ಬೆಂಗಳೂರಿನಲ್ಲಿ ಆ್ಯಂಟಿ ಸ್ನೇಕ್ ವೀನೋಮ್ ಔಷಧ ಘಟಕ ಸ್ಥಾಪನೆಗೆ ಸರ್ಕಾರ ಚಿತಂನೆ
Anti-Snake Venom Drug Unit: ರಾಜ್ಯದಲ್ಲಿ ಹಾವು ಕಡಿತ ಪ್ರಕರಣಗಳು ಹೆಚ್ಚಾಗುತ್ತಿರುವುದು ಮತ್ತು ಔಷಧ ಕೊರತೆ ಸಮಸ್ಯೆಯ ಬೆನ್ನಲ್ಲೇ ಇದೀಗ ಸರ್ಕಾರ ಹಾವುಗಳ ವಿಷದ ಬಗ್ಗೆ ಐಐಎಸ್ಸಿ ಸಹಯೋಗದೊಂದಿಗೆ ಅಧ್ಯಯನಕ್ಕೆ ಮುಂದಾಗಿದೆ. ಅಧ್ಯಯನ ವರದಿ ಸಿದ್ಧವಾದ ಬಳಿಕ ಬೆಂಗಳೂರಿನಲ್ಲಿ ಆ್ಯಂಟಿ ಸ್ನೇಕ್ ವೀನೋಮ್ ಔಷಧ ಘಟಕ ಸ್ಥಾಪನೆಗೆ ಚಿಂತನೆ ನಡೆಸಿದೆ.
ಬೆಂಗಳೂರು, ಮೇ 15: ಈ ಬಾರಿ ಬೇಸಿಗೆಯಲ್ಲಿನ ಬಿರು ಬಿಸಿಲು ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಸೇರಿದಂತೆ ರಾಜ್ಯದ ಜನರನ್ನ ಕಾಡಿತ್ತು. ಬಿಸಲಿನ ಧಗೆ ತಡೆಯದೆ ಹಾವುಗಳು (Snakes) ಹೆಚ್ಚಾಗಿ ಹೊರಗಡೆ ಬರುತ್ತಿದ್ದುದರಿಂದ ದಾಖಲೆಯ ಪ್ರಮಾಣದಲ್ಲಿ ಹಾವು ಕಚ್ಚಿದ ಪ್ರಕರಣಗಳು ವರದಿಯಾಗಿದ್ದವು. ಮತ್ತೊಂದಡೆ ಹಾವಿನ ಕಡಿತದಿಂದ (Snake bite) ಸಾವಿನ ಸಂಖ್ಯೆ ಕೂಡ ಹೆಚ್ಚಾಗಿತ್ತು ಈ ಬಗ್ಗೆ ‘ಟಿವಿ9’ ನಿರಂತರ ಸುದ್ದಿ ಪ್ರಸಾರ ಬೆನ್ನಲ್ಲೇ ಆರೋಗ್ಯ ಇಲಾಖೆ ಎಚ್ಚೆತ್ತುಗೊಂಡಿದೆ. ರಾಜ್ಯದಲ್ಲಿ ಕಳೆದ ನಾಲ್ಕು ವರ್ಷದಿಂದ ಹಾವು ಕಡಿತ ಹಾಗೂ ಸಾವಿನ ಪ್ರಮಾಣ ಏರಿಕೆಯಾಗುತ್ತಿದೆ. ಆರೋಗ್ಯ ಇಲಾಖೆ ಇದೀಗ ಈ ಬಗ್ಗೆ ತೀವ್ರ ನಿಗಾವಹಿಸಿದೆ. ಐಐಎಸ್ಸಿ ಸಹಯೋಗದೊಂದಿಗೆ ಆರೋಗ್ಯ ಇಲಾಖೆ ಅಧ್ಯಯನಕ್ಕೆ ಮುಂದಾಗಿದ್ದಲ್ಲದೆ, ಬೆಂಗಳೂರಿನಲ್ಲಿ ಆ್ಯಂಟಿ ಸ್ನೇಕ್ ವೀನೋಮ್ ಔಷಧ ಘಟಕ ಸ್ಥಾಪನೆಗೆ ಚಿಂತನೆ ನಡೆಸಿದೆ.
ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ ರಾಜ್ಯದಲ್ಲಿ 2316 ಜನರಿಗೆ ಹಾವು ಕಡಿತವಾಗಿದೆ. 18 ಜನರು ವಿಷಕಾರಿ ಹಾವು ಕಡಿತದಿಂದ ಬಲಿಯಾಗಿದ್ದಾರೆ. ಇನ್ನು ಕಳೆದ ಮೂರು ವರ್ಷಗಳಲ್ಲಿ 13 ಸಾವಿರ ಜನರಿಗೆ ಹಾವು ಕಡಿತವಾಗಿದೆ. ಈ ಪೈಕಿ 46 ಮಂದಿ ಮೃತಪಟ್ಟಿದ್ದಾರೆ. ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಹಾವು ಕಡಿತಕ್ಕೆ ಈಗ ನೀಡುತ್ತಿರುವ ಆ್ಯಂಟಿ ಸ್ನೇಕ್ ವೀನೋಮ್ ಔಷಧಿ ಫಲಕಾರಿಯಾಗುತ್ತಿಲ್ಲ. ವಿವಿಧ ತಳಿಯ ವಿಷಕಾರಿಯಾದ ಹಾವುಗಳ ಕಡಿತಕ್ಕೆ ಈ ಆ್ಯಂಟಿ ಸ್ನೇಕ್ ವೀನೋಮ್ ಔಷಧಿ ಫಲಕಾರಿಯಾಗದೆ ಕೆಲವೊಂದು ಪ್ರಕರಣದಲ್ಲಿ ಜನ ಸಾವಿಗೀಡಾಗುತ್ತಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆ ರಾಜ್ಯದಲ್ಲಿ ಎಲ್ಲ ಹಾವು ತಳಿಗಳ ವಿಷದ ಬಗ್ಗೆ ಹಾಗೂ ಇದಕ್ಕೆ ಆ್ಯಂಟಿ ಸ್ನೇಕ್ ವೀನೋಮ್ ಔಷಧಿ ತಯಾರಿಕೆ ಬಗ್ಗೆ ಐಐಎಸ್ಸಿ ಸಹಯೋಗದೊಂದಿಗೆ ಅಧ್ಯಯನಕ್ಕೆ ಮುಂದಾಗಿದೆ.
ಆ್ಯಂಟಿ ಸ್ನೇಕ್ ವೀನೋಮ್ ಔಷಧಿ ಬಗ್ಗೆ ಐಐಎಸ್ಸಿ ಅಧ್ಯಯನಕ್ಕೆ ಮುಂದಾಗಿದ್ದು, ವರದಿ ಸಿದ್ಧಪಡಿಸಿದ ಬಳಿಕ ಬೆಂಗಳೂರಿನಲ್ಲಿ ಔಷಧ ತಯಾರಿಕಾ ಘಟಕ ಸ್ಥಾಪಿಸಲು ಆರೋಗ್ಯ ಇಲಾಖೆ ಯೋಚನೆ ಮಾಡಿದೆ. ತುರ್ತು ಬೇಡಿಕೆಗೆ ತಕ್ಕಷ್ಟು ಔಷಧ ಲಭ್ಯವಾಗುತ್ತಿಲ್ಲ. ರಾಜ್ಯದಲ್ಲಿಯೂ ಈ ಘಟಕ ತಯಾರಿಕೆ ಮಾಡಬೇಕು ಎಂದು ತಜ್ಞರು ಕೂಡ ಒತ್ತಾಯಿಸಿದ್ದಾರೆ. ಈಗ ಆರೋಗ್ಯ ಇಲಾಖೆ ಈ ಬಗ್ಗೆ ಅಧ್ಯಯನಕ್ಕೆ ಮುಂದಾಗಿದ್ದು ಹೊಸ ಆ್ಯಂಟಿ ಸ್ನೇಕ್ ವೀನೋಮ್ ಔಷಧಿ ಸಿದ್ದಪಡಿಸಲು ಮುಂದಾಗಿದೆ. ಬೆಂಗಳೂರಿನಲ್ಲಿ ಔಷಧ ತಯಾರಿಕಾ ಘಟಕ ಸ್ಥಾಪನೆಯಾದರೆ ಉತ್ತಮ ಎಂದು ವನ್ಯ ಜೀವಿ ಸಂರಕ್ಷಕ ಮೋಹನ್ ಹೇಳಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಹಾವು ಕಡಿತದ ಪ್ರಕರಣಗಳ ವಿವರ
- 2021 – 950 ಕಡಿತ, ಸಾವು – 0
- 2022 – 3439 ಕಡಿತ, ಸಾವು – 17
- 2023 – 6596 ಕಡಿತ, ಸಾವು – 19
- 2024 ಏಪ್ರಿಲ್ ವರೆಗೆ – 2316 ಕಡಿತ , ಸಾವು – 18
ಇದನ್ನೂ ಓದಿ: ಊಟಕ್ಕೂ ಮೊದಲು ಮತ್ತು ನಂತರ ಚಹಾ, ಕಾಫಿ ಕುಡಿಯುವುದು ಒಳ್ಳೆಯದಲ್ಲ!
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ