ಸ್ನೇಹಿತನ ಮನೆಯಲ್ಲೇ ರಾಬರಿ ಮಾಡಿಸಿ ಸಿಕ್ಕಿಬಿದ್ದ ಮೇಸ್ತ್ರಿ: ದರೋಡೆ ವೇಳೆಯೂ ಮಾನವೀಯತೆ ತೋರಿದ್ದ ಆರೋಪಿಗಳು!
ಬೆಂಗಳೂರಿನ ಚಿಕ್ಕಜಾಲದಲ್ಲಿ ಕಿರಿಕ್ ಮಾಡಿದ ಸ್ನೇಹಿತನ ಮನೆಯಲ್ಲೇ ಇಬ್ಬರು ಕಾರ್ಮಿಕರಿಂದ 12 ಲಕ್ಷ ನಗದು, ಚಿನ್ನ ದರೋಡೆ ಮಾಡಿಸಿದ್ದ ಮೇಸ್ತ್ರಿ ಹಾಗೂ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಸಂತ್ರಸ್ತ ಸ್ನೇಹಿತ ಮನೆಯ ಕಟ್ಟಡ ಕಾಮಗಾರಿ ಮಾಡುತ್ತಿದ್ದ. ಈ ವೇಳೆ ಅವರ ಕುಟುಂಬದ ಕಿರಿ ಕಿರಿಗೆ ರೋಸಿ ಹೋಗಿದ್ದ ಎಂಬುದು ಕೂಡ ತನಿಖೆ ವೇಳೆ ಗೊತ್ತಾಗಿದೆ.

ಬೆಂಗಳೂರು, ಮೇ 22: ಗೆಳೆಯನ ಮನೆಯಲ್ಲಿ ರಾಬರಿ ಮಾಡಿಸಿದ್ದ ಮೇಸ್ತ್ರಿಯೋರ್ವ ಬೆಂಗಳೂರಲ್ಲಿ (Bengaluru) ಪೊಲೀಸರ ಅತಿಥಿಯಾಗಿದ್ದಾನೆ. ಚಿಕ್ಕಜಾಲದ ಹುಣಸಮಾರನಹಳ್ಳಿಯಲ್ಲಿ ಘಟನೆ ನಡೆದಿದ್ದು, ಗುರುಪ್ರಸಾದ್ ಬಂಧಿತ ಆರೋಪಿ. ತನ್ನ ಬಳಿ ಕೆಲಸ ಮಾಡಿಕೊಂಡಿದ್ದ ಇಬ್ಬರಿಗೆ ರಾಬರಿ ಟ್ರೇನಿಂಗ್ ನೀಡಿದ್ದ ಈತ, ಸ್ನೇಹಿತ ಸುದರ್ಶನ್ ಎಂಬಾತನ ಮನೆಗೆ ಅವರನ್ನು ಕಳುಹಿಸಿ ದರೋಡೆ ಮಾಡಿಸಿದ್ದ. ಏಪ್ರಿಲ್ 18ರಂದು ಮನೆಗೆ ನುಗ್ಗಿದ್ದ ದರೋಡೆಕೋರರು, ಚಾಕು ತೋರಿಸಿ ಹಣ ಮತ್ತು ಬಂಗಾರ ದೋಚಿ ಎಸ್ಕೇಪ್ ಆಗಿದ್ದರು.
ಪ್ರಕರಣ ಏನು?
ಆರೋಪಿ ಗುರುಪ್ರಸಾದ್ ಮತ್ತು ಸುದರ್ಶನ್ ಸ್ನೇಹಿತರು. ಈ ನಡುವೆ ಸುದರ್ಶನ್ ಮತ್ತು ಆತನ ತಂದೆ ಕೃಷ್ಣಚಾರಿ ಮನೆ ಕಟ್ಟಿಸಲು ನಿರ್ಧರಿಸಿದ್ದು, ಅದರ ಕೆಲಸವನ್ನು ಮೇಸ್ತ್ರಿಯಾಗಿರುವ ಗುರುಪ್ರಸಾದ್ಗೆ ನೀಡಲು ನಿರ್ಧರಿಸಿದ್ದರು. ಗುರುಪ್ರಸಾದ್ ಕೂಡ ಸ್ನೇಹಿತ ಅಂತಾ ಕಡಿಮೆ ಹಣಕ್ಕೆ ಒಪ್ಪಿಕೊಂಡು ಕೆಲಸ ಮಾಡಿಸುತ್ತಿದ್ದ. ಆದರೆ ಪ್ರತಿದಿನ ಕೆಲಸದ ಸ್ಥಳಕ್ಕೆ ಬರುತ್ತಿದ್ದ ತಂದೆ, ಮಗ ಕಿರಿಕ್ ಮಾಡುತ್ತಿದ್ದರು. ಇದು ಸರಿ ಇಲ್ಲ, ಅದನ್ನ ಸರಿಯಾಗಿ ಕಟ್ಟಿಲ್ಲ ಎಂದು ಮೇಲಿಂದ ಮೇಲೆ ಕ್ಯಾತೆ ತೆಗೆಯುತ್ತಿದ್ದರು. ಸಾಲದ್ದಕ್ಕೆ ಪೂರ್ತಿ ಹಣ ಕೊಡೋದಿಲ್ಲ ಎಂತಲೂ ಕಿರಿಕ್ ಮಾಡುತ್ತಿದ್ದರು.ಇದರಿಂದ ಆರೋಪಿ ಗುರುಪ್ರಸಾದ್ ಮಾನಸಿಕವಾಗಿ ನೊಂದು ಹೋಗಿದ್ದ ಎನ್ನಲಾಗಿದೆ.
ಇದನ್ನೂ ಓದಿ: ಫ್ರೀಯಾಗಿ ನೆಟ್ಫ್ಲಿಕ್ಸ್ ಪಡೆಯಲು ಹೋಗಿ 1 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ; ಆಗಿದ್ದೇನು?
ಹೀಗಾಗಿಯೇ ತನ್ನ ಬಳಿಯೇ ಕೆಲಸ ಮಾಡ್ತಿದ್ದ ಅರ್ಬಾಜ್ ಮತ್ತೆ ಜಿಬ್ರಾನ್ಗೆ ರಾಬರಿ ಟ್ರೇನಿಂಗ್ ನೀಡಿದ್ದ ಈತ, ಸ್ನೇಹಿತ ಸುದರ್ಸನ್ ಮನೆಗೆ ಅವರನ್ನು ಕಳುಹಿಸಿ ದರೋಡೆ ಮಾಡಿಸಿದ್ದ. 79 ಗ್ರಾಂ ಚಿನ್ನ, 64 ಗ್ರಾಂ ಬೆಳ್ಳಿ, 12 ಲಕ್ಷ ನಗದನ್ನು ಆರೋಪಿಗಳು ಈ ವೇಳೆ ದೋಚಿದ್ದರು. ಆ ಬಳಿಕ ಎರಡು ತಂಗಳು ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಚಿಕ್ಕಜಾಲ ಪೊಲೀಸರು ನಿರಂತರವಾಗಿ ಹುಡುಕಾಡಿದ್ದರು. ಅಂತಿಮವಾಗಿ ಪ್ರಕರಣ ಸಂಬಂಧ ಆರೋಪಿಗಳಾದ ಗುರುಪ್ರಸಾದ್, ಅರ್ಬಾಜ್ ಮತ್ತು ಜಿಬ್ರಾನ್ನನ್ನು ಬಂಧಿಸಲಾಗಿದೆ. ಆರೋಪಿಗಳಿಂದ 12 ಲಕ್ಷ ನಗದು, 24 ಲಕ್ಷ ಮೌಲ್ಯದ ಆಭರಣ ವಶಕ್ಕೆ ಪಡೆಯಲಾಗಿದೆ. ಅಲ್ಲದೆ ದ್ವಿಚಕ್ರ ವಾಹನ ಮತ್ತು ಕಾರು ಸೇರಿ 2 ಮೊಬೈಲ್ಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ದರೋಡೆ ವೇಳೆಯೂ ಮಾನವೀಯತೆ!
ರಾಬರಿ ವೇಳೆ ಚಾಕು ತೋರಿಸಿ ಕಪಾಟಿನ ಕೀ ಕೇಳಿದ್ದ ಆರೋಪಿಗಳು, ಅದರಲ್ಲಿದ್ದ 12 ಲಕ್ಷ ಹಣವನ್ನು ಬ್ಯಾಗ್ನಲ್ಲಿ ತುಂಬಿಕೊಂಡಿದ್ದರು. ಈ ವೇಳೆ ಸಂತ್ರಸ್ತ ಕೃಷ್ಣಾಚಾರಿ ಇವರ ಬಳಿ ಎಲ್ಲಾ ದುಡ್ಡು ನೀವೇ ತೆಗೆದುಕೊಂಡು ಹೋಗುತ್ತಿದ್ದೀರಿ. ನಮ್ಮ ಜೀವನಕ್ಕೆ ಏನು ಮಾಡೋದು ಎಂದು ಅಲವತ್ತುಕೊಂಡಿದ್ದರು. ಅವರ ಈ ಮನವಿಗೆ ಕರಗಿದ್ದ ಆರೋಪಿಗಳು ಬ್ಯಾಗಲ್ಲಿ ತುಂಬಿಸಿದ್ದ ಹಣದ ಪೈಕಿ 50 ಸಾವಿರ ರೂ. ನೀಡಿ, ಇದರಿಂದ ಬದುಕು ನಡೆಸಿ ಎಂದಿದ್ದರು. ಜೊತೆಗೆ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದರೆ ಕೊಲೆ ಮಾಡುವ ಬೆದರಿಕೆ ಕೂಡ ಹಾಕಿದ್ದರು ಎಂಬುದು ಗೊತ್ತಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
