ವಿವಾದಾತ್ಮಕ ಹೇಳಿಕೆ: ಪ್ರೊ ಭಗವಾನ್ ವಿರುದ್ಧ ಕೇಸ್ ಬುಕ್, ಕ್ಷಮೆ ಕೇಳಬೇಕು ಎಂದ ಉಗ್ರಪ್ಪ
ಹಿಂದೂಗಳ ಆರಾಧ್ಯ ದೈವ ಶ್ರೀರಾಮನ ಬಗ್ಗೆ ಪ್ರೊ. ಕೆ.ಎಸ್. ಭಗವಾನ್ ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ಒಂದು ನೀಡಿದ್ದರು. ಇದು ಸಾಕಷ್ಟು ಚರ್ಚೆಗೆ ಕೂಡ ಗ್ರಾಸವಾಗಿತ್ತು. ಈ ಬೆನ್ನಲ್ಲೇ ಇದೀಗ ಪ್ರೊ. ಕೆ.ಎಸ್. ಭಗವಾನ್ ವಿರುದ್ಧ ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾವಣಗೆರೆ, ಜೂನ್ 14: ‘ಶ್ರೀರಾಮ ದಶರಥನ ಮಗ ಅಲ್ಲ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಪ್ರೊ. ಕೆಎಸ್ ಭಗವಾನ್ (KS Bhagavan) ವಿರುದ್ಧ ದಾವಣಗೆರೆ (davanagere) ಜಿಲ್ಲೆಯ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿಂದೂ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆ ತಂದಿದೆ ಎಂದು ಆರೋಪಿಸಿ, ಹಿಂದೂ ಜಾಗರಣ ವೇದಿಕೆಯ ಹರಿಹರ ತಾಲೂಕು ಪ್ರಧಾನ ಕಾರ್ಯದರ್ಶಿ ದಿನೇಶ್ ದೂರು ನೀಡಿದ್ದಾರೆ. ಈ ಸಂಬಂಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಸಂಘಟನೆಯ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಮುಖ್ಯಾಂಶಗಳು
- ಶ್ರೀರಾಮನ ಬಗ್ಗೆ ಪ್ರೊ ಕೆಎಸ್ ಭಗವಾನ್ ಅವಹೇಳನಕಾರಿ ಹೇಳಿಕೆ
- ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ
- ಪ್ರೊ ಕೆಎಸ್ ಭಗವಾನ್ ವಿರುದ್ಧ ಪ್ರಕರಣ ದಾಖಲು
ಸದ್ಯ ಹರಿಹರ ಗ್ರಾಮಾಂತರ ಪೊಲೀಸರು ಪ್ರೊ. ಕೆ.ಎಸ್. ಭಗವಾನ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಲಂ 196(1)(a) ಮತ್ತು 299ರ ಅನ್ವಯ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಜನರ ಬಳಿ ಕ್ಷಮೆ ಕೇಳಬೇಕು: ಮಾಜಿ ಸಂಸದ ವಿಎಸ್ ಉಗ್ರಪ್ಪ ಆಗ್ರಹ
ಇನ್ನು ವಿಚಾರವಾಗಿ ಬಾಗಲಕೋಟೆಯಲ್ಲಿ ಮಾಜಿ ಸಂಸದ ವಿಎಸ್ ಉಗ್ರಪ್ಪ ಪ್ರತಿಕ್ರಿಯಿಸಿದ್ದು, ಭಗವಾನ್ ಅವರು ವಯಸ್ಸಿನ ಕಾರಣವೊ, ತಿಕ್ಕಲುತನವೊ ಗೊತ್ತಿಲ್ಲ. ಏನೇನೋ ಬಾಯಿಗೆ ಬಂದ ಹಾಗೆ ಮಾತನಾಡುತ್ತಾನೆ. ಅವರನ್ನು ನಾನು ಅನೇಕ ಸಾರಿ ಇಗ್ನೋರ್ ಮಾಡಬೇಕು ಅಂತಿದ್ದೆ. ಮಹರ್ಷಿ ವಾಲ್ಮೀಕಿ ರಾಮಾಯಣ ಬಗ್ಗೆ ಕೆಟ್ಟ ರೀತಿ ಮಾತಾಡಿದ್ದಾನೆ. ಇವರಿಗೆ ರಾಮಾಯಣದ ಬಗ್ಗೆ ಅರಿವು ಇಲ್ಲ. ಭಗವಾನ್ ಅಂತ ಹೆಸರು ಇಟ್ಟುಕೊಂಡು ಮನಸಾ ಇಚ್ಛೆ ಮಾತಾಡುತ್ತಾನೆ ಎಂದು ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ‘ಶ್ರೀರಾಮ ದಶರಥನ ಮಗ ಅಲ್ಲ’: ವಿವಾದಾತ್ಮಕ ಹೇಳಿಕೆ ಕೊಟ್ಟ ಪ್ರೊ. ಭಗವಾನ್
ಗಾಂಧೀಜಿ ಬಯಸಿದ್ದು ಗಾಂಧಿ ರಾಜ್ಯವಲ್ಲ, ರಾಮರಾಜ್ಯ. ಗಾಂಧಿಗಿಂತ ದೊಡ್ಡ ಮನುಷ್ಯನಾ ನೀನು? ಸೋ ಕಾಲ್ಡ್ ಇಂಟಲೆಕ್ಚುವಲ್ ಅಂತ ತೋರಿಸಿಕೊಳ್ಳುತ್ತಿರುವ ಭಗವಾನ್ ಈ ರೀತಿ ಮಾತಾಡಬಾರದು. ವಾಲ್ಮೀಕಿ ಸಮಾಜದ ಮೇಲೆ ಸಿಟ್ಟಿದ್ದರೆ ಈ ರೀತಿ ಮಾತನಾಡುವುದು ಶೋಭೆ ತರುವುದಿಲ್ಲ. ನಮ ಭಾವನೆಗೆ ಧಕ್ಕೆ ಮಾಡಿದ್ದೀರಿ ಈ ದೇಶದ ಜನರ ಬಳಿ ಕ್ಷಮೆ ಕೇಳಬೇಕು ಎಂದು ಉಗ್ರಪ್ಪ ಆಗ್ರಹಿಸಿದ್ದಾರೆ.
ನಡೆದಿದ್ದೇನು?
ಜೂನ್ 9 ರಂದು ಹರಿಹರದ ‘ಪ್ರೊ. ಬಿ. ಕೃಷ್ಣಪ್ಪ ಮೈತ್ರಿವನ’ದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪ್ರೊ. ಕೆ.ಎಸ್. ಭಗವಾನ್, ಶ್ರೀರಾಮನ ಜನನದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು. “ನೀವು ಪೂಜೆ ಮಾಡುವ ಶ್ರೀರಾಮ ತನ್ನ ತಂದೆಗೆ ಹುಟ್ಟಿದವನಲ್ಲ. ರಾಜ ದಶರಥ ಪುತ್ರಕಾಮೇಷ್ಟಿ ಯಾಗ ಮಾಡಿದಾಗ, ರಾಣಿ ಪುರೋಹಿತರ ಜೊತೆ ರಾತ್ರಿ ಮಲಗಬೇಕಿತ್ತು. ರಾಣಿ ಪುರೋಹಿತರೊಂದಿಗೆ ರಾತ್ರಿ ಕಳೆದಿದ್ದಾಳೆ ಎಂದರೆ ಅರ್ಥ ಮಾಡಿಕೊಳ್ಳಿ, ನಿಮ್ಮ ದೇವರು ಅಪ್ಪನಿಗೆ ಹುಟ್ಟಿದ ಮಗ ಅಲ್ಲ”. ಹೀಗೆ ವಿವಾದಾತ್ಮಕವಾಗಿ ಮಾತನಾಡಿದ್ದರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



