ಯಲಹಂಕ ರೈಲು ನಿಲ್ದಾಣದಲ್ಲಿ ಸಿಕ್ತು 19 ಲಕ್ಷ ರೂ ಮೌಲ್ಯದ ಚಿನ್ನಾಭರಣ: ಪ್ರಾಮಾಣಿಕತೆ ಮೆರೆದ RPF
ಯಲಹಂಕ ರೈಲು ನಿಲ್ದಾಣದಲ್ಲಿ ಕಳೆದುಹೋಗಿದ್ದ 19 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಇದ್ದ ಬ್ಯಾಗ್ ಅನ್ನು ಮಾಲೀಕರಿಗೆ ಆರ್ಪಿಎಫ್ ಸಿಬ್ಬಂದಿ ಹಿಂದಿರುಗಿಸಿದ್ದಾರೆ. ಫೆ.8ರಂದು ಪ್ರಯಾಣಿಕ ಬ್ಯಾಗ್ ಕಳೆದುಕೊಂಡಿದ್ದರು. ಸದ್ಯ RPF ಸಿಬ್ಬಂದಿಯ ತ್ವರಿತ ಮತ್ತು ಪ್ರಾಮಾಣಿಕ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಬೆಂಗಳೂರು, ಫೆಬ್ರವರಿ 09: ಪ್ರಯಾಣಿಕರೊಬ್ಬರು ಕಳೆದುಕೊಂಡಿದ್ದ ಸುಮಾರು 19 ಲಕ್ಷ ರೂ ಮೌಲ್ಯದ ಚಿನ್ನಾಭರಣ ಮತ್ತು ನಗದು ಇರುವ ಟ್ರಾಲಿ ಬ್ಯಾಗ್‌ನ್ನು ರೈಲ್ವೆ ರಕ್ಷಣಾ ಪಡೆ (RPF) ಸಿಬ್ಬಂದಿ ಪತ್ತೆಹಚ್ಚಿ ವಾಪಸ್ ನೀಡಿದ್ದಾರೆ. ಯಲಹಂಕ ರೈಲು ನಿಲ್ದಾಣದಲ್ಲಿ ಟ್ರ್ಯಾಲಿ ಬ್ಯಾಗ್ ಕಳೆದುಕೊಂಡಿದ್ದರು. ಇದೀಗ ವಾಪಸ್ ಸಿಕ್ಕ ಬೆನ್ನಲ್ಲೇ ಪ್ರಯಾಣಿಕ ನಿಟ್ಟುಸಿರು ಬಿಟ್ಟಿದ್ದಾರೆ. RPF ಸಿಬ್ಬಂದಿ ತ್ವರಿತ ಮತ್ತು ಪ್ರಾಮಾಣಿಕ ಕ್ರಮಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ನಡೆದಿದ್ದೇನು?
ಫೆಬ್ರವರಿ 08ರಂದು ರಾತ್ರಿ 08.35ಕ್ಕೆ ಈ ಘಟನೆ ನಡೆದಿತ್ತು. ಪ್ರಯಾಣಿಕರೊಬ್ಬರು ಯಲಹಂಕ ರೈಲು ನಿಲ್ದಾಣದಲ್ಲಿ ತಮ್ಮ ಕೆಂಪು ಬಣ್ಣದ ಟ್ರಾಲಿ ಬ್ಯಾಗ್ ಕಳೆದುಕೊಂಡಿದ್ದರು. ಈ ಕುರಿತು ತಕ್ಷಣವೇ ‘ರೈಲ್ ಮದದ್’ ಪೋರ್ಟಲ್‌ನಲ್ಲಿ ದೂರು ಕೂಡ ದಾಖಲಿಸಿದ್ದರು.
ದೂರು ಸ್ವೀಕರಿಸಿದ ಕೂಡಲೇ RPF ಸಿಬ್ಬಂದಿ ತ್ವರಿತವಾಗಿ ಕಾರ್ಯಪ್ರವೃತ್ತರಾಗಿ ಯಲಹಂಕ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ನಂಬರ್–1ರಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ವಾರಸುದಾರರಿಲ್ಲದ ಕೆಂಪು ಬಣ್ಣದ ಟ್ರಾಲಿ ಬ್ಯಾಗ್ ಪತ್ತೆಯಾಗಿದ್ದು, ಅದನ್ನು ಸುರಕ್ಷಿತವಾಗಿ ಯಲಹಂಕ ನಿಲ್ದಾಣದ RPF ಪೋಸ್ಟ್‌ಗೆ ತೆಗೆದುಕೊಂಡು ಬಂದಿದ್ದಾರೆ.
ಇದನ್ನೂ ಓದಿ: ಕೊರೊನಾದಲ್ಲಿ ಟ್ರಾವೆಲ್ಸ್ ಲಾಸ್ ಆಗಿದ್ದಕ್ಕೆ ಕಳ್ಳತನಕ್ಕಿಳಿತ ವ್ಯಕ್ತಿ! ಕೆಜಿಗಟ್ಟಲೇ ಚಿನ್ನ ದೋಚಿದ್ದ ಮಾಸ್ಕ್ಮ್ಯಾನ್ ಅರೆಸ್ಟ್
ಬ್ಯಾಗ್ ಪರಿಶೀಲನೆ ವೇಳೆ ಅದರೊಳಗೆ ಸುಮಾರು 17 ಲಕ್ಷ ರೂ ಮೌಲ್ಯದ 100 ಗ್ರಾಂ ಚಿನ್ನಾಭರಣಗಳು ಹಾಗೂ 2 ಲಕ್ಷ ರೂ ನಗದು ಇರುವುದು ಪತ್ತೆಯಾಗಿದೆ. ನಂತರ ರೈಲ್ ಮದದ್ನಲ್ಲಿ ಉಲ್ಲೇಖವಾದ ದೂರು ಹಾಗೂ ಆಧಾರ್ ಕಾರ್ಡ್ ವಿವರಗಳನ್ನು ಪಡೆದು RPF ಸಿಬ್ಬಂದಿ ಬ್ಯಾಗ್ ಕಳೆದುಕೊಂಡ ಪ್ರಯಾಣಿಕನನ್ನು ಸಂಪರ್ಕಿಸಿದ್ದಾರೆ. ಬಳಿಕ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಿ ಟ್ರಾಲಿ ಬ್ಯಾಗ್‌ನ್ನು ವಾರಸುದಾರರಿಗೆ ಹಿಂತಿರುಗಿಸಿದ್ದಾರೆ.
ಬಿಎಂಟಿಸಿ ಬಸ್‌ನಲ್ಲಿ ಬಿಟ್ಟುಹೋಗಿದ್ದ 10 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾಪಸ್
ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಹಿಳೆಯೊಬ್ಬರು ಬಿಟ್ಟುಹೋಗಿದ್ದ ಸುಮಾರು 10 ಲಕ್ಷ ರೂ ಮೌಲ್ಯದ ಚಿನ್ನಾಭರಣ ಇರುವ ಬ್ಯಾಗ್‌ನ್ನು ಬಿಎಂಟಿಸಿ ಸಿಬ್ಬಂದಿ ಪತ್ತೆಹಚ್ಚಿ ಸುರಕ್ಷಿತವಾಗಿ ಹಿಂತಿರುಗಿಸಿದ್ದಾರೆ. ಕಳೆದುಹೋಗಿದ್ದ ಚಿನ್ನ ಮರಳಿ ಸಿಕ್ಕ ಖುಷಿಯಲ್ಲಿ ಮಹಿಳೆ ಬಿಕ್ಕಿ ಬಿಕ್ಕಿ ಅತ್ತ ಘಟನೆ ನಿನ್ನೆ ಬೆಂಗಳೂರಿನಲ್ಲಿ ನಡೆದಿದೆ.
ಇದನ್ನೂ ಓದಿ: ಬೆಂಗಳೂರು ಏರ್ಪೋರ್ಟ್ನಲ್ಲಿ ಸಿಕ್ತು 3 ಕೋಟಿ ರೂ. ಮೌಲ್ಯದ ಗಾಂಜಾ! ಮೂವರು ಆರೋಪಿಗಳು ವಶಕ್ಕೆ
ಜನವರಿ 31ರಂದು ಮಧ್ಯಾಹ್ನ 12.30ರ ಸುಮಾರಿಗೆ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕೆ.ಆರ್. ಮಾರುಕಟ್ಟೆಯಲ್ಲಿ ಬಸ್ ಹತ್ತಿದ್ದ ಮಹಿಳೆ ಕನಕಪುರಕ್ಕೆ ತೆರಳಲು ಬಸವನಗುಡಿ ಟಿಕೆಟ್ ಪಡೆದಿದ್ದರು. ಶನಿವಾರ ಹಿನ್ನೆಲೆ ಹಾಗೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದರಿಂದ ಬಸ್‌ನಲ್ಲಿ ಭಾರೀ ರಷ್ ಇತ್ತು. ಬಸ್ ಬದಲಾಯಿಸಲು ಬಸವನಗುಡಿಯಲ್ಲಿ ಇಳಿಯುವ ವೇಳೆ ಆತುರದಲ್ಲಿ ಮಹಿಳೆ ಚಿನ್ನದ ಸರ ಇದ್ದ ಬ್ಯಾಗ್‌ನ್ನು ಬಸ್‌ನಲ್ಲೇ ಮರೆತು ಹೋಗಿದ್ದರು. ನಂತರ ಬ್ಯಾಗ್ ಕಳೆದುಹೋಗಿರುವುದು ತಿಳಿದ ಕೂಡಲೇ ಮಹಿಳೆ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಮಹಿಳೆಯನ್ನು ಸಂಪರ್ಕಿಸಿ, ಪದ್ಮನಾಭನಗರ ಡಿಪೋ ಬಳಿ ಚಿನ್ನಾಭರಣ ಇರುವ ಬ್ಯಾಗ್‌ನ್ನು ಹಿಂತಿರುಗಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.