ಪಾರ್ಟ್ ಟೈಮ್ ಜಾಬ್ಗೆ ಹಣ ಹೂಡಿಕೆ ಮಾಡಿಸಿ 23 ಲಕ್ಷ ರೂ, ದೋಚಿದ ಖದೀಮರು, ಟೆಕ್ಕಿ ಕಂಗಾಲು
ಪಾರ್ಟ್ ಟೈಮ್ ಜಾಬ್ ಇದೆ. ಮನೆಯಲ್ಲೇ ಕೂತು ಹಣ ಮಾಡಬಹುದು ಎಂದು ನಂಬಿಸಿ. ಮೊದ ಮೊದಲು ಲಾಭ ನೀಡಿ ಬಳಿಕ ಲಕ್ಷಾಂತ ರೂ. ಹಣ ವನ್ನು ಹೂಡಿಕೆ ಮಾಡುವಂತೆ ಮಾಡಿ ಬಳಿಕ ಖದೀಮರು ಹಣ ಲಪಟಾಯಿಸಿರುವ ಘಟನೆ ನಡೆದಿದೆ. ವೈಟ್‌ಫೀಲ್ಡ್‌ನಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಟೆಕ್ಕಿ 23 ಲಕ್ಷ ಹಣ ಕಳೆದುಕೊಂಡಿದ್ದಾರೆ.
ಬೆಂಗಳೂರು, ನ.13: 28 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಪಾರ್ಟ್ ಟೈಮ್ ಜಾಬ್ (Part-time Job) ನಲ್ಲಿ ಹೂಡಿಕೆ ಮಾಡಿ 23.23 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿರುವ ಘಟನೆ ನಡೆದಿದೆ. ಕೃತಿಕಾ (ಹೆಸರು ಬದಲಾಯಿಸಲಾಗಿದೆ) ವೈಟ್‌ಫೀಲ್ಡ್‌ನಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಪಾರ್ಟ್ ಟೈಮ್ ಜಾಬ್ನಲ್ಲಿ ಹಣ ಹೂಡಿ ಹಣ ಕಳೆದುಕೊಂಡಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನವೆಂಬರ್ 3 ರಂದು ಅಪರಿಚಿತ ಸಂಖ್ಯೆಯಿಂದ ಶೀತಲ್ ಎಂಬ ವ್ಯಕ್ತಿ ವಾಟ್ಸಾಪ್ ಮೂಲಕ ನನ್ನನ್ನು ಸಂಪರ್ಕಿಸಿದ್ದರು. ಆ ನಂಬರ್ ಅನ್ನು ಆನ್ಲೈನ್ನಲ್ಲಿ ಹುಡುಕಾಡಿದಾಗ ಫೋನ್ ಯುಎಸ್‌ನಿಂದ ಬಂದಿರಬಹುದು ಎಂದು ತಿಳಿದುಬಂದಿದೆ ಎಂದು ಕೃತಿಕಾ ಅವರು ಪೊಲೀಸರಿಗೆ ತಿಳಿಸಿದ್ದಾರೆ.
ಪಾರ್ಟ್ ಟೈಮ್ ಜಾಬ್ ಅವಕಾಶವಿದ್ದು, ಚಟ್ನಿ ಎಂಬ ಹೆಸರಿನ ರೆಸ್ಟೊರೆಂಟ್ಗೆ ರಿವಿವ್ ಬರೆದರೆ ಹಣ ಸಿಗುತ್ತದೆ ಎಂದು ಕರೆ ಮಾಡಿದ್ದ ಶೀತಲ್ ಕೃತಿಕಾಗೆ ಹೇಳಿದ್ದಾರೆ. ನಂತರ ಕೃತಿಕಾ ರೆಸ್ಟೊರೆಂಟ್ಗೆ ರಿವಿವ್ ಬರೆದು ಪೋಸ್ಟ್ ಮಾಡಿ, ಅದರ ಸ್ಕ್ರೀನ್‌ಶಾಟ್ ಅನ್ನು ಶೀತಲ್ಗೆ ಕಳಿಸಿದ್ದಾರೆ. ಆಗ ಕೃತಿಕಾಗೆ 200 ರೂ ಪಾವತಿಸಲಾಗಿದೆ ಎಂದು ಕೃತಿಕಾ ಅವರು ಪೊಲೀಸರಿಗೆ ತಿಳಿಸಿದ್ದಾರೆ. ಇದಾದ ನಂತರ ಯುವ ಟೆಕ್ಕಿ ಕೃತಿಕಾರನ್ನು ಐದು ಟೆಲಿಗ್ರಾಮ್ ಗುಂಪುಗಳಿಗೆ ಸೇರುವಂತೆ ಆಮಿಷವೊಡ್ಡಲಾಗಿದ್ದು ಕೃತಿಕಾ ಅವರು @Meenakshipatil96, @kashyapteacher, @CSR0127, @Tax011, @GoldMentor012 ಸೇರಿ 5 ಟೆಲಿಗ್ರಾಮ್ ಗುಂಪುಗಳಿಗೆ ಸೇರಿದ್ದಾರೆ. ಬಳಿಕ swiccatch.com ನಲ್ಲಿ ಆನ್‌ಲೈನ್ ಕಾರ್ಯಗಳನ್ನು ಪೂರ್ಣಗೊಳಿಸಲು 1,000 ರೂಪಾಯಿಗಳನ್ನು ಹೂಡಿಕೆ ಮಾಡಬೇಕಿತ್ತು. ಹೋಡಿಕೆ ಮಾಡಿದ ನಂತರ ಕೃತಿಕಾಗೆ 1,300 ರೂಪಾಯಿಗಳ ಲಾಭ ಬಂದಿದೆ. ನಂತರ ವಂಚಕರು ಕೃತಿಕಾಗೆ, ಹೆಚ್ಚು ಹೂಡಿಕೆ ಮಾಡುವ ಮೂಲಕ ಹೆಚ್ಚು ಗಳಿಸಬಹುದು ಎಂದು ನಂಬಿಕೆ ಬರುವಂತೆ ಮಾಡಿದ್ದಾರೆ. ಬಳಿಕ ಕೃತಿಕಾ, ಹಲವು ಕಂತುಗಳ ಮೂಲಕ ಐದು ಐಸಿಐಸಿಐ ಬ್ಯಾಂಕ್ ಖಾತೆಗಳು, ಒಂದು ಫೆಡರಲ್ ಬ್ಯಾಂಕ್ ಖಾತೆ ಮತ್ತು ಕೆಲವು ಯುಪಿಐ ಐಡಿಗಳಿಗೆ 23,23,315 ರೂ. ಹಣವನ್ನು ವರ್ಗಾವಣೆ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಸೈಬರ್ ಕ್ರೈಂ ಕಥೆ ಹೇಳಿ ಉದ್ಯಮಿ ಖಾತೆಯಿಂದಲೇ ಹಣ ಲಪಟಾಯಿಸಿದ ಖದೀಮ
ಹಣ ಹಿಂಪಡೆಯುವ ಸಮಯ ಬಂದಾಗ, ವಂಚಕನು ಹೆಚ್ಚಿನ ಹೂಡಿಕೆಗೆ ಬೇಡಿಕೆ ಇಟ್ಟಿದ್ದರು ಎಂದು ಕೃತಿಕಾ ಆರೋಪಿಸಿದ್ದಾರೆ. ಹಣಕ್ಕೆ ಬೇಡಿಕೆ ಇಡುತ್ತಿದ್ದಂತೆ ತಾನು ವಂಚನೆಗೊಳಗಾಗಿರುವುದು ಕೃತಿಕಾಳ ಅರಿವಿಗೆ ಬಂದಿದೆ. ಬಳಿಕ ನವೆಂಬರ್ 9 ರಂದು ವೈಟ್‌ಫೀಲ್ಡ್ ಸೈಬರ್ ಎಕನಾಮಿಕ್ ಮತ್ತು ನಾರ್ಕೋಟಿಕ್ಸ್ ಕ್ರೈಮ್ (ಸಿಇಎನ್) ಪೊಲೀಸರನ್ನು ಸಂಪರ್ಕಿಸಿ ಕೃತಿಕಾ ಅವರು ದೂರು ದಾಖಲಿಸಿದ್ದಾರೆ.
ಸಿಇಎನ್ ಪೊಲೀಸರು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ಸೆಕ್ಷನ್ 66 (ಡಿ) ಮತ್ತು ಐಪಿಸಿ ಸೆಕ್ಷನ್ 419 ಮತ್ತು 420 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ತನಿಖೆ ನಡೆಯುತ್ತಿದೆ. ಆನ್‌ಲೈನ್ ಉದ್ಯೋಗ ವಂಚನೆಗಳು ಇತ್ತೀಚೆಗೆ ಸಾಮಾನ್ಯವಾಗಿವೆ. ಸುಲಭವಾಗಿ ಹಣ ಮಾಡಬಹುದು ಎಂಬ ನಿರೀಕ್ಷೆಯಲ್ಲಿ ಹಲವರು ವಂಚನೆಗೆ ಒಳಗಾಗುತ್ತಿದ್ದಾರೆ ಎಂದು ಸೈಬರ್ ಕ್ರೈಮ್ ತನಿಖಾಧಿಕಾರಿಯೊಬ್ಬರು ಹೇಳಿದ್ದಾರೆ.
ಈ ವರ್ಷ 3,000 ಪ್ರಕರಣಗಳು
ಬೆಂಗಳೂರು ಪೊಲೀಸರು ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಈ ವರ್ಷದ ಸೆಪ್ಟೆಂಬರ್‌ವರೆಗೆ ನಗರದಾದ್ಯಂತ 3,346 ಆನ್‌ಲೈನ್ ಉದ್ಯೋಗ ವಂಚನೆ ಪ್ರಕರಣಗಳು ದಾಖಲಾಗಿವೆ. ಈ ಹಗರಣದಿಂದ ಸಂತ್ರಸ್ತರು 204 ಕೋಟಿ ರೂ. ಹಣ ಕಳೆದುಕೊಂಡಿದ್ದಾರೆ.
ಪೊಲೀಸರು 73.71 ಕೋಟಿ ರೂ. ಹಣ ಖದೀಮರ ಕೈ ಸೇರದಂತೆ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದರೆ, ಈ ಪೈಕಿ 7.67 ಕೋಟಿ ರೂ.ಹಣವನ್ನು ದೂರುದಾರರಿಗೆ ಹಿಂದಿರುಗಿಸಿದ್ದಾರೆ ಎಂದು ತಿಳಿದು ಬಂದಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:55 am, Mon, 13 November 23