
ರಾಯಚೂರು/ಬಳ್ಳಾರಿ, ಸೆಪ್ಟೆಂಬರ್ 8: ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆ ಎಂಟನೇ ದಿನಕ್ಕೆ ಕಾಲಿಟ್ಟಿದೆ. ರಾಯಚೂರಿನ ಲಿಂಗಸುಗೂರಿನಿಂದ ಸೆಪ್ಟೆಂಬರ್ 1ರಂದು ಆರಂಭವಾದ ಪಾದಯಾತ್ರೆ ಇದೀಗ ಅಂತಿಮ ಹಂತ ತಲುಪಿದ್ದು, ಪ್ರತಿದಿನದ ಬೆಳವಣಿಗೆಗಳು ಗಮನ ಸೆಳೆಯುತ್ತಿವೆ. ರಸ್ತೆಯುದ್ದಕ್ಕೂ ಕಾರ್ಯಕರ್ತರ ಉತ್ಸಾಹ, ನಾಯಕರು ಸಾಗುವ ಮಾರ್ಗದಲ್ಲಿ ಹೂವಿನ ಮಳೆ ಹಾಗೂ ಜೆನ್‌ಝೀ ಯುವಕರೊಂದಿಗೆ ನಡೆಯುತ್ತಿರುವ ಸಂವಾದ ಪಾದಯಾತ್ರೆಯ ಪ್ರಮುಖ ಆಕರ್ಷಣೆಯಾಗಿವೆ. ಏಳು ದಿನಗಳ ಪಾದಯಾತ್ರೆ ಪೂರ್ಣಗೊಂಡಿದ್ದು, ಸೋಮವಾರ ಹಲವು ಬಿಜೆಪಿ ನಾಯಕರು ಹೆಜ್ಜೆ ಹಾಕಿದರು. ಸುಮಾರು 20 ಕಿಲೋಮೀಟರ್‌ಗಳಷ್ಟು ದೂರ ಪಾದಯಾತ್ರೆ ಸಾಗಿತು.
ಸಂಡೂರು ತಾಲೂಕಿನ ದರೋಜಿ ಗ್ರಾಮದಲ್ಲಿ ಸೋಮವಾರ ಅಂತ್ಯಗೊಂಡಿದ್ದ ಪಾದಯಾತ್ರೆ ಇಂದು ಕುಡಿತಿನಿವರೆಗೆ ಮುಂದುವರಿಯಲಿದೆ. ಬಳ್ಳಾರಿ ಚಲೋ ಪಾದಯಾತ್ರೆ ಇದೀಗ ಅಂತಿಮ ಘಟ್ಟ ಪ್ರವೇಶಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾಗಿದೆ.
ಹಳೆ ದರೋಜಿ ಗ್ರಾಮದಲ್ಲಿ ಮಾತನಾಡಿದ ಬಿವೈ ವಿಜಯೇಂದ್ರ, ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದಾದ್ಯಂತ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆರೋಪಿಸಿದರು. ರಾಜ್ಯದ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಜನೌಷಧ ಕೇಂದ್ರಗಳನ್ನು ಸರ್ಕಾರ ಮುಚ್ಚುತ್ತಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ಮುಖ್ಯಮಂತ್ರಿ ಬೆಂಗಳೂರಿನಲ್ಲಿ ಕುಳಿತಿದ್ದಾರೆ ಎಂದು ವಿಜಯೇಂದ್ರ ಟೀಕಿಸಿದರು.
ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಇತರ ಬಿಜೆಪಿ ನಾಯಕರು ಕೂಡ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷ ಕೌರವರ ಸ್ಥಾನದಲ್ಲಿದೆ ಎಂದು ಸಿ.ಟಿ. ರವಿ ಟೀಕಿಸಿದರು. ಬರ ನಿರ್ವಹಣೆ ವಿಚಾರದಲ್ಲಿಯೂ ಸರ್ಕಾರದ ವಿರುದ್ಧ ಮಾಜಿ ಸಚಿವ ಬಿ. ಶ್ರೀರಾಮುಲು ಹಾಗೂ ಸಂಸದ ಬಿ.ವೈ. ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ರೈತರ ಸಮಸ್ಯೆಗಳಿಗೆ ಸರ್ಕಾರ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ಅವರು ಆರೋಪಿಸಿದರು.
ಇನ್ನೊಂದೆಡೆ, ಬಿಜೆಪಿ ನಡೆಸುತ್ತಿರುವ ಬಳ್ಳಾರಿ ಚಲೋ ಪಾದಯಾತ್ರೆಯನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಟೀಕಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಬಳ್ಳಾರಿ ಚಲೋವನ್ನು ‘ಕೆಜೆಪಿ, ಬಿಎಸ್‌ಆರ್, ಕೆಆರ್‌ಪಿಪಿ ಪಿತೂರಿ ಯಾತ್ರೆ’ ಎಂದು ವ್ಯಂಗ್ಯವಾಡಿದ್ದಾರೆ. ಪಾದಯಾತ್ರೆಯ ನಡುವೆಯೇ ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ವಾಕ್ಸಮರ ಮುಂದುವರಿದಿದೆ.
ಬಿಜೆಪಿಯ ಬಳ್ಳಾರಿ ಚಲೋ ಪಾದಯಾತ್ರೆ ಇದೀಗ ಅಂತಿಮ ಹಂತಕ್ಕೆ ತಲುಪಿದೆ. ಸೆಪ್ಟೆಂಬರ್ 10ರಂದು ಬಳ್ಳಾರಿಯಲ್ಲಿ ಬೃಹತ್ ಸಮಾರೋಪ ಸಮಾವೇಶ ನಡೆಯಲಿದೆ.
ಸಮಾರೋಪ ಸಮಾವೇಶವನ್ನು ಅತ್ಯಂತ ದೊಡ್ಡ ಮಟ್ಟದಲ್ಲಿ ಆಯೋಜಿಸಲು ಬಿಜೆಪಿ ಸಿದ್ಧತೆ ನಡೆಸಿದ್ದು, ಕೇಂದ್ರದ ಬಿಜೆಪಿ ನಾಯಕರು ಕೂಡ ಭಾಗವಹಿಸುವ ನಿರೀಕ್ಷೆಯಿದೆ. ಪಾದಯಾತ್ರೆಯ ಅಂತಿಮ ದಿನದ ಸಮಾವೇಶದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಮತ್ತಷ್ಟು ವಾಗ್ದಾಳಿ ನಡೆಸುವ ಸಾಧ್ಯತೆ ಇದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ