ಎ ಮತ್ತು ಬಿ ಖಾತಾ ಎಂದರೇನು? ಗುರುತಿಸುವುದು ಹೇಗೆ, ಬಿ ಖಾತಾ ಇದ್ದರೆ ಏನು ಮಾಡಬೇಕು? ಇಲ್ಲಿದೆ ಮಾಹಿತಿ

|

Updated on: Jan 10, 2025 | 12:26 PM

ಆಸ್ತಿ ಖರೀದಿ, ನೋಂದಣಿ ಇತ್ಯಾದಿ ವಿಚಾರ ಬಂದಾಗ ಎ ಖಾತಾ, ಬಿ ಖಾತಾ ಹೆಸರುಗಳನ್ನು ಸಾಮಾನ್ಯವಾಗಿ ಕೇಳುತ್ತಿರುತ್ತೇವೆ. ಹಾಗಾದರೆ, ಇವೆರಡರ ನಡುವಣ ವ್ಯತ್ಯಾಸವೇನು? ಎ ಖಾತಾ ಹಾಗೂ ಬಿ ಖಾತಾ ದಾಖಲೆ ಹೊಂದಿರುವವರಿಗೆ ಇರುವ ಉಪಯೋಗ ಹಾಗೂ ತೊಂದರೆಗಳೇನು? ಮಾಹಿತಿ ತಿಳಿಯಲು ಮುಂದೆ ಓದಿ.

ಎ ಮತ್ತು ಬಿ ಖಾತಾ ಎಂದರೇನು? ಗುರುತಿಸುವುದು ಹೇಗೆ, ಬಿ ಖಾತಾ ಇದ್ದರೆ ಏನು ಮಾಡಬೇಕು? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ಆಸ್ತಿ ಖರೀದಿ ಮಾಡುವ ಸಂದರ್ಭದಲ್ಲಿ, ಅದರಲ್ಲಿಯೂ ಬೆಂಗಳೂರಿನಲ್ಲಿ ಆಸ್ತಿ ಖರೀದಿಸುವಾಗ ಸಂಬಂಧಪಟ್ಟ ಆಸ್ತಿ ದಾಖಲೆಗಳ ಬಗ್ಗೆ ಕೂಲಂಕಷವಾಗಿ ಪರಿಶೀಲಿಸುವುದು ಬಹಳ ಮುಖ್ಯವಾಗುತ್ತದೆ. ಅದರಲ್ಲಿಯೂ ಆ ಆಸ್ತಿ ಯಾವ ಖಾತಾದಡಿ ಉಲ್ಲೇಖಿಸಲ್ಪಟ್ಟಿದೆ ಎಂಬುದನ್ನು ತಿಳಿಯುವುದು ಅಗತ್ಯ. ಮುಖ್ಯವಾಗಿ ಆಸ್ತಿ ದಾಖಲೆಗಳನ್ನು ಎ ಖಾತಾ ಹಾಗೂ ಬಿ ಖಾತಾ ಎಂದು ವಿಂಗಡಿಸಿರುತ್ತಾರೆ. ಹಾಗಾದರೆ ಇವುಗಳ ನಡುವಣ ವ್ಯತ್ಯಾಸವೇನು? ಎ ಖಾತಾ ಇದ್ದರೆ ಒಳ್ಳೆಯದೇ ಅಥವಾ ಬಿ ಖಾತಾ ಇದ್ದರೆ ಒಳ್ಳೆಯದೇ? ಅವುಗಳನ್ನು ಗುರುತಿಸುವುದು ಹೇಗೆ ಎಂಬ ಅನುಮಾನ ಬರುವುದು ಸಹಜ.

ಖಾತಾ ಪ್ರಮಾಣ ಪತ್ರ ಎಂದರೇನು?

ಖಾತಾ ಪ್ರಮಾಣಪತ್ರವು ಬೆಂಗಳೂರಿನಲ್ಲಿರುವ ಆಸ್ತಿಯ ಮಾಲೀಕತ್ವದ ವಿವರಗಳನ್ನು ಮೌಲ್ಯೀಕರಿಸುವ ಕಾನೂನು ದಾಖಲೆಯಾಗಿದೆ. ಬಿಬಿಎಂಪಿಯಿಂದ ನೀಡಲಾದ ಈ ಪ್ರಮಾಣಪತ್ರವು ಆಸ್ತಿಯ ಗಾತ್ರ, ಪ್ರದೇಶ, ಸ್ಥಳ ಮತ್ತು ಪ್ರಕಾರದ (ವಸತಿ ಅಥವಾ ವಾಣಿಜ್ಯ) ಪ್ರಮುಖ ಮಾಹಿತಿಯನ್ನು ಒಳಗೊಂಡಿರುತ್ತದೆ. ಬೆಂಗಳೂರಿನ ಆಸ್ತಿ ತೆರಿಗೆ ಸಂಗ್ರಹವನ್ನು ಸರಳಗೊಳಿಸಲು 2007 ರಲ್ಲಿ ಖಾತಾ ವ್ಯವಸ್ಥೆಯನ್ನು ಪರಿಚಯಿಸಲಾಯಿತು.

ಎ ಖಾತಾ ಎಂದರೇನು?

ಖಾತಾ ಪ್ರಮಾಣಪತ್ರವು, ಆಸ್ತಿಯು ಸಂಬಂಧಪಟ್ಟ ಸಂಸ್ಥೆಗಳಿಂದ ಅಗತ್ಯವಿರುವ ಎಲ್ಲಾ ಅನುಮೋದನೆಗಳನ್ನು ಪಡೆದುಕೊಂಡಿದ್ದರೆ ಮತ್ತು ಬಿಲ್ಡಿಂಗ್ ಬೈಲಾಗಳು, ಆಸ್ತಿ ತೆರಿಗೆ ಸೇರಿದಂತೆ ನಿಗದಿತ ಮಾನದಂಡಗಳಿಗೆ ಅನುಸಾರವಾಗಿ ನಿರ್ಮಿಸಲಾಗಿದ್ದರೆ ಅದನ್ನು ಕಾನೂನುಬದ್ಧವಾಗಿದೆ ಎಂದು ಮೌಲ್ಯೀಕರಿಸಲಾಗುತ್ತದೆ. ಸರಳವಾಗಿ ಹೇಳುವುದಾದರೆ, ಆಸ್ತಿಯು ಸಂಪೂರ್ಣವಾಗಿ ಕಾನೂನುಬದ್ಧವಾಗಿದ್ದರೆ, ಅವುಗಳನ್ನು ಎ ಖಾತಾ ಎಂದು ವರ್ಗೀಕರಿಸಲಾಗುತ್ತದೆ.

ಬಿ ಖಾತಾ ಎಂದರೇನು?

ಆಸ್ತಿ ನಿಯಮಗಳನ್ನು ಉಲ್ಲಂಘಿಸಿ ನಿರ್ಮಾಣವಾಗಿರುವ ಕಟ್ಟಡಗಳು, ಲೇಔಟ್‌ಗಳು, ಅಥವಾ ಕಂದಾಯ ನಿವೇಶನಗನ್ನು ಬಿಬಿಎಂಪಿಯು ಬಿ ಖಾತಾ ಎಂದು ವರ್ಗೀಕರಿಸಿರುತ್ತದೆ. ಹಾಗೆಂದ ಮಾತ್ರಕ್ಕೆ ಬಿನ ಖಾತಾ ಹೊಂದಿರುವ ಆಸ್ತಿಗಳೆಲ್ಲ ಸಂಪೂರ್ಣ ಕಾನೂನುಬಾಹಿರ ಎಂದರ್ಥವಲ್ಲ. ನಿರ್ದಿಷ್ಟ ಆಸ್ತಿಯ ಅಥವಾ ಕಟ್ಟಡದ ಕನ್ವರ್ಷನ್ ಪ್ರಕ್ರಿಯೆಯಲ್ಲಿ, ನಿರ್ಮಾಣದಲ್ಲಿ ಅಥವಾ ಇತರ ಯಾವುದೇ ಪ್ರಕ್ರಿಯೆಯಲ್ಲಿ ನಿಯಮಗಳ ಉಲ್ಲಂಘನೆಯಾಗಿದ್ದರೆ ಬಿ ಖಾತಾ ನೀಡಲಾಗುತ್ತದೆ. ಬಿ ಖಾತಾ ಹೊಂದಿರುವ ಆಸ್ತಿ, ಕಟ್ಟಡಗಳು ಸಹ ಬಿಬಿಎಂಪಿಯ ತೆರಿಗೆ ವ್ಯಾಪ್ತಿಗೆ ಒಳಪಟ್ಟಿರುತ್ತವೆ. ಸರಳವಾಗಿ ಹೇಳುವುದಾದರೆ, ನಾಗರಿಕ ಶುಲ್ಕಗಳು ಮತ್ತು ತೆರಿಗೆಗಳ ಪಾವತಿಯ ಹೊರತಾಗಿಯೂ ಸಂಪೂರ್ಣವಾಗಿ ಕಾನೂನುಬದ್ಧವಲ್ಲದ ಆಸ್ತಿಯೇ ಬಿ ಖಾತಾ.

ಬಿ ಖಾತಾ ಕೊಡಲು ಕಾರಣವೇನು?

ನಿರ್ಮಾಣದ ಸಮಯದಲ್ಲಿ ಕಟ್ಟಡದ ಬೈಲಾಗಳನ್ನು ಉಲ್ಲಂಘಿಸುವುದು, ಕಂದಾಯ ಭೂಮಿಯಲ್ಲಿ ನಿರ್ಮಾಣ, ಅನಧಿಕೃತ ಬಡಾವಣೆಗಳಲ್ಲಿ ಕಟ್ಟಡ ನಿರ್ಮಾಣ, ಪೂರ್ಣಗೊಳಿಸುವಿಕೆ ಅಥವಾ ವಿತರಣೆ ಪ್ರಮಾಣಪತ್ರಗಳ ಕೊರತೆ ಇತ್ಯಾದಿ ಇದ್ದಲ್ಲಿ ಅಂಥ ಆಸ್ತಿಗೆ ಬಿ ಖಾತಾ ಪ್ರಮಾಣ ಪತ್ರ ನೀಡಲಾಗುತ್ತದೆ.

ಎ ಖಾತಾ, ಬಿ ಖಾತಾ ಗುರುತಿಸುವುದು ಹೇಗೆ?

ಬಿಬಿಎಂಪಿಯು ನಗರದ ಪ್ರತಿಯೊಂದು ಆಸ್ತಿಗೂ ಖಾತಾ ಪ್ರಮಾಣ ಪತ್ರವನ್ನು ನೀಡುತ್ತದೆ. ಹೀಗಾಗಿ ಆಸ್ತಿ ದಾಖಲೆಗಳಲ್ಲಿಯೂ ಖಾತಾ ಯಾವುದೆಂಬುದು ನಮೂದಾಗಿರುತ್ತದೆ. ಮತ್ತೊಂದೆಡೆ, ಎ ಖಾತಾ ಹಾಗೂ ಬಿ ಖಾತಾಗೆ ಬಿಬಿಎಂಪಿ ರಿಜಿಸ್ಟರ್ ಅನ್ನು ನಿರ್ವಹಿಸುತ್ತಿದೆ. ಹೀಗಾಗಿ ಆಸ್ತಿ ಇರುವ ವಾರ್ಡ್​​ ಮತ್ತು ಮಾಹಿತಿಯೊಂದಿಗೆ ಬಿಬಿಎಂಪಿಯಿಂದಲೂ ಖಾತಾ ವಿವರ ತಿಳಿದುಕೊಳ್ಳಬಹುದಾಗಿದೆ.

ಬಿ ಖಾತಾವನ್ನು ಎ ಖಾತಾಗೆ ಪರಿವರ್ತಿಸಲು ಸಾಧ್ಯವಿದೆಯೇ?

ಬಿ ಖಾತಾ ಹೊಂದಿದ ಮಾತ್ರಕ್ಕೆ ಆಸ್ತಿ ಮಾಲೀಕರು ಭಯಪಡಬೇಕಾಗಿಲ್ಲ. ನಿರ್ದಿಷ್ಟ ನಿಯಮಗಳ ಅನುಸಾರ ಬಿ ಖಾತಾವನ್ನು ಎ ಖಾತಾಗೆ ಪರಿವರ್ತಿಸಲು ಕೂಡ ಬಿಬಿಎಂಪಿ ಅವಕಾಶ ನೀಡುತ್ತದೆ. ಆದರೆ, ಇದು ಬಿ ಖಾತಾ ಆಸ್ತಿಯಲ್ಲಿ ಎಷ್ಟು ಪ್ರಮಾಣದಲ್ಲಿ ನಿಯಮಮಗಳ ಉಲ್ಲಂಘನೆಯಾಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ನಿರ್ದಿಷ್ಟ ಪ್ರಮಾಣದ ನಿಯಮ ಉಲ್ಲಂಘನೆಗೆ ದಂಡ ಪಾವತಿಸಿ, ನಂತರ ನಿಯಮಗಳನ್ನು ಪಾಲಿಸುವ ಮೂಲಕ ಬಿ ಖಾತಾವನ್ನು ಎ ಖಾತಾಗೆ ಪರಿವರ್ತಿಸಲು ಬಿಬಿಎಂಪಿ ಅವಕಾಶ ನೀಡಿದೆ.

ಇದನ್ನೂ ಓದಿ: ಬೆಂಗಳೂರು: ಬಿಬಿಎಂಪಿ ಇ ಖಾತಾ ಪಡೆಯಲು ಸುಸ್ತಾದವರಿಗೆ ಪಾಲಿಕೆ ಗುಡ್ ನ್ಯೂಸ್

2014 ರ ಡಿಸೆಂಬರ್​​ನಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪಿನ ಪ್ರಕಾರ, ಬಿ ಖಾತಾ ಆಸ್ತಿಗಳಿಗೆ ಸಂಪೂರ್ಣವಾದ ಕಾನೂನು ಮಾನ್ಯತೆ ಇಲ್ಲ. ಹಾಗೆಂದು ಅವುಗಳಿಗೂ ತೆರಿಗೆಗಳು ಅಥವಾ ನಾಗರಿಕ ಶುಲ್ಕಗಳ ಪಾವತಿ ಮಾಡಬೇಕಾಗುತ್ತದೆ. ಹೀಗೆ ಪಾವತಿಸುವುದರಿಂದ ಬಿ ಖಾತಾ ಆಸ್ತಿಯನ್ನು ಕಾನೂನುಬದ್ಧಗೊಳಿಸಿದಂತೆ ಆಗುವುದಿಲ್ಲ ಎಂಬುದನ್ನು ಗಮನಿಸಬೇಕಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:26 pm, Fri, 10 January 25