ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಗೆ ಕಪಾಳಮೋಕ್ಷ ಮಾಡಿದ ಸಚಿವ ವಿ.ಸೋಮಣ್ಣ
ಸಮಸ್ಯೆ ಹೇಳಿಕೊಳ್ಳಲು ಬಂದಿದ್ದ ಮಹಿಳೆಗೆ ಸಚಿವ ವಿ.ಸೋಮಣ್ಣ ಕಪಾಳಮೋಕ್ಷ ಮಾಡಿರುವಂತಹ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ನಿನ್ನೆ (ಅ.22) ಸಂಜೆ ನಡೆದಿದೆ.
ಚಾಮರಾಜನಗರ: ಸಮಸ್ಯೆ ಹೇಳಿಕೊಳ್ಳಲು ಬಂದಿದ್ದ ಮಹಿಳೆಗೆ ಸಚಿವ ವಿ.ಸೋಮಣ್ಣ ಕಪಾಳಮೋಕ್ಷ (slaps) ಮಾಡಿರುವಂತಹ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ನಿನ್ನೆ (ಅ.22) ಸಂಜೆ ನಡೆದಿದೆ. ಗ್ರಾಮದಲ್ಲಿ 175 ಜನರಿಗೆ ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮವನ್ನು ಮಧ್ಯಾಹ್ನ 3.30ಕ್ಕೆ ನಿಗದಿ ಮಾಡಲಾಗಿತ್ತು. ಆದರೆ ಸಂಜೆ 6:30 ಕ್ಕೆ ಸಚಿವರು ಆಗಮಿಸಿದ್ದಾರೆ. ಹೀಗಾಗಿ ನಿವೇಶನದ ಹಕ್ಕುಪತ್ರ ಪಡೆಯಲು ನೂಕುನುಗ್ಗಲು ಉಂಟಾಗಿದೆ. ತನ್ನ ಸಮಸ್ಯೆ ಹೇಳಿಕೊಳ್ಳಲು ಮಹಿಳೆ ಓರ್ವರು ಸಚಿವರ ಬಳಿ ತೆರಳಿದ್ದಾರೆ. ಈ ವೇಳೆ ಸೋಮಣ್ಣ ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಾರೆ. ಘಟನೆ ನಂತರ ಪರಿಸ್ಥಿತಿಯನ್ನ ಪೊಲೀಸರು ತಿಳಿಗೊಳಿಸಿದರು.
ಸಚಿವರು ಹೊಡೆಯಲಿಲ್ಲ ಎಂದ ಪೆಟ್ಟು ತಿಂದ ಮಹಿಳೆ
ಘಟನೆ ಕುರಿತು ಸ್ಪಷ್ಟನೆ ನೀಡಿರುವ ಪೆಟ್ಟು ತಿಂದ ಮಹಿಳೆ ಕೆಂಪಮ್ಮ, ನನಗೆ ಸಚಿವರು ಕಪಾಳಮೋಕ್ಷ ಮಾಡಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನನಗೂ ಸೈಟ್ ಕೊಡಿ ಎಂದು ಕಾಲಿಗೆಬಿದ್ದೆ. ಸಚಿವರು ನನ್ನನ್ನು ಎತ್ತಿ ಕ್ಷಮೆ ಕೇಳಿ ಸಮಾಧಾನಪಡಿಸಿದರು. ಸಚಿವರು ನನಗೆ ಹೊಡೆಯಲಿಲ್ಲ. ಆದರೆ ಅವರು ನನಗೆ ಹೊಡೆದಿದ್ದಾರೆಂದು ತಪ್ಪು ಅಪವಾದ ಹೊರಿಸಿದ್ದಾರೆ. ಸೈಟಿಗೆಂದು ಕೊಟ್ಟಿದ್ದ ನಾಲ್ಕು ಸಾವಿರ ರೂಪಾಯಿಯನ್ನು ವಾಪಸ್ ಕೊಡಿಸಿದ್ದಾರೆ. ಪುಣ್ಯಾತ್ಮ ನನಗೆ ಸೈಟ್ ಕೊಡ್ಸಿ ನನ್ನ ಮಕ್ಕಳಿಗೆ ದಾರಿ ತೋರಿಸಿ ಒಳ್ಳೆಯದು ಮಾಡಿದ್ದಾರೆ. ನಾನು ಅವರ ಫೋಟೋ ಇಟ್ಕೊಂಡು ಪೂಜೆ ಮಾಡುತ್ತೇನೆ ಎಂದು ಹೇಳಿದರು. ಸಚಿವರ ಆಪ್ತ ಸಹಾಯಕನಿಂದ ಮಹಿಳೆಯ ಸ್ಪಷ್ಟನೆ ವಿಡಿಯೋ ಬಿಡುಗಡೆ ಮಾಡಲಾಗಿದೆ.
ಆದರೆ ಇಕ್ಕೂ ಮೊದಲು ಹರಿದಾಡಿದ್ದ ವಿಡಿಯೊದಲ್ಲಿ ಸಚಿವ ವಿ.ಸೋಮಣ್ಣ ಮಹಿಳೆಯ ಕೆನ್ನೆಗೆ ಹೊಡೆಯುವುದು ಸ್ಪಷ್ಟವಾಗಿ ದಾಖಲಾಗಿದೆ.
ಸೋಮಣ್ಣ ವಿರುದ್ಧ ಕಿಡಿಕಾರಿದ ಹೆಚ್.ಡಿ.ಕುಮಾರಸ್ವಾಮಿ
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಪಾಳಮೋಕ್ಷ ವಿಚಾರವಾಗಿ ಮಾತನಾಡಿದ್ದು, ಅದು ಬಿಜೆಪಿಯವರ ಸಂಸ್ಕೃತಿಯನ್ನು ತೋರಿಸುತ್ತದೆ. ಅವರ ನಡವಳಿಕೆಯನ್ನ ನಾನು ಹತ್ತಿರದಿಂದ ನೋಡಿದ್ದೇನೆ ಎಂದು ಮಡಿಕೇರಿಯಲ್ಲಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಅವರು ಎರಡು ತರಹದ ಮುಖ ಹೊಂದಿದ್ದಾರೆ. ಎದುರು ಸಿಕ್ಕಾಗ ಒಂದು ರೀತಿ ಮಾತನಾಡಿಸುತ್ತಾರೆ. ಆದರೆ ಒಳಗೆ ಇರುವ ನಡವಳಿಕೆಯೇ ಬೇರೆ ಇದೆ. ಅವರಿಂದ ಒಳ್ಳೇ ನಡವಳಿಕೆ ನಿರೀಕ್ಷಿಸಲು ಸಾಧ್ಯವಿಲ್ಲ. ಹಿಂದೆಯೂ ಕೆಲ ಸಚಿವರು ಹೀಗೆ ನಡೆದುಕೊಂಡಿದ್ದಾರೆ ಎಂದು ಹೆಚ್ಡಿ. ಕುಮಾರಸ್ವಾಮಿ ಕಿಡಿಕಾರಿದರು.
ಕೆ. ಆರ್ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ
ಮೈಸೂರು: ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವಂತಹ ಘಟನೆ ತಾಲ್ಲೂಕಿನ ಗಂಧನಹಳ್ಳಿ ಗ್ರಾಮದಲ್ಲಿ ಎದುರಾಗಿದೆ. ಈ ಹಿನ್ನೆಲೆ ನೀರಿಗಾಗಿ ಗ್ರಾಮಸ್ಥರು ಪ್ರತಿಭಟನೆ ಮಾಡಿದರು. ಐದು ದಿನಕ್ಕೆ ಒಮ್ಮೆ ಮಾತ್ರ ನೀರು ಬಿಡಲಾಗುತ್ತಿದೆ. ಶುದ್ಧ ನೀರಿನ ಬದಲು ಮಿಶ್ರಣ ನೀರು ಬಿಡುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:12 am, Sun, 23 October 22