ತಾವರೆಕೆರೆ ಮೆಟ್ರೋ ನಿಲ್ದಾಣಕ್ಕೆ ‘ಬಿಸ್ಮಿಲ್ಲಾ ನಗರ’ ಎಂದು ಹೆಸರಿಡಿ: ಸ್ಥಳೀಯ ಮುಸ್ಲಿಂ ನಿವಾಸಿಗಳಿಂದ BMRCLಗೆ ಮನವಿ

ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಮೂರು ಮೆಟ್ರೋ ನಿಲ್ದಾಣಗಳ ಹೆಸರು ಬದಲಾವಣೆ ಮಾಡುವಂತೆ ಬಿಎಂಆರ್​​ಸಿಎಲ್​ ಎಂಡಿಗೆ ಶಾಸಕ ರಾಮಲಿಂಗರೆಡ್ಡಿ ಪತ್ರ ಬರೆದಿದ್ದಾರೆ. ಈ ಬೆನ್ನಲ್ಲೇ ಇದೀಗ ಬಿಸ್ಮಿಲ್ಲಾ ನಗರದ ಮುಸ್ಲಿಂ ನಿವಾಸಿಗಳು ತಾವರೆಕೆರೆ ಮೆಟ್ರೋ ನಿಲ್ದಾಣಕ್ಕೆ ಬಿಸ್ಮಿಲ್ಲಾ ನಗರ ಎಂದು ಹೆಸರಿಡುವಂತೆ ಎಂಡಿಗೆ ಮನವಿ ಮಾಡಿದ್ದಾರೆ.

ತಾವರೆಕೆರೆ ಮೆಟ್ರೋ ನಿಲ್ದಾಣಕ್ಕೆ ‘ಬಿಸ್ಮಿಲ್ಲಾ ನಗರ’ ಎಂದು ಹೆಸರಿಡಿ: ಸ್ಥಳೀಯ ಮುಸ್ಲಿಂ ನಿವಾಸಿಗಳಿಂದ  BMRCLಗೆ ಮನವಿ
ಬಿಸ್ಮಿಲ್ಲಾ ನಗರ ಮುಸ್ಲಿಂ ನಿವಾಸಿಗಳಿಂದ BMRCL ಗೆ ಮನವಿ
Image Credit source: tv9 kannada
Edited By:

Updated on: Sep 14, 2026 | 5:19 PM

ಬೆಂಗಳೂರು, ಸೆಪ್ಟೆಂಬರ್​​ 14: ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಪಿಂಕ್ ಲೈನ್​​ ಮೆಟ್ರೋ ಮಾರ್ಗ ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ. ಹೀಗಾಗಿ ಅದೇ ಮಾರ್ಗದ ತಾವರೆಕೆರೆ ಮೆಟ್ರೋ ನಿಲ್ದಾಣದ ಹೆಸರನ್ನು ‘ತಾವರೆಕೆರೆ ಬಿಸ್ಮಿಲ್ಲಾ ನಗರ’ ಎಂದು ಮರುನಾಮಕರಣ ಮಾಡುವಂತೆ ಸ್ಥಳೀಯ ಮುಸ್ಲಿಂ ನಿವಾಸಿಗಳು ಒತ್ತಾಯಿಸಿದ್ದಾರೆ. ತಾವರೆಕೆರೆ ಮೆಟ್ರೋ ನಿಲ್ದಾಣದ ಸುತ್ತಮುತ್ತ ಮುಸ್ಲಿಂ ಸಮುದಾಯದವರ ಸಂಖ್ಯೆ ಹೆಚ್ಚಿರುವ ಕಾರಣ ಈ ಹೆಸರು ಇಡಬೇಕೆಂದು ಕೋರಿ ಬಿಎಂಆರ್‌ಸಿಎಲ್​ ವ್ಯವಸ್ಥಾಪಕ ನಿರ್ದೇಶಕ ಪಿಸಿ ಜಾಫರ್ ಅವರಿಗೆ ಪತ್ರದ ಮೂಲಕ ಮನವಿ ಮಾಡಲಾಗಿದೆ.

ಪತ್ರದಲ್ಲಿ ಏನಿದೆ?

ಬೆಂಗಳೂರು ಯೂತ್ ವೆಲ್ವೇರ್ ಟ್ರಸ್ಟ್ ವತಿಯಿಂದ ಇತ್ತೀಚೆಗೆ ತಾವರೆಕೆರೆ ಮೆಟ್ರೋ ನಿಲ್ದಾಣದ ಹೆಸರನ್ನು ‘ತಾವರೆಕೆರೆ ಬಿಸ್ಮಿಲ್ಲಾ ನಗರ ಮೆಟ್ರೋ ನಿಲ್ದಾಣ’ ಎಂದು ಮರುನಾಮಕರಣ ಮಾಡುವಂತೆ ಮನವಿ ಸಲ್ಲಿಸಲಾಗಿತ್ತು. ಪ್ರಸ್ತುತ ತಾವರೆಕೆರೆ ಎಂಬ ಸ್ಥಳವು ಮೆಟ್ರೋ ನಿಲ್ದಾಣದಿಂದ ಸುಮಾರು 2.5 ಕಿ.ಮೀ. ದೂರದಲ್ಲಿದೆ. ಆದರೆ ಬಿಸ್ಮಿಲ್ಲಾ ನಗರವು ಮೆಟ್ರೋ ನಿಲ್ದಾಣದ ಅತ್ಯಂತ ಸಮೀಪದಲ್ಲಿರುವ ಪ್ರಮುಖ ಜನವಸತಿ ಪ್ರದೇಶವಾಗಿದೆ. ಈ ಭಾಗದ ಸಾವಿರಾರು ಸಾರ್ವಜನಿಕರು ಪ್ರತಿನಿತ್ಯ ಮೆಟ್ರೋ ನಿಲ್ದಾಣವನ್ನು ಬಳಸುತ್ತಿದ್ದಾರೆ.

ಇದನ್ನೂ ಓದಿ: ಬಿಟಿಎಂ ಲೇಔಟ್​​ ವ್ಯಾಪ್ತಿಯ 3 ಮೆಟ್ರೋ ನಿಲ್ದಾಣಗಳಿಗೆ ಸ್ಥಳೀಯ ಹೆಸರುಗಳನ್ನೇ ಇಡಿ: ಬಿಎಂಆರ್‌ಸಿಎಲ್​​ಗೆ ರಾಮಲಿಂಗಾ ರೆಡ್ಡಿ ಪತ್ರ

ಮೆಟ್ರೋ ನಿಲ್ದಾಣದ ಹೆಸರಿನಲ್ಲಿ ‘ಬಿಸ್ಮಿಲ್ಲಾ ನಗರ’ ಎಂಬ ಹೆಸರನ್ನು ಸೇರಿಸುವುದರಿಂದ ಸ್ಥಳೀಯ ನಿವಾಸಿಗಳು, ಪ್ರಯಾಣಿಕರು ಹಾಗೂ ಬೆಂಗಳೂರಿಗೆ ಆಗಮಿಸುವ ಸಾರ್ವಜನಿಕರಿಗೆ ಸ್ಥಳವನ್ನು ಸುಲಭವಾಗಿ ಗುರುತಿಸಲು ಅನುಕೂಲವಾಗುತ್ತದೆ. ಈ ವಿಷಯವು ಯಾವುದೇ ಒಂದು ಸಮುದಾಯಕ್ಕೆ ಮಾತ್ರ ಸಂಬಂಧಿಸಿದ ಬೇಡಿಕೆಯಲ್ಲ. ಇದು ಸ್ಥಳದ ಸರಿಯಾದ ಗುರುತಿಸುವಿಕೆ, ಸಾರ್ವಜನಿಕ ಅನುಕೂಲ ಮತ್ತು ಸ್ಥಳೀಯ ಜನರ ಅಭಿಪ್ರಾಯಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತದೃಷ್ಟಿಯಿಂದ ಮನವಿ ಮಾಡಲಾಗಿದೆ.

ನಮ್ಮ ಹಿಂದಿನ ಮನವಿಯನ್ನು ಮತ್ತೊಮ್ಮೆ ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ ನಡೆಸಬೇಕು. ಸ್ಥಳೀಯ ನಿವಾಸಿಗಳ ಅಭಿಪ್ರಾಯ ಹಾಗೂ ಸಹಿ ಸಂಗ್ರಹವನ್ನು ಪರಿಗಣಿಸಬೇಕು. ಈ ಕುರಿತು ಸೂಕ್ತ ವರದಿ ಪಡೆದು, ನಿಯಮಾನುಸಾರ ನಿಲ್ದಾಣದ ಹೆಸರನ್ನು ‘ತಾವರೆಕೆರೆ ಬಿಸ್ಮಿಲ್ಲಾ ನಗರ’ ಎಂದು ಪರಿಗಣಿಸುವಂತೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಮೂರು ನಿಲ್ದಾಣಗಳ ಹೆಸರು ಬದಲಾವಣೆಗೆ ಸಚಿವ ರಾಮಲಿಂಗಾರೆಡ್ಡಿ ಪತ್ರ

ಇನ್ನು ಇತ್ತೀಚೆಗೆ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮೂರು ಮೆಟ್ರೋ ಸ್ಟೇಷನ್‌ಗಳ ಹೆಸರನ್ನು ಬದಲಾವಣೆ ಮಾಡುವಂತೆ ಶಾಸಕ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಈಗಾಗಲೇ ಬಿಎಂಆರ್‌ಸಿಎಲ್ ಎಂಡಿ ಪಿಸಿ ಜಾಫರ್​ಗೆ ಪತ್ರ ಬರೆದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:17 pm, Mon, 14 September 26

Loading...
Unable to load recommendations.
Follow Us