
Breaking News Today Live Updates in Kannada: ವಾರಕ್ಕೆ 5 ದಿನಗಳ ಕೆಲಸದ ಅವಧಿ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ಇಂದು 12 ರಾಷ್ಟ್ರೀಕೃತ ಬ್ಯಾಂಕ್‌ಗಳ 350 ಶಾಖೆಗಳು ಬಂದ್ ಆಗಲಿವೆ. ಸುಮಾರು 800 ಸಿಬ್ಬಂದಿ ಕೆಲಸಕ್ಕೆ ಗೈರಾಗಿ ಬೆಂಬಲ ಸೂಚಿಸಿದ್ದು,ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ.ಮತ್ತೊಂದೆಡೆ, ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನವದೆಹಲಿಗೆ ಆಗಮಿಸಿದ್ದು, ಪ್ರಧಾನಿ ಮೋದಿಯವರೊಂದಿಗೆ ರಕ್ಷಣೆ, ಇಂಧನ ಹಾಗೂ ಸ್ಥಳೀಯ ಕರೆನ್ಸಿ ವಹಿವಾಟು ವಿಸ್ತರಣೆ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇನ್ನು ರಾಜ್ಯದಲ್ಲಿ, ಉಚಿತ ವಿದ್ಯುತ್ ಯೋಜನೆಯ ಸವಾಲಿನ ನಡುವೆಯೂ ಬೆಸ್ಕಾಂ 2025-26ನೇ ಸಾಲಿನಲ್ಲಿ 293.62 ಕೋಟಿ ರೂ. ವಾರ್ಷಿಕ ಲಾಭ ದಾಖಲಿಸುವ ಮೂಲಕ 7 ವರ್ಷಗಳ ಬಳಿಕ ಯಶಸ್ವಿಯಾಗಿ ಲಾಭದ ಹಾದಿಗೆ ಮರಳಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.
ಪತ್ನಿ ಕಾಟದಿಂದ ಬೇಸತ್ತು ಪತಿ ವಿದ್ಯುತಿ ಟಿಸಿ ಏರಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಕೌಟುಂಬಿಕ ಕಲಹಕ್ಕೆ ಬೇಸತ್ತು ಇಸ್ಮಾಯಿಲ್ ಎನ್ನುವಾತ ನಗರದ ಬ್ರೂಸ್ಪೇಟೆ ಪೊಲೀಸ್ ಠಾಣೆ ಎದುರಿನ ವಿದ್ಯುತ್ ಪರಿವರ್ತಕ (ಟ್ರಾನ್ಸ್ಫರ್ಮ್) ಮೇಲೇರಿದ್ದಾನೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಕುಟುಂಬಸ್ಥರು ಇಸ್ಮಾಯಿಲ್ ಹುಚ್ಚಾಟಕ್ಕೆ ಹೈರಾಣಾದರು. ಕೊನೆಗೆ ಹರಸಾಹಸ ಮಾಡಿ ಕೆಳಗಿಳಿಸುವಲ್ಲಿ ಯಶಸ್ವಿಯಾದರು. ಅದೃಷ್ಟವಶಾತ್ ಆ ಸಂದರ್ಭದಲ್ಲಿ ವಿದ್ಯುತ್ ಕಟ್ ಆಗಿತ್ತು. ಹೀಗಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ
ಕೆಪಿಎಸ್ಸಿಯಿಂದ ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಹಗರಣದಲ್ಲಿ ಬಂಧನಕ್ಕೊಳಗಾಗಿರುವ
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಬಿಎನ್ಎಸ್ಎಸ್ ಸೆಕ್ಷನ್ 483ರ ಅಡಿ ಜಾಮೀನು ಕೋರಿ ಬೆಂಗಳೂರಿನ 52ನೇ ಸಿಸಿಹೆಚ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಆದ್ರೆ, ಕೋರ್ಟ್, ಸೆ. 15ರೊಳಗೆ ಆಕ್ಷೇಪಣೆ ಸಲ್ಲಿಸಲು ಸಿಐಡಿ ಪರ ವಕೀಲರಿಗೆ ಸೂಚನೆ ನೀಡಿ ವಿಚಾರಣೆ ಸೆಪ್ಟೆಂಬರ್ 15ಕ್ಕೆ ಮುಂದೂಡಿದೆ.
ಹೊಸ ಸಹಕಾರವನ್ನು ಹುಡುಕುತ್ತಿದ್ದೇವೆ. ಇದರ ಲಾಭವನ್ನು ನೀವು ಪಡೆದುಕೊಳ್ಳಬಹುದು. ಹೂಡಿಕೆ ಮೂಲಕ ಇದರ ಲಾಭ ಪಡೆಯಬಹುದು. ಬ್ರಿಕ್ಸ್ ದೇಶಗಳ ನಡುವೆ ಮುಕ್ತ ವ್ಯಾಪಾರ ಕಲ್ಪಿಸಬಹುದು. ಪ್ರತಿವರ್ಷ 100 ವರ್ಷ ಸ್ಟಾರ್ಟ್ ಅಪ್ ಗಳನ್ನು ಬ್ರಿಕ್ಸ್ ದೇಶಗಳ ಬೆಳಸಬಹುದು. ಜಗತ್ತು ರಚನಾತ್ಮಕ ಬದಲಾವಣೆ ಮೂಲಕ ಸಾಗುತ್ತಿದೆ.ಬದಲಾವಣೆಗಳನ್ನು ತಡೆಯಲು ಸಾಧ್ಯವಾಗುವುದಿಲ್ಲ, ಬ್ರಿಕ್ಸ್ G7 ಗಿಂತ ಮುಂದಿದೆ, ಜಾಗತಿನ ಆರ್ಥಿಕತೆಯ 40% ಭಾಗ ಬ್ರಿಕ್ಸ್ ದೇಶಗಳಿಂದ ಬರುತ್ತಿದೆ. ಭಾರತದಲ್ಲಿ 2 ಲಕ್ಷಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು, 120ಕ್ಕೂ ಅಧಿಕ ಯೂನಿಕಾರ್ನ್‌ಗಳು ಭಾರತ ಇಂದು ಗ್ಲೋಬಲ್ ಸೊಲ್ಯೂಷನ್ಸ್‌ಗಳ ಹಬ್ ಆಗಿ ಹೊರಹೊಮ್ಮುತ್ತಿದೆ. ಇದರ ಝಲಕ್ ಬ್ರಿಡ್ಜ್ ಇಂಡಿಯಾ ಇನ್ನೋವೇಷನ್ ಎಕ್ಸ್‌ಪೋದಲ್ಲಿ ಕಾಣಿಸಲಿದೆ. ಭಾರತೀಯ ಸ್ಟಾರ್ಟ್‌ಅಪ್‌ಗಳಿಂದ AI, ಎಜುಕೇಷನ್, ಹೆಲ್ತ್‌ಕೇರ್ ಕ್ಷೇತ್ರಗಳಲ್ಲಿ ಹೊಸ ಆವಿಷ್ಕಾರಗ್ರೀನ್ ಹೈಡ್ರೋಜನ್ ಮತ್ತು ಬ್ಯಾಟರಿ ಟೆಕ್ನಾಲಜಿ ಮೇಲೂ ಮಹತ್ವದ ಕೆಲಸ. ಡಿಫೆನ್ಸ್ ಮತ್ತು ಸ್ಪೇಸ್ ಕ್ಷೇತ್ರದಲ್ಲೂ ಹೊಸ ಗಡಿಗಳನ್ನು ದಾಟುತ್ತಿದೆ. ಡಿಜಿಟಲ್ ಟೆಕ್ನಾಲಜಿಯಿಂದ ಫೈನಾನ್ಷಿಯಲ್ ಇನ್‌ಕ್ಲೂಷನ್ ಮತ್ತು ಡಿಜಿಟಲ್ ಟ್ರಾನ್ಸಾಕ್ಷನ್‌ಗೆ ವೇಗ. ವಿಶ್ವದ ಸುಮಾರು 50% ರಿಯಲ್‌ಟೈಮ್ ಪೇಮೆಂಟ್‌ಗಳು ಇದೇ ತಂತ್ರಜ್ಞಾನದ ಮೂಲಕ ನಡೆಯುತ್ತಿವೆ ಎಂದು ಮೋದಿ ಹೇಳಿದ್ದಾರೆ.
ಭಾರತದ ಅಧ್ಯಕ್ಷತೆಯಲ್ಲಿ ಬ್ರಿಕ್ಸ್ ಸಭೆ ಆಯೋಜಿಸಿದ್ದು, ಸುಸ್ಥಿರತೆ ನಮ್ಮ ಪ್ರಮುಖ ಉದ್ದೇಶವಾಗಿದೆ. ಜಾಗತಿಕ ಅನಿಶ್ಚಿತತೆ ನಡುವೆ ಭಾರತ ಸುಸ್ಥಿರವಾಗಿದೆ. ಭಾರತದಲ್ಲಿ ಮೂಲಸೌಕರ್ಯಗಳು ಅಭಿವೃದ್ಧಿಯಾಗುತ್ತಿದೆ. ಭಾರತ ಹೊಸ ಅವಕಾಶಗಳ ಕೇಂದ್ರವಾಗಿದೆ. ಇಂದು ಭಾರತದಲ್ಲಿ ಸ್ಟಾರ್ಟ್ ಅಪ್ ಕ್ರಾಂತಿಯಾಗುತ್ತಿದ್ದು, ಜಾಗತಿಕವಾಗಿ ಸಮಸ್ಯೆಗಳ ಪರಿಹಾರ ಕೇಂದ್ರ ಭಾರತವಾಗಿದೆ. ಬಾಹ್ಯಕಾಶ, ರಕ್ಷಣೆ ಸೇರಿದಂತೆ ಹಲವು ವಲಯದಲ್ಲಿ ಹೊಸ ಸಂಶೋಧನೆಗಳು ಭಾರತದಲ್ಲಿ ನಡೆಯುತ್ತಿವೆ. ಯುಪಿಐ ಮೂಲಕ ದೇಶದ 50% ವಹಿವಾಟು ನಡೆಯುತ್ತಿದೆ. 2014 ರ ನಂತರ ನಾವು 40 ದೇಶಗಳ ಜೊತೆಗೆ ಮುಕ್ತ ವ್ಯಾಪರ ಒಪ್ಪಂದ ಮಾಡಿಕೊಂಡಿದ್ದೇವೆ. ವ್ಯಾಪರಕ್ಕೆ ಹೊಸ ಅವಕಾಶ ಸೃಷ್ಟಿಸುತ್ತಿದ್ದೇವೆ ಎಂದಿದ್ದಾರೆ.
ಸಾಗರ ಮಾರ್ಗಗಳು ಸುರಕ್ಷಿತವಾಗಿದ್ದಾಗ, ಸರಬರಾಜು ಮಾರ್ಗಗಳು ಮುಕ್ತವಾಗಿದ್ದಾಗ ನಾವಿಕರು ಸುರಕ್ಷಿತವಾಗಿದ್ದಾಗ ಮಾತ್ರ ಜಾಗತಿಕ ವ್ಯಾಪಾರದ ಪ್ರಗತಿ ಸಾಧ್ಯ. ಅದಕ್ಕಾಗಿಯೇ ಭಾರತವು ನೌಕಾಯಾನದ ಸ್ವಾತಂತ್ರ್ಯ ಮತ್ತು ನಾವಿಕರ ಸುರಕ್ಷತೆಯ ದೃಢ ಬೆಂಬಲಿಗವಾಗಿದೆ. ಬ್ರಿಕ್ಸ್ ಮಹಿಳಾ ವಾಣಿಜ್ಯ ಮೈತ್ರಿಕೂಟವು ನಮ್ಮ ದೃಷ್ಟಿಕೋನದ ಪ್ರಮುಖ ಭಾಗವಾಗಿದೆ. ನಮ್ಮ ಅಭಿವೃದ್ಧಿ ಪಯಣದಲ್ಲಿ ಮಹಿಳಾ ಉದ್ಯಮಿಗಳು ಮುಂಚೂಣಿಯಲ್ಲಿರಬೇಕು. ಭಾರತದಲ್ಲಿ ನಡೆದ ಬ್ರಿಕ್ಸ್ ಮಹಿಳಾ ವಾಣಿಜ್ಯ ಮೈತ್ರಿಕೂಟದ ಸಭೆಯಲ್ಲಿ ಸುಮಾರು 200 ಮಹಿಳಾ ಉದ್ಯಮಿಗಳು ಭಾಗವಹಿಸಿರುವುದು ಸಂತಸ ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಬ್ರಿಕ್ಸ್ ವ್ಯಾಪಾರ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದು, ಬ್ರಿಕ್ಸ್ 4 ದೇಶಗಳ ಕುಟುಂಬದಿಂದ 21 ದೇಶಗಳಿಗೆ ಬೆಳೆದಿದೆ. ಭಾರತ ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದುತ್ತಿದೆ. ವಿಶ್ವದ ಅರ್ಧದಷ್ಟು ಜನಸಂಖ್ಯೆ ಬ್ರಿಕ್ಸ್ ದೇಶಗಳಲ್ಲಿದೆ. ಭಾರತ ಇಂಧನ-ತಂತ್ರಜ್ಞಾನ ಕ್ಷೇತ್ರಗಳಲ್ಲಿ ವೇಗವಾಗಿ ಪ್ರಗತಿ ಸಾಧಿಸುತ್ತಿದೆ. ಬ್ರಿಕ್ಸ್ ದೇಶಗಳು ಜಾಗತಿಕ ನಾವೀನ್ಯತೆಯ ದೊಡ್ಡ ಕೇಂದ್ರಗಳಾಗುತ್ತಿವೆ. ವಿಶ್ವದ ಬೆಳವಣಿಗೆ ಎರಡೂವರೆ ಪಟ್ಟು ಹೆಚ್ಚಾಗಿದೆ ಮತ್ತು ಬ್ರಿಕ್ಸ್ ದೇಶಗಳ ಒಟ್ಟಾರೆ ಜಿಡಿಪಿ 4 ಪಟ್ಟು ಹೆಚ್ಚಾಗಿದ್ದು, ಭಾರತ ಇಂದು ಜಾಗತಿಕ ಪರಿಹಾರಗಳ ಕೇಂದ್ರವಾಗಿದೆ ಎಂದಿದ್ದಾರೆ.
ಮಹಿಳೆಯೊಬ್ಬರು ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಆರ್ ನಗರ ಬಿಜೆಪಿ ಶಾಸಕ ಮುನಿರತ್ನಗೆ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ. 2 ಲಕ್ಷ ಬಾಂಡ್, ಒಬ್ಬರ ಶ್ಯೂರಿಟಿ ಒದಗಿಸುವಂತೆ ಷರತ್ತು ವಿಧಿಸಿದೆ. ಜೊತೆಗೆ ತನಿಖೆಗೆ ಸಹಕರಿಸಬೇಕು, ದೂರುದಾರರನ್ನು ಸಂಪರ್ಕಿಸದಂತೆ ಷರತ್ತು ಹಾಕಿದೆ.
ಪ್ರಜಾಸೇವಾ ಅಭಿಯಾನದ ಅರ್ಜಿಗಳ ತ್ವರಿತ ವಿಲೇವಾರಿಗೆ ಸೂಕ್ತ ಕ್ರಮಕೈಗೊಳ್ಳಲಾಗಿದೆ. ಫಾಲೋಅಪ್‌ಗಾಗಿ ಪ್ರತಿ ಬುಧುವಾರ ಡಿಸಿ, ಎಸಿ, ತಹಶೀಲ್ದಾರ್ ಹಂತದಲ್ಲಿ ಅರ್ಜಿಗಳ ವಿಲೇವಾರಿ ಆಗಲಿವೆ. ಬೆಳಿಗ್ಗೆ 9 ರಿಂದ 11 ರವರೆಗೆ ತಹಶೀಲ್ದಾರ್ ಕಛೇರಿ, ಬೆಳಿಗ್ಗೆ 11 ರಿಂದ 1 ರವರೆಗೆ ಎಸಿ ಹಂತದಲ್ಲಿ, ಮಧ್ಯಾಹ್ನ 3 ರಿಂದ 5 ರವರೆಗೆ ಡಿಸಿ ಹಂತದಲ್ಲಿ ಅರ್ಜಿಗಳ ವಿಲೇವಾರಿಯಾಗಲಿವೆ. ಅರ್ಜಿದಾರರು ಈ ಸಮಯದಲ್ಲಿ ಭೇಟಿಯಾಗಿ ಫಾಲೋಅಪ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ದೂರು ಸಲ್ಲಿಕೆ, ಶೀಘ್ರ ಪರಿಹಾರಕ್ಕಾಗಿ ನಮ್ಮ ಸೇವಾ ಆಪ್ ಅಕ್ಟೋಬರ್ 2 ರಂದು ಪ್ರಜಾಸೇವಾ ಇಲಾಖೆಯಿಂದ ಆಪ್ ಬಿಡುಗಡೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಡಿಕೆ ಶಿವಕುಮಾರ್ ಸರ್ಕಾರ ಪ್ರಜಾ ಸೇವಾ ಇಲಾಖೆ ಜಾರಿಗೆ ತಂದಿದ್ದು, ಒಂದೇ ದಿನ 26,387 ಅಹವಾಲು ಸ್ವೀಕಾರ ಮಾಡಲಾಗಿದೆ. ಇನ್ನು 6 ದಿನದಲ್ಲಿ 13,872 ಅರ್ಜಿಗಳ ವಿಲೇವಾರಿ ಮಾಡಿ ಶೇ.52.6% ಪ್ರಕರಣಗಳು ಇತ್ಯರ್ಥಗೊಳಿಸಲಾಗಿದೆ. ಈ ಬಗ್ಗೆ ಪ್ರಜಾಸೇವಾ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಮಾಹಿತಿ ಹಂಚಿಕೊಂಡಿದ್ದಾರೆ. 5 ಇಲಾಖೆಗಳಲ್ಲಿ ಜನರ ಸಮಸ್ಯೆ ಹೆಚ್ಚು . ಕಂದಾಯ ಇಲಾಖೆಗೆ ಸೇರಿದ ಅತಿ ಹೆಚ್ಚು 9,260 ಅಹವಾಲು ಶೇ.35% ದೂರು ಒಂದೇ ಇಲಾಖೆಗೆ ಸಂಬಂಧಿಸಿದ್ದಾಗಿವೆ. ವೃದ್ಧಾಪ್ಯ ವೇತನಕ್ಕೆ 2,087 ಅರ್ಜಿ, ವಸತಿ ನಿವೇಶನ 2,071, ಭೂದಾಖಲೆ RTC ಪಹಣಿಗೆ 1,567 ಅರ್ಜಿಗಳು ಬಂದಿವೆ. ಇನ್ನು ಯಾವುದೇ ಅರ್ಜಿಗಳು ತೀರ ಬಾಕಿ ಉಳಿದಿಲ್ಲ. ಬಾಕಿ ಇರುವ 12,514 ಅಹವಾಲು ಶೀಘ್ರ ಇತ್ಯರ್ಥ ಮಾಡಲಾಗುವುದು ಎಂದು ಹರ್ಷ ಗುಪ್ತಾ ತಿಳಿಸಿದ್ದಾರೆ.
ದೆಹಲಿಯ ಭಾರತ್ ಮಂಟಪದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಸುಮಾರು 45 ನಿಮಿಷಗಳ ಕಾಲ ನಡೆದ ದ್ವಿಪಕ್ಷೀಯ ಮಾತುಕತೆ ನಡೆಸಿದರು. ರಕ್ಷಣಾ ವಲಯದಲ್ಲಿ ಮಹತ್ವದ ಒಪ್ಪಂದ ಹಾಗೂ ವ್ಯಾಪಾರ ಒಪ್ಪಂದದ ಬಗ್ಗೆಯೂ ಉಭಯ ನಾಯಕರು ಸಮಾಲೋಚನೆ ಮಾಡಿದ್ದು, ಭಾರತ, ರಷ್ಯಾ ನಡುವೆ ಸಂಬಂಧ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಚರ್ಚೆಯಾಗಿದೆ. (ಮತ್ತಷ್ಟು ಓದಿ)
ದೆಹಲಿಯಲ್ಲಿ ಬ್ರಿಕ್ಸ್ ಶೃಂಗಸಭೆ ನಡೆಯುತ್ತಿದ್ದು, ಈ ವೇಳೆ ದೆಹಲಿಯ ಭಾರತ್ ಮಂಟಪದಲ್ಲಿ ಪ್ರಧಾನಿ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಪುಟಿನ್ ಗೆ ಪ್ರಾಚೀನ ತಮಿಳು ಸಾಹಿತ್ಯದ ರಷ್ಯನ್ ಆವೃತ್ತಿಯ ಕೃತಿ ‘ತಿರುಕ್ಕುರಳ್’ ನೀಡಿದ್ದು, ಇದು ಜನರಿಂದ ಜನರಿಗೆ ಸಂಪರ್ಕ, ಮಾನವ ಜೀವನದ ಕುರಿತು ನಮ್ಮ ಸಂಬಂಧ ಮತ್ತಷ್ಟು ಬಲಪಡಿಸುವ ಪುಸ್ತಕ ಎಂದು ವಿವರಿಸಿದರು. ತಮಗಾಗಿ ರಷ್ಯನ್ ಭಾಷೆಗೆ ಅನುವಾದಿಸಿರುವುದಾಗಿ ಮೋದಿ ಹೇಳಿದರು. ನಂತರ ರಷ್ಯಾ, ಭಾರತದ ನಡುವೆ ದ್ವಿಪಕ್ಷೀಯ ಮಾತುಕತೆ ಶುರುವಾಯ್ತು.
SIR ಪ್ರಕ್ರಿಯೆಯಲ್ಲಿ ಸಿಎಂ ಡಿಕೆಶಿ ತಾಯಿಗೆ ನೋಟಿಸ್ ನೀಡಿರುವ ಬಗ್ಗೆ ಕನಕಪುರ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. ಕನಕಪುರ ವಿಧಾನಸಭಾ ಕ್ಷೇತ್ರದ ಮತಗಟ್ಟೆ 249ರಲ್ಲಿ ಒಟ್ಟು ಮೂವರು ಗೌರಮ್ಮ ಎಂಬುವರು ಇದ್ದಾರೆ. ಶ್ರೀಮತಿ ಗೌರಮ್ಮ ಕೆಂಪೇಗೌಡ , ಶ್ರೀಮತಿ ಗೌರಮ್ಮ ಕೆಂಪೇಗೌಡ , ಶ್ರೀಮತಿ ಗೌರಮ್ಮ ದೊಡ್ಡ ಕೆಂಪೇಗೌಡ ಎನ್ನುವರು ಒಂದೇ ಮತಗಟ್ಟೆಯಲ್ಲಿ ಈ ಮೂವರು ಗೌರಮ್ಮ ಎಂಬುವರು ಇದ್ದಾರೆ. ಈ ಮೂವರಲ್ಲಿ ಸಿಎಂ ಅವರ ತಾಯಿಗೆ ಯಾವುದೇ ನೋಟೀಸ್ ಅನ್ನು ಆಯೋಗ ನೀಡಿಲ್ಲ. ಆದರೆ ಇದೆ ಮತಗಟ್ಟೆಯ ಇಬ್ಬರು ಗೌರಮ್ಮ ಅವರಿಗೆ ನೋಟೀಸ್ ನೀಡಲಾಗಿದೆ. ಹೆಸರಿನ ಸಾಮ್ಯತೆ ಇರುವುದರಿಂದ ಗೊಂದಲ ಉಂಟಾಗಿದೆ ಎಂದು ಗೊಂದಲದ ಬಗ್ಗೆ ಸ್ಪಷ್ಟನೆ ನೀಡಿದೆ.
‘ವಂದೇ ಮಾತರಂ’ 2 ಪ್ಯಾರಾ ಮಾತ್ರ ಹಾಡುವಂತೆ ಸರ್ಕಾರ ಆದೇಶ ಹೊರಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಡಿಕೆ ಶಿವಕುಮಾರ್, ‘ವಂದೇ ಮಾತರಂ’ ವಿಚಾರದಲ್ಲಿ ನಮ್ಮ ಪಕ್ಷದ ನಿಲುವು ಸ್ಪಷ್ಟವಾಗಿದೆ. ನಾವೇ ರಾಷ್ಟ್ರಗೀತೆ ತಂದವರು, ಅವರು (ಬಿಜೆಪಿ) ರಾಜಕೀಯ ಮಾಡುತ್ತಿದ್ದಾರೆ ಎಂದು ಟಾಂಗ್ ಕೊಟ್ಟರು.
ಮೊದಲ ಚುನಾವಣೆಯಲ್ಲೇ ವಿದ್ಯಾರ್ಥಿ ಸಂಘಟನೆಗಳ ಜಟಾಪಟಿಯಲ್ಲಿ ಮಂಗಳೂರು ವಿಶ್ವವಿದ್ಯಾಲಯ ಚುನಾವಣೆಯಲ್ಲಿ ABVP ಗೆದ್ದು ಬೀಗಿದೆ. ಇಂದು (ಸೆ.11) ನಡೆದ ಚುನಾವಣೆಯಲ್ಲಿ ABVP ಸಂಘಟನೆಗೆ ಗೆಲುವು ಸಾಧಿಸಿದೆ. ಇನ್ನೊಂದೆಡೆ NSUI ಸಿಎಂ ಡಿಕೆ ಶಿವಕುಮಾರ್ಗೆ ದೂರು ಕೊಡಲು ಮುಂದಾಗಿದೆ. ಜಿಲ್ಲಾಡಳಿತದ ಮೂಲಕ ಮಂಗಳೂರು ವಿವಿಯ ವಿಸಿ ವಿರುದ್ಧ ದೂರು ಕೊಡಲು ಚಿಂತನೆ ನಡೆಸಿದೆ. ಅಲ್ಲದೇ ಸೆಪ್ಟೆಂಬರ್18ರಂದು ಮಂಗಳೂರಿಗೆ ಸಿಎಂ ಡಿಕೆ ಶಿವಕುಮಾರ್ ಬಂದಾಗ ಈ ಬಗ್ಗೆ ಚರ್ಚೆ ಮಾಡಲು NSUI ನಿರ್ಧಾರ ಮಾಡಿದೆ.
ಚಿತ್ರಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದ ‘ರಕ್ಕಸಪುರದೋಳ್’ ಕ್ರೈಂ ಥ್ರಿಲ್ಲರ್ ಸಿನಿಮಾ ಇದೀಗ ಅಮೇಜಾನ್ ಪ್ರೈಮ್ ವೀಡಿಯೋದಲ್ಲಿ ಪ್ರಸಾರ ಆರಂಭಿಸಿದೆ. ಥಿಯೇಟರ್‌ನಲ್ಲಿ ಸಿನಿಮಾ ವೀಕ್ಷಿಸಲು ಸಾಧ್ಯವಾಗದವರು ಮತ್ತು ಮತ್ತೊಮ್ಮೆ ನೋಡಲು ಬಯಸುವ ಅಭಿಮಾನಿಗಳು ಒಟಿಟಿಯಲ್ಲಿ ವೀಕ್ಷಿಸಬಹುದು ಎಂದು ನಟ ಅನಿರುದ್ಧ್ ಭಟ್ ತಿಳಿಸಿದ್ದಾರೆ.
ವಿದೇಶಿ ಹೂಡಿಕೆದಾರರಿಗೆ ಪೂರಕ ವಾತಾವರಣ ಕಲ್ಪಿಸಲು ಮತ್ತು ಅನಿವಾಸಿ ಭಾರತೀಯರ ಕಲ್ಯಾಣಕ್ಕೆ ಸರ್ಕಾರ ಹೊಸ ಯೋಜನೆ ರೂಪಿಸಿದೆ. ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ಐಟಿಬಿಟಿ ಇಲಾಖೆಗಳು ಜಂಟಿಯಾಗಿ ಏಕಗವಾಕ್ಷಿ ವ್ಯವಸ್ಥೆಯ ಮೂಲಕ ಜಾಗತಿಕ ಸಹಯೋಗ ಉತ್ತೇಜಿಸಿ, 3 ಲಕ್ಷ ಕೋಟಿ ರೂಪಾಯಿ ಹೂಡಿಕೆ ಆಕರ್ಷಿಸುವ ಬೃಹತ್ ಗುರಿ ಹೊಂದಿವೆ.
ಸರ್ಕಾರಿ ಆದೇಶಕ್ಕೆ ಎಬಿವಿಪಿ (ABVP) ಪ್ರತಿರೋಧ ತೋರಿದ ಬೆನ್ನಲ್ಲೇ, ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ವಿರುದ್ಧ ಮುಖ್ಯಮಂತ್ರಿಗೆ ದೂರು ನೀಡಲು ಕಾಂಗ್ರೆಸ್‌ನ ವಿದ್ಯಾರ್ಥಿ ಸಂಘಟನೆ ಎನ್‌ಎಸ್‌ಯುಐ (NSUI) ನಿರ್ಧರಿಸಿದೆ. ಸೆಪ್ಟೆಂಬರ್ 18ರಂದು ಸಿಎಂ ಮಂಗಳೂರಿಗೆ ಆಗಮಿಸಿದಾಗ ಜಿಲ್ಲಾಡಳಿತದ ಮೂಲಕ ಚರ್ಚಿಸಿ ದೂರು ಸಲ್ಲಿಸಲು ಸಿದ್ಧತೆ ನಡೆಸಿದೆ.
ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ರೈಲು ಬೋಗಿಗೆ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿದ್ದ ನಾಸಿಕ್ ಮೂಲದ ಪೇಂಟಿಂಗ್ ಕಾರ್ಮಿಕ ರವಿ ಬೋರಕ್ ತಿರ್ವ ಎಂಬಾತನನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಭಾನುವಾರ ರಾತ್ರಿ ಪ್ಲಾಟ್‌ಫಾರ್ಮ್ ಒಂದರ ಬಳಿ ಕುಡಿದ ಅಥವಾ ಗಾಂಜಾ ನಶೆಯಲ್ಲಿ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಉತ್ತರಾಖಂಡದ ಕೇದಾರನಾಥ ಯಾತ್ರಾ ಮಾರ್ಗದ ಚಿರಬಾಸಾ ಹೆಲಿಪ್ಯಾಡ್ ಸಮೀಪ ಭಾರೀ ಭೂಕುಸಿತ ಸಂಭವಿಸಿದ್ದು, ಸುಮಾರು 150 ಮೀಟರ್ ರಸ್ತೆ ಸಂಪೂರ್ಣ ಬಂದ್ ಆಗಿದೆ. ಮಣ್ಣು-ಬಂಡೆಗಳು ಕುಸಿದು ಯಾತ್ರಿಕರ ಸಂಚಾರಕ್ಕೆ ಅಡ್ಡಿಯಾಗಿದ್ದು, ಸುರಕ್ಷತೆಯ ದೃಷ್ಟಿಯಿಂದ ರಕ್ಷಣಾ ಹಾಗೂ ರಸ್ತೆ ತೆರವು ಕಾರ್ಯಾಚರಣೆ ತೀವ್ರಗತಿಯಲ್ಲಿ ನಡೆಯುತ್ತಿದೆ.
ಚುನಾವಣಾ ರಾಜಕೀಯ ನಿವೃತ್ತಿ ಕುರಿತ ಸಿದ್ದರಾಮಯ್ಯ ಹೇಳಿಕೆಗೆ ರಾಹುಲ್ ಗಾಂಧಿ ಕಿವಿಮಾತು ಹೇಳಿದ್ದಾರೆ. ಇಂತಹ ಹೇಳಿಕೆಗಳಿಂದ ಪಕ್ಷಕ್ಕೆ ಹಿನ್ನಡೆಯಾಗಬಹುದು, ಹಿರಿಯ ನಾಯಕರ ಅಗತ್ಯ ಪಕ್ಷಕ್ಕಿದೆ ಎಂದು ರಾಹುಲ್ ಸಲಹೆ ನೀಡಿದ್ದು, ಇದಕ್ಕೆ ‘ತಾವು ರಾಜಕೀಯ ನಿವೃತ್ತಿ ಬಗ್ಗೆ ಹೇಳಿಲ್ಲ’ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಬ್ರಿಕ್ಸ್ ಶೃಂಗಸಭೆ ವೇಳೆ ಪ್ರಧಾನಿ ಮೋದಿ ಹಾಗೂ ರಷ್ಯಾ ಅಧ್ಯಕ್ಷ ಪುಟಿನ್ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಡಾಲರ್‌ಗೆ ಪರ್ಯಾಯವಾಗಿ ರೂಪಾಯಿ-ರೂಬಲ್ ಪಾವತಿ ವ್ಯವಸ್ಥೆ, ಎಸ್-400 ಕ್ಷಿಪಣಿ ಪೂರೈಕೆ ಮತ್ತು ಇಂಧನ ಭದ್ರತೆ ಕುರಿತು ಮಹತ್ವದ ಚರ್ಚೆಗಳು ನಡೆದಿದ್ದು, ಭಾರತದ ಸಮತೋಲಿತ ವಿದೇಶಾಂಗ ನೀತಿಗೆ ಇದು ಸಾಕ್ಷಿಯಾಗಿದೆ. ಮತ್ತಷ್ಟು ಓದಿ
ಬ್ರಿಕ್ಸ್ (BRICS) 2026ರ ಶೃಂಗಸಭೆಯ ಆತಿಥ್ಯ ವಹಿಸಲು ಭಾರತ ಸಜ್ಜಾಗುತ್ತಿದ್ದು, ಸಂಸ್ಥೆಯಲ್ಲಿ ತನ್ನ ಪ್ರಭಾವಿ ಸ್ಥಾನವನ್ನು ಮತ್ತಷ್ಟು ಗಟ್ಟಿಮಾಡಿಕೊಂಡಿದೆ. 2012ರ ಶೃಂಗಸಭೆಯ ಸಮಯದಲ್ಲಿ ಎದುರಾಗಿದ್ದ ‘ದುರ್ಬಲ ಆರ್ಥಿಕತೆ’ ಎಂಬ ಅಪವಾದವನ್ನು ಹಿಮ್ಮೆಟ್ಟಿಸಿರುವ ಭಾರತ, ಇಂದು ಜಾಗತಿಕ ಮಟ್ಟದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಮತ್ತಷ್ಟು ಓದಿ
ಪ್ರಧಾನಿ ಮೋದಿ ನೇತೃತ್ವದಲ್ಲಿ ಸೆ. 12-13ರಂದು ನವದೆಹಲಿಯ ಭಾರತ ಮಂಟಪದಲ್ಲಿ 18ನೇ ಬ್ರಿಕ್ಸ್ ಶೃಂಗಸಭೆ ನಡೆಯಲಿದೆ. ಪುಟಿನ್, ಕ್ಸಿ ಜಿನ್‌ಪಿಂಗ್ ಸೇರಿ ಜಾಗತಿಕ ನಾಯಕರು ಭಾಗವಹಿಸಲಿದ್ದು, ಸ್ಥಳೀಯ ಕರೆನ್ಸಿ ವಹಿವಾಟು, AI, ಡಿಜಿಟಲ್ ವ್ಯಾಪಾರ ಹಾಗೂ ‘ಜಾಗತಿಕ ದಕ್ಷಿಣದ’ ಅಭಿವೃದ್ಧಿ ಕುರಿತು ಪ್ರಮುಖ ಚರ್ಚೆಗಳು ನಡೆಯಲಿವೆ. ಮತ್ತಷ್ಟು ಓದಿ
ದೊಡ್ಡೇರಿ ಫಾರ್ಮ್‌ಹೌಸ್ ನಕಲಿ ಔಷಧ ಪ್ರಕರಣಕ್ಕೆ ಸಂಬಂಧಿಸಿದಂತೆ, ಎಸ್ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ಕರ್ನಾಟಕ, ಮುಂಬೈ ಸೇರಿದಂತೆ 6 ರಾಜ್ಯಗಳ 10 ಕಡೆ ದಾಳಿ ನಡೆಸಿವೆ. ನಕಲಿ ಬಾಟಲ್, ಲೇಬಲ್ ಬಳಸಿ ಔಷಧ ಸರಬರಾಜು ಮಾಡುತ್ತಿದ್ದ ಕಿಂಗ್‌ಪಿನ್ ಪ್ರಶಾಂತ್ ಹಾಗೂ ಕಂಪನಿಗಳ ಜಾಲವನ್ನು ಅಧಿಕಾರಿಗಳು ಜಾಲಾಡುತ್ತಿದ್ದಾರೆ.
ಭಾರತ್ ಮಂಟಪದಲ್ಲಿ ನಡೆಯಲಿರುವ 18ನೇ ಬ್ರಿಕ್ಸ್ ಶೃಂಗಸಭೆಗೆ ವಿಶ್ವದ ಹಲವು ಪ್ರಮುಖ ದೇಶಗಳ ಗಣ್ಯರು ಹಾಗೂ ನಾಯಕರು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವುದೇ ಲೋಪದೋಷ ಉಂಟಾಗದಂತೆ ತಡೆಯಲು 12 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿ, ಪ್ರವೇಶ ದ್ವಾರಗಳು ಸೇರಿದಂತೆ ಇಡೀ ಆವರಣದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಭಾರತ್ ಮಂಟಪದ 8ಕ್ಕೂ ಹೆಚ್ಚು ಪ್ರವೇಶ ಗೇಟ್‌ಗಳನ್ನು ವಿಶೇಷ ಹೂವುಗಳಿಂದ ಅಲಂಕರಿಸಲಾಗಿದ್ದು, ಪ್ರತಿ ಗೇಟ್‌ನಲ್ಲೂ ಹೆಚ್ಚುವರಿ ತಪಾಸಣೆ ಮತ್ತು ಟೈಟ್ ಸೆಕ್ಯುರಿಟಿ ವ್ಯವಸ್ಥೆ ಮಾಡಲಾಗಿದೆ.
ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಮುಖ ಆರೋಪಿಗಳಾದ ಮಧ್ಯವರ್ತಿ ಬಸವರಾಜ್ ಕನ್ನಾಳೆ ಮತ್ತು ನಿಲಂಬಿತ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗ್ಯಾಂಗ್‌ವಾರ್‌ರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ನ್ಯಾಯಾಲಯದ ಅನುಮತಿ ಪಡೆದು ಇಂದು ಸಂಜೆ 5 ಗಂಟೆಯವರೆಗೆ ವಿಚಾರಣೆ ನಡೆಸಲಾಗುತ್ತಿದ್ದು, ಆರ್ಥಿಕ ಅಕ್ರಮಗಳ ತನಿಖೆಗಾಗಿ ಅಗತ್ಯ ಬಿದ್ದರೆ ಇಬ್ಬರನ್ನೂ ಬಾಡಿ ವಾರೆಂಟ್ ಆಧರಿಸಿ ತಮ್ಮ ಕಸ್ಟಡಿಗೆ ಪಡೆಯುವ ಸಾಧ್ಯತೆಯಿದೆ.
ಹಾಸನದಲ್ಲಿ ಒಂದೇ ದಿನ ಇಬ್ಬರು ಸರ್ಕಾರಿ ಅಧಿಕಾರಿಗಳು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ವೆಂಕಟೇಶ್ (55) ಮನೆಗೆ ತೆರಳಿದ್ದಾಗ ನೆರವಿಗೆ ಯಾರೂ ಇಲ್ಲದೆ ಮೃತಪಟ್ಟಿದ್ದು, ಸಿಬ್ಬಂದಿ ಭೇಟಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ಮತ್ತೊಂದೆಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಅಧೀಕ್ಷಕ ವೇಣುಗೋಪಾಲ್ (45) ಸದಾಶಿವನಗರದ ನಿವಾಸದಲ್ಲಿ ಹೃದಯಾಘಾತಕ್ಕೊಳಗಾಗಿ ಆಸ್ಪತ್ರೆಗೆ ಒಯ್ಯುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ.
ತುಮಕೂರು ಜಿಲ್ಲೆಯ ಪಾವಗಡದ ನಾಗಭೂಷಣ್ ಎಂಬುವವರ ಜಮೀನಿನ ಶೆಡ್‌ಗೆ ‘ಕಾಮ್ರೇಡ್ ದೇವಣ್ಣ’ ಹೆಸರಿನಲ್ಲಿ 5 ಲಕ್ಷ ರೂ. ಡಿಮ್ಯಾಂಡ್ ಮಾಡಿ ತೆಲುಗಿನಲ್ಲಿ ಬರೆದ ಬೆದರಿಕೆ ಪತ್ರ ಸಿಕ್ಕಿದೆ. ಪ್ರಕರಣದ ಆರೋಪಿ ವೆಂಕಟೇಶ್ ಮೇಲಿನ ಕೇಸ್ ನಡೆಸಲು ಹಣ ನೀಡಬೇಕೆಂದು, ತಪ್ಪಿದರೆ ಅನಾಹುತವಾಗುವುದೆಂದು ಹೆದರಿಸಲಾಗಿದೆ. ನಕಲಿ ನಕ್ಸಲ್ ವೆಂಕಟೇಶನೇ ಈ ಕೆಲಸ ಮಾಡಿದ್ದಾನೆಂಬ ಅನುಮಾನದ ಮೇಲೆ ಪಾವಗಡ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಳೆಗಾಲದಲ್ಲಿ ನಿರಂತರ ವಿದ್ಯುತ್ ವ್ಯತ್ಯಯ ಹಾಗೂ ದೂರುಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಲೈನ್‌ಮ್ಯಾನ್ ಸೇರಿದಂತೆ ಖಾಲಿ ಇರುವ ಸಿಬ್ಬಂದಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಲು ಒತ್ತಾಯಿಸಿದರು. ಸಹಾಯಕ ಎಂಜಿನಿಯರ್ ಜಯದೇವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವರ್ತಕರ ಸಂಘದ ಪೂರ್ಣೇಶ್ ಮಲೆಬೈಲ್ ಹಾಗೂ ಎಂ.ವಿ. ಜಯರಾಮ್ ಉಪಸ್ಥಿತರಿದ್ದರು.
ಹೈದರಾಬಾದ್‌ನಿಂದ 15 ಅಡಿ ಎತ್ತರದ ಗಣೇಶ ಮೂರ್ತಿಯನ್ನು ತರುವಾಗ ವಿದ್ಯುತ್ ತಂತಿ ತಾಗಿ ತುಂಡುಬಿದ್ದು, ಸಿರವಾರದ ಪ್ರೇಮ್ (26) ಎಂಬ ಯುವಕ ಮೃತಪಟ್ಟ ಘಟನೆ ರಾಯಚೂರು ಜಿಲ್ಲೆಯ ಅತ್ತನೂರಿನಲ್ಲಿ ನಡೆದಿದೆ. ಆಸ್ಪತ್ರೆಗೆ ಒಯ್ಯುವ ಮಾರ್ಗಮಧ್ಯೆ ಆತ ಕೊನೆಯುಸಿರೆಳೆದಿದ್ದು, ಸಿರವಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಶಾಲಾ-ಕಾಲೇಜುಗಳಿಗೆ ಸಮಯಕ್ಕೆ ಸರಿಯಾಗಿ ತೆರಳಲು ಸಮರ್ಪಕ ಬಸ್ ವ್ಯವಸ್ಥೆಯಿಲ್ಲದೆ ಆಕ್ರೋಶಗೊಂಡ ವಿದ್ಯಾರ್ಥಿಗಳು ಬಾಗಲಕೋಟೆ ಜಿಲ್ಲೆಯ ಕೆರೂರು ಬಸ್ ನಿಲ್ದಾಣದ ಬಳಿ ಹುಬ್ಬಳ್ಳಿ-ವಿಜಯಪುರ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಇದರಿಂದ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಯಿತು. ಅಧಿಕಾರಿಗಳು ಸ್ಥಳಕ್ಕೆ ಬಂದು ಭರವಸೆ ನೀಡುವವರೆಗೆ ಜಾಗ ಬಿಡುವುದಿಲ್ಲವೆಂದು ಪಟ್ಟು ಹಿಡಿದರು.
ತಮಿಳುನಾಡಿನ ವೆಲ್ಲೂರಿನಲ್ಲಿ ನಿರ್ಮಾಣ ಹಂತದಲ್ಲಿದ್ದ ಚರ್ಚ್‌ನ ಮೇಲ್ಚಾವಣಿ ಏಕಾಏಕಿ ಕುಸಿದು ಬಿದ್ದು ಮೂವರು ಕಾರ್ಮಿಕರು ದುರಂತವಾಗಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 11 ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಚಿಕಿತ್ಸೆಗಾಗಿ ವೆಲ್ಲೂರು ಹಾಗೂ ನೆರೆಯ ಆಂಧ್ರಪ್ರದೇಶದ ಚಿತ್ತೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
Published On - 9:06 am, Fri, 11 September 26