Tax Waiver: ‘ಶಕ್ತಿ’ ಕುಂದಿದ ಸಾರಿಗೆ ನಿಗಮಗಳಿಗೆ ತೆರಿಗೆ ವಿನಾಯಿತಿ ಬಲ; ನಿಗಮಗಳ ಒಂದಷ್ಟು ಹೊರೆ ತಗ್ಗಲಿದೆ
Karnataka RTCs Get Tax Waiver: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ಕು ಸಾರಿಗೆ ನಿಗಮಗಳಿಗೆ ಸೇರಿ ಒಟ್ಟು 541.87 ಕೋಟಿ ರೂ ಮೊತ್ತದ ಮೋಟಾರು ವಾಹನ ತೆರಿಗೆ ವಿನಾಯಿತಿಗೆ ಸಮ್ಮತಿಸಿದ್ದಾರೆ. ಶಕ್ತಿ ಯೋಜನೆ ಜಾರಿಯಾದ ಬಳಿಕ ನಷ್ಟದ ಹೊರೆ ಹೆಚ್ಚಿರುವ ಸಾರಿಗೆ ನಿಗಮಗಳಿಗೆ ತೆರಿಗೆ ವಿನಾಯಿತಿ ತುಸು ನಿರಾಳತೆ ತರಬಹುದು. ಮೋಟಾರು ವಾಹನ ತರಿಗೆ ವಿನಾಯಿತಿಯಲ್ಲಿ ಕೆಎಸ್ಆರ್ಟಿಸಿಗೆ ಹೆಚ್ಚಿನ ಪಾಲು ಇದೆ. ಬಿಎಂಟಿಸಿ, ಎನ್ಡಬ್ಲ್ಯುಕೆಆರ್ಟಿಸಿ, ಕೆಕೆಆರ್ಟಿಸಿಗಳಿಗೆ ತಲಾ 100 ಕೋಟಿ ರೂಗು ಹೆಚ್ಚು ವಾರ್ಷಿಕ ಸಬ್ಸಿಡಿ ಸಿಗುತ್ತದೆ.

ಬೆಂಗಳೂರು, ಡಿಸೆಂಬರ್ 25: ‘ಶಕ್ತಿ’ ಯೋಜನೆಯಿಂದಾಗಿ ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ರಾಜ್ಯದ ವಿವಿಧ ಸಾರಿಗೆ ನಿಗಮಗಳ (Karnataka RTC) ಒಂದಷ್ಟು ಭಾರವನ್ನು ಇಳಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಕೆಎಸ್ಆರ್ಟಿಸಿ, ಬಿಎಂಟಿಸಿ ಇತ್ಯಾದಿ ಸಾರಿಗೆ ನಿಗಮನಗಳಿಗೆ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ (tax exemption) ಘೋಷಿಸಿದೆ. ನಾಲ್ಕು ನಿಗಮಗಳಿಗೆ ಒಂದು ವರ್ಷದಲ್ಲಿ ಒಟ್ಟು 541.87 ಕೋಟಿ ರೂನಷ್ಟು ಮೋಟಾರು ವಾಹನ ತೆರಿಗೆಯಲ್ಲಿ (motor vehicle tax) ವಿನಾಯಿತಿ ಸಿಗಲಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರಸ್ತಾಪಿಸಿರುವ ಈ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಸಮ್ಮತಿ ಸೂಚಿಸಿದ್ದಾರೆ.
ಶಕ್ತಿ ಯೋಜನೆ ಕಾಂಗ್ರೆಸ್ ಪಕ್ಷದ ಚುನಾವಣಾ ಗ್ಯಾರಂಟಿಗಳಲ್ಲಿ ಒಂದಾಗಿತ್ತು. ಅಧಿಕಾರಕ್ಕೆ ಬಂದ ಬಳಿಕ ಹೆಚ್ಚು ತಡ ಮಾಡದೇ ಈ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿತು. ರಾಜ್ಯದ ಎಲ್ಲಾ ಮಹಿಳೆಯರು ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶ ಕಲ್ಪಿಸುವ ಸ್ಕೀಮ್ ಇದು. ಶಕ್ತಿ ಯೋಜನೆ ಜಾರಿಗೊಂಡ ಬಳಿಕ ಎಲ್ಲಾ ನಾಲ್ಕು ಸಾರಿಗೆ ನಿಗಮನಗಳ ಬಸ್ಸುಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಆದರೆ, ನಿಗಮಗಳ ನಷ್ಟದ ಹೊರೆಯೂ ಹೆಚ್ಚಾಗಿದೆ. ಇದನ್ನು ತಗ್ಗಿಸಲು ಸರ್ಕಾರದ ಬಳಿ ಇರುವ ಅಸ್ತ್ರಗಳಲ್ಲಿ ತೆರಿಗೆ ವಿನಾಯಿತಿ ಕ್ರಮವೂ ಒಂದು.
ಇದನ್ನೂ ಓದಿ: ಯತ್ನಾಳ್ ಮಾತನ್ನ ಯಾರೂ ಗಂಭೀರವಾಗಿ ತೆಗೆದುಕೊಳ್ಳಲ್ಲ, ದೀಪ ಆರುವಾಗ ಜಾಸ್ತಿ ಉರಿಯುತ್ತೆ: ಮುರುಗೇಶ್ ನಿರಾಣಿ
ಸಾರಿಗೆ ನಿಗಮನಗಳಿಗೆ ಮೋಟಾರು ವಾಹನ ತೆರಿಗೆಯಲ್ಲಿ ಸಿಗಲಿರುವ ವಿನಾಯಿತಿ
ಒಂದು ವರ್ಷದಲ್ಲಿ ಒಟ್ಟು ವಿನಾಯಿತಿ ಮೊತ್ತ: 541.87 ಕೋಟಿ ರೂ
- ಕೆಎಸ್ಆರ್ಟಿಸಿ: 243.52 ಕೋಟಿ ರೂಪಾಯಿ ವಿನಾಯಿತಿ
- ಬಿಎಂಟಿಸಿ: 119.88 ಕೋಟಿ ರೂಪಾಯಿ ವಿನಾಯಿತಿ
- ಎನ್ಡಬ್ಲ್ಯುಕೆಆರ್ಟಿಸಿ (ವಾಯವ್ಯ ಸಾರಿಗೆ ನಿಗಮ): 103.91 ಕೋಟಿ ರೂಪಾಯಿ ವಿನಾಯಿತಿ
- ಕೆಕೆಆರ್ಟಿಸಿ (ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ): 114.16 ಕೋಟಿ ರೂಪಾಯಿ ವಿನಾಯಿತಿ
ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಮತ್ತು ದಲಿತ ನಾಯಕರು ದೆಹಲಿಯಲ್ಲಿ; ಮೂರು ಡಿಸಿಎಂ ಸ್ಥಾನಗಳಾಗಬೇಕೆಂದು ಹೈಕಮಾಂಡ್ ಬಳಿ ಮನವಿ?
ಸಾರಿಗೆ ನಿಗಮಗಳಿಗೆ ಮೋಟಾರು ವಾಹನದಲ್ಲಿ ತೆರಿಗೆ ವಿನಾಯಿತಿ ನೀಡುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಅಂದಿನ ಸರ್ಕಾರ 1,500 ಕೋಟಿ ರೂಗೂ ಹೆಚ್ಚು ಮೊತ್ತದಷ್ಟು ತೆರಿಗೆ ವಿನಾಯಿತಿ ನೀಡಿತ್ತು. ಶಕ್ತಿ ಯೋಜನೆಗೆ ಮೊದಲು ಸಾರಿಗೆ ನಿಗಮಗಳ ಒಟ್ಟಾರೆ ಆದಾಯ ಒಂದು ವರ್ಷದಲ್ಲಿ 8,000 ಕೋಟಿ ರೂಗೂ ಹೆಚ್ಚು ಇತ್ತು. ಸಬ್ಸಿಡಿ ಮತ್ತಿತರ ಕಾರಣಗಳಿಂದ 4,000 ಕೋಟಿ ರೂಗೂ ಹೆಚ್ಚು ಆದಾಯ ನಷ್ಟ ಎದುರಾಗಿತ್ತು. ಇದರಲ್ಲಿ ಸಬ್ಸಿಡಿ ಮೊತ್ತವನ್ನು ಸರ್ಕಾರ ತುಂಬಿಸಿಕೊಡಬೇಕು. ಆದರೆ, ವಿವಿಧ ಸರ್ಕಾರಗಳು ಈವರೆಗೆ ಸಾವಿರಾರು ಕೋಟಿ ರೂ ಮೊತ್ತದಷ್ಟು ಸಬ್ಸಿಡಿ ಹಣವನ್ನು ಸಾರಿಗೆ ನಿಗಮಗಳಿಗೆ ವರ್ಗಾವಣೆ ಮಾಡದೇ ಬಾಕಿ ಉಳಿಸಿಕೊಂಡಿವೆ. ಈ ಮಧ್ಯೆ ಶಕ್ತಿ ಸ್ಕೀಮ್ನಿಂದ ನಿಗಮಗಳ ಆದಾಯಕ್ಕೆ ಇನ್ನಷ್ಟು ಖೋತಾ ಬಿದ್ದಿದೆ. 542 ಕೋಟಿ ರೂ ಮೋಟಾರು ತೆರಿಗೆ ವಿನಾಯಿತಿ ನೀಡುವ ಮೂಲಕ ಒಂದಷ್ಟು ನಷ್ಟದ ಹೊರೆಯನ್ನು ತಗ್ಗಿಸುವ ಪ್ರಯತ್ನ ಸರ್ಕಾರ ಮಾಡುತ್ತಿದೆ.
ಇನ್ನಷ್ಟು ಕರ್ನಾಟಕ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ