ಜಯನಗರ ನಿವಾಸಿಗಳಿಗೆ ಬಿಗ್ ರಿಲೀಫ್: ಸ್ವಂತ ಮನೆ ಮುಂದೆ ವಾಹನ ನಿಲ್ಲಿಸಿದ್ರೆ ಇನ್ಮುಂದೆ ಪಾರ್ಕಿಂಗ್ ಫೀಸ್ ಇಲ್ಲ!
ಬೆಂಗಳೂರಿನ ಜಯನಗರದಲ್ಲಿ ಜಾರಿಯಾಗಲಿರುವ ಸ್ಮಾರ್ಟ್ ಪಾರ್ಕಿಂಗ್ ಯೋಜನೆಯಡಿ ಸ್ಥಳೀಯ ನಿವಾಸಿಗಳಿಗೆ ಬಿಗ್ ರಿಲೀಫ್ ನೀಡಲಾಗಿದೆ. ಸ್ವಂತ ಮನೆಗಳ ಮುಂಭಾಗ ವಾಹನ ನಿಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕೇವಲ ವಾಣಿಜ್ಯ ರಸ್ತೆಗಳಿಗೆ ಮಾತ್ರ ಶುಲ್ಕ ಅನ್ವಯಿಸಲಿದ್ದು, ಸಂಪೂರ್ಣ ಮಾಹಿತಿ ಇಲ್ಲಿದೆ.

ಮುಖ್ಯಾಂಶಗಳು
- ಜಯನಗರ ನಿವಾಸಿಗಳ ಮನೆಗಳ ಮುಂಭಾಗ ಪಾರ್ಕಿಂಗ್‌ಗೆ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.
- ವಾಣಿಜ್ಯ ರಸ್ತೆಗಳಲ್ಲಿ ಬೆಳಿಗ್ಗೆ 9 ರಿಂದ ರಾತ್ರಿ 10 ರವರೆಗೆ ಶುಲ್ಕ.
- ಸ್ಮಾರ್ಟ್ ಪಾರ್ಕಿಂಗ್ ಯೋಜನೆಯಡಿ ಸಿಸಿಟಿವಿ, ಆಪ್ ಹಾಗೂ ಸೂಚನಾ ಫಲಕ ಅಳವಡಿಕೆ.
ಬೆಂಗಳೂರು, ಅಕ್ಟೋಬರ್ 10: ಬೆಂಗಳೂರಿನ ಪ್ರಮುಖ ವಾಣಿಜ್ಯ ಮತ್ತು ವಸತಿ ಪ್ರದೇಶವಾದ ಜಯನಗರದಲ್ಲಿ ಶೀಘ್ರದಲ್ಲೇ ಜಾರಿಗೆ ಬರಲಿರುವ ಅತ್ಯಾಧುನಿಕ ‘ಸ್ಮಾರ್ಟ್ ಪಾರ್ಕಿಂಗ್’ ವ್ಯವಸ್ಥೆಯಲ್ಲಿ ಸ್ಥಳೀಯ ನಿವಾಸಿಗಳಿಗೆ ಪ್ರಮುಖ ವಿನಾಯಿತಿ ನೀಡಲಾಗಿದೆ. ಜಯನಗರದ ನಿವಾಸಿಗಳು ತಮ್ಮ ಮನೆಗಳ ಮುಂಭಾಗದಲ್ಲಿ ನಿಲ್ಲಿಸುವ ವಾಹನಗಳಿಗೆ ಯಾವುದೇ ಪಾರ್ಕಿಂಗ್ ಶುಲ್ಕ ಪಾವತಿಸಬೇಕಾಗಿಲ್ಲ ಎಂದು ಬೆಂಗಳೂರು ದಕ್ಷಿಣ ನಗರ ನಿಗಮದ ಆಯುಕ್ತ ಕೆ.ಎನ್. ರಮೇಶ್ ಸ್ಪಷ್ಟಪಡಿಸಿದ್ದಾರೆ.
ವಾಹನ ಸವಾರರಿಗೆ ಅನುಕೂಲ ಕಲ್ಪಿಸಲು ಈ ಯೋಜನೆ
ಹೊಸ ವ್ಯವಸ್ಥೆಯ ಪ್ರಕಾರ, ಪಾರ್ಕಿಂಗ್ ಶುಲ್ಕವು ಕೇವಲ ಪ್ರಮುಖ ವಾಣಿಜ್ಯ ರಸ್ತೆಗಳಿಗೆ ಮಾತ್ರ ಅನ್ವಯಿಸಲಿದ್ದು, ಅಲ್ಲಿಯೂ ಕೂಡ ಬೆಳಿಗ್ಗೆ 9 ರಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಶುಲ್ಕ ವಸೂಲಿ ಮಾಡಲಾಗುತ್ತದೆ. ಜಯನಗರ ವ್ಯಾಪಾರಿಗಳ ಸಂಘದ ಪ್ರತಿನಿಧಿಗಳು ಸಭೆಯಲ್ಲಿ ವ್ಯಕ್ತಪಡಿಸಿದ ಆತಂಕ ಹಾಗೂ ಶುಲ್ಕ ಕಡಿತದ ಬೇಡಿಕೆಗಳ ಕುರಿತು ಪರಿಶೀಲನೆ ನಡೆಸುವುದಾಗಿ ಆಯುಕ್ತರು ತಿಳಿಸಿದ್ದಾರೆ. ವಾಣಿಜ್ಯ ರಸ್ತೆಗಳಲ್ಲಿ ಅನಧಿಕೃತ ನಿಲುಗಡೆಗೆ ಕಡಿವಾಣ ಹಾಕಲು ಮತ್ತು ವಾಹನ ಸವಾರರಿಗೆ ಅನುಕೂಲ ಕಲ್ಪಿಸಲು ಈ ತಂತ್ರಜ್ಞಾನ ಆಧಾರಿತ ಯೋಜನೆ ಹಮ್ಮಿಕೊಳ್ಳಲಾಗಿದೆ.
ಡಿಜಿಟಲ್ ಸೂಚನಾ ಫಲಕಗಳ ಅಳವಡಿಕೆ
ಈ ಸ್ಮಾರ್ಟ್ ಪಾರ್ಕಿಂಗ್ ಯೋಜನೆಯಡಿ ಆಯ್ದ ಪ್ರಮುಖ ರಸ್ತೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು, ಮೊಬೈಲ್ ಆಪ್ ಮೂಲಕ ನೈಜ ಸಮಯದ ಪಾರ್ಕಿಂಗ್ ಲಭ್ಯತೆ ಮಾಹಿತಿ ಹಾಗೂ ಡಿಜಿಟಲ್ ಸೂಚನಾ ಫಲಕಗಳನ್ನು ಅಳವಡಿಸಲಾಗುತ್ತದೆ. ಇದು ವಾಹನ ಸವಾರರಿಗೆ ಖಾಲಿ ಇರುವ ಪಾರ್ಕಿಂಗ್ ಜಾಗವನ್ನು ಸುಲಭವಾಗಿ ಹುಡುಕಲು ಸಹಾಯ ಮಾಡಲಿದೆ. ಒಟ್ಟಿನಲ್ಲಿ, ವಾಣಿಜ್ಯ ಮಳಿಗೆಗಳ ರಸ್ತೆಗಳಲ್ಲಿ ಶುಲ್ಕ ಅನ್ವಯಿಸಿದರೂ, ಮನೆಗಳ ಮುಂದೆ ವಾಹನ ನಿಲ್ಲಿಸುವ ಸ್ಥಳೀಯ ನಿವಾಸಿಗಳಿಗೆ ಇದು ದೊಡ್ಡ ರಿಲೀಫ್ ನೀಡಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




