ಹನೂರು ಫೈರಿಂಗ್​​ ಪ್ರಕರಣ: ಧರಣಿ ನಿರತರಿಗೆ ಪ್ರಚೋದನೆ ನೀಡಿದ್ದು ಮರಿ ವೀರಪ್ಪನ್​​!; ವಿಡಿಯೋ ವೈರಲ್​​

ಹನೂರು ಶೂಟೌಟ್ ಖಂಡಿಸಿ ನಡೆದ ಧರಣಿಯಲ್ಲಿ ಮರಿ ವೀರಪ್ಪನ್ ಎಂದೇ ಕುಖ್ಯಾತನಾದ ಗಂಗನದೊಡ್ಡಿ ಗೋವಿಂದ ಪ್ರಚೋದನೆ ನೀಡಿರುವ ವಿಡಿಯೋ ವೈರಲ್ ಆಗಿದ್ದು, ಪ್ರಕರಣಕ್ಕೆ ಮತ್ತೊಂದು ಸ್ಫೋಟಕ ತಿರುವು ಸಿಕ್ಕಿದೆ. ಮತ್ತೊಂದೆಡೆ ಅರಣ್ಯಕ್ಕೆ ಬೆಂಕಿ ಇಟ್ಟ ಇವರು ಅಮಾಯಕರಾ? ಎಂದು ಪರಿಸರವಾದಿಗಳು ಪ್ರಶ್ನಿಸಿದ್ದಾರೆ. ರಾಜ್ಯ ಸರ್ಕಾರ ರಚಿಸಿರುವ ಮ್ಯಾಜಿಸ್ಟ್ರೇಟ್ ನೇತೃತ್ವದ ತನಿಖಾ ತಂಡ ನೀಡುವ ವರದಿ ಮೇಲೆ ಸದ್ಯ ಎಲ್ಲರ ಚಿತ್ತ ನೆಟ್ಟಿದೆ.

ಹನೂರು ಫೈರಿಂಗ್​​ ಪ್ರಕರಣ: ಧರಣಿ ನಿರತರಿಗೆ ಪ್ರಚೋದನೆ ನೀಡಿದ್ದು ಮರಿ ವೀರಪ್ಪನ್​​!; ವಿಡಿಯೋ ವೈರಲ್​​
ಮರಿ ವೀರಪ್ಪನ್ ಎಂದೇ ಕುಖ್ಯಾತಿ ಪಡೆದಿರುವ ಗಂಗನದೊಡ್ಡಿಯ ಗೋವಿಂದ
Image Credit source: Tv9 Kannada
Edited By:

Updated on: Aug 21, 2026 | 7:37 PM

ಮುಖ್ಯಾಂಶಗಳು

  • ಅರಣ್ಯ ಇಲಾಖೆಯ ಸಿಬ್ಬಂದಿ ಗುಂಡೇಟಿಗೆ ಮೂವರು ಸಾವು ಪ್ರಕರಣ
  • ಘಟನೆ ಬೆನ್ನಲ್ಲೇ ಪ್ರತಿಭಟನಾಕಾರರಿಗೆ ಪ್ರಚೋದನೆ ವಿಡಿಯೋ ವೈರಲ್​​
  • ಮರಿ ವೀರಪ್ಪನ್ ಎಂದೇ ಕುಖ್ಯಾತಿ ಪಡೆದ ಗೋವಿಂದನಿಂದ ಪ್ರಚೋದನೆ

ಚಾಮರಾಜನಗರ, ಆಗಸ್ಟ್​​ 21: ಹನೂರು ಬಳಿ ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ ಮೂವರು ಸಾವು ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಘಟನೆ ಖಂಡಿಸಿ ಧರಣಿ ನಡೆಸುತ್ತಿದ್ದವರಿಗೆ ವ್ಯಕ್ತಿಯೋರ್ವ ಪ್ರಚೋದನೆ ನೀಡುತ್ತಿರುವ ವಿಡಿಯೋ ಹರಿದಾಡುತ್ತಿದೆ. ಆತ ಯಾರೆಂಬ ಬಗ್ಗೆ ಇತಿಹಾಸ ಕೆದಕಿದಾಗ ಅವನು ಬೇರೆ ಯಾರೂ ಅಲ್ಲ, ಮರಿ ವೀರಪ್ಪನ್ ಎಂದೇ ಕುಖ್ಯಾತಿ ಪಡೆದಿರುವ ಗಂಗನದೊಡ್ಡಿಯ ಗೋವಿಂದ. ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಗಳಲ್ಲಿ ಹಲವು ಅಪರಾಧ ಪ್ರಕರಣ ಹೊಂದಿರುವ ಈತನೇ ಪ್ರತಿಭಟನಾಕಾರರಿಗೆ ಪ್ರಚೋದನೆ ನೀಡಿದ್ದ ಎನ್ನಲಾಗಿದೆ.

ವೈರಲ್​​ ವಿಡಿಯೋದಲ್ಲೇನಿದೆ?

2025ರ ಅ.2ರಂದು ಹನೂರು ತಾಲೂಕಿನ ಪಚ್ಚೆದೊಡ್ಡಿ ಅರಣ್ಯ ಪ್ರದೇಶದಲ್ಲಿ ದೈತ್ಯಕಾರದ ಹುಲಿಯನ್ನು ಕೊಂದು ತುಂಡು ಮಾಡಿ ಅಮಾನವೀಯವಾಗಿ ಸಾಯಿಸಿದ್ದ ಪ್ರಕರಣದಲ್ಲಿ ಗೋವಿಂದ ಪ್ರಮುಖ ಆರೋಪಿಯಾಗಿದ್ದ ಈತ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದಾನೆ ಎನ್ನಲಾಗಿದೆ. ಶೂಟೌಟ್ ಪ್ರಕರಣ ನಡೆದ ದಿನ ಹನೂರಿನಲ್ಲಿ ನಡೆದ ಧರಣಿನಿರತರಿಗೆ ನುಗ್ಗೋಣ, ಒಳಕ್ಕೇ ಹೋಗೋಣ ಎಂದು ಪ್ರಚೋದಿಸಿರುವ ವಿಡಿಯೋ ವೈರಲ್​​ ಆಗಿದೆ.

ಇದನ್ನೂ ಓದಿ: ಚಾಮರಾಜನಗರ ಫೈರಿಂಗ್​​ ಪ್ರಕರಣ: ಮೃತರು ಬೇಟೆಗಾರರು ಎಂಬುದಕ್ಕೆ ಅರಣ್ಯ ಇಲಾಖೆಯಿಂದ ಮತ್ತಷ್ಟು ಸಾಕ್ಷ್ಯ ರಿಲೀಸ್​​

‘ಅರಣ್ಯಕ್ಕೆ ಬೆಂಕಿ ಇಟ್ಟ ಇವರು ಅಮಾಯಕರಾ?’

ಇನ್ನು ಶೂಟೌಟ್ ನಡೆದ ಬಳಿಕ ಕಳ್ಳಬೇಟೆ ತಡೆ ಶಿಬಿರ, ವಸತಿ ಗೃಹಗಳ ಮೇಲೆ ದಾಳಿ ನಡೆದಿರುವುದು ಅರಣ್ಯ ಸಿಬ್ಬಂದಿಗಳಲ್ಲಿ ತೀವ್ರ ಭಯದ ವಾತಾವರಣ ಸೃಷ್ಟಿಸಿರುವ ಜೊತೆಗೆ ಪರಿಸರವಾದಿಗಳ ಆಕ್ರೋಶಕ್ಕೂ ಕಾರಣವಾಗಿದೆ. ದಾಳಿಯ ಬಗ್ಗೆ ಅರಣ್ಯ ಸಿಬ್ಬಂದಿ ಪೊಲೀಸ್ ಠಾಣೆಗಳಲ್ಲಿ ದೂರು ಸಲ್ಲಿಸಿದ್ದು, ಸರ್ಕಾರಿ ಆಸ್ತಿ ನಷ್ಟ ಮಾಡಿದವರ ಕಠಿಣ ಕ್ರಮಕ್ಕೆ ಒತ್ತಾಯಿಸಿದೆ. ಅರಣ್ಯಕ್ಕೆ ಬೆಂಕಿ ಇಟ್ಟ ಇವರು ಅಮಾಯಕರಾ? ಎಂದು ಪರಿಸರವಾದಿಗಳು ಕೂಡ ಪ್ರಶ್ನಿಸಿದ್ದಾರೆ.

ತನಿಖಾ ವರದಿಯತ್ತ ಎಲ್ಲರ ಚಿತ್ತ

ಮತ್ತೊಂದೆಡೆ ಪ್ರಕರಣ ಸಂಬಂಧ ತನಿಖೆಗೆ ರಾಜ್ಯ ಸರ್ಕಾರ ರಚಿಸಿರುವ ಮ್ಯಾಜಿಸ್ಟ್ರೇಟ್ ನೇತೃತ್ವದ ತನಿಖಾ ತಂಡ ನೀಡುವ ವರದಿ ಮೇಲೆ ಸದ್ಯ ಎಲ್ಲರ ದೃಷ್ಟಿ ನೆಟ್ಟಿದೆ. ಮೃತಪಟ್ಟವರು ನಿಜಕ್ಕೂ ಅಮಾಯಕರಾ? ಅಥವಾ ಅರಣ್ಯ ಇಲಾಖೆ ಹೇಳಿರುವಂತೆ ಬೇಟೆಗಾರರಾ? ಎಂಬೆಲ್ಲ ಪ್ರಶ್ನೆಗಳಿಗೆ ಈ ತನಿಖಾ ವರದಿ ಉತ್ತರ ನೀಡಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

Published On - 7:26 pm, Fri, 21 August 26

Loading...
Unable to load recommendations.
Follow Us