ತಂದೆ ನೆನಪಿಗಿದ್ದ ಅದೊಂದು ವಸ್ತು ಕಳ್ಳತನ: ಪೊಲೀಸ್ ಠಾಣೆ ಮೆಟ್ಟಿಲೇರಿದ ಮಗಳು
ಮೃತ ರೋಗಿಯ 2 ಲಕ್ಷ ರೂ ಮೌಲ್ಯದ ರಾಡೋ ವಾಚ್ ಕಳತನವಾಗಿರುವಂತಹ ಘಟನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ತಂದೆ ನೆನಪಿಗಿದ್ದ ಬೆಲೆಬಾಳುವ ರಾಡೋ ವಾಚ್ ಕಳ್ಳತನವೆಂದು ಮಗಳು ದೂರು ನೀಡಿದ್ದು, ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ನಡೆಸಿದ್ದಾರೆ.

ಬೆಂಗಳೂರು, ಮೇ 22: ಸಿಲಿಕಾನ್ ಸಿಟಿಯ (bangaluru) ಖಾಸಗಿ ಆಸ್ಪತ್ರೆಯೊಂದರಲ್ಲಿ ಮನುಷ್ಯತ್ವವೇ ಮರೆತು ನಡೆದುಕೊಂಡ ಘಟನೆಯೊಂದು ಬೆಳಕಿಗೆ ಬಂದಿದೆ. ತೀವ್ರ ಅನಾರೋಗ್ಯದಿಂದ ಚಿಕಿತ್ಸೆಗೆ ದಾಖಲಾಗಿ ಕೊನೆಯುಸಿರೆಳೆದ ವೃದ್ಧರೊಬ್ಬರ 2 ಲಕ್ಷ ರೂ ಮೌಲ್ಯದ ರಾಡೋ ವಾಚ್ (rado watch) ಆಸ್ಪತ್ರೆಯಲ್ಲೇ ಕಳ್ಳತನವಾಗಿದೆ. ಈ ಸಂಬಂಧ ಬೆಂಗಳೂರಿನ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಸದ್ಯ ಎಫ್‌ಐಆರ್ ದಾಖಲಾಗಿದೆ.
ಮುಖ್ಯಾಂಶಗಳು
- ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯ ದುಬಾರ ವಾಚ್ಗೆ ಕನ್ನ
- ಪೊಲೀಸ್ ಠಾಣೆ ಮೆಟ್ಟಿಲೇರಿದ ಮಗಳು
- ಬೆಂಗಳೂರಿನ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ FIR
ನಡೆದಿದ್ದೇನು?
ತೀವ್ರ ಅನಾರೋಗ್ಯದ ಕಾರಣದಿಂದಾಗಿ ರಾಮಯ್ಯ ಎಂಬುವವರು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ರಾಮಯ್ಯ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದರು. ದುರದೃಷ್ಟವಶಾತ್, ಅವರು ಮೃತಪಡುವ ಮುನ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಸಮಯದಲ್ಲಿ ಅವರ ದೇಹದ ಮೇಲಿದ್ದ ಶರ್ಟ್ ಹಾಗೂ ಅವರು ಧರಿಸಿದ್ದ 2 ಲಕ್ಷ ರೂ ಮೌಲ್ಯದ ದುಬಾರಿ ರಾಡೋ ವಾಚ್ ನಿಗೂಢವಾಗಿ ಕಳ್ಳತನವಾಗಿದೆ.
ಸರಿಯಾಗಿ ಉತ್ತರ ನೀಡದ ಆಸ್ಪತ್ರೆ ಸಿಬ್ಬಂದಿ: ಸಿಸಿಟಿವಿ ವಿಡಿಯೋ ಡಿಲೀಟ್
ಇನ್ನು ತಂದೆಯ ಸಾವಿನ ಬಳಿಕ ಮಗಳು ಬೆಲೆಬಾಳುವ ವಾಚ್ ಬಗ್ಗೆ ಆಸ್ಪತ್ರೆಯ ಸಿಬ್ಬಂದಿ ಬಳಿ ವಿಚಾರಿಸಿದಾಗ, ಅವರು ಸರಿಯಾಗಿ ಉತ್ತರ ನೀಡದೆ ಉಡಾಫೆಯಿಂದ ವರ್ತಿಸಿದ್ದಾರೆ. ಅಷ್ಟೇ ಅಲ್ಲದೆ, ಕಳ್ಳತನದ ಸತ್ಯಾಸತ್ಯತೆ ತಿಳಿಯಲು ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವುದಾಗಿ ಹೇಳಿದರೆ ವಿಡಿಯೋ ಡಿಲೀಟ್ ಆಗಿದೆ ಎಂದು ಬೇಜವಾಬ್ದಾರಿ ಉತ್ತರ ನೀಡಿ ಸಿಬ್ಬಂದಿ ಕೈತೊಳೆದುಕೊಂಡಿದ್ದಾರೆ. ಆಸ್ಪತ್ರೆ ಸಿಬ್ಬಂದಿಯ ಈ ವರ್ತನೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಇದನ್ನೂ ಓದಿ: ಸ್ನೇಹಿತನ ಮನೆಯಲ್ಲೇ ರಾಬರಿ ಮಾಡಿಸಿ ಸಿಕ್ಕಿಬಿದ್ದ ಮೇಸ್ತ್ರಿ: ದರೋಡೆ ವೇಳೆಯೂ ಮಾನವೀಯತೆ ತೋರಿದ್ದ ಆರೋಪಿಗಳು!
ಇನ್ನು ಕಳ್ಳತನವಾಗಿರುವ ರಾಡೋ ವಾಚ್ ಕೇವಲ ದುಬಾರಿ ವಸ್ತು ಅಲ್ಲದೇ ಮೃತ ತಂದೆಯ ನೆನಪಿಗೋಸ್ಕರವಿದ್ದ ಒಂದೇ ಒಂದು ವಸ್ತು. ಹೀಗಾಗಿ ಬೇಸತ್ತ ರಾಮಯ್ಯ ಅವರ ಪುತ್ರಿ, ತಂದೆಯ ವಾಚ್ ಕಳುವಾಗಿರುವ ಕುರಿತು ಗೋವಿಂದರಾಜನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅವರ ದೂರಿನನ್ವಯ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




