ನಾಡಗೀತೆ ದಾಟಿ ಮತ್ತು ಅವಧಿ ನಿಗದಿ ವಿವಾದ: ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್ ನಕಾರ
ನಾಡಗೀತೆ ದಾಟಿ ಮತ್ತು ಅವಧಿ ನಿಗದಿ ಕುರಿತು ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ನ್ಯಾ. ಬಿ.ವಿ. ನಾಗರತ್ನ ನೇತೃತ್ವದ ಪೀಠವು, ನಾಡಗೀತೆಯಲ್ಲಿ ಏಕರೂಪತೆ ಇರಬೇಕು, ಸಮಯ ಮತ್ತು ರಾಗದ ಬಗ್ಗೆ ಸರ್ಕಾರದ ತೀರ್ಮಾನವೇ ಅಂತಿಮ ಎಂದು ಹೈಕೋರ್ಟ್ ಹೇಳಿದ್ದನ್ನು ಎತ್ತಿಹಿಡಿದಿದೆ. ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅರ್ಜಿ ವಜಾಗೊಳಿಸಿದೆ.

ಬೆಂಗಳೂರು, ಆಗಸ್ಟ್ 27: ನಾಡಗೀತೆ (Nadageethe) ದಾಟಿ ಮತ್ತು ಅವಧಿ ನಿಗದಿ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ್ದ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್ (Supreme Court) ನಿರಾಕರಿಸಿದೆ. ನಾಡಗೀತೆ ದಾಟಿಯಲ್ಲಿ ಏಕರೂಪತೆ ಕಾಯ್ದುಕೊಳ್ಳುವುದು ಅತ್ಯಗತ್ಯ ಎಂದು ಅಭಿಪ್ರಾಯಪಟ್ಟಿರುವ ಸರ್ವೋಚ್ಚ ನ್ಯಾಯಾಲಯ, ಸರ್ಕಾರದ ತೀರ್ಮಾನವನ್ನು ಎತ್ತಿಹಿಡಿದಿರುವ ಹೈಕೋರ್ಟ್ ಆದೇಶವನ್ನು ಪುರಸ್ಕರಿಸಿದೆ.
ರಾಗ ಮತ್ತು ಕಾಲಮಿತಿಯಲ್ಲಿ ಏಕರೂಪತೆ ಮುಖ್ಯ ಎಂದ ಪೀಠ
ಈ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಹಾಗೂ ನ್ಯಾಯಮೂರ್ತಿ ಆರ್. ಮಹಾದೇವನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು, ‘ರಾಜ್ಯದ ನಾಡಗೀತೆಯನ್ನು ಹಾಡುವಾಗ ರಾಗ ಮತ್ತು ಸಮಯದ ಅವಧಿ ಎರಡರಲ್ಲೂ ಕಡ್ಡಾಯವಾಗಿ ಏಕರೂಪತೆ ಇರಬೇಕು’ ಎಂದು ಅಭಿಪ್ರಾಯಪಟ್ಟಿದೆ.
ಅರ್ಜಿ ವಜಾಗೊಳಿಸಿದ ಸುಪ್ರೀಂ
‘ಇನ್ನು ಹೈಕೋರ್ಟ್ ನೀಡಿರುವ ಆದೇಶದಲ್ಲಿ ನಾವು ಮಧ್ಯಪ್ರವೇಶಿಸಲು ಯಾವುದೇ ಸೂಕ್ತ ಕಾರಣಗಳಿಲ್ಲ’ ಎಂದು ಹೇಳುವ ಮೂಲಕ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ. ಆ ಮೂಲಕ ನಾಡಗೀತೆ ಗಾಯನದ ದಾಟಿ ಮತ್ತು ಅವಧಿಯ ಗೊಂದಲಗಳಿಗೆ ಸುಪ್ರೀಂಕೋರ್ಟ್‌ನಲ್ಲೂ ತೆರೆ ಬಿದ್ದಂತಾಗಿದೆ.
ಪ್ರಕರಣ ಹಿನ್ನೆಲೆ
ನಾಡಗೀತೆಯನ್ನು ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿದ ದಾಟಿಯಲ್ಲಿ, 2 ಗಂಟೆ 30 ನಿಮಿಷಗಳ ಅವಧಿಯಲ್ಲಿ ಹಾಡಬೇಕು ಎಂದು 2022ರ ಸೆಪ್ಟೆಂಬರ್ 25ರಂದು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿತ್ತು. ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಖ್ಯಾತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅವರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಆದರೆ ‘ರಾಗವನ್ನು ತಜ್ಞರೇ ಸಂಯೋಜಿಸಿದ್ದು, ಸರ್ಕಾರ ರಾಗ ನಿಗದಿಪಡಿಸುವುದರಿಂದ ಯಾರ ಹಕ್ಕುಗಳಿಗೂ ಚ್ಯುತಿಯಾಗುವುದಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು.
ಇದನ್ನೂ ಓದಿ: ಒಂದಕ್ಷರವನ್ನೂ ಬಿಡದಂತೆ ನಾಡಗೀತೆ ಹಾಡಲು ಸಮ್ಮತಿ: 2 ನಿಮಿಷ 30 ಸೆಕೆಂಡ್ನಲ್ಲಿ ಹಾಡಲು ಸರ್ಕಾರ ಒಪ್ಪಿಗೆ
ಇದನ್ನು ಪ್ರಶ್ನಿಸಿ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ‘ನಾಡಗೀತೆಯ ರಾಗ ಹಾಗೂ ಅವಧಿಯ ವಿಚಾರದಲ್ಲಿ ಸರ್ಕಾರ ನಿರ್ದೇಶನ ನೀಡುವಂತಿಲ್ಲ’ ಎಂಬುದು ಅರ್ಜಿದಾರರ ಪರವಾಗಿ ಹಿರಿಯ ವಕೀಲ ವಿ. ಕಟಾರ್ಕಿ ಅವರ ವಾದವಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




