ರಾಜ್ಯದ ಜನತೆಗೆ ಮತ್ತೊಂದು ಶಾಕ್​: ಶೀಘ್ರವೇ ಬಸ್​​ ಟಿಕೆಟ್​​ ದರ ಹೆಚ್ಚಳ?; ಸಾರಿಗೆ ಸಚಿವರಿಂದಲೇ ಮಾಹಿತಿ

ಕರ್ನಾಟಕದಲ್ಲಿ ಶೀಘ್ರವೇ ಸರ್ಕಾರಿ ಬಸ್ ಪ್ರಯಾಣ ದರ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಸಾರಿಗೆ ಸಚಿವ ಭೈರತಿ ಸುರೇಶ್​ ಸುಳಿವು ನೀಡಿದ್ದು, ಜೊತೆಗೆ ಶಕ್ತಿ ಯೋಜನೆಗೆ ಸ್ಮಾರ್ಟ್ ಕಾರ್ಡ್ ಹಾಗೂ ಬಿಎಂಟಿಸಿಗೆ 4,500 ಇ-ಬಸ್ ಸೇರ್ಪಡೆಗೊಳಿಸುವುದಾಗಿ ತಿಳಿಸಿದ್ದಾರೆ. ಇವೆಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ.

ರಾಜ್ಯದ ಜನತೆಗೆ ಮತ್ತೊಂದು ಶಾಕ್​: ಶೀಘ್ರವೇ ಬಸ್​​ ಟಿಕೆಟ್​​ ದರ ಹೆಚ್ಚಳ?; ಸಾರಿಗೆ ಸಚಿವರಿಂದಲೇ ಮಾಹಿತಿ
ಶೀಘ್ರವೇ ಬಸ್​​ ಟಿಕೆಟ್​​ ದರ ಹೆಚ್ಚಳ ಸಾಧ್ಯತೆ
Image Credit source: PTI
Edited By:

Updated on: Sep 04, 2026 | 5:46 PM

ಬೆಂಗಳೂರು, ಸೆಪ್ಟೆಂಬರ್​​ 04: ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ರಾಜ್ಯದ ಜನತೆಗೆ ಶೀಘ್ರವೇ ಮತ್ತೊಂದು ಶಾಕ್​​ ಕಾದಿದ್ದು, ಶೀಘ್ರವೇ ಸರ್ಕಾರಿ ಬಸ್​​ಗಳ ಟಿಕೆಟ್​​ ದರದ ಪರಿಷ್ಕರಣೆಗೆ ಸರ್ಕಾರ ಮುಂದಾಗಿದೆ. ಈ ಬಗ್ಗೆ ಸ್ವತಃ ಮಾಹಿತಿ ನೀಡಿರುವ ಸಾರಿಗೆ ಸಚಿವ ಭೈರತಿ ಸುರೇಶ್, ಕಳೆದ ಎಂಟು ತಿಂಗಳಲ್ಲಿ ಕೇಂದ್ರ ಸರ್ಕಾರ ತೈಲೋತ್ಪನ್ನಗಳ ದರಗಳನ್ನು ಹೆಚ್ಚಳ ಮಾಡಿದೆ. ಹೀಗಿದ್ದರೂ ನಾವು ಬಸ್ ಪ್ರಯಾಣ ದರವನ್ನು ಹೆಚ್ಚಳ ಮಾಡಿಲ್ಲ. ಇದರಿಂದ ನಮ್ಮ ನಾಲ್ಕೂ ಸಾರಿಗೆ ನಿಗಮಗಳಿಗೆ ಸಾವಿರಾರು ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಹೀಗಾಗಿ ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಅತುಲ್ ತಿವಾರಿ ನೇತೃತ್ವದ ಸಮಿತಿ ದರ ಪರಿಷ್ಕರಣೆ ಸಂಬಂಧಿಸಿದಂತೆ ಅಧ್ಯಯನ ನಡೆಸುತ್ತಿದ್ದು, ಸದ್ಯದಲ್ಲೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಹೆಚ್ಚು ಹೊರೆಯಾಗದ ರೀತಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ದರ ಪರಿಷ್ಕರಣೆ ಮಾಡಲಾಗುತ್ತದೆ ಎಂದವರು ತಿಳಿಸಿದ್ದಾರೆ.

ಶಕ್ತಿ ಯೋಜನೆ ಫಲಾನುಭವಿಗಳಿಗೆ ಸ್ಮಾರ್ಟ್​​ ಕಾರ್ಡ್​​

ಸಾಮಾನ್ಯ ಸರ್ಕಾರಿ ಬಸ್​​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯಡಿಯಲ್ಲಿ ರಾಜ್ಯದ ಒಂದು ಕೋಟಿಗೂ ಅಧಿಕ ಮಹಿಳೆಯರಿಗೆ ಮೊದಲ ಹಂತದಲ್ಲಿ ಉಚಿತ ಸ್ಮಾರ್ಟ್ ಕಾರ್ಡ್​​ಗಳನ್ನು ವಿತರಿಸಲಾಗುತ್ತದೆ. ಇದಕ್ಕೆ 250 ಕೋಟಿ ರೂಪಾಯಿಗಳ ವೆಚ್ಚವಾಗಲಿದ್ದು, ಸದ್ಯದಲ್ಲೇ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ ಎಂದೂ ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: ಹಲವು ವರ್ಷಗಳಿಂದ ಪೊಲೀಸ್ ಠಾಣಾ ಆವರಣಗಳಲ್ಲಿ ನಿಂತಿರುವ 8500 ಜಪ್ತಿ ವಾಹನಗಳು ಶೀಘ್ರವೇ ಸ್ಥಳಾಂತರ

ಬಿಎಂಟಿಸಿ ಸೇರ್ಪಡೆಯಾಗಲಿವೆ 4,500 ಎಲೆಕ್ಟ್ರಿಕ್ ಬಸ್​​ಗಳು

ರಾಜ್ಯ ಸಚಿವ ಸಂಪುಟದಲ್ಲಿ 4500 ಇ- ಬಸ್ ಪಡೆಯಲು ಅನುಮೋದನೆ ನೀಡಲಾಗಿದ್ದು, ಕೇಂದ್ರ ಸರ್ಕಾರದ ಪಿಎಂ ಇ-ಡ್ರೈವ್ ಯೋಜನೆಯಡಿ ಬಿಎಂಟಿಸಿಗೆ ಬಸ್ ಪೂರೈಕೆ ಆಗಲಿದೆ‌. ಸಾರಿಗೆ ಇಲಾಖೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಎಂಟಿಸಿಗೆ ಒಷ್ಟೊಂದು ಎಲೆಕ್ಟ್ರಿಕ್ ಬಸ್​​ಗಳು ಲಭ್ಯವಾಗಲಿವೆ. ಇದಕ್ಕಾಗಿ ರಾಜ್ಯ ಸರ್ಕಾರ ಪ್ರತಿ ವರ್ಷ 600 ಕೋಟಿ ರೂಪಾಯಿ ವೆಚ್ಚ ಮಾಡಲಿದೆ. 20 ವರ್ಷಕ್ಕೆ ಸುಮಾರು 12,000 ಕೋಟಿ ರೂಪಾಯಿಗಳನ್ನು ಸರ್ಕಾರ ಈ ಯೋಜನೆಗೆ ಖರ್ಚು ಮಾಡಲಿದೆ. 12 ಮೀಟರ್ ಉದ್ದದ 3,800 ಮತ್ತು 9 ಮೀಟರ್ ಉದ್ದ 900 ಎಲೆಕ್ಟ್ರಿಕ್ ಬಸ್​​ಗಳನ್ನು ಇದು ಒಳಗೊಂಡಿದೆ. ಈ ಪೈಕಿ 400 ಬಸ್​​ಗಳು ಹವಾನಿಯಂತ್ರಿತವಾಗಿರುತ್ತವೆ. ಇವಿ ಬಸ್ ವಾಹನ ತಯಾರಿಕಾ ಸಂಸ್ಥೆಗಳು ಹಂತಹಂತವಾಗಿಬಸ್​​ಗಳನ್ನು ತಯಾರಿಸಿ ಬಿಎಂಟಿಸಿಗೆ ಪೂರೈಕೆ ಮಾಡಲಿದ್ದು,ಈ ಇವಿ ಬಸ್ ಗಳ ಸಂಚಾರದಿಂದ ಬೆಂಗಳೂರು ನಗರದ ಪರಿಸರ ಮಾಲಿನ್ಯ ಪ್ರಮಾಣ ಕಡಿಮೆಯಾಗಲಿದೆ. ಕೇಂದ್ರ ಸರ್ಕಾರದಿಂದ 2 ಸಾವಿರ ಕೋಟಿ ರೂಪಾಯಿ ಸಾಲ ತೆಗೆದುಕೊಳ್ಳಲು ನಿರ್ಧರಿಸಲಾಗಿದ್ದು, ಇಡೀ ರಾಜ್ಯದಲ್ಲಿ ಹೊಸ ಬಸ್ ಡಿಪೋ ನಿರ್ಮಾಣ ಮತ್ತು ಹಳೆಯ ಬಸ್ ನಿಲ್ದಾಣಗಳ ಉನ್ನತೀಕರಣ ಮಾಡಲಾಗುತ್ತದೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 5:43 pm, Fri, 4 September 26

Loading...
Unable to load recommendations.
Follow Us