ಬೇಕರಿ ತಿನಿಸು, ಚಿಪ್ಸ್‌ಗಳಲ್ಲಿ ಕ್ಯಾನ್ಸರ್ ಕಾರಕ ಬಣ್ಣಗಳ ಬಳಕೆ: ಆಹಾರ ಸುರಕ್ಷತಾ ಇಲಾಖೆ ವರದಿಯಲ್ಲಿ ಆಘಾತಕಾರಿ ಸತ್ಯ ಬಯಲು
ಕರ್ನಾಟಕ ರಾಜ್ಯ ಆಹಾರ ಸುರಕ್ಷತಾ ಇಲಾಖೆಯು ನಡೆಸಿದ ತಪಾಸಣೆಯಲ್ಲಿ ಬೇಕರಿ ತಿನಿಸು ಹಾಗೂ ಚಿಪ್ಸ್‌ಗಳ 35,639 ಮಾದರಿಗಳಲ್ಲಿ ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕವಾದ ಕ್ಯಾನ್ಸರ್ ಕಾರಕ ಕೆಮಿಕಲ್ ಬಣ್ಣಗಳನ್ನು ಬಳಸಿರುವುದು ಪತ್ತೆಯಾಗಿದೆ. ಲ್ಯಾಬ್ ರಿಪೋರ್ಟ್‌ನಲ್ಲಿ ಈ ವಿಚಾರ ಪತ್ತೆಯಾದ ಬೆನ್ನಲ್ಲೇ, ಜನರ ಜೀವದ ಜತೆ ಆಟವಾಡುತ್ತಿರುವ ಬೇಕರಿಗಳ ವಿರುದ್ಧ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಬೆಂಗಳೂರು, ಮೇ 27: ಬಣ್ಣ ಬಣ್ಣದ ಸಿಹಿತಿಂಡಿಗಳು, ಬಿಸಿ ಬಿಸಿ ಬೇಕರಿ ಪಫ್ಸ್ ಹಾಗೂ ಕುರುಕುಲು ಚಿಪ್ಸ್‌ಗಳನ್ನು (Bakery Food) ಇಷ್ಟಪಟ್ಟು ತಿನ್ನುವ ಗ್ರಾಹಕರಿಗೆ ಕರ್ನಾಟಕ (Karnataka) ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಇತ್ತೀಚಿನ ವರದಿಯೊಂದು ಭಾರಿ ಆಘಾತ ನೀಡಿದೆ. ರಾಜ್ಯಾದ್ಯಂತ ಮಾರಾಟವಾಗುತ್ತಿರುವ ವಿವಿಧ ಬೇಕರಿ ಉತ್ಪನ್ನಗಳು ಹಾಗೂ ಚಿಪ್ಸ್‌ಗಳು ಮನುಷ್ಯನ ಬಳಕೆಗೆ ಯೋಗ್ಯವಾಗಿಲ್ಲ ಎಂದು ಇಲಾಖೆ ಅಧಿಕೃತವಾಗಿ ಘೋಷಿಸಿದೆ. ಆಕರ್ಷಣೆಗಾಗಿ ಈ ತಿನಿಸುಗಳಲ್ಲಿ ಮಿತಿಮೀರಿ ವಿಷಕಾರಿ ಹಾಗೂ ಕ್ಯಾನ್ಸರ್ ಕಾರಕ ರಾಸಾಯನಿಕ ಬಣ್ಣಗಳನ್ನು (Chemical Colors) ಬಳಸುತ್ತಿರುವುದು ಇಲಾಖೆಯ ಪ್ರಯೋಗಾಲಯದ ಪರೀಕ್ಷೆಯಲ್ಲಿ ದೃಢಪಟ್ಟಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.
ಮುಖ್ಯಾಂಶಗಳು
- ರಾಜ್ಯಾದ್ಯಂತ ಬೇಕರಿ ಹಾಗೂ ಚಿಪ್ಸ್ ತಯಾರಿಕಾ ಕೇಂದ್ರಗಳಿಂದ 35,639 ಆಹಾರದ ಮಾದರಿಗಳನ್ನು ಸಂಗ್ರಹಿಸಿ ತಪಾಸಣೆ.
- ಆಕರ್ಷಕ ಬಣ್ಣಕ್ಕಾಗಿ ಕಾನೂನು ನಿಯಮ ಉಲ್ಲಂಘಿಸಿ ಮಿತಿಮೀರಿದ ಕ್ಯಾನ್ಸರ್ ಕಾರಕ ಕೆಮಿಕಲ್‌ಗಳನ್ನು ಬಳಸಿರುವುದು ಪತ್ತೆ.
- ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಇಂತಹ ತಯಾರಕರ ಪರವಾನಗಿ ರದ್ದುಪಡಿಸಲು ಸಾರ್ವಜನಿಕರ ಆಗ್ರಹ.
ಲ್ಯಾಬ್ ರಿಪೋರ್ಟ್ ಬಿಚ್ಚಿಟ್ಟ ಆಘಾತಕಾರಿ ವಿಚಾರ
ಆಹಾರ ಸುರಕ್ಷತಾ ಅಧಿಕಾರಿಗಳು ರಾಜ್ಯದ ಮೂಲೆ ಮೂಲೆಗಳ ಬೇಕರಿಗಳಿಂದ ಬರೋಬ್ಬರಿ 35,639 ಆಹಾರದ ಮಾದರಿಗಳನ್ನು (Food Samples) ಸಂಗ್ರಹಿಸಿ ರಾಸಾಯನಿಕ ವಿಶ್ಲೇಷಣಾ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದರು. ಪ್ರಸ್ತುತ ಬಂದಿರುವ ಲ್ಯಾಬ್ ವರದಿಯ ಪ್ರಕಾರ, ಬಹುತೇಕ ಬೇಕರಿ ತಿನಿಸುಗಳು ಮತ್ತು ಚಿಪ್ಸ್‌ಗಳಲ್ಲಿ ನಿಷೇಧಿತ ಹಾಗೂ ಮಿತಿಮೀರಿದ ರಾಸಾಯನಿಕ ಬಣ್ಣಗಳನ್ನು ಮಿಶ್ರಣ ಮಾಡಲಾಗುತ್ತಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲಾ ವರ್ಗದ ಜನರಲ್ಲಿ ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳು ಕಾಣಿಸಿಕೊಳ್ಳಲು ಇಂತಹ ಕಲಬೆರಕೆ ಹಾಗೂ ವಿಷಕಾರಿ ಆಹಾರ ಪದ್ಧತಿಯೇ ಮುಖ್ಯ ಕಾರಣ ಎಂದು ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.
ಆಹಾರ ಇಲಾಖೆಯ ಈ ಆಘಾತಕಾರಿ ವರದಿ ಪ್ರಕಟವಾಗುತ್ತಿದ್ದಂತೆಯೇ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ನಿಯಮ ಉಲ್ಲಂಘಿಸಿ ವಿಷಕಾರಿ ರಾಸಾಯನಿಕಗಳನ್ನು ಬಳಸುತ್ತಿರುವ ಇಂತಹ ಬೇಜವಾಬ್ದಾರಿ ತಯಾರಕರ ಮತ್ತು ಬೇಕರಿ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಅಂತಹ ಅಂಗಡಿಗಳನ್ನು ತಕ್ಷಣವೇ ಮುಚ್ಚಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಮತ್ತೆ ತಲೆ ಎತ್ತಿದ ಪ್ಲಾಸ್ಟಿಕ್ ಫುಡ್ ಪೇಪರ್, ಆಹಾರದ ಜೊತೆ ಕ್ಯಾನ್ಸರ್ ಕಾರಕ ಉಚಿತ
ಕಣ್ಣಿಗೆ ಚಂದ ಕಾಣುವ ಬಣ್ಣದ ಆಕರ್ಷಣೆಗೆ ಮರುಳಾಗಿ ಸ್ಲೋ ಪಾಯ್ಸನ್ ಅನ್ನು ಕಾಸು ಕೊಟ್ಟು ಕೊಳ್ಳುವ ಮುನ್ನ, ಅದರಲ್ಲೂ ಮುಖ್ಯವಾಗಿ ಮಕ್ಕಳಿಗೆ ಇಂತಹ ತಿಂಡಿಗಳನ್ನು ಕೊಡುವ ಮುನ್ನ ಪೋಷಕರು ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





