ಚಾಲಕ, ನಿರ್ವಾಹಕರ ಯೂನಿಫಾರಂಗೆ ಪುಡಿಗಾಸು ಕೊಟ್ಟು ಕೈತೊಳೆದುಕೊಂಡ ಬಿಎಂಟಿಸಿ; ನೌಕರರಿಂದ ಆಕ್ರೋಶ
ಅವರೆಲ್ಲ ಬಿಎಂಟಿಸಿಗಾಗಿ ಹಗಲು ರಾತ್ರಿ ಎನ್ನದೆ ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಪ್ರತಿದಿನ ನೂರಾರು ಕಿಮೀ ಸಂಚಾರ ಮಾಡಿ ಬೆಂಗಳೂರಿನ ಭಯಾನಕ ಟ್ರಾಫಿಕ್ನಲ್ಲಿ ಪ್ರಯಾಣಿಕರ ನಡುವೆ ಕಾರ್ಯ ನಿರ್ವಹಿಸುತ್ತಾರೆ. ಆದರೆ, ಸಂಸ್ಥೆ ಮಾತ್ರ ವರ್ಷಕ್ಕೊಮ್ಮೆ ಯೂನಿಫಾರಂಗಾಗಿ ನೀಡಬೇಕಿದ್ದ ಹಣವನ್ನು ಪುಡಿಗಾಸು ನೀಡಿ ಕೈ ತೊಳೆದುಕೊಂಡಿದೆ. ಇದಕ್ಕೆ ಸಾರಿಗೆ ನೌಕರರ ಮುಖಂಡರು, ಪ್ರಯಾಣಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಬೆಂಗಳೂರು, ಆಗಸ್ಟ್ 2: ಬಸ್ ಚಾಲಕ, ನಿರ್ವಾಹಕ ಹಾಗೂ ಮೆಕ್ಯಾನಿಕ್ಗಳಿಗೆ ಈ ಹಿಂದೆ ಬಿಎಂಟಿಸಿ ಯೂನಿಫಾರಂ ಕೊಡುತ್ತಿತ್ತು. ಅದನ್ನು ನೌಕರರು ಹೊಲಿಸಿಕೊಳ್ಳುತ್ತಿದ್ದರು. ಆದರೆ ಈಗ ಯೂನಿಫಾರಂ ಕೊಡುವ ಬದಲು ಬಿಎಂಟಿಸಿ ಕಡಿಮೆ ಹಣ ನೀಡಲು ಮುಂದಾಗಿದೆ. ಕಡಿಮೆ ಹಣ ನೀಡಲು ಮುಂದಾಗಿರುವ ಬಿಎಂಟಿಸಿ ವಿರುದ್ಧ ಸಾರಿಗೆ ಮುಖಂಡರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಂಡಕ್ಟರ್, ಡ್ರೈವರ್ಗಳಿಗೆ ಯೂನಿಫಾರಂ ನೀಡಲು ಬಿಎಂಟಿಸಿಯಲ್ಲಿ ಹಣವಿಲ್ಲವೇ ಎಂದು ಸಾರಿಗೆ ನೌಕರರ ಮುಖಂಡರು ಪ್ರಶ್ನೆ ಮಾಡುತ್ತಿದ್ದಾರೆ.
ಪುಡಿಗಾಸು ನೀಡಿ ಎರಡು ಜೊತೆ ಯೂನಿಫಾರಂ ಹೊಲಿಸಿಕೊಳ್ಳಲು ಹೇಳಿದರೆ ಹೇಗೆ ಎಂದು ನೌಕರರು ಪ್ರಶ್ನೆ ಮಾಡುತ್ತಿದ್ದಾರೆ. ಬಿಎಂಟಿಸಿಯ ಪುರುಷ ಕಂಡಕ್ಟರ್, ಡ್ರೈವರ್ ಗಳಿಗೆ ಹಾಗೂ ಮೆಕ್ಯಾನಿಕ್ ಗಳಿಗೆ ಎರಡು ಜೊತೆ ಯೂನಿಫಾರಂಗೆ ಕೇವಲ 750 ರುಪಾಯಿ, ಸ್ಟೀಚ್ ಮಾಡಲು ಕೇವಲ 350 ರುಪಾಯಿ ನೀಡಿದ್ದಾರೆ. ಅಂಗಡಿಯಲ್ಲಿ ಪುರುಷರ ಒಂದು ಜೊತೆ ಯೂನಿಫಾರಂ ಗಂಜಿ ಬಟ್ಟೆ ಹೊಲಿಸಲು ನಾರ್ಮಲ್- 1350 ರುಪಾಯಿ ಇದೆ (ಮೂರು ಮೀಟರ್). ರೇಮಂಡ್ ಬಟ್ಟೆಗಾದ್ರೆ- 1950 ರುಪಾಯಿ (ಮೂರು ಮೀಟರ್) ಒಂದು ಪ್ಯಾಂಟ್ ಒಂದು ಶರ್ಟ್ಗೆ ಇದೆ. ಒಂದು ಜೊತೆ ಪ್ಯಾಂಟ್ ಶರ್ಟ್ ಹೊಲಿಯಲು ಸಾಮಾನ್ಯವಾಗಿ 1400 ಯಿಂದ 1500 ರುಪಾಯಿ ಆಗುತ್ತದೆ. ಇದಕ್ಕೆ ಸಾರಿಗೆ ನೌಕರರ ಮುಖಂಡ ಚಂದ್ರಶೇಖರ್ ಬಿಎಂಟಿಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತ ಮಹಿಳಾ ಕಂಡಕ್ಟರ್, ಮ್ಯೆಕಾನಿಕ್ ಮಹಿಳೆಯರಿಗೆ 1707 ರುಪಾಯಿ (ಎರಡು ಸೀರೆಗೆ) ಸೀರೆ ಹೊಲಿಗೆ ಹಾಕಲು 100 ರುಪಾಯಿ ನೀಡಿದ್ದಾರೆ. 1800 ರುಪಾಯಿಗೆ ಎರಡು ಸೀರೆ ಎರಡು ಜಾಕೆಟ್ ಹಾಕಿಸಿಕೊಳ್ಳಲು ಹಣ ನೀಡಿದ್ದಾರೆ. ಆದರೆ ಅಂಗಡಿಯಲ್ಲಿ ಒಂದು ಖಾಕಿ ಸೀರೆಗೆ 1500 ರೂ.ನಿಂದ 2000 ರುಪಾಯಿ ಆಗುತ್ತದೆ. ನಾರ್ಮಲ್ ಬೌಸ್ಲ್ ಹೊಲಿಯಲು 300 ರೂ. ತೆಗೆದುಕೊಳ್ಳುತ್ತಾರೆ ದರ್ಜಿಗಳು. ಆದರೆ ಬಿಎಂಟಿಸಿ ಎರಡು ಸೀರೆ ಎರಡು ಬ್ಲೌಸ್ಗೆ ಕೇವಲ 1800 ರುಪಾಯಿ ನೀಡಿದೆ. ಇನ್ನು ಸೀರೆ ಉಟ್ಟುಕೊಂಡು ಬಸ್ನಲ್ಲಿ ಮಹಿಳಾ ಕಂಡಕ್ಟರ್ಗಳು ಕೆಲಸ ಮಾಡಲು ಆಗುವುದಿಲ್ಲ. ಪ್ರತಿದಿನ ಬಸ್ನಲ್ಲಿ ಸಾವಿರಾರು ಜನ ಪ್ರಯಾಣಿಕರ ನಡುವೆ ಓಡಾಡಿ ಟಿಕೆಟ್ ನೀಡಬೇಕಾಗುತ್ತದೆ. ಡಿಪೋಗಳಲ್ಲಿ ಮೆಕ್ಯಾನಿಕ್ ಮಹಿಳೆಯರು ಕೂಡ ಸೀರೆಯುಟ್ಟು ಕೆಲಸ ಮಾಡಲು ಆಗುವುದಿಲ್ಲ.
ಇದನ್ನೂ ಓದಿ: ಮಾವು ರಫ್ತಿನಲ್ಲಿ ಹೊಸ ದಾಖಲೆ ಬರೆದ ಬೆಂಗಳೂರು ಕೆಂಪೇಗೌಡ ಏರ್ಪೋರ್ಟ್
ಬಿಎಂಟಿಸಿಯಲ್ಲಿ ಒಟ್ಟು 13 ಸಾವಿರ ನಿರ್ವಾಹಕ ಮತ್ತು ಚಾಲಕರಿದ್ದಾರೆ. ಆರು ಸಾವಿರ ಮಹಿಳಾ ಕಂಡಕ್ಟರ್ ಮತ್ತು ಮಹಿಳಾ ಮೆಕ್ಯಾನಿಕ್ ಗಳಿದ್ದಾರೆ.
ಬೇಡವಾದುದಕ್ಕೆಲ್ಲ ಕೋಟ್ಯಂತರ ರುಪಾಯಿ ಖರ್ಚು ಮಾಡಲು ಬಿಎಂಟಿಸಿ ಬಳಿ ಹಣವಿರುತ್ತದೆ. ಆದರೆ ಸಂಸ್ಥೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟು ಕೆಲಸ ಮಾಡುವ ನೌಕರರ ಮಾನ ಮುಚ್ಚಿಕೊಳ್ಳಲು ಸರಿಯಾಗಿ ಬಟ್ಟೆ ನೀಡಲು ಹಣವಿಲ್ಲ ಎಂದರೆ ಹೇಗೆ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ