AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಕರ್ನಾಟಕ ಸಾರಿಗೆ ನೌಕರರ ಮುಷ್ಕರ, ಬಸ್‌‍ ಓಡಾಟ ಇರುತ್ತಾ? ಇಲ್ವಾ?

ಕರ್ನಾಟಕ ಸರ್ಕಾರವು ಕೆಎಸ್‌ಆರ್‌ಟಿಸಿ ಸೇರಿದಂತೆ 4 ಸಾರಿಗೆ ನಿಗಮಗಳ 1.05 ಲಕ್ಷ ನೌಕರರ ವೇತನವನ್ನು ಶೇ.12.5 ರಷ್ಟು ಹೆಚ್ಚಿಸಿ ಆದೇಶಿಸಿದೆ. ಈ ಪರಿಷ್ಕರಣೆಯು ಏಪ್ರಿಲ್ 1, 2025 ರಿಂದ ಅನ್ವಯವಾಗಲಿದ್ದು, ಜುಲೈನಿಂದ ನೌಕರರ ಕೈಸೇರಲಿದೆ. ಇದರಿಂದ ವಾರ್ಷಿಕ 873.64 ಕೋಟಿ ರೂ. ಹೆಚ್ಚುವರಿ ವೆಚ್ಚವಾಗಲಿದೆ. ಅಲ್ಲದೆ, ಹಿಂದಿನ ವೇತನ ಪರಿಷ್ಕರಣೆಯ ಹಿಂಬಾಕಿಯ ಮೊದಲ ಕಂತಾದ 450 ಕೋಟಿ ರೂ.ಗಳನ್ನು ಈಗಾಗಲೇ ನೌಕರರ ಖಾತೆಗೆ ಜಮೆ ಮಾಡಲಾಗಿದೆ. ಆದ್ರೆ, ಇದಕ್ಕೆ ಸಾರಿಗೆ ಸಿಬ್ಬಂದಿ ವಿರೋಧ ವ್ಯಕ್ತಪಡಿಸಿದ್ದು, ಇನ್ನಷ್ಟು ವೇತನ ಹೆಚ್ಚಳಕ್ಕೆ ಆಗ್ರಹಿಸಿ ಮೇ 20ರಂದು ಮುಷ್ಕರಕ್ಕೆ ಕರೆ ನೀಡಿದ್ದಾರೆ.

ಮತ್ತೆ ಕರ್ನಾಟಕ ಸಾರಿಗೆ ನೌಕರರ ಮುಷ್ಕರ, ಬಸ್‌‍ ಓಡಾಟ ಇರುತ್ತಾ? ಇಲ್ವಾ?
KSRTC Bus
ಕಿರಣ್​ ಸೂರ್ಯ
| Edited By: |

Updated on: May 13, 2026 | 6:11 PM

Share

ಬೆಂಗಳೂರು, (ಮೇ 13): ಕರ್ನಾಟಕ ಸರ್ಕಾರವು ಕೆಎಸ್‌ಆರ್‌ಟಿಸಿ (KSRTC) ಸೇರಿದಂತೆ 4 ಸಾರಿಗೆ ನಿಗಮಗಳ 1.05 ಲಕ್ಷ ನೌಕರರ ವೇತನವನ್ನು ಶೇ.12.5 ರಷ್ಟು ಹೆಚ್ಚಿಸಿ ಆದೇಶಿಸಿದೆ. ಆದ್ರೆ, ಇದಕ್ಕೆ ಸಾರಿಗೆ ಸಿಬ್ಬಂದಿ (transport employees) ಮಾತ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಶೇಕಡಾ 25ರಷ್ಟು ವೇತನ ಹೆಚ್ಚಳಕ್ಕೆ ಬೇಡಿಕೆ ಇಡಲಾಗಿತ್ತು. ಆದ್ರೆ, ರಾಜ್ಯ ಸರ್ಕಾರ ಅರ್ಧ ಅಂದರೆ ಶೇ.12.5 ರಷ್ಟು ವೇತನ ಹೆಚ್ಚಳ ಮಾಡಿದೆ. ಇದರಿಂದ ಸಾರಿಗೆ ಸಿಬ್ಬಂದಿ ಗರಂ ಆಗಿದ್ದಾರೆ. ಈ ಬಗ್ಗೆ ಬೆಂಗಳೂರಿನ ಶೇಷಾದ್ರಿಪುರಂನ ಎಐಟಿಯುಸಿ ಕಚೇರಿಯಲ್ಲಿಂದು ಸಭೆ ಮಾಡಿದ್ದು, ಕೇವಲ ಶೇ.12.5 ರಷ್ಟು ವೇತನ ಹೆಚ್ಚಳವನ್ನು ತಿರಸ್ಕರಿಸಲಾಗಿದೆ. ಅಲ್ಲದೇ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯು ಇದೇ ಮೇ 20ರಂದು ಮುಷ್ಕರಕ್ಕೆ ಕರೆ ನೀಡಿದೆ. ಹೀಗಾಗಿ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಗಳಿವೆ.

  • ಕೇವಲ 12.5% ವೇತನ ಹೆಚ್ಚಿಸಿದ್ದಕ್ಕೆ ಸರ್ಕಾರದ ವಿರುದ್ಧ ಸಾರಿಗೆ ನೌಕರರು ಗರಂ
  • ಶೇಕಡಾ 25ರಷ್ಟು ವೇತನ ಹೆಚ್ಚಳಕ್ಕೆ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಒತ್ತಾಯ
  • ಇದೇ ಮೇ 20ರಂದು ಮತ್ತೆ ಮುಷ್ಕರಕ್ಕೆ ಕರೆ ನೀಡಿದ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾರಿಗೆ ನೌಕರರ ಮುಖಂಡ ವಿಜಯ್ ಭಾಸ್ಕರ್, ಕೇವಲ ಶೇ.12.50ರಷ್ಟು ವೇತನ ಹೆಚ್ಚಿಸಿ ಆದೇಶ ಮಾಡಿದ್ದಾರೆ. ಸರ್ಕಾರ ನಮ್ಮ ಜೊತೆ ಚರ್ಚಿಸದೆ ಏಕಾಏಕಿ ಆದೇಶ ಹೊರಡಿಸಿದೆ. ಶೇಕಡಾ 25ರಷ್ಟು ವೇತನ ಹೆಚ್ಚಳಕ್ಕೆ ನಮ್ಮ ಡಿಮ್ಯಾಂಡ್ ಇದೆ. ಕಳೆದ ಬಾರಿ ಶೇಕಡಾ 15ರಷ್ಟು ವೇತನ ಹೆಚ್ಚಳ ಮಾಡಿದ್ದರು. ಇದೀಗ ಕಳೆದ ಬಾರಿಗಿಂತ ಕಡಿಮೆ ವೇತನ ಹೆಚ್ಚಳ ಮಾಡಿದ್ದಾರೆ. ಹಾಗಾಗಿ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಮೇ 20ರಂದು ಮುಷ್ಕರಕ್ಕೆ ಕರೆ ನೀಡಿದ್ದು, ಅಂದು ಸಾರಿಗೆ ನೌಕರರು ಕೆಲಸಕ್ಕೆ ಹಾಜರಾಗುವುದಿಲ್ಲ. ಸಾರ್ವಜನಿಕರು ನಮಗೆ ಸಹಕಾರ ಕೊಡಬೇಕು ಎಂದಿದ್ದಾರೆ.

ಇದನ್ನೂ ಓದಿ: ಸಾರಿಗೆ ನೌಕರರಿಗೆ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ: ಕೊನೆಗೂ ವೇತನ ಹೆಚ್ಚಳ

ಈ ಬಾರಿ ಯಾವುದಕ್ಕೂ ಹೆದರಲ್ಲ

ಈಗಾಗಲೇ ಎರಡು ಸಮಾವೇಶ ಮಾಡಿದ್ದೇವೆ. ಉತ್ತಮ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ಸಾರಿಗೆ ನೌಕರರಲ್ಲಿ ಒಮ್ಮತ ಇದ್ದು, ನಿನ್ನೆ ಆದೇಶದ ಬಳಿಕ ಆಕ್ರೋಶ ಹೆಚ್ಚಾಗಿದೆ. 2024 ರಿಂದ ಸಂಬಳ ವಿಚಾರವಾಗಿ ಯಾವುದೇ ರಾಜೀ‌ ಇಲ್ಲ. ಸರ್ಕಾರ ನಮ್ಮ ಜೊತೆ ಚರ್ಚೆ ಬಿಟ್ಟು ಏಕಾಏಕಿ ಆದೇಶ ಹೊರಡಿಸಿದ್ದಾರೆ. ಮುಷ್ಕರ ನಿಲ್ಲಿಸಲ್ಲ ಮಾಡೇ ಮಾಡುತ್ತೇವೆ. ಎಸ್ಮಾ ಜಾರಿ ಮಾಡಿದರೂ ಈ ಬಾರಿ ಕೇರ್​ ಮಾಡುವುದಿಲ್ಲ. ಅಲ್ಲದೇ ಹೈಕೋರ್ಟ್​ಗೆ PIL ಬಂದರೂ ಆದೇಶ ಪಾಲಿಸಲು ಆಗಲ್ಲ. ನಮ್ಮನ್ನು ಸಸ್ಪೆಂಡ್ ಮಾಡಿದ್ರೂ ಒಪ್ಪಲ್ಲ. ಸರ್ಕಾರಿ ಬಸ್ ಬದಲಿಗೆ ಖಾಸಗಿ ಬಸ್‌ ಓಡಿಸಿದ್ರೆ ಯಶಸ್ವಿ ಆಗಲ್ಲ. ಸರ್ಕಾರಿ ಬಸ್​ ಮೇಲೆ ರಾಜ್ಯದ ಪ್ರಯಾಣಿಕರು ನಂಬಿಕೆ ಇಟ್ಟಿದ್ದಾರೆ ಎಂದು ಹೇಳಿದರು.

ಶೇ.12.50ರಷ್ಟು ವೇತನ ಹೆಚ್ಚಳ ಒಪ್ಪುವುದಿಲ್ಲ

ಇನ್ನು ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯ ಸಂಚಾಲಕ ದೇವರಾಜ್ ಅರಸು ಮಾತನಾಡಿ, ಕೇವಲ ಶೇಕಡಾ 12.50ರಷ್ಟು ವೇತನ ಹೆಚ್ಚಳವನ್ನು ಒಪ್ಪುವುದಿಲ್ಲ. 2024ರ ಜ.1ರಿಂದ ಜಾರಿಗೆ ಬರುವಂತೆ ವೇತನ ಹೆಚ್ಚಳ ಮಾಡಬೇಕು. 38 ತಿಂಗಳ ವೇತನ ಹಿಂಬಾಕಿ ಸಹ ನೀಡಬೇಕು. ಆದ್ರೆ 26 ತಿಂಗಳ ವೇತನ ಹಿಂಬಾಕಿ ನೀಡಲು ಆದೇಶ ಹೊರಡಿಸಿದ್ದರು. ಏಕಪಕ್ಷೀಯವಾಗಿ ರಾಜ್ಯ ಸರ್ಕಾರ ವೇತನವನ್ನು ಹೆಚ್ಚಳ ಮಾಡಿದೆ. 2025ರ ಏ.1ರಿಂದ ಅನ್ವಯ ಆಗುವಂತೆ ವೇತನ ಪರಿಷ್ಕರಣೆ ಒಪ್ಪಲ್ಲ. ಮೇ 20ರಂದು ಸಾರಿಗೆ ಮುಷ್ಕರ ನಡೆಯಲಿದೆ. ಈಗಾಗಲೇ ಸಾರಿಗೆ ಮುಷ್ಕರಕ್ಕೆ ನೋಟಿಸ್ ನೀಡಿದ್ದೇವೆ. 4 ಸಾರಿಗೆ ನಿಗಮದ ಸಿಬ್ಬಂದಿ ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Kiran Surya
Kiran Surya

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More