ಕ್ರೈಮ್ ಕಥೆ: ಸಿಡಿ ಲೇಡಿ ಗ್ಯಾಂಗ್ ಮತ್ತೊಂದು ‘ಶೂಟ್​’​ಗೆ ಸಿದ್ಧತೆ ಮಾಡಿಕೊಂಡಿತ್ತು!

ಒಂದು ನಿರ್ದಿಷ್ಟ ಜಾಗದಲ್ಲಿ ಅದನ್ನು ಫಿಕ್ಸ್ ಮಾಡಿ ಸುಮಾರು 15-20 ಅಡಿಗಳ ದೂರದಿಂದ ಮತ್ತೊಬ್ಬರು ಅದನ್ನು ಆಪರೇಟ್​ ಮಾಡಬಹುದು. ಕೂತ ಸ್ಥಳದಿಂದ ಝೂಮ್ ಇನ್, ಝೂಮ್ ಔಟ್, ಪ್ಯಾನ್ ಮಾಡುವ ಸೌಲಭ್ಯಗಳನ್ನು ಕ್ಯಾಮೆರಾ ಹೊಂದಿದೆ.

  • TV9 Web Team
  • Published On - 23:37 PM, 7 Apr 2021
ಕ್ರೈಮ್ ಕಥೆ: ಸಿಡಿ ಲೇಡಿ ಗ್ಯಾಂಗ್ ಮತ್ತೊಂದು ‘ಶೂಟ್​’​ಗೆ ಸಿದ್ಧತೆ ಮಾಡಿಕೊಂಡಿತ್ತು!
ಪ್ರಮುಖ ಆರೋಪಿ ನರೇಶ್​

ರಮೇಶ ಜಾರಕಿಹೊಳಿ ಮತ್ತು ಇನ್ನೊಬ್ಬ ಯುವತಿಗೆ ಸಂಬಂಧಿಸಿದ್ದು ಎಂದು ಹೇಳಲಾಗುತ್ತಿರುವ ಸಿಡಿ ಬಿಡುಗಡೆಯಾದ ಮೇಲೆ ಸಚಿವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿ, ದೇವಸ್ಥಾನಗಳನ್ನು ಸುತ್ತಿ, ವಿಶೇಷ ತನಿಖಾ ದಳದೆದುರು (ಎಸ್​ಐಟಿ) ವಿಚಾರಣೆಗೆ ಹಾಜರಾದ ನಂತರ ಕೊರೊನಾ ಸೋಂಕಿತರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅಲ್ಲಿಂದ ಬಿಡುಗಡೆ ಹೊಂದಿ ಮನೆಗೆ ವಾಪಸ್ಸಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಅವರೀಗ ಐಸೋಲೇಷನ್​ಗೊಳಗಾಗಿ ವಿಶ್ರಾಂತಿ ಪಡೆಯುತ್ತಿರುವುದರಿಂದ ಸುಮಾರು ಎರಡು ವಾರಗಳ ಕಾಲ ಎಸ್​ಐಟಿ ಅವರನ್ನು ವಿಚಾರಣೆಗೆ ಕರೆಯುವಂತಿಲ್ಲ. ಯುವತಿಯೂ ವಿಚಾರಣೆಯ ಒಂದು ಅಜ್ಞಾತ ಸ್ಥಳದಲ್ಲಿರುವುದರಿಂದ ಎಸ್ಐಟಿ ಆಧಿಕಾರಿಗಳು ಕೊಂಚ ವಿಶ್ರಮಿಸಿಕೊಳ್ಳುತ್ತಿರಬಹದು. ಆದರೆ, ಅವರೇ ಹೇಳುವಂತೆ ಪ್ರಕರಣದ ತನಿಖೆ ಈಗಷ್ಟೇ ಆರಂಭವಾಗಿದೆ.

ಈ ಮಧ್ಯೆ ಟಿವಿ9ಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಸ್ಫೋಟಕ ಮಾಹಿತಿ ಸಿಕ್ಕಿದ್ದು ಅದನ್ನು ಚಾನೆಲ್​ನ ಕ್ರೈಮ್ ಬ್ಯೂರೊ ಚೀಫ್​ ಆಗಿರುವ ಎಚ್.ವಿ.ಕಿರಣ್​ ಅವರು ಈ ವಿಡಿಯೋದಲ್ಲಿ ವಿವರವಾಗಿ ಬಿಚ್ಚಿಟ್ಟಿದ್ದಾರೆ. ಈ ಮಾಹಿತಿ ರಮೇಶ ಜಾರಕಿಹೊಳಿ ಅವರ ಪ್ರಕರಣಕ್ಕೆ ನೇರ ಸಂಬಂಧ ಹೊಂದಿರದಿದ್ದರೂ, ಅದಕ್ಕೆ ಪೂರಕವಾದ ಕೆಲವು ಅಂಶಗಳನ್ನು ತೆರೆದಿಡುತ್ತದೆ. ಸಿಡಿ ಪ್ರಕರಣದಲ್ಲಿ; ನರೇಶ್, ಶ್ರವಣ್​ ಮತ್ತು ಶ್ರವಣ್ ಅಣ್ಣ ಚೇತನ್​ರನ್ನು ಮಾಸ್ಟರ್​ಮೈಂಡ್​ಗಳೆಂದು ಪರಿಗಣಿಸಲಾಗುತ್ತಿದೆ. ಎಸ್ಐಟಿ ಅಧಿಕಾರಿಗಳು ಈಗಾಗಲೇ ಚೇತನ್​ನ ವಿಚಾರಣೆ ನಡೆಸಿದ್ದಾರೆ. ಉಳಿದಿಬ್ಬರು ತಲೆಮರೆಸಿಕೊಂಡು ತಿರುಗುತ್ತಿದ್ದಾರೆ. ಇಷ್ಟರಲ್ಲೇ ಅವರು ಎಸ್ಐಟಿ ಬಲೆಗೆ ಬೀಳಬಹುದು.

ಸ್ಫೋಟಕ ಮಾಹಿತಿ ಏನೆಂದರೆ, ಈ ಗ್ಯಾಂಗ್ (ನರೇಶ್, ಶ್ರವಣ್​ ಮತ್ತು ಚೇತನ್) ಮತ್ತೊಂದು ಸೆಕ್ಸ್ ಸಿಡಿ ತಯಾರಿಸಿಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಅದಕ್ಕೆಂದೇ ಅವರು ಚಿಕ್ಕಪೇಟೆಯ ಎಸ್​ಪಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ಅಂಗಡಿಯೊಂದರಿಂದ ಸ್ಟಿಂಗ್ ಆಪರೇಶನ್​ಗಳಿಗೆ ಉಪಯೋಗಿಸಲ್ಪಡುವ ಅತ್ಯಾಧುನಿಕ ಪೆನ್ ಕೆಮೆರಾವೊಂದನ್ನು ಖರೀದಿಸಿದ್ದಾರೆ. ಟಿವಿ9ಗೆ ದೊರಕಿರುವ ಮಾಹಿತಿಯ ಪ್ರಕಾರ ಸದರಿ ಅಂಗಡಿಯಲ್ಲಿ ಅವರು ಕೇಳಿದ ಕೆಮೆರಾ ಲಭ್ಯವಿರಲಿಲ್ಲ. ಅಂಗಡಿಯವರು ಅದನ್ನು ಚೆನೈಯಿಂದ ತರಿಸಿಕೊಟ್ಟಿದ್ದಾರೆ. ಕ್ಯಾಮೆರಾ ಮತ್ತು ಇತರ ಡಿವೈಸ್​ಗಳಿಗೆ ಈ ತ್ರಿವಳಿ ಒಂದೂವರೆ ಲಕ್ಷ ರೂಪಾಯಿ ತೆತ್ತಿದ್ದಾರೆ.

ಅವರು ಅಂಗಡಿ ಪ್ರವೇಶಿದ್ದು, ಮಾಲೀಕನ ಜೊತೆ ಮಾತಾಡಿದ್ದು ಮತ್ತು ಹಣ ಪಾವತಿಸಿದ್ದು-ಎಲ್ಲವೂ ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೆಮೆರಾ ಖರೀದಿಯಾಗಿರುವುದು ಪೆಬ್ರುವರಿ 13, 2021 ರಂದು. ಖರೀದಿಗೆ ಸಂಬಂಧಿಸಿದ ಬಿಲ್ ಮತ್ತು ರಶೀದಿಗಳನ್ನು ಎಸ್​ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಈ ಕ್ಯಾಮೆರಾದ ವೈಶಿಷ್ಟ್ಯತೆಯೆಂದರೆ, ಒಂದು ನಿರ್ದಿಷ್ಟ ಜಾಗದಲ್ಲಿ ಅದನ್ನು ಫಿಕ್ಸ್ ಮಾಡಿ ಸುಮಾರು 15-20 ಅಡಿಗಳ ದೂರದಿಂದ ಮತ್ತೊಬ್ಬರು ಅದನ್ನು ಆಪರೇಟ್​ ಮಾಡಬಹುದು. ಕೂತ ಸ್ಥಳದಿಂದ ಝೂಮ್ ಇನ್, ಝೂಮ್ ಔಟ್, ಪ್ಯಾನ್ ಮಾಡುವ ಸೌಲಭ್ಯಗಳನ್ನು ಕ್ಯಾಮೆರಾ ಹೊಂದಿದೆ. ಎಸ್​ಐಟಿ ಅಧಿಕಾರಿಗಳು ಹೇಳುವ ಪ್ರಕಾರ, ಒಂದು ಹೊಸ ಸಿಡಿಯನ್ನು ಮಾಡಲು ಈ ಗ್ಯಾಂಗ್​ನ ಉದ್ದೇಶವಾಗಿತ್ತು. ಅವರ ಮುಂದಿನ ಟಾರ್ಗೆಟ್​ ಯಾರಾಗಿದ್ದರು ಎನ್ನುವುದು ಇನ್ನೂ ಪತ್ತೆಯಾಗಿಲ್ಲ. ಒಬ್ಬ ರಾಜಕಾರಣಿ ಅಥವಾ ಉದ್ಯಮಿಯನ್ನು ಅವರು ಟಾರ್ಗೆಟ್ ಮಾಡಿದ್ದಿರಬಹುದು. ಮಾರ್ಚ್ ಇಲ್ಲವೇ ಏಪ್ರಿಲ್ ತಿಂಗಳಲ್ಲಿ ಅವರು ‘ಚಿತ್ರೀಕರಣ’ ಮಾಡುವ ತಯಾರಿ ನಡೆಸಿದ್ದರು. ಆದರೆ, ಯುವತಿಗೆ ಹೊಸ ‘ಯೋಜನೆ’ ಬಗ್ಗೆ ಮಾಹಿತಿ ಇರಲಿಲ್ಲವೆಂದು ತಿಳಿದುಬಂದಿದೆ.

ಈ ಎಲ್ಲ ಸಂಗತಿಗಳನ್ನು ಗಮನಿಸುತ್ತಿದ್ದರೆ, ಇದೊಂದು ಹನಿ ಟ್ರ್ಯಾಪ್ ಜಾಲ ಎನ್ನುವುದು ವಿದಿತವಾಗುತ್ತದೆ. ಆ ದೃಷ್ಟಿಯಿಂದ ನೋಡಿದರೆ, ರಮೇಶ ಜಾರಕಿಹೊಳಿ ಪ್ರಕರಣದಲ್ಲಿ ಇದುವರೆಗೆ ಸಂತ್ರಸ್ತೆಯೆನಿಸುತ್ತಿದ್ದ ಯುವತಿ ಆರೋಪಿಯಾಗಿ ಕಾಣಿಸಲಾರಂಭಿಸುತ್ತಾಳೆ. ಹಾಗೆಯೇ ಸಚಿವರು ಸಹ, ಯುವತಿ ಮಾಡಿರುವ ಆರೋಪಗಳು ನಿಜವೇ ಆಗಿದ್ದರೆ, ಅರೋಪಿಯಾಗಿ ಕಾಣುತ್ತಾರೆ ಮತ್ತು ಆರೋಪಗಳು ಸುಳ್ಳಾಗಿದ್ದರೆ ಅವರು ಸಹ ಸಂತ್ರಸ್ತ (victim) ಅನಿಸಿಕೊಳ್ಳುತ್ತಾರೆ. ಸದ್ಯಕ್ಕಂತೂ ಎಲ್ಲವೂ ಗೊಂದಲಮಯವಾಗಿದೆ. ಯಾವುದು ಸತ್ಯ, ಯಾರು ಸರಿ, ಯಾರು ಸುಳ್ಳು ಎನ್ನುವುದು ಎಸ್​ಐಟಿ ತನಿಖೆ ಮುಗಿದ ನಂತರವೇ ಜನರಿಗೆ ಗೊತ್ತಾಗಬೇಕು.

(Crime Story CD lady case absconding gang purchased high end camera to make another cd)

ಇದನ್ನೂ ಓದಿ: Ramesh Jarkiholi Corona Positive​: ರಮೇಶ್​ ಜಾರಕಿಹೊಳಿಗೆ ಕೊರೊನಾ ಪಾಸಿಟಿವ್​; ಗೋಕಾಕ್​ ಆರೋಗ್ಯಾಧಿಕಾರಿ ಸ್ಪಷ್ಟನೆ