ಶೂಟೌಟ್ ಬೆನ್ನಲ್ಲೇ ಚಾಮರಾಜನಗರದ ಜಮೀನಿನಲ್ಲಿ ಹುಲಿ ಕಳೇಬರ ಪತ್ತೆ
Bommalapura Tiger Carcass: ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಪುರ ಗ್ರಾಮದ ಸೂರ್ಯಕಾಂತಿ ತೋಟದಲ್ಲಿ ಹುಲಿಯ ಕಳೇಬರ ಪತ್ತೆಯಾಗಿದೆ. ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಕುಂದಕೆರೆ ವಲಯದ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮುಖ್ಯಾಂಶಗಳು
- ಸೂರ್ಯಕಾಂತಿ ತೋಟದಲ್ಲಿ ಹುಲಿಯ ಕಳೇಬರ ಪತ್ತೆ
- ಸ್ಥಳಕ್ಕೆ ಬಂಡೀಪುರ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ, ಪರಿಶೀಲನೆ
- ಹುಲಿಯ ಸ್ಯಾಂಪಲ್ ಸಂಗ್ರಹಿಸಿದ ಪಶು ವೈದ್ಯರು
ಚಾಮರಾಜನಗರ, ಆಗಸ್ಟ್ 27: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಪುರ ಗ್ರಾಮದ ಜಮೀನೊಂದರಲ್ಲಿ ಹುಲಿಯ (Tiger) ಕಳೇಬರ ಪತ್ತೆಯಾಗಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯ ವ್ಯಾಪ್ತಿಗೆ ಬರುವ ಬೊಮ್ಮಲಪುರ ಗ್ರಾಮದ ರೈತ ವಿಶ್ವನಾಥ್ ಎಂಬುವರಿಗೆ ಸೇರಿದ ಸೂರ್ಯಕಾಂತಿ ತೋಟದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಸದ್ಯ ಇದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
ತೋಟದಲ್ಲಿ ಹುಲಿ ಕಳೇಬರ ಪತ್ತೆ
ತೋಟದ ಕೆಲಸಕ್ಕೆ ತೆರಳಿದ ಸಂದರ್ಭದಲ್ಲಿ ಹುಲಿ ಮೃತಪಟ್ಟಿರುವುದು ಕಂಡುಬಂದಿದ್ದು, ತಕ್ಷಣವೇ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ರವಾನಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಬಂಡೀಪುರ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಮಾಡಿದ್ದಾರೆ.
ಹುಲಿಯ ಸಾವಿನ ಸುತ್ತ ಅನುಮಾನದ ಹುತ್ತ
ಹುಲಿಯ ಸಾವಿನ ಸುತ್ತ ಸದ್ಯ ಹಲವು ಅನುಮಾನಗಳು ದಟ್ಟವಾಗಿವೆ. ಯಾರಾದರೂ ಆಹಾರದಲ್ಲಿ ವಿಷವಿಕ್ಕಿ ಹುಲಿಯನ್ನು ಕೊಂದಿದ್ದಾರೆಯೇ ಅಥವಾ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದೆಯೇ ಎಂಬ ಬಗ್ಗೆ ಚರ್ಚೆಗಳು ಶುರುವಾಗಿವೆ. ಇನ್ನು ಸ್ಥಳಕ್ಕೆ ಭೇಟಿ ನೀಡಿದ ಪಶುವೈದ್ಯರ ತಂಡವು ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿ, ಅಗತ್ಯ ಸ್ಯಾಂಪಲ್ಸ್ ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಕ್ರಮಕೈಗೊಂಡಿದ್ದಾರೆ.
ಇದನ್ನೂ ಓದಿ: ಹುಲಿ ದಾಳಿಯಿಂದ ಸ್ವಲ್ಪದರಲ್ಲೇ ಪಾರಾಗಿದ್ದ ಯುವಕ: ಭೀತಿ ಮೂಡಿಸಿದ್ದ ವ್ಯಾಘ್ರ ಕೊನೆಗೂ ಬಲೆಗೆ
ಇನ್ನು ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಬಂದ ನಂತರವಷ್ಟೇ ಹುಲಿಯ ಸಾವಿಗೆ ನಿಖರ ಕಾರಣ ಬಹಿರಂಗವಾಗಲಿದೆ. ಸದ್ಯ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲಿ ಐದು ಹುಲಿಗಳ ಅನುಮಾನಾಸ್ಪದ ಸಾವು
ಇನ್ನು ಇತ್ತೀಚೆಗೆ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲಿ ತಾಯಿ ಹುಲಿ ಹಾಗೂ ಅದರ ನಾಲ್ಕು ಮರಿಗಳು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ತೀವ್ರ ಆತಂಕ ಮತ್ತು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಹನೂರು ತಾಲೂಕಿನ ಗಾಜನೂರು ಗ್ರಾಮದ ನಾಲ್ವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದರು.
ಇದನ್ನೂ ಓದಿ: ಜನರ ಸೇಡಿಗೆ ಬಲಿಯಾದ್ವಾ 5 ಹುಲಿಗಳು? ವ್ಯಾಘ್ರಗಳು ಸಾವಿಗೂ ಮುನ್ನ ನಡೆದಿದ್ದೇನು?
ಅರಣ್ಯ ಪ್ರದೇಶದಲ್ಲಿ ಮೇಯಲು ಬಿಟ್ಟಿದ್ದ ಹಸುವನ್ನು ಹುಲಿ ಕೊಂದು ತಿಂದಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿತ್ತು. ತಮ್ಮ ಜಾನುವಾರನ್ನು ಕಳೆದುಕೊಂಡು ಆಕ್ರೋಶಗೊಂಡ ಮಾಲೀಕರು, ಆ ಹಸುವಿನ ಅರ್ಧ ತಿಂದ ಕಳೇಬರಕ್ಕೆ ವಿಷ ಬೆರೆಸಿದ್ದರು ಎಂಬ ಶಂಕೆ ವ್ಯಕ್ತವಾಗಿತ್ತು. ಅದೇ ವಿಷಪೂರಿತ ಮಾಂಸವನ್ನು ತಾಯಿ ಹುಲಿ ಹಾಗೂ ಅದರ ನಾಲ್ಕು ಮರಿಗಳು ತಿಂದು ಪ್ರಾಣ ಕಳೆದುಕೊಂಡಿದ್ದ ಸಾಧ್ಯತೆ ದಟ್ಟವಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:49 pm, Thu, 27 August 26



