AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆಯಲ್ಲಿ ಭಾರಿ ಹೈಡ್ರಾಮಾ: ಟೈರ್​ಗೆ ಬೆಂಕಿ ಹಚ್ಚಿ ಅಡಕೆ ಬೆಳಗಾರರಿಂದ ಆಕ್ರೋಶ; ನೂರಾರು ರೈತರು ವಶಕ್ಕೆ

Davangere Farmers Protest: ರಾಜ್ಯ ಸರ್ಕಾರದ ಗುಟ್ಕಾ ನಿಷೇಧ ಆದೇಶ ಹಿಂಪಡೆಯುವುದು ಹಾಗೂ ಅಪ್ಪರ್ ಭದ್ರಾ ಯೋಜನೆಗೆ ಅನ್ಯಾಯವಾಗಿ ನೀರು ಬಿಡುವುದನ್ನು ವಿರೋಧಿಸಿ ಬಿಜೆಪಿ ಮುಖಂಡರು ಮತ್ತು ರೈತರು ಕೈಗೊಂಡಿದ್ದ ಬೃಹತ್ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಎಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ 200ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದು ಹೈಡ್ರಾಮಾವೇ ನಡೆದಿದೆ.

ದಾವಣಗೆರೆಯಲ್ಲಿ ಭಾರಿ ಹೈಡ್ರಾಮಾ: ಟೈರ್​ಗೆ ಬೆಂಕಿ ಹಚ್ಚಿ ಅಡಕೆ ಬೆಳಗಾರರಿಂದ ಆಕ್ರೋಶ; ನೂರಾರು ರೈತರು ವಶಕ್ಕೆ
ರೈತರಿಂದ ಪ್ರತಿಭಟನೆImage Credit source: tv9 kannada
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on: Aug 28, 2026 | 8:04 PM

Share

ದಾವಣಗೆರೆ, ಆಗಸ್ಟ್​ 28: ಮಧ್ಯ ಕರ್ನಾಟಕ ದಾವಣಗೆರೆಯ ಅಡಿಕೆ ಬೆಳೆಗಾರರು ಹಾಗೂ ಬಿಜೆಪಿ ಕಾರ್ಯಕರ್ತರ ಆಕ್ರೋಶದ ಕಿಚ್ಚು ಜೋರಾಗಿದೆ. ಗುಟ್ಕಾ ನಿಷೇಧ (Gutkha Ban) ಆದೇಶ ಹಿಂಪಡೆಯಬೇಕು ಮತ್ತು ಅಪ್ಪರ್ ಭದ್ರಾ ಯೋಜನೆಗೆ ನೀರು ಬಿಡುಗಡೆ ಮಾಡದಿರುವಂತೆ ಆಗ್ರಹಿಸಿ ನಡೆದ ಪಾದಯಾತ್ರೆ ರಣರಂಗವಾಗಿ ಮಾರ್ಪಟ್ಟಿದೆ. ಎಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಸೇರಿದಂತೆ ನೂರಾರು ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ನಗರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಮೂರು ದಿನಗಳ ಪಾದಯಾತ್ರೆ: ದಾವಣಗೆರೆ ನಗರದಲ್ಲಿ ರೈತರ ದಂಡು

ಕಳೆದ ಮೂರು ದಿನಗಳಿಂದ ಜಿಲ್ಲೆಯ ವಿವಿಧ ಭಾಗಗಳಿಂದ ಆರಂಭವಾಗಿದ್ದ ಪಾದಯಾತ್ರೆ ಶುಕ್ರವಾರ ನಗರವನ್ನು ಪ್ರವೇಶಿಸಿತು. ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ರೈತ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್ ಹಾಗೂ ಲೋಕಿಕೆರೆ ನಾಗರಾಜ್ ನೇತೃತ್ವದಲ್ಲಿ ಸಾವಿರಾರು ರೈತರು ನಗರದ ಜಯದೇವ ವೃತ್ತದಿಂದ ಎಸಿ ಕಚೇರಿಯತ್ತ ಧಾವಿಸಿದರು.

ಇದನ್ನೂ ಓದಿ: Farmers Protest Against Gutkha Ban: ಗುಟ್ಕಾ ನಿಷೇಧ ಖಂಡಿಸಿ ಅಡಿಕೆ ಬೆಳೆಗಾರರ ಪ್ರತಿಭಟನೆ: ಹೊನ್ನಾಳಿಯಿಂದ ಪಾದಯಾತ್ರೆ

‘ತಿಂಗಳುಗಟ್ಟಲೆ ರೈತರು ಹೋರಾಟ ನಡೆಸಿದರೂ ಕ್ಯಾರೆ ಎನ್ನದ ಸರ್ಕಾರ, ಚುನಾವಣೆ ರಾಜಕೀಯಕ್ಕಾಗಿ ಅಪ್ಪರ್ ಭದ್ರಾಗೆ 3 ಟಿಎಂಸಿ ನೀರು ಬಿಡಲು ಹೊರಟಿದೆ. ಇತ್ತ ಗುಟ್ಕಾ ನಿಷೇಧದಿಂದಾಗಿ ಅಡಿಕೆಗೆ ಬೆಲೆಯಿಲ್ಲದೆ ಬೆಳೆಗಾರರು ಕಂಗಾಲಾಗಿದ್ದಾರೆ’ ಎಂದು ರೈತ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್​ ಆಕ್ರೋಶ ಹೊರಹಾಕಿದರು.

ಟೈಯರ್‌ಗೆ ಬೆಂಕಿ, ಬ್ಯಾರಿಕೇಡ್ ಧ್ವಂಸ: ಬಿಗುವಿನ ವಾತಾವರಣ

ಇನ್ನು ಪ್ರತಿಭಟನಾ ಮೆರವಣಿಗೆ ಪಿಬಿ ರಸ್ತೆಗೆ ತಲುಪುತ್ತಿದ್ದಂತೆ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು ಟೈಯರ್‌ಗಳಿಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಇದರಿಂದ ಕೆಲಕಾಲ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಬಳಿಕ ಎಸಿ ಕಚೇರಿ ಆವರಣಕ್ಕೆ ನುಗ್ಗಲು ಯತ್ನಿಸಿದಾಗ ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ದೂಡಿ ಒಳನುಗ್ಗಲು ಮುಂದಾದರು. ಈ ವೇಳೆ ಪೊಲೀಸರು ಮತ್ತು ರೈತರ ನಡುವೆ ತೀವ್ರ ತಳ್ಳಾಟ-ನೂಕಾಟ, ಮಾತಿನ ಚಕಮಕಿ ನಡೆದು ವಾತಾವರಣ ಉದ್ವಿಗ್ನಗೊಂಡಿತು.

200ಕ್ಕೂ ಹೆಚ್ಚು ಜನರು ಪೊಲೀಸ್​ ವಶಕ್ಕೆ: ಸೋಮವಾರ ‘ದಾವಣಗೆರೆ ಬಂದ್’ ಎಚ್ಚರಿಕೆ

ಪರಿಸ್ಥಿತಿ ಕೈಮೀರುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಮುಖಂಡರಾದ ರೇಣುಕಾಚಾರ್ಯ, ಮಾಡಾಳ್ ಮಲ್ಲಿಕಾರ್ಜುನ್ ಸೇರಿದಂತೆ 200ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದರು. ಪೊಲೀಸ್ ಬಲದಿಂದ ರೈತರ ನ್ಯಾಯಯುತ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಗುಡುಗಿರುವ ನಾಯಕರು, ಸರ್ಕಾರ ಕೂಡಲೇ ಅಪ್ಪರ್ ಭದ್ರಾಗೆ ನೀರು ಬಿಡುವ ನಿರ್ಧಾರ ಹಾಗೂ ಗುಟ್ಕಾ ನಿಷೇಧ ಆದೇಶವನ್ನು ವಾಪಸ್ ಪಡೆಯಬೇಕು, ಇಲ್ಲದಿದ್ದರೆ ಬರುವ ಸೋಮವಾರ ‘ದಾವಣಗೆರೆ ಬಂದ್’ ಮಾಡಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us