
ಬೆಂಗಳೂರು, ಜುಲೈ 31: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಬೆಂಗಳೂರು ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿ ಒಟ್ಟು 5.54 ಕೋಟಿ ನೋಂದಾಯಿತ ಮತದಾರರಿದ್ದು, ಇವರ ಪೈಕಿ ಸುಮಾರು ಒಂದು ಕೋಟಿ ಮತದಾರರು ಬೆಂಗಳೂರಿನಲ್ಲಿದ್ದಾರೆ ಎಂದು ಅಂದಾಜಿಸಲಾಗಿದೆ. ಇದೇ ವೇಳೆ, ರಾಜ್ಯದ 84 ಲಕ್ಷ ಮತದಾರರನ್ನು ಎಸ್ಡಿಡಿಒ (ASDDO) ವರ್ಗದಲ್ಲಿ ಗುರುತಿಸಲಾಗಿದ್ದು, ಈ ಹೆಸರುಗಳು ಆಗಸ್ಟ್ 17ರಂದು ಪ್ರಕಟವಾಗಲಿರುವ ಕರಡು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವುದಿಲ್ಲ ಎಂದು ವರದಿಯಾಗಿದೆ.
ASDDO ಎಂದರೆ Absent (ಗೈರಾದವರು), Shifted (ಸ್ಥಳಾಂತರಗೊಂಡವರು), Dead (ಮೃತಪಟ್ಟವರು), Duplicate and Others (ನಕಲಿ ಹೆಸರುಗಳು ಅಥವಾ ಇತರ ಕಾರಣಗಳಿಂದ ಕೈಬಿಟ್ಟವರು) ಆಗಿದ್ದಾರೆ.
ರಾಜ್ಯದ ಒಟ್ಟು 84 ಲಕ್ಷ ಎಸ್ಡಿಡಿಒ ಮತದಾರರ ಪೈಕಿ ಬೆಂಗಳೂರೊಂದರಲ್ಲೇ 36.75 ಲಕ್ಷ ಮತದಾರರು ಇದ್ದಾರೆ. ಇದು ರಾಜ್ಯದ ಒಟ್ಟು ಎಸ್ಡಿಡಿಒ ಸಂಖ್ಯೆಯ ಶೇ 46.7ರಷ್ಟಾಗಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಬೆಂಗಳೂರು ನಗರದಲ್ಲಿ 13.55 ಲಕ್ಷ, ಬೆಂಗಳೂರು ಉತ್ತರದಲ್ಲಿ 9 ಲಕ್ಷ, ಬೆಂಗಳೂರು ಕೇಂದ್ರದಲ್ಲಿ 7.40 ಲಕ್ಷ ಹಾಗೂ ಬೆಂಗಳೂರು ದಕ್ಷಿಣದಲ್ಲಿ 9.35 ಲಕ್ಷ ಮತದಾರರನ್ನು ಎಸ್ಡಿಡಿಒ ಪಟ್ಟಿಯಲ್ಲಿ ಗುರುತಿಸಲಾಗಿದೆ.
ಗೈರುಹಾಜರಾಗಿರುವ ಅಥವಾ ತಪ್ಪಾಗಿ ಸ್ಥಳಾಂತರಗೊಂಡವರು ಎಂದು ಗುರುತಿಸಲ್ಪಟ್ಟಿರುವ ನಿಜವಾದ ಮತದಾರರು ಆಗಸ್ಟ್ 8ರೊಳಗೆ ತಮ್ಮ ಬೂತ್ ಮಟ್ಟದ ಅಧಿಕಾರಿಗಳನ್ನು (BLO) ಸಂಪರ್ಕಿಸಿ ಅಗತ್ಯ ಫಾರಂ ಸಲ್ಲಿಸುವಂತೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಮನವಿ ಮಾಡಿದ್ದಾರೆ. ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟ್‌ಗಳು (BLA) ತಮ್ಮೊಂದಿಗೆ ಹಂಚಿಕೊಳ್ಳಲಾಗಿರುವ ಎಸ್ಡಿಡಿಒ ಪಟ್ಟಿಯನ್ನು ಪ್ರತಿದಿನ ಪರಿಶೀಲಿಸಿ, ಅರ್ಹ ಮತದಾರರ ಹೆಸರುಗಳು ಕೈಬಿಡದಂತೆ ನೋಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ SIR ಪ್ರಕ್ರಿಯೆಯಡಿ ಸಲ್ಲಿಕೆಯಾಗಿರುವ ಫಾರಂಗಳ ಡಿಜಿಟಲೀಕರಣವೂ ನಿಧಾನಗತಿಯಲ್ಲಿ ಸಾಗುತ್ತಿದೆ. ಒಟ್ಟು 16.52 ಲಕ್ಷ ಫಾರಂಗಳು ಇನ್ನೂ ಡಿಜಿಟಲೀಕರಣಕ್ಕೆ ಬಾಕಿ ಇವೆ. ಬೆಂಗಳೂರು ನಗರದಲ್ಲಿ ಶೇ 48.8, ಉತ್ತರದಲ್ಲಿ ಶೇ 46.2, ಕೇಂದ್ರದಲ್ಲಿ ಶೇ 44.6 ಹಾಗೂ ದಕ್ಷಿಣದಲ್ಲಿ ಶೇ 42.6ರಷ್ಟು ಮಾತ್ರ ಫಾರಂಗಳ ಡಿಜಿಟಲೀಕರಣ ಪೂರ್ಣಗೊಂಡಿದೆ ಎಂದು ವರದಿ ತಿಳಿಸಿದೆ.
ಮತದಾರರಿಗೆ ನೆರವಾಗಲು ಬಿಎಲ್ಒ ಹಾಗೂ ಇತರರ ತಂಡಗಳನ್ನು ನಿಯೋಜಿಸಲಾಗಿದೆ. ಬೆಳಗಿನ ಹಾಗೂ ಸಂಜೆ ವೇಳೆಯಲ್ಲಿ ಧ್ವನಿವರ್ಧಕಗಳ ಮೂಲಕ ಜಾಗೃತಿ ಮೂಡಿಸುವುದರ ಜೊತೆಗೆ ಮನೆ ಮನೆಗೆ ತೆರಳಿ ಮತದಾರರನ್ನು ಸಂಪರ್ಕಿಸಲಾಗುತ್ತಿದೆ ಎಂದು ಅನ್ಬುಕುಮಾರ್ ತಿಳಿಸಿದ್ದಾರೆ.
SIR 2002ರ ಮಾಹಿತಿಯೊಂದಿಗೆ ಮ್ಯಾಪ್ ಆಗದಿದ್ದರೂ ಮತದಾರರು ಫಾರಂ ಸಲ್ಲಿಸಬಹುದು. ಈಗಾಗಲೇ ಮ್ಯಾಪ್ ಆಗದ 29 ಲಕ್ಷಕ್ಕೂ ಹೆಚ್ಚು ಮತದಾರರು ಫಾರಂ ಸಲ್ಲಿಸಿದ್ದು, ಇದರಿಂದ ಕರಡು ಪಟ್ಟಿಯಲ್ಲಿ ತಮ್ಮ ಹೆಸರು ಉಳಿಸಿಕೊಳ್ಳಲು ಅವಕಾಶ ಸಿಗುತ್ತದೆ ಎಂದು ಅವರು ಹೇಳಿದ್ದಾರೆ.
2002ರ ಹಳೆಯ ಮತದಾರರ ದಾಖಲೆಗಳನ್ನು ಪತ್ತೆಹಚ್ಚುವಲ್ಲಿ ಎದುರಾಗುತ್ತಿರುವ ಸಮಸ್ಯೆ ಬೆಂಗಳೂರಿನಲ್ಲಿ SIR ಪ್ರಕ್ರಿಯೆ ನಿಧಾನವಾಗಲು ಪ್ರಮುಖ ಕಾರಣವಾಗಿದೆ. 2008ರ ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ವಿಧಾನಸಭಾ ಕ್ಷೇತ್ರಗಳು ಹಾಗೂ ಮತಗಟ್ಟೆಗಳಲ್ಲಿ ಬದಲಾವಣೆಗಳಾಗಿರುವುದರಿಂದ ಹಳೆಯ ದಾಖಲೆಗಳನ್ನು ಪತ್ತೆಹಚ್ಚುವುದು ಕಷ್ಟವಾಗುತ್ತಿದೆ. ಇದರ ಜೊತೆಗೆ ಎಸ್ಐಆರ್ 2002ರ ಮಾಹಿತಿಯನ್ನು ತಾಂತ್ರಿಕವಾಗಿ ಪತ್ತೆಹಚ್ಚುವಲ್ಲಿನ ಸಮಸ್ಯೆಗಳೂ ಬೆಂಗಳೂರಿನಲ್ಲಿ ಎಸ್ಡಿಡಿಒ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ