ಪ್ರಯಾಗ್ರಾಜ್ಗೆ ಹೋಗಿ ಬರುವವರಿಗೆ ಗುಡ್‌ನ್ಯೂಸ್: ಸಬ್ದರ್‌ಗಂಜ್ – ಯಶವಂತಪುರ ನಡುವೆ ವಿಶೇಷ ರೈಲು
Subedarganj Yesvantpur special train: ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಸಬ್ದರ್‌ಗಂಜ್ ಮತ್ತು ಬೆಂಗಳೂರಿನ ಯಶವಂತಪುರ ನಡುವೆ ಸೆಪ್ಟೆಂಬರ್‌ನಿಂದ ವಾರದ ವಿಶೇಷ ರೈಲು ಸಂಚಾರ ಆರಂಭವಾಗಲಿದೆ. ರಾಯಚೂರು, ಕೃಷ್ಣಾ, ಗುಂತಕಲ್ ಸೇರಿ ಕರ್ನಾಟಕದ ಹಲವೆಡೆ ಈ ರೈಲಿಗೆ ನಿಲುಗಡೆ ಇರಲಿದೆ. ವೇಳಾಪಟ್ಟಿ ಸಹಿತ ನಿಲುಗಡೆ ವಿವರಗಳು ಇಲ್ಲಿವೆ.

ಮುಖ್ಯಾಂಶಗಳು
- ಯಶವಂತಪುರಕ್ಕೆ ಉತ್ತರ ಭಾರತದಿಂದ ವಿಶೇಷ ರೈಲು
- ಯಲಹಂಕ ಸೇರಿ ಕರ್ನಾಟಕದ ಹಲವೆಡೆ ನಿಲುಗಡೆ
- ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೆ 13 ಟ್ರಿಪ್‌ಗಳು
ಬೆಂಗಳೂರು, ಸೆಪ್ಟೆಂಬರ್ 1: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಸಬ್ದರ್‌ಗಂಜ್ ಜಂಕ್ಷನ್ ಮತ್ತು ಬೆಂಗಳೂರಿನ ಯಶವಂತಪುರ ಜಂಕ್ಷನ್ ನಡುವೆ ಹೆಚ್ಚುವರಿ ಪ್ರಯಾಣಿಕರ ದಟ್ಟಣೆ ನಿಭಾಯಿಸಲು ವಾರದ ವಿಶೇಷ ರೈಲು (Weekly Special Train) ಸೇವೆ ಆರಂಭಿಸಲಾಗುತ್ತಿದೆ. ಕರ್ನಾಟಕದ ಪ್ರಯಾಣಿಕರಿಗೆ, ಅದರಲ್ಲೂ ಉತ್ತರ ಭಾರತದಿಂದ ಬೆಂಗಳೂರಿಗೆ ಬರುವ ಹಾಗೂ ಬೆಂಗಳೂರಿನಿಂದ ಉತ್ತರ ಭಾರತದತ್ತ ತೆರಳುವ ಕನ್ನಡಿಗರಿಗೆ ಈ ಸೇವೆ ಅನುಕೂಲವಾಗಲಿದೆ. ರೈಲು ಸಂಖ್ಯೆ 04135 ಸಬ್ದರ್‌ಗಂಜ್–ಯಶವಂತಪುರ ವೀಕ್ಲಿ ಎಕ್ಸ್‌ಪ್ರೆಸ್ ಸ್ಪೆಷಲ್ ಪ್ರತಿ ಶುಕ್ರವಾರ ಸಂಚರಿಸಲಿದೆ. ಈ ಸೇವೆ ಸೆಪ್ಟೆಂಬರ್ 11ರಿಂದ ಡಿಸೆಂಬರ್ 4, 2026ರವರೆಗೆ ಮುಂದುವರಿಯಲಿದೆ ಎಂದು ನೈಋತ್ಯ ರೈಲ್ವೆ (South Western Railway) ತಿಳಿಸಿದೆ.
ಇದಕ್ಕೆ ಪ್ರತಿಯಾಗಿ ರೈಲು ಸಂಖ್ಯೆ 04136 ಯಶವಂತಪುರ–ಸಬ್ದರ್‌ಗಂಜ್ ವೀಕ್ಲಿ ಎಕ್ಸ್‌ಪ್ರೆಸ್ ಸ್ಪೆಷಲ್ ಪ್ರತಿ ಸೋಮವಾರ ಯಶವಂತಪುರದಿಂದ ಹೊರಡಲಿದ್ದು, ಸೆಪ್ಟೆಂಬರ್ 14ರಿಂದ ಡಿಸೆಂಬರ್ 7ರವರೆಗೆ ಸಂಚರಿಸಲಿದೆ. ಎರಡೂ ದಿಕ್ಕಿನಲ್ಲಿ ತಲಾ 13 ಟ್ರಿಪ್‌ಗಳು ಇರಲಿವೆ.
ಕರ್ನಾಟಕದ ಯಾವೆಲ್ಲ ನಿಲ್ದಾಣಗಳಲ್ಲಿ ನಿಲುಗಡೆ?
ಬೆಂಗಳೂರಿನ ಯಶವಂತಪುರ ಜಂಕ್ಷನ್ ಈ ಸ್ಪೆಷಲ್ ಟ್ರೈನ್ನ ಆರಂಭಿಕ ಹಾಗೂ ಅಂತಿಮ ನಿಲ್ದಾಣ. ಬೆಂಗಳೂರಿನ ಮತ್ತೊಂದು ಪ್ರಮುಖ ರೈಲು ನಿಲ್ದಾಣವಾದ ಯಲಹಂಕದಲ್ಲೂ ರೈಲು ನಿಲುಗಡೆ ಹೊಂದಿರಲಿದೆ. ಇದರ ಜೊತೆಗೆ ಕರ್ನಾಟಕದ ಹಲವು ಪ್ರಮುಖ ನಿಲ್ದಾಣಗಳಲ್ಲೂ ರೈಲು ನಿಲ್ಲಲಿದೆ. ಕರ್ನಾಟಕದ ರಾಯಚೂರು, ಕೃಷ್ಣಾ, ಯಾದಗಿರಿ, ಹಿಂದೂಪುರ, ಯಲಹಂಕ ನಿಲ್ದಾಣಗಳಲ್ಲಿ ರೈಲು ನಿಲುಗಡೆ ಹೊಂದಿದೆ. ಇದರಿಂದ ಉತ್ತರ ಕರ್ನಾಟಕದ ಪ್ರಯಾಣಿಕರಿಗೂ ಬೆಂಗಳೂರಿನೊಂದಿಗೆ ಉತ್ತರ ಭಾರತದ ರೈಲು ಸಂಪರ್ಕಕ್ಕೆ ಹೆಚ್ಚುವರಿ ಆಯ್ಕೆ ದೊರೆಯಲಿದೆ.
ನೈಋತ್ಯ ರೈಲ್ವೆ ಎಕ್ಸ್ ಸಂದೇಶ
Kindly note: North Central Railway has notified the operation of weekly special trains between Subedarganj Junction in Prayagraj, Uttar Pradesh, and Yesvantpur Junction to clear the extra rush of passengers.#SWRupdates pic.twitter.com/FDEdOVMQhb
— South Western Railway (@SWRRLY) August 31, 2026
19 ಬೋಗಿಗಳ ರೈಲು ಸೇವೆ
ಈ ವಿಶೇಷ ರೈಲು ಒಟ್ಟು 19 ಬೋಗಿಗಳನ್ನು ಒಳಗೊಂಡಿರಲಿದೆ. ಇದರಲ್ಲಿ 2 ಎಸಿ ತ್ರಿ-ಟೈರ್ ಕೋಚ್‌ಗಳು, 9 ಸ್ಲೀಪರ್ ಕೋಚ್‌ಗಳು, 6 ಜನರಲ್ ಸೆಕೆಂಡ್ ಕ್ಲಾಸ್ ಕೋಚ್‌ಗಳು ಹಾಗೂ 2 ಸೀಟಿಂಗ್-ಕಮ್-ಲಗೇಜ್ ರೇಕ್ ಕೋಚ್‌ಗಳು ಇರಲಿವೆ. ವಿಶೇಷ ಚೇತನ ಸ್ನೇಹಿ ವಿಭಾಗಗಳನ್ನೂ ಒಳಗೊಂಡಿರಲಿದೆ.
ಸಬ್ದರ್‌ಗಂಜ್ – ಯಶವಂತಪುರ ವಾರದ ವಿಶೇಷ ರೈಲು ವೇಳಾಪಟ್ಟಿ
ಸಬ್ದರ್‌ಗಂಜ್‌ನಿಂದ ಹೊರಡುವ ರೈಲು ಪ್ರತಿ ಶುಕ್ರವಾರ ರಾತ್ರಿ 9.20ಕ್ಕೆ ಹೊರಟು ಭಾನುವಾರ ರಾತ್ರಿ 9.30ಕ್ಕೆ ಯಶವಂತಪುರ ತಲುಪಲಿದೆ. ಯಶವಂತಪುರದಿಂದ ಹಿಂದಿರುಗುವ ರೈಲು ಪ್ರತಿ ಸೋಮವಾರ ಬೆಳಗ್ಗೆ 7 ಗಂಟೆಗೆ ಹೊರಟು ಬುಧವಾರ ಮುಂಜಾನೆ 4.30ಕ್ಕೆ ಸಬ್ದರ್‌ಗಂಜ್ ತಲುಪಲಿದೆ. ಶಂಕರಗಢ, ದಭೌರಾ, ಮಾನಿಕಪುರ, ಸತ್ನಾ, ಕಟ್ನಿ, ಜಬಲ್‌ಪುರ, ಇಟಾರ್ಸಿ, ಜುಜ್ಹಾರ್‌ಪುರ, ನಾಗಪುರ, ಬಲ್ಹಾರ್‌ಶಾ, ಸಿರ್ಪುರ್ ಕಾಗಜ್‌ನಗರ, ಬೆಲ್ಲಂಪಲ್ಲಿ, ಮಂಚೇರಿಯಲ್, ಕಾಜಿಪೇಟ್, ಸಿಕಂದರಾಬಾದ್, ಲಿಂಗಂಪಲ್ಲಿ, ವಿಕಾರಾಬಾದ್, ತಾಂಡೂರು ಸೇರಿದಂತೆ ಹಲವು ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.
ಇದನ್ನೂ ಓದಿ: ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್: ಭುವನೇಶ್ವರ – ಯಶವಂತಪುರ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ
ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಈ ವಿಶೇಷ ಸೇವೆ ಆರಂಭಿಸಲಾಗಿದ್ದು, ಬೆಂಗಳೂರಿನಿಂದ ಉತ್ತರ ಭಾರತದತ್ತ ಪ್ರಯಾಣಿಸುವವರಿಗೆ ಮತ್ತು ಉತ್ತರ ಭಾರತದಿಂದ ಕರ್ನಾಟಕಕ್ಕೆ ಆಗಮಿಸುವವರಿಗೆ ಪ್ರಯೋಜನವಾಗಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:39 am, Tue, 1 September 26




