ನಾಳೆ ಬೆಂಗಳೂರಲ್ಲಿ RCB, CSK ಮ್ಯಾಚ್: ಅಭಿಮಾನಿಗಳಿಗೆ ಪೊಲೀಸ್ ಆಯುಕ್ತರಿಂದ ಮಹತ್ವದ ಸೂಚನೆ
ಬೆಂಗಳೂರಿನಲ್ಲಿ ನಾಳೆ ನಡೆಯಲಿರುವ RCB ಮತ್ತು CSK ಪಂದ್ಯಕ್ಕೆ ಸಂಬಂಧಿಸಿ ಬೆಂಗಳೂರು ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅಭಿಮಾನಿಗಳಿಗೆ ಕೆಲವು ಸೂಚನೆ ನೀಡಿದ್ದಾರೆ. ಇದನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನೂ ನೀಡಲಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಪಂದ್ಯದ ಹಿನ್ನೆಲೆ ಅಭಿಮಾನಿಗಳ ಅನುಕೂಲಕ್ಕಾಗಿ ಮೆಟ್ರೋ ಸಂಚಾರ ಸಮಯವನ್ನು ವಿಸ್ತರಿಸಿರೋದಾಗಿ ಈಗಾಗಲೇ ಬಿಎಂಆರ್ಸಿಎಲ್ ತಿಳಿಸಿದೆ.

ಬೆಂಗಳೂರು, ಏಪ್ರಿಲ್ 04: ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿರುವ ಐಪಿಎಲ್ ಕ್ರಿಕೆಟ್ ಪಂದ್ಯಕ್ಕೆ ಸಂಬಂಧಿಸಿ ಬೆಂಗಳೂರು ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅಭಿಮಾನಿಗಳಿಗೆ ಮಹತ್ವದ ಸೂಚನೆ ನೀಡಿದ್ದಾರೆ. ಐಪಿಎಲ್ ಟಿಕೆಟ್ ಇಲ್ಲದವರು ಕ್ರೀಡಾಂಗಣದ ಬಳಿಗೆ ಬರುವುದು ಬೇಡ. ಒಂದೊಮ್ಮೆ ಅದಾಗಿಯೂ ಬಂದಲ್ಲಿ, ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂಬ ಖಡಕ್ ಎಚ್ಚರಿಕೆಯನ್ನು ರವಾನಿಸಿದ್ದಾರೆ. ಈ ಹಿಂದೆ ಮಾರ್ಚ್ 28ರಂದು ಬೆಂಗಳೂರಿನಲ್ಲಿ ಮೊದಲ ಐಪಿಎಲ್ ಪಂದ್ಯ ನಡೆದ ವೇಳೆ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಅದೇ ರೀತಿ ನಾಳಿನ ಮ್ಯಾಚ್ ವೇಳೆಯೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಹಲವು ನಿರ್ಧಾರಗಳನ್ನ ಕೈಗೊಂಡಿರೋದಾಗಿ ಅವರು ತಿಳಿಸಿದ್ದಾರೆ.
ಕಳೆದ ಮ್ಯಾಚ್ ಸಂದರ್ಭ ಆಗಮನ ಮತ್ತು ನಿರ್ಗಮನ ಸೇರಿ ಸುಮಾರು 32 ಸಾವಿರ ಜನ ನಮ್ಮ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಸಿದ್ದರು. ಹೀಗಾಗಿ ನಾಳಿನ ಪಂದ್ಯಕ್ಕೂ ಆಗಮಿಸಲಿರುವ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೆಟ್ರೋ ಮತ್ತು ಬಿಎಂಟಿಸಿ ಬಸ್ಗಳನ್ನೇ ಬಳಸಿ ಎಂದು ಕೇಳಿಕೊಳ್ಳೋದಾಗಿ ಅವರು ಹೇಳಿದ್ದಾರೆ. ಕಳೆದ ಪಂದ್ಯದ ವೇಳೆ ಹಲವರ ಮೊಬೈಲ್‌ಫೋನ್ ಕಳ್ಳತನ ಆಗಿತ್ತು. ಆ ಸಂಬಂಧ ಸುಮಾರು ಜನರು ದೂರು ನೀಡಿದ್ದು, 71 ಮೊಬೈಲ್ ವಶಕ್ಕೆ ಪಡೆಯಲಾಗಿತ್ತು. ಕೃತ್ಯ ಎಸಗಿರೋದು ಹೊರ ರಾಜ್ಯದಿಂದ ಬಂದವರು. ಹೀಗಾಗಿ ಸಾರ್ವಜನಿಕರು ತಮ್ಮ ಮೊಬೈಲ್ ಸೇರಿದಂತೆ ಇನ್ನಿತರ ವಸ್ತುಗಳ ಬಗ್ಗೆ ಮ್ಯಾಚ್ ವೇಳೆ ಗಮನವಹಿಸಿ ಎಂದೂ ಸೀಮಾಂತ್ ಕುಮಾರ್ ಸಿಂಗ್ ಸೂಚಿಸಿದ್ದಾರೆ.
ಇದನ್ನೂ ಓದಿ: ಅತ್ತ ಗ್ಯಾಸ್ಗಾಗಿ ಆಟೋ ಚಾಲಕರ ಪರದಾಟ; ಇತ್ತ ಐಪಿಎಲ್ ಟಿಕೆಟ್ಗಾಗಿ ಕ್ಯೂನಿಂತ ಶಾಸಕರ ಪಿಎಗಳು
ಮೆಟ್ರೋ ಸಂಚಾರ ಸಮಯ ವಿಸ್ತರಣೆ
ನಾಳೆ ನಡೆಯಲಿರುವ ಐಪಿಎಲ್ ಪಂದ್ಯದ ಪ್ರಯುಕ್ತ ನಮ್ಮ ಮೆಟ್ರೋ ರೈಲುಗಳ ಸಂಚಾರ ಸಮಯ ವಿಸ್ತರಣೆ ಮಾಡಿರುವ ಬಗ್ಗೆ ಈಗಾಗಲೇ ಬಿಎಂಆರ್ಸಿಎಲ್ ಪ್ರಕಟಣೆ ಮೂಲಕ ತಿಳಿಸಿದೆ. ಅಭಿಮಾನಿಗಳಿಗೆ ಸುಲಭ ಹಾಗೂ ಸುರಕ್ಷಿತ ಪ್ರಯಾಣಕ್ಕೆ ಅನುಕೂಲವಾಗುವಂತೆ ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ಮೆಟ್ರೋ ಸೇವೆಯನ್ನು ರಾತ್ರಿ 11 ಗಂಟೆಯಿಂದ ಮುಂದಿನ ದಿನದ ಮುಂಜಾನೆ 2 ಗಂಟೆಯವರೆಗೆ ವಿಸ್ತರಿಸಲಾಗಿದೆ. ವೈಟ್‌ಫೀಲ್ಡ್ (ಕಾಡುಗೋಡಿ)ಯಿಂದ ರಾತ್ರಿ 12.30ಕ್ಕೆ, ಚೆಲ್ಲಘಟ್ಟದಿಂದ ರಾತ್ರಿ 12.45ಕ್ಕೆ, ರೇಷ್ಮೆ ಸಂಸ್ಥೆ ಮತ್ತು ಮಾದಾವರದಿಂದ ರಾತ್ರಿ 12.45ಕ್ಕೆ, ಬೊಮ್ಮಸಂದ್ರದಿಂದ ರಾತ್ರಿ 12.30ಕ್ಕೆ ಹಾಗೂ ಆರ್.ವಿ. ರಸ್ತೆಯಿಂದ ರಾತ್ರಿ 2.00ಕ್ಕೆ ಹಾಗೂ ನಾಡಪ್ರಭು ಕೆಂಪೇಗೌಡ ನಿಲ್ದಾಣ-ಮಜೆಸ್ಟಿಕ್ನಿಂದ ನಾಲ್ಕು ದಿಕ್ಕುಗಳಿಗೆ ಮಧ್ಯರಾತ್ರಿ 01:30ಕ್ಕೆ ಕೊನೆಯ ರೈಲು ಹೊರಡಲಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:59 pm, Sat, 4 April 26



