AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರದಲ್ಲಿ 100 ಕೋಟಿ ರೂ. ಮೌಲ್ಯದ ಕೆರೆ ಜಮೀನು ಹಗರಣ ಬಯಲು!

ಚಿಕ್ಕಬಳ್ಳಾಪುರದ ಅಣಕನೂರು ಗ್ರಾಮದ 100 ಕೋಟಿ ರೂ. ಮೌಲ್ಯದ 24 ಎಕರೆ ಸರ್ಕಾರಿ ಕೆರೆ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಗೆ ಇ-ಖಾತೆ ಮಾಡಿಕೊಟ್ಟಿದ್ದ ನಗರಸಭೆ ಅಧಿಕಾರಿಗಳ ಅಕ್ರಮ ತನಿಖೆಯಲ್ಲಿ ಸಾಬೀತಾಗಿದೆ. ಹಗರಣದಲ್ಲಿ ಭಾಗಿಯಾದ ಪೌರಾಯುಕ್ತ ಮನ್ಸೂರ್ ಅಲಿ ಸೇರಿದಂತೆ ಇತರ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪ್ರಭು ಜಿ. ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ 100 ಕೋಟಿ ರೂ. ಮೌಲ್ಯದ ಕೆರೆ ಜಮೀನು ಹಗರಣ ಬಯಲು!
ಚಿಕ್ಕಬಳ್ಳಾಪುರದ ನಗರಸಭೆ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on: Sep 11, 2026 | 8:31 AM

Share

ಮುಖ್ಯಾಂಶಗಳು

  • ಚಿಕ್ಕಬಳ್ಳಾಪುರದಲ್ಲಿ 100 ಕೋಟಿ ಮೌಲ್ಯದ ಕೆರೆ ಜಮೀನು ಅಕ್ರಮ ಇ-ಖಾತೆ ಹಗರಣ.
  • ತಪ್ಪಿತಸ್ಥ ನಗರಸಭೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಜಿಲ್ಲಾಧಿಕಾರಿ ಶಿಫಾರಸ್ಸು.
  • ಅಕ್ರಮ ಎಸಗಿದ ಅಧಿಕಾರಿಗಳ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಲು ದೂರುದಾರ ನಿರ್ಧಾರ.

ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 11: ಜಿಲ್ಲೆಯ ನಗರಸಭೆ ವ್ಯಾಪ್ತಿಗೆ ಬಾರದಿದ್ದರೂ ಕಂದಾಯ ಇಲಾಖೆಯ ಅಧೀನದಲ್ಲಿರುವ 24 ಎಕರೆ ಸರ್ಕಾರಿ ಕೆರೆ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಗೆ ಇ-ಖಾತೆ ಮಾಡಿಕೊಟ್ಟಿದ್ದ ಬಹುಕೋಟಿ ಅಕ್ರಮ ಎಸಗಿರುವ ವಿಚಾರ ಅಧಿಕೃತ ತನಿಖೆಯಿಂದ ಸಾಬೀತಾಗಿದೆ.

ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮ

ಚಿಕ್ಕಬಳ್ಳಾಪುರ ತಾಲೂಕಿನ ಕಸಬಾ ಹೋಬಳಿ, ಅಣಕನೂರು ಗ್ರಾಮದ ಸರ್ವೇ ಸಂಖ್ಯೆ 109ರಲ್ಲಿರುವ ‘ಅಮಾಣಿಗೋಪಾಲಕೃಷ್ಣ ಕೆರೆ’ (ಸರ್ಕಾರಿ ‘ಬಿ’ ಖರಾಬು ಜಮೀನು) ಸುಮಾರು 100 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ್ದಾಗಿದೆ. ಈ ಜಮೀನಿಗೆ ಸಂಬಂಧಿಸಿದಂತೆ ನಗರಸಭೆಯ ಪೌರಾಯುಕ್ತ ಮನ್ಸೂರ್ ಅಲಿ, ಕರವಸೂಲಿಗಾರ ವೆಂಕಟೇಶ್, ಕಂದಾಯ ನಿರೀಕ್ಷಕ ವಿ.ಆರ್. ವೆಂಕಟೇಶ್ ಹಾಗೂ ನಿವೃತ್ತ ಕಂದಾಯಾಧಿಕಾರಿ ನಟರಾಜ್ ಅವರನ್ನೊಳಗೊಂಡ ತಂಡವು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಖಾಸಗಿ ವ್ಯಕ್ತಿಗೆ ಅಕ್ರಮವಾಗಿ ಇ-ಖಾತೆ ವಿತರಿಸಿ ಕರ್ತವ್ಯಲೋಪ ಎಸಗಿರುವುದು ತನಿಖೆಯಲ್ಲಿ ಸತ್ಯ ಬಟಾಬಯಲಾಗಿದೆ.

ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಶಿಫಾರಸ್ಸು

ಈ ಹಗರಣದ ಕುರಿತು ‘ಟಿವಿ-9’ ವಿಸ್ತೃತ ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪ್ರಭು ಜಿ. ಅವರು ತನಿಖಾ ತಂಡವನ್ನು ರಚಿಸಿದ್ದರು. ತನಿಖಾ ವರದಿ ಕೈಸೇರಿದ ನಂತರ, ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ವರದಿ ಸಲ್ಲಿಸಿದ್ದಾರೆ.

LIVE TV

ಆದರೆ, ಜಿಲ್ಲಾಧಿಕಾರಿಗಳ ಈ ಕ್ರಮಕ್ಕೆ ದೂರುದಾರ ಹಾಗೂ ಸಾಮಾಜಿಕ ಹೋರಾಟಗಾರ ಅಮೀರ್ ಮಹಮದ್ ಸಾಧಿಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೌರಾಯುಕ್ತರನ್ನು ಹೊರತುಪಡಿಸಿ ಉಳಿ ದ ತಪ್ಪಿತಸ್ಥ ಅಧಿಕಾರಿಗಳನ್ನು ಜಿಲ್ಲಾಧಿಕಾರಿಗಳೇ ನೇರವಾಗಿ ಅಮಾನತುಗೊಳಿಸಬಹುದಿತ್ತು ಹಾಗೂ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕಿತ್ತು ಎಂದು ಅವರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಅಕ್ರಮ ಎಸಗಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕಾಗಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಸರ್ಕಾರಿ ಕೆರೆ ಜಮೀನನ್ನೇ ಲಪಟಾಯಿಸಲು ಯತ್ನಿಸಿರುವ ಈ ಭ್ರಷ್ಟ ಅಧಿಕಾರಿಗಳ ವಿರುದ್ಧ ರಾಜ್ಯ ಸರ್ಕಾರ ತಕ್ಷಣವೇ ಕಠಿಣ ಶಿಕ್ಷೆ ವಿಧಿಸಬೇಕೆಂದು ಸ್ಥಳೀಯ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us