣು, ಹೂವು, ಈರುಳ್ಳಿ ಹಾಗೂ ಮಾಂಸದ ಪ್ರತಿ ಮೂಟೆ ಮತ್ತು ಬಾಕ್ಸ್‌ಗಳಿಗೆ 5 ರಿಂದ 10 ರೂ. ರವರೆಗೆ ಪ್ರತ್ಯೇಕ ಪ್ರವೇಶ ಕರ ವಿಧಿಸಲಾಗುತ್ತಿದೆ. ವ್ಯಾಪಾರ ಆರಂಭಿಸುವ ಮುನ್ನವೇ ಯುಪಿಐ ಅಥವಾ ಕ್ಯೂಆರ್ ಕೋಡ್ ಮೂಲಕ ಈ ಹಣ ಪಾವತಿಸುವುದು ಕಡ್ಡಾಯವಾಗಿದೆ.
ಗ್ರಾಹಕರಿಗೆ ತಟ್ಟಲಿದೆ ಬೆಲೆ ಏರಿಕೆಯ ಬಿಸಿ
ಈಗಾಗಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಹಾಗೂ ತರಕಾರಿ ಅಭಾವದಿಂದ ಕಂಗೆಟ್ಟಿರುವ ರೈತರು, ಸಣ್ಣ ವ್ಯಾಪಾರಿಗಳು ಮತ್ತು ಹಮಾಲಿ ಕಾರ್ಮಿಕರಿಗೆ ಈ ನಿರ್ಧಾರ ಗಾಯದ ಮೇಲೆ ಬಿಸಿ ಬರೆ ಎಳೆದಂತಾಗಿದೆ. ಮಾರುಕಟ್ಟೆಗೆ ಸರಕು ತರುವ ಸಾಗಣೆದಾರರು ಹಾಗೂ ವ್ಯಾಪಾರಿಗಳು ತಮಗಾಗುವ ಈ ಹೆಚ್ಚುವರಿ ಪ್ರವೇಶ ಶುಲ್ಕದ ವೆಚ್ಚವನ್ನು ಸರಕುಗಳ ಮಾರಾಟ ದರದಲ್ಲಿಯೇ ಸರಿದೂಗಿಸಲು ನಿರ್ಧರಿಸಿದ್ದಾರೆ.
ಪರಿಣಾಮವಾಗಿ, ದಿನನಿತ್ಯದ ಅಗತ್ಯ ವಸ್ತುಗಳಾದ ತರಕಾರಿ, ಹಣ್ಣು, ಸೊಪ್ಪು ಹಾಗೂ ಮಾಂಸದ ಬೆಲೆಗಳು ಶೇ 10 ರಿಂದ 15 ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಅಂತಿಮವಾಗಿ ಪಾಲಿಕೆಯ ಈ ‘ಸ್ಮಾರ್ಟ್ ಟೋಲ್’ ನಿರ್ಧಾರದ ಸಂಪೂರ್ಣ ಆರ್ಥಿಕ ಹೊರೆ ಬಡ ಹಾಗೂ ಮಧ್ಯಮ ವರ್ಗದ ಸಾಧಾರಣ ಗ್ರಾಹಕರ ಜೇಬಿಗೇ ಕತ್ತರಿ ಹಾಕಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




