ಕರ್ನಾಟಕದಾದ್ಯಂತ ವಿಶೇಷ ಕಾರ್ಯಾಚರಣೆ: ಬರೋಬ್ಬರಿ 800 ಮಂದಿ ಬಾಲ ಕಾರ್ಮಿಕರ ರಕ್ಷಣೆ
ಕರ್ನಾಟಕ ಪೊಲೀಸರು ರಾಜ್ಯಾದ್ಯಂತ ನಡೆಸಿದ ಬೃಹತ್ ಕಾರ್ಯಾಚರಣೆಯಲ್ಲಿ 16,951 ಕೇಂದ್ರಗಳ ಮೇಲೆ ದಾಳಿ ನಡೆಸಿ 800 ಮಂದಿ ಬಾಲಕಾರ್ಮಿಕರನ್ನು ರಕ್ಷಿಸಿದ್ದು, ಇದರಲ್ಲಿ ಬೆಂಗಳೂರು ಒಂದರಲ್ಲೇ 503 ಮಕ್ಕಳನ್ನು ರಕ್ಷಿಸಲಾಗಿದೆ. ಇನ್ನು ರಕ್ಷಣೆ ಮಾಡಲಾದ ಮಕ್ಕಳನ್ನು ಕಳುಹಿಸಿ ಎಂದು ಬೆಂಗಳೂರಿನ ಡೈರಿ ಸರ್ಕಲ್ ಬಳಿಯಿರುವ ಬಾಲ ಮಂದಿರದ ಎದುರು ಪೋಷಕರ ಪಟ್ಟು ಹಿಡಿದ ಪ್ರಸಂಗವೂ ನಡೆದಿದೆ.

ಬೆಂಗಳೂರು, ಸೆಪ್ಟೆಂಬರ್ 13: ಕರ್ನಾಟಕದಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿರುವ ಪೊಲೀಸರು 598 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬರೋಬ್ಬರಿ 800 ಮಂದಿ ಬಾಲ ಕಾರ್ಮಿಕರ ರಕ್ಷಣೆ ಮಾಡಿದ್ದಾರೆ. ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡಿರುವ ಖಚಿತ ಮಾಹಿತಿಯ ಆಧಾರದಲ್ಲಿ 16,951 ಸ್ಥಳಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಅದರಲ್ಲಿ ಬೆಂಗಳೂರು ಒಂದರಲ್ಲೇ 503 ಮಕ್ಕಳ ರಕ್ಷಣೆ ಮಾಡಲಾಗಿದೆ.
ರಾಜ್ಯದ ಎಲ್ಲೆಲ್ಲಿ ಬಾಲ ಕಾರ್ಮಿಕರ ರಕ್ಷಣೆ?
| ಜಿಲ್ಲೆ | ಪರಿಶೀಲಿಸಲಾದ ಸ್ಥಳಗಳು | ರಕ್ಷಣೆ ಮಾಡಲಾಗಿರುವ ಮಕ್ಕಳು |
| ಬೆಂಗಳೂರು | 5897 | 503 |
| ವಿಜಯಪುರ | 1156 | 72 |
| ತುಮಕೂರು | 660 | 33 |
| ಕಲಬುರಗಿ | 427 | 22 |
| ಕೊಪ್ಪಳ | 95 | 27 |
| ಚಿಕ್ಕಬಳ್ಳಾಪುರ | 247 | 16 |
| ಬಳ್ಳಾರಿ | 147 | 15 |
| ಮೈಸೂರು | 648 | 13 |
| ಚಿತ್ರದುರ್ಗ | 147 | 13 |
| ಬೆಳಗಾವಿ | 908 | 14 |
| ಹುಬ್ಬಳ್ಳಿ-ಧಾರವಾಡ | 242 | 10 |
| ಬೆಂಗಳೂರು ಗ್ರಾಮಾಂತರ | 450 | 9 |
| ಬಾಗಲಕೋಟೆ | 247 | 8 |
| ದಕ್ಷಿಣ ಕನ್ನಡ | 552 | 5 |
| ಕೋಲಾರ | 377 | 3 |
| ಬೆಂಗಳೂರು ದಕ್ಷಿಣ | 136 | 2 |
| ಚಾಮರಾಜನಗರ | 244 | 8 |
| ಬೀದರ್ | 435 | 8 |
| ಯಾದಗಿರಿ | 129 | 3 |
| ವಿಜಯನಗರ | 141 | 4 |
| ಕೊಡಗು | 188 | 2 |
| ಹಾವೇರಿ | 189 | 2 |
| ಉಡುಪಿ | 315 | 2 |
| ಹಾಸನ | 269 | 0 |
| ಮಂಡ್ಯ | 533 | 0 |
| ದಾವಣಗೆರೆ | 105 | 0 |
| ಶಿವಮೊಗ್ಗ | 334 | 0 |
| ಉತ್ತರ ಕನ್ನಡ | 282 | 0 |
| ಚಿಕ್ಕಮಗಳೂರು | 251 | 0 |
| ಗದಗ | 228 | 0 |
| ರಾಯಚೂರು | 333 | 0 |
ಮಕ್ಕಳನ್ನು ಕಳುಹಿಸಿ ಎಂದು ಪೋಷಕರ ಪಟ್ಟು
ಇನ್ನು ರಕ್ಷಣೆ ಮಾಡಲಾದ ಮಕ್ಕಳನ್ನು ಕಳುಹಿಸಿ ಎಂದು ಬೆಂಗಳೂರಿನ ಡೈರಿ ಸರ್ಕಲ್ ಬಳಿಯಿರುವ ಬಾಲ ಮಂದಿರದ ಎದುರು ಪೋಷಕರ ಪಟ್ಟು ಹಿಡಿದ ಪ್ರಸಂಗವೂ ನಡೆದಿದೆ. ಆದರೆ ಮಂಗಳವಾರದವರೆಗೂ ಮಕ್ಕಳನ್ನ ಪೋಷಕರಿಗೆ ಹಸ್ತಾಂತರಿಸಲಾಗಲ್ಲ. ಯಾವುದೇ ಬಾಲಕಾರ್ಮಿಕರನ್ನ ರಕ್ಷಿಸಿದರೆ ನೇರವಾಗಿ ಪೋಷಕರಿಗೆ ಹಸ್ತಾಂತರಿಸಲು ಸಾಧ್ಯವಿಲ್ಲ. ಚೈಲ್ಡ್ ವೆಲ್ಫೇರ್ ಕಮಿಟಿ (CWC) ಮುಂದೆ ಹಾಜರು ಪಡಿಸಬೇಕು. ಕಮಿಟಿಯು ನಿಜವಾದ ಪೋಷಕರನ್ನು ಪರಿಶೀಲಿಸಲಿದೆ. ಆ ಬಳಿಕ ಮಕ್ಕಳನ್ನು ಕೆಲಸಕ್ಕೆ ಕಳುಹಿಸುವುದು ಅಪರಾಧ ಎಂದು ಪೋಷಕರಿಗೆ ಮನವರಿಕೆ ಮಾಡಲಾಗುತ್ತೆ. ಮಕ್ಕಳ ಹಕ್ಕುಗಳ ಬಗ್ಗೆ ತಿಳಿಸಿ ಆಯಾ ಮಕ್ಕಳನ್ನು ಪೋಷಕರ ಜೊತೆಗೆ ಕಳುಹಿಸಿ ಕೊಡಲಾಗುತ್ತೆ. ಅಥವಾ ಮಕ್ಕಳನ್ನು ಮಾನವ ಕಳ್ಳ ಸಾಗಾಣಿಕೆ ಮಾಡಿ, ಮಾರಾಟ ಮಾಡಿ ಕೆಲಸಕ್ಕೆ ಇಟ್ಟಿರೋದು ಕಂಡ ಬಂದರೆ ಅಂತವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಅವರು ಶಿಪಾರಸ್ಸು ಮಾಡುತ್ತಾರೆ. ಸದ್ಯ ಎರಡು ದಿನ ರಜೆ ಇರುವ ಕಾರಣ, ಮಂಗಳವಾರ CWC ಮುಂದೆ ರಕ್ಷಿಸಲಾದ ಮಕ್ಕಳನ್ನು ಹಾಜರು ಪಡಿಸಲಾಗುತ್ತೆ ಎನ್ನಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:51 am, Sun, 13 September 26




