ಪ್ರತ್ಯೇಕ ಘಟನೆ: ನಿರಂತರ ಮಳೆಯಿಂದಾಗಿ ದಾವಣಗೆರೆಯಲ್ಲಿ ಮಗು, ವಿಜಯಪುರದಲ್ಲಿ ವೃದ್ಧೆ ಸಾವು
ಕರ್ನಾಟಕದ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಇನ್ನು ದಾವಣಗೆರೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಮನೆಗೋಡೆ ಕುಸಿದು ಒಂದು ವರ್ಷದ ಮಗು ಮೃತಪಟ್ಟಿದೆ. ಇನ್ನು ವಿಜಯಪುರದಲ್ಲೂ ಸಹ ಮನೆ ಕುಸಿದು ವೃದ್ಧೆ ಸಾವನ್ನಪ್ಪಿದ್ದಾರೆ.
ದಾವಣಗೆರೆ, (ಜುಲೈ 25): ಕಳೆದ ಮೂರು ದಿನಗಳಿಂದ ನಿರಂತರ ಮಳೆಯಿಂದಾಗಿ (Rain) ಮನೆಗೋಡೆ ಕುಸಿದು ಬಿದ್ದು ಒಂದು ವರ್ಷದ ಮಗು ಸ್ಫೂರ್ತಿ ಮೃತಪಟ್ಟಿರುವ ಘಟನೆ ದಾವಣಗೆರೆ (Davanagere) ಜಿಲ್ಲೆ ಹರಿಹರ ತಾಲೂಕಿನ ಕುಂಬಳೂರು ಗ್ರಾಮದಲ್ಲಿ ನಡೆದಿದೆ. ಇನ್ನು ಸ್ಫೂರ್ತಿ ತಂದೆ ಕೆಂಚಪ್ಪಗೆ ಗಾಯವಾಗಿದ್ದು, ಅವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಮೂರು ದಿನಗಳಿಂದ ನಿರಂತರ ಮಳೆ ಹಿನ್ನೆಲೆಯಲ್ಲಿ ಮನೆ ಸಂಪೂರ್ಣವಾಗಿ ಸಂಪೂರ್ಣವಾಗಿ ಹಾಳಾಗಿದ್ದು, ನಿನ್ನೆ(ಜುಲೈ 24) ರಾತ್ರಿ ವೇಳೆ ಮಲಗಿದ್ದ ಸಂದರ್ಭದಲ್ಲಿ ಮನೆಗೋಡೆ ಕುಸಿದಿದೆ.
ಮೇಲ್ಚಾವಣಿ ಕುಸಿದು ವೃದ್ದೆ ಸಾವು
ವಿಜಯಪುರ ಜಿಲ್ಲೆಯಲ್ಲೂ ಸಹ ಜಿಟಿ ಮಳೆಯಿಂದಾಗಿ ಮನೆಯ ಮೇಲ್ಚಾವಣಿ ಕುಸಿದು ವೃದ್ದೆ ಸಾವಪ್ಪಿದ್ದಾರೆ. ವಿಜಯಪುರ ಜಿಲ್ಲೆ ಕನ್ನೂರು ಗ್ರಾಮದ ಶಿವಮ್ಮ ಸಾವಳಗಿ (60) ಮೃತಪಟ್ಟ ವೃದ್ಧೆ. ನಿನ್ನೆ (ಜುಲೈ 24) ರಾತ್ರಿ ಸುರಿದ ಮಳೆಗೆ ಕುಸಿದು ಬಿದ್ದ ಮನೆಯ ಮೇಲ್ಚಾವಣಿ ಶಿವಮ್ಮ ಸಾವಳಗಿ ಮೇಲೆ ಕುಸಿದು ಬಿದ್ದಿದೆ.
ಕಲಬುರಗಿಯಲ್ಲೂ ಮಹಿಳೆ ಸಾವು
ಅತ್ತ ಕಲಬುರಗಿಯಲ್ಲೂ ಸಹ ಕಳೆದ ಒಂದು ವಾರದಿಂದ ಭಾರೀ ಮಳೆಯಾಗುತ್ತಿದ್ದು, ಇದರಿಂದ ಮನೆಯ ಗೋಡೆ ಕುಸಿದು ಓರ್ವ ಮಹಿಳೆ ಮೃತಪಟ್ಟಿದ್ದಾಳೆ, ಜೇವರ್ಗಿ ತಾಲೂಕಿನ ಬಿರಾಳ್ ಬಿ ಗ್ರಾಮದಲ್ಲಿ ಇಂದು ಸಂಜೆ ಮನೆಯ ಗೋಡೆ ದಿಢೀರನೆ ಕುಸಿದು ಬಿದ್ದಿದ್ದು, ಕಲ್ಲು ಮತ್ತು ಮಣ್ಣಿನ ಅಡಿ ಸಿಲುಕಿ ಬಸಮ್ಮಾ ಬಸವರಾಜ್(35) ಸಾವನ್ನಪ್ಪಿದ್ದಾಳೆ.
ರಾಷ್ಟ್ರೀಯ ಹೆದ್ದಾರಿ 75ರ ತಡೆಗೋಡೆ ಕುಸಿತ
ಹಾಸನ: ಇನ್ನು ಹಾಸನ ಜಿಲ್ಲೆಯಾದ್ಯಾಂತ ಮಳೆಯ ಆರ್ಭಟ ಮುಂದುವರಿದಿದ್ದು, ಭಾರಿ ಮಳೆಗೆ ರಾಷ್ಟ್ರೀಯ ಹೆದ್ದಾರಿ 75ರ ತಡೆಗೋಡೆ ಕುಸಿದಿದೆ. ಹಾಸನ- ಬೆಂಗಳೂರು ಮಂಗಳೂರು ನಡುವೆ ಸಂಪರ್ಕಿಸುವ ರಸ್ತೆ ಇದಾಗಿದೆ. ಸಕಲೇಶಪುರ ತಾಲೂಕಿನ ಗುಳಗಳಲೆ ಗ್ರಾಮದ ಬಳಿ ಘಟನೆ ನಡೆದಿದ್ದು, ಇತ್ತೀಚೆಗಷ್ಟೇ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಈ ರಸ್ತೆಯನ್ನು ನಿರ್ಮಾಣ ಮಾಡಲಾಗಿತ್ತು. ಇದೀಗ ತಡೆಗೋಡೆ ಕುಸಿದಿದ್ದರಿಂದ ರಾಷ್ಟ್ರೀಯ ಹೆದ್ದಾರಿ ಕುಸಿಯುವ ಆತಂಕ ಶುರುವಾಗಿದೆ. ಅವೈಜ್ಞಾನಿಕ ಕಾಮಗಾರಿಯಿಂದ ಭೂಕುಸಿತ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 10:58 am, Tue, 25 July 23