ಎಡನೀರು ಸಚ್ಚಿದಾನಂದ ಭಾರತೀ ಸ್ವಾಮೀಜಿ ಕಾರಿನ ಮೇಲೆ ದಾಳಿ: ಪಿಣರಾಯಿ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ
ಕಾಸರಗೋಡು ಸಮೀಪದ ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಕಾರಿನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿರುವುದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ, ಮಂಗಳೂರಿನ ಬಿಜೆಪಿ ಶಾಸಕ ಭರತ್ ಶೆಟ್ಟಿ ಸೇರಿದಂತೆ ಅನೇಕ ನಾಯಕರು ಘಟನೆಯನ್ನು ಖಂಡಿಸಿದ್ದು, ಕೇರಳದ ಪಿಣರಾಯಿ ವಿಜಯನ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರು, ನವೆಂಬರ್ 5: ನೆರೆ ಜಿಲ್ಲೆ ಕಾಸರಗೋಡು ಸಮೀಪದ ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಕಾರಿನ ಮೇಲೆ ಯುವಕರ ತಂಡವೊಂದು ಇತ್ತೀಚೆಗೆ ದಾಳಿ ನಡೆಸಿದೆ. ಸ್ವಾಮೀಜಿ ಕಾಸರಗೋಡಿನ ಬೋವಿಕ್ಕಾನ-ಇರಿಯಣ್ಣಿ ಮಾರ್ಗಮಧ್ಯೆ ಕಾರಿನಲ್ಲಿ ಸಂಚರಿಸುತ್ತಿದ್ದಾಗ ದಾಳಿ ನಡೆದಿದೆ. ಕಾರ್ಯಕ್ರಮವೊಂದನ್ನು ಮುಗಿಸಿ ಮಠಕ್ಕೆ ತೆರಳುತ್ತಿದ್ದಾಗ ದಾಳಿ ಮಾಡಿದ ಯುವಕರು, ದೊಣ್ಣೆಯಿಂದ ಹಲ್ಲೆ ಮಾಡಿ ಕಾರಿನ ಗಾಜುಗಳನ್ನು ಒಡೆದುಹಾಕಿದ್ದಾರೆ. ಅದೃಷ್ಟವಶಾತ್, ಸ್ವಾಮೀಜಿ ಅಪಾಯದಿಂದ ಪಾರಾಗಿದ್ದಾರೆ. ಹಿಂದೂಪರ ಸಂಘಟನೆಗಳು ಘಟನೆಯನ್ನು ಖಂಡಿಸಿದ್ದು, ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿವೆ. ಹಿಂದೂ ಐಕ್ಯ ವೇದಿಕೆ ಬೋವಿಕ್ಕಾನದಲ್ಲಿ ಪ್ರತಿಭಟನೆಗೆ ಕರೆ ನೀಡಿದೆ. ದಾಳಿ ಕುರಿತು ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದೆ. ಜತೆಗೆ, ಸಚ್ಚಿದಾನಂದ ಭಾರತೀ ಸ್ವಾಮೀಜಿಗೆ ಹೆಚ್ಚಿನ ಭದ್ರತೆ ಒದಗಿಸುವಂತೆ ಮನವಿ ಮಾಡಿದೆ.
ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಖಂಡನೆ
ಎಡನೀರು ಶ್ರೀಗಳ ಮೇಲೆ ದಾಳಿ ಯತ್ನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಕೂಡಲೇ ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಬಂಧಿಸಿ ಅವರ ವಿರುದ್ಧ ಕೇರಳ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಶಾಂತಿ ಹಾಗೂ ಸಾಮರಸ್ಯದ ಮೂಲಕ ಹಿಂದೂ ಸಮಾಜದ ಪರ ಕೆಲಸ ಮಾಡುತ್ತಿರುವ ಸ್ವಾಮೀಜಿ ಮೇಲೆ ದುಷ್ಕರ್ಮಿಗಳು ನಡುರಸ್ತೆಯಲ್ಲಿಯೇ ಹಲ್ಲೆಗೆ ಯತ್ನಿಸಿರುವುದು ಗಂಭೀರ ವಿಚಾರವಾಗಿ. ಕೇರಳ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ದಕ್ಷಿಣ ಕನ್ನಡ ಬಿಜೆಪಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಆಗ್ರಹಿಸಿದ್ದಾರೆ.
ಎಡನೀರು ಸ್ವಾಮೀಜಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ಗೆ ಬ್ರಿಜೇಶ್ ಚೌಟ ಆಗ್ರಹಿಸಿದ್ದಾರೆ.
ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಕೂಡ ಸ್ವಾಮೀಜಿ ಮೇಲಿನ ದಾಳಿ ಯತ್ನವನ್ನು ಖಂಡಿಸಿದ್ದಾರೆ. ಕೇರಳದ ಕಾನೂನು ಸುವ್ಯವಸ್ಥೆಯನ್ನು ಟೀಕಿಸಿದ ಶಾಸಕರು, ವಿಚ್ಛಿದ್ರಕಾರಕ ಮತ್ತು ಹಿಂದೂ ವಿರೋಧಿ ಅಂಶಗಳಿಂದ ಸವಾಲುಗಳು ಹೆಚ್ಚುತ್ತಿರುವುದು ಕೇರಳ ಸರ್ಕಾರದ ವೈಫಲ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಂಗಳೂರು: ಅಪಘಾತದ ಸ್ಥಳದಿಂದ 2 ದಿನ ಕದಲದೆ ಅಚ್ಚರಿ ಮೂಡಿಸಿದ ಹರಕೆ ಕೋಳಿ
ಹಿಂದೂ ಸಮಾಜಕ್ಕೆ ಮಾರ್ಗದರ್ಶಕದಾಗಿರುವ ಸ್ವಾಮೀಜಿಯಂತಹ ಪೂಜ್ಯರ ಮೇಲೆ ಹಲ್ಲೆ ನಡೆಸಿರುವುದು ಇಡೀ ಸಮುದಾಯದ ಮೇಲಿನ ದಾಳಿ ಎಂದು ಭರತ್ ಶೆಟ್ಟಿ ಹೇಳಿದ್ದಾರೆ.
ಮತ್ತೊಂದೆಡೆ, ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಸಾರ್ವಜನಿಕರು ‘ವಿ ಸ್ಟ್ಯಾಂಡ್ ವಿತ್ ಎಡನೀರ್ ಸ್ವಾಮೀಜಿ’ ಎಂಬ ಪೋಸ್ಟ್ ಹಾಕುವ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ