AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಮೆಟ್ರೋದಲ್ಲಿ 3 ವರ್ಷದಲ್ಲಿ 21 ಬಾರಿ ಯಡವಟ್ಟು: ಬಿಎಂಆರ್‌ಸಿಎಲ್ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಗರಂ, ತನಿಖೆಗೆ ಪತ್ರ

‘ನಮ್ಮ ಮೆಟ್ರೋ’ ಸೇವೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಬರೊಬ್ಬರಿ 21 ಬಾರಿ ತಾಂತ್ರಿಕ ದೋಷಗಳು ಸಂಭವಿಸಿದ್ದು, ಪ್ರಯಾಣಿಕರಲ್ಲಿ ಭಾರಿ ಆತಂಕ ಮೂಡಿಸಿದೆ. ಈ ಕುರಿತು ಸಮಗ್ರ ಸುರಕ್ಷತಾ ಆಡಿಟ್ ನಡೆಸುವಂತೆ ಕೋರಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ರೈಲ್ವೆ ಸುರಕ್ಷತಾ ಕಮಿಷನರ್ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರಿಗೆ ಪತ್ರ ಬರೆದಿದ್ದಾರೆ. ಬಿಎಂಆರ್‌ಸಿಎಲ್‌ಗೆ 5 ನೇರ ಪ್ರಶ್ನೆಗಳನ್ನು ಕೇಳಿದ್ದಾರೆ.

ನಮ್ಮ ಮೆಟ್ರೋದಲ್ಲಿ 3 ವರ್ಷದಲ್ಲಿ 21 ಬಾರಿ ಯಡವಟ್ಟು: ಬಿಎಂಆರ್‌ಸಿಎಲ್ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಗರಂ, ತನಿಖೆಗೆ ಪತ್ರ
ನಮ್ಮ ಮೆಟ್ರೋ ರೈಲು ಹಾಗೂ ಸಂಸದ ತೇಜಸ್ವಿ ಸೂರ್ಯImage Credit source: tv9
ಗಣಪತಿ ಶರ್ಮಾ
|

Updated on:Jun 26, 2026 | 12:29 PM

Share

ಮುಖ್ಯಾಂಶಗಳು

  • ಮೂರು ವರ್ಷದಲ್ಲಿ 21 ಬಾರಿ ಎಡವಟ್ಟು
  • ಬಿಎಂಆರ್‌ಸಿಎಲ್‌ಗೆ ಸಂಸದರಿಂದ 5 ಪ್ರಶ್ನೆಗಳು
  • ನೇರಳೆ ಮಾರ್ಗದಲ್ಲೇ ಅತಿ ಹೆಚ್ಚು ದೋಷ

ಬೆಂಗಳೂರು, ಜೂನ್ 26: ಯಾವುದೇ ಟ್ರಾಫಿಕ್ ಕಿರಿಕಿರಿ ಇಲ್ಲದೆ ನೆಮ್ಮದಿಯಾಗಿ ಸಂಚರಿಸಬಹುದು ಎಂದು ನಂಬಿರುವ ಬೆಂಗಳೂರಿನ ಕೋಟ್ಯಂತರ ಪ್ರಯಾಣಿಕರ ಜೀವನಾಡಿ ನಮ್ಮ ಮೆಟ್ರೋ (Namma Metro) ಇತ್ತೀಚಿನ ದಿನಗಳಲ್ಲಿ ಸರಣಿ ತಾಂತ್ರಿಕ ದೋಷಗಳಿಂದಾಗಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ರೈಲ್ವೆ ಹಳಿ, ಸಿಗ್ನಲಿಂಗ್ ಸಮಸ್ಯೆ, ವಿದ್ಯುತ್ ವ್ಯತ್ಯಯ ಹಾಗೂ ಸ್ಮಾರ್ಟ್ ಕಾರ್ಡ್ ಸರ್ವರ್ ವೈಫಲ್ಯ ಸೇರಿದಂತೆ 2024 ರಿಂದ 2026 ರ ಜೂನ್ 26 ರವರೆಗಿನ ಕೇವಲ ಮೂರು ವರ್ಷಗಳ ಅವಧಿಯಲ್ಲಿ ನಮ್ಮ ಮೆಟ್ರೋದಲ್ಲಿ ಬರೋಬ್ಬರಿ 21 ಬಾರಿ ತಾಂತ್ರಿಕ ಅಡಚಣೆಗಳು ವರದಿಯಾಗಿವೆ. ಅದರಲ್ಲೂ ವಿಶೇಷವಾಗಿ ಕಚೇರಿ ಅವಧಿಯಲ್ಲೇ (Peak Hours) ಈ ಯಡವಟ್ಟುಗಳು ಮರುಕಳಿಸುತ್ತಿರುವುದು ಪ್ರಯಾಣಿಕರನ್ನು ಪರದಾಡುವಂತೆ ಮಾಡಿದೆ. ಅಲ್ಲದೆ, ಬಿಎಂಆರ್​​ಸಿಎಲ್ (BMRCL) ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ.

ಈ ನಿರಂತರ ವೈಫಲ್ಯಗಳ ವಿರುದ್ಧ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಸಾಮಾಜಿಕ ಜಾಲತಾಣ ಎಕ್ಸ್ (X) ಮೂಲಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರೈಲ್ವೆ ಸುರಕ್ಷತಾ ಕಮಿಷನರ್ ಮತ್ತು ಸಚಿವರಿಗೆ ತೇಜಸ್ವಿ ಸೂರ್ಯ ಪತ್ರ

ಮೆಟ್ರೋ ರೈಲುಗಳು ನಿರಂತರ ಕೈಕೊಡುತ್ತಿರುವ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಸಂಸದ ತೇಜಸ್ವಿ ಸೂರ್ಯ, ಕೇಂದ್ರ ಸರ್ಕಾರದ ರೈಲ್ವೆ ಕಮೀಷನರ್ ಆಫ್ ಸೇಫ್ಟಿ (ದಕ್ಷಿಣ ವಲಯ) ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರಿಗೆ ಅಧಿಕೃತ ಪತ್ರ ಬರೆದಿದ್ದಾರೆ.

ತೇಜಸ್ವಿ ಸೂರ್ಯ ಪತ್ರದಲ್ಲೇನಿದೆ?

ಜೂನ್ 23, 2026 ರಂದು ಕರೆಂಟ್ ಕಲೆಕ್ಟರ್ ಡಿವೈಸ್ (CCD) ದೋಷದಿಂದ ಇಡೀ ನಗರದ ಸಂಚಾರ ವ್ಯವಸ್ಥೆ ಸ್ತಬ್ಧಗೊಂಡಿದ್ದನ್ನು ಪತ್ರದಲ್ಲಿ ಅವರು ನೆನಪಿಸಿದ್ದಾರೆ. ಬಿಎಂಆರ್‌ಸಿಎಲ್ ಪ್ರಯಾಣಿಕರಿಂದ ದೇಶದಲ್ಲೇ ಅತ್ಯಧಿಕ ಪ್ರಮಾಣದ ದರ ವಸೂಲಿ ಮಾಡುತ್ತದೆ, ಆದರೂ ಇಷ್ಟೊಂದು ಭಾರಿ ಪ್ರಮಾಣದಲ್ಲಿ ತಾಂತ್ರಿಕ ದೋಷಗಳು ಬೇರೆಲ್ಲೂ ಕಂಡುಬರುವುದಿಲ್ಲ ಎಂದು ಉಲ್ಲೇಖಿಸಿ ಕಿಡಿಕಾರಿದ್ದಾರೆ. ಬಿಎಂಆರ್‌ಸಿಎಲ್ ಆಡಳಿತ ಮಂಡಳಿಯು ಸಾರ್ವಜನಿಕರಿಗೆ ಉತ್ತರದಾಯಿಯಾಗಬೇಕಿದೆ ಎಂದಿರುವ ತೇಜಸ್ವಿ ಸೂರ್ಯ, 5 ಪ್ರಮುಖ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.

ತೇಜಸ್ವಿ ಸೂರ್ಯ ಕೇಳಿದ 5 ಪ್ರಶ್ನೆಗಳು

  1. ಥರ್ಡ್ ರೈಲ್ (Third Rail) ಮೂಲಸೌಕರ್ಯದ ಘಟಕಗಳ ತಪಾಸಣೆಯ ನಿಗದಿತ ಅವಧಿ ಎಷ್ಟು?
  2. ತೊಂದರೆಗೊಳಗಾದ ಮಾರ್ಗದ ಕೊನೆಯ ತಪಾಸಣೆ ಯಾವಾಗ ನಡೆದಿತ್ತು ಮತ್ತು ಅದರ ವರದಿ ಏನಾಗಿತ್ತು?
  3. ಈ ತಪಾಸಣೆಯನ್ನು ಬಿಎಂಆರ್‌ಸಿಎಲ್ ಸಿಬ್ಬಂದಿ ಮಾಡಿದ್ದಾರೋ ಅಥವಾ ಥರ್ಡ್ ಪಾರ್ಟಿ ಏಜೆನ್ಸಿಗೆ ವಹಿಸಲಾಗಿತ್ತೇ?
  4. ಕಳೆದ 12 ತಿಂಗಳ ತಪಾಸಣಾ ವರದಿ ಹಾಗೂ ಆಡಿಟ್ ದಾಖಲೆಗಳನ್ನು ಸಾರ್ವಜನಿಕರ ಅವಗಾಹನೆಗೆ ಮುಕ್ತವಾಗಿ ಇಡುತ್ತೀರಾ?
  5. ಈ ಸರಣಿ ದೋಷಗಳ ಮೂಲ ಕಾರಣದ ತನಿಖೆ (Root Cause Analysis) ಮುಗಿದಿದೆಯೇ? ಆ ವರದಿಯನ್ನು ಬಹಿರಂಗಪಡಿಸಿ.

ತೇಜಸ್ವಿ ಸೂರ್ಯ ಎಕ್ಸ್ ಸಂದೇಶ

ಕಳೆದ 3 ವರ್ಷಗಳಲ್ಲಿ ಮೆಟ್ರೋ ತಾಂತ್ರಿಕ ಸಮಸ್ಯೆಗಳ ಇತಿಹಾಸ

  • 2024ರ ಪ್ರಮುಖ ಘಟನೆಗಳು: ಜನವರಿ 27 ರಂದು ಎಂಜಿ ರೋಡ್ ನಿಲ್ದಾಣದಲ್ಲಿ ತಾಂತ್ರಿಕ ದೋಷ, ಫೆಬ್ರವರಿ 20 ರಂದು ಮೆಜೆಸ್ಟಿಕ್‌ನಿಂದ ಬೈಯಪ್ಪನಹಳ್ಳಿವರೆಗೆ ರೈಲು ಸ್ಥಗಿತ, ಮಾರ್ಚ್ 27 ರಂದು ಇಡೀ ನೇರಳೆ ಮಾರ್ಗದಲ್ಲಿ ಸಿಗ್ನಲ್ ವೈಫಲ್ಯ, ಜುಲೈ 30 ರಂದು ಹಸಿರು ಮಾರ್ಗದಲ್ಲಿ ವಿದ್ಯುತ್ ವ್ಯತ್ಯಯ.
  • 2025ರ ಪ್ರಮುಖ ಘಟನೆಗಳು: ಮಾರ್ಚ್ 3 ರಂದು ಅತ್ತಿಗುಪ್ಪೆ ನಿಲ್ದಾಣದ ಸಮಸ್ಯೆ, ಏಪ್ರಿಲ್ 8 ರಂದು ಸ್ಮಾರ್ಟ್ ಕಾರ್ಡ್ ರೀಚಾರ್ಜ್ ಸಮಸ್ಯೆ, ಜೂನ್ 16 ರಂದು ಇಡೀ ದಿನ ರೈಲು ವೇಳಾಪಟ್ಟಿಯಲ್ಲಿ ಬದಲಾವಣೆ, ಸೆಪ್ಟೆಂಬರ್ ಮತ್ತು ಅಕ್ಟೋಬರ್ ಅವಧಿಯಲ್ಲಿ ಹೊಸದಾಗಿ ಆರಂಭವಾದ ಹಳದಿ ಮಾರ್ಗದಲ್ಲೇ 3 ಬಾರಿ ತಾಂತ್ರಿಕ ದೋಷ, ನವೆಂಬರ್‌ನಲ್ಲಿ ಟಿಕೆಟಿಂಗ್ ಕೌಂಟರ್ ಸರ್ವರ್ ಸ್ಥಗಿತ.
  • 2026ರ ಇತ್ತೀಚಿನ ಘಟನೆಗಳು: ಜನವರಿ 15 ರಂದು ಹಳದಿ ಮಾರ್ಗದಲ್ಲಿ ಚಾಲಕರಹಿತ ಮೆಟ್ರೋ ಹಳಿತಪ್ಪಿತ್ತು. ಫೆಬ್ರವರಿ 10 ರಂದು ಆರ್‌ವಿ ರಸ್ತೆ ನಿಲ್ದಾಣದಲ್ಲಿ ದೋಷ, ಮೇ 4 ರಂದು ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ಪವರ್ ಕಟ್. ಇನ್ನು ಜೂನ್ ತಿಂಗಳೊಂದರಲ್ಲೇ ಜೂನ್ 12 ರಂದು ಕಾರ್ಡ್ ರೀಚಾರ್ಜ್ ಸಮಸ್ಯೆ, ಜೂನ್ 21 ರಂದು ನಾಗಾಸಂದ್ರ ನಿಲ್ದಾಣದ ನಾಮಫಲಕದಲ್ಲಿ ಬೆಂಕಿ ಅವಘಡ, ಜೂನ್ 23 ರಂದು ಕಬ್ಬನ್ ಪಾರ್ಕ್ ದೋಷ ಮತ್ತು ಜೂನ್ 26 ರಂದು ಕಬ್ಬನ್ ಪಾರ್ಕ್ ನಿಲ್ದಾಣದಲ್ಲೇ ಬಾಗಿಲು ಮುಚ್ಚದ ಸಮಸ್ಯೆ ಕಂಡುಬಂದಿದೆ.

ಕಳೆದ ಮೂರು ವರ್ಷಗಳಲ್ಲಿ ಅತಿ ಹೆಚ್ಚು ಅಂದರೆ 11 ಬಾರಿ ನೇರಳೆ ಮಾರ್ಗವೊಂದರಲ್ಲೇ ತಾಂತ್ರಿಕ ದೋಷಗಳು ವರದಿಯಾಗಿವೆ. ಬೆಂಗಳೂರಿನ ನಿವಾಸಿಗಳು ಮತ್ತು ಪ್ರಯಾಣಿಕರು ಸುರಕ್ಷಿತ, ನಂಬಿಕಸ್ಥ ಹಾಗೂ ಪಾರದರ್ಶಕ ಮೆಟ್ರೋ ವ್ಯವಸ್ಥೆಯನ್ನು ಹೊಂದಲು ಅರ್ಹರಾಗಿದ್ದು, ಬಿಎಂಆರ್‌ಸಿಎಲ್ ತಕ್ಷಣವೇ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:16 pm, Fri, 26 June 26

Follow Us