AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಮರಾಜನಗರ ಅರಣ್ಯದಲ್ಲಿ ಎನ್‌ಕೌಂಟರ್: ಮೂವರು ಬಲಿ, DRFO ಕಚೇರಿ ಧ್ವಂಸ

ಚಾಮರಾಜನಗರದ ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಅರಣ್ಯ ಸಿಬ್ಬಂದಿ ನಡೆಸಿದ ಎನ್‌ಕೌಂಟರ್‌ಗೆ ಮೂವರು ಬಲಿಯಾಗಿದ್ದಾರೆ. ಕಾಡುಪ್ರಾಣಿ ಬೇಟೆಯಾಡುತ್ತಿದ್ದಾಗ ಸಿಬ್ಬಂದಿ ಎದುರಾದಾಗ, ಗುಂಡಿನ ದಾಳಿ ನಡೆಸಿದ್ದರಿಂದ ಆತ್ಮರಕ್ಷಣೆಗಾಗಿ ಸಿಬ್ಬಂದಿ ನಡೆಸಿದ ಪ್ರತಿದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ. ಘಟನೆ ನಂತರ, ಮೃತರ ಸಂಬಂಧಿಕರು ಅರಣ್ಯ ಇಲಾಖೆ ಕಚೇರಿ ಧ್ವಂಸಗೊಳಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಚಾಮರಾಜನಗರ ಅರಣ್ಯದಲ್ಲಿ ಎನ್‌ಕೌಂಟರ್: ಮೂವರು ಬಲಿ, DRFO ಕಚೇರಿ ಧ್ವಂಸ
ಚಾಮರಾಜನಗರ ಎನ್‌ಕೌಂಟರ್
ಸೂರಜ್ ಪ್ರಸಾದ್ ಎಸ್.ಎನ್
| Edited By: |

Updated on:Aug 15, 2026 | 11:30 AM

Share

ಚಾಮರಾಜನಗರ,ಆ.15: ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಶಾಗ್ಯ ಸಮೀಪದ ಹೊಳೆದಟ್ಟಿ ಅರಣ್ಯ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿ ನಡೆಸಿದ ಎನ್‌ಕೌಂಟರ್‌ಗೆ ಮೂವರು ಬಲಿಯಾಗಿದ್ದಾರೆ. ಘಟನೆಯ ನಂತರ ಆಕ್ರೋಶಗೊಂಡ ಮೃತರ ಸಂಬಂಧಿಕರು ಅರಣ್ಯ ಇಲಾಖೆಯ ಕಚೇರಿಯನ್ನು ಧ್ವಂಸಗೊಳಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಶಾಗ್ಯ ವ್ಯಾಪ್ತಿಯ ದಟ್ಟಿ ಅರಣ್ಯ ಪ್ರದೇಶದಲ್ಲಿ ಕಾಡಿಗೆ ನುಗ್ಗಿ ಬೇಟೆಗಾರರು ಕಾಡುಪ್ರಾಣಿಯನ್ನು ಬೇಟೆಯಾಡಿ ಅದರ ಮಾಂಸವನ್ನು ಬೇರ್ಪಡಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಗಸ್ತಿನಲ್ಲಿದ್ದ ಕಾವೇರಿ ವನ್ಯಜೀವಿಧಾಮದ ಅರಣ್ಯ ಸಿಬ್ಬಂದಿ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ. ತಕ್ಷಣವೇ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ಶರಣಾಗುವಂತೆ ಸಿಬ್ಬಂದಿ ಸೂಚಿಸಿದ್ದಾರೆ. ಆದರೆ ಆ ಮೂವರು ಅರಣ್ಯ ಸಿಬ್ಬಂದಿ ಮೇಲೆಯೇ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಅರಣ್ಯ ಸಿಬ್ಬಂದಿ ಆತ್ಮರಕ್ಷಣೆಗಾಗಿ ನಡೆಸಿದ ಕೌಂಟರ್ ಫೈರಿಂಗ್‌ನಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತ ಮೂವರನ್ನು ಹನೂರು ತಾಲೂಕಿನ ತೋಮಿಯರ್​ಪಾಳ್ಯದ ನಿವಾಸಿಗಳಾದ ಕುಮಾರ್, ಆಂಥೋಣಿಸ್ವಾಮಿ ಹಾಗೂ ಪೀಟರ್ ಎಂದು ಗುರುತಿಸಲಾಗಿದೆ. ಎನ್‌ಕೌಂಟರ್ ಸುದ್ದಿ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಮೃತರ ಸಂಬಂಧಿಕರು ಹಾಗೂ ಗ್ರಾಮಸ್ಥರು ಹನೂರು ತಾಲೂಕಿನ ಶಾಗ್ಯ DRFO (ಉಪ ವಲಯ ಅರಣ್ಯಾಧಿಕಾರಿ) ಕಚೇರಿಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಪ್ರಸಿದ್ಧ ಹೋಟೆಲ್‌ಗಳಿಗೆ ಶಾಕ್! 6 ಹೋಟೆಲ್​ಗಳಿಗೆ ಒಟ್ಟೂ 1.6 ಲಕ್ಷ ರೂ ಭಾರಿ ದಂಡ

ಮೃತದೇಹಗಳನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಕುಟುಂಬ ಸದಸ್ಯರು ಆಗಮಿಸಿದ ನಂತರ ಮರಣೋತ್ತರ ಪರೀಕ್ಷೆ ನಡೆಯಲಿದೆ. ಈ ಬಗ್ಗೆ ಕುಟುಂಬಸ್ಥರು ಅಕ್ರೋಶ ವ್ಯಕ್ತಪಡಿಸಿದ್ದಾರೆ. “ದನ ಮೇಯಿಸಲು ಹೋಗಿದ್ದಾರೆ. ಪ್ರಾಣಿಗಳನ್ನು ಬೇಟೆ ಮಾಡಿದ್ದಾರೆ ಎಂಬುದಕ್ಕೆ ಯಾವ ಸಾಕ್ಷಿ ಇದೆ. ಅವರು ಕೃಷಿಕರು. ಒಂದು ವೇಳೆ ಬೇಟೆ ಮಾಡಲು ಹೋಗಿದ್ದರೆ ಎಂದರೆ ಅವರನ್ನು ಬಂಧಿಸಬೇಕಿತ್ತು. ಶೂಟ್​​​​​ ಯಾಕೆ ಮಾಡಬೇಕಿತ್ತು. ತರಬೇತಿಯಲ್ಲಿರುವ ಗಾರ್ಡ್​​​ಗಳು ಈ ಕೆಲಸ ಮಾಡಿದ್ದಾರೆ. ನಾವು ಅವರನ್ನು ಕುಟುಂಬದವರಂತೆ ನೋಡುತ್ತೇವೆ. ಈ ಬಗ್ಗೆ ತನಿಖೆ ಆಗಬೇಕು” ಎಂದು ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:28 am, Sat, 15 August 26

Follow Us