ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರಿಗೆ ಸಂಕಷ್ಟ: ಆ.28ರಂದು ದಾವಣೆಗೆರೆಯಲ್ಲಿ ಬೃಹತ್​​ ಹೋರಾಟಕ್ಕೆ ಕರೆ

ಕರ್ನಾಟಕದಲ್ಲಿ ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆಗಾರರ ಹಿತರಕ್ಷಣೆಗಾಗಿ ಆ. 28ರಂದು ದಾವಣಗೆರೆಯಲ್ಲಿ ಬೃಹತ್ ಪ್ರತಿಭಟನೆ ಹಾಗೂ ಎಸಿ ಕಚೇರಿ ಮುತ್ತಿಗೆಗೆ ಬಿಜೆಪಿ ಕರೆ ನೀಡಿದೆ. ಮತ್ತೊಂದೆಡೆ ಸಿಎಂ ಡಿಕೆ ಶಿವಕುಮಾರ್​​ ಅವರನ್ನು ತೀರ್ಥಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಭೇಟಿಯಾಗಿದ್ದು, ರಾಜ್ಯದ ಅಡಿಕೆ‌ ಬೆಳೆಗಾರರ ರಕ್ಷಣೆ ಮಾಡುವಂತೆ ಮನವಿ ಮಾಡಿದ್ದಾರೆ.

ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರಿಗೆ ಸಂಕಷ್ಟ: ಆ.28ರಂದು ದಾವಣೆಗೆರೆಯಲ್ಲಿ ಬೃಹತ್​​ ಹೋರಾಟಕ್ಕೆ ಕರೆ
ಆ.28ರಂದು ದಾವಣೆಗೆರೆಯಲ್ಲಿ ಹೋರಾಟಕ್ಕೆ ಕರೆ
Image Credit source: Tv9 Kannada
Edited By:

Updated on: Aug 24, 2026 | 4:09 PM

ಮುಖ್ಯಾಂಶಗಳು

  • ರಾಜ್ಯ ಸರ್ಕಾರದಿಂದ ಗುಟ್ಕಾ ನಿಷೇಧ ಮಾಡಿ ಆದೇಶ
  • ಆದೇಶದಿಂದ ಸಂಕಷ್ಟಕ್ಕೆ ಸಿಲುಕಿದ ಅಡಿಕೆ ಬೆಳೆಗಾರರು
  • ಆ.28ರಂದು ದಾವಣೆಗೆರೆಯಲ್ಲಿ ಹೋರಾಟಕ್ಕೆ BJP ಕರೆ

ದಾವಣಗೆರೆ, ಆಗಸ್ಟ್​​ 24: ರಾಜ್ಯ ಸರ್ಕಾರ ಗುಟ್ಕಾ ನಿಷೇಧ ಮಾಡಿ ಆದೇಶ ಹೊರಡಿಸಿರುವ ಹಿನ್ನೆಲೆ ಅಡಿಕೆ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರದ ಈ ನೀತಿಯ ವಿರುದ್ದ ಬಿಜೆಪಿ ವತಿಯಿಂದ ಆಗಸ್ಟ್ 26ರ ಬೆಳಗ್ಗೆ 9ಗಂಟೆಗೆ ದಾವಣಗೆರೆ ಜಿಲ್ಲೆಯ ಎಲ್ಲಾ ತಾಲ್ಲೂಕಿನಿಂದ ಪಾದಯಾತ್ರೆ ನಡೆಯಲಿದೆ. ಆ. 28ರಂದು ದಾವಣಗೆರೆಯ ಎಸಿ ಕಚೇರಿ ಮುಂಭಾಗ ಅಡಿಕೆ ಬೆಳೆಗಾರರು ಹಾಗೂ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಲಿದ್ದು, ಬೆಳಗ್ಗೆ 11 ಗಂಟೆಗೆ ಬೃಹತ್ ಹೋರಾಟ ಹಾಗೂ ಎಸಿ ಕಚೇರಿ ಮುತ್ತಿಗೆಗೆ ನಿರ್ಧರಿಸಲಾಗಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತಿಳಿಸಿದ್ದಾರೆ.

‘ಸಿಗರೇಟ್, ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಅಲ್ವಾ?’

ಅಡಿಕೆ ನಿಷೇಧದ ಬಗ್ಗೆ ಸಿಎಂ ಮತ್ತು ಆರೋಗ್ಯ ‌ಸಚಿವರ ಹೇಳಿಕೆಗಳು ಭಿನ್ನವಾಗಿವೆ. ಗುಟ್ಕಾ ತಿಂದರೆ ಕ್ಯಾನ್ಸರ್ ಬರುತ್ತದೆ ಎಂದು ಅರೋಗ್ಯ ಸಚಿವರು ಹೇಳ್ತಾರೆ. ಹಾಗಾದ್ರೆ ಸಿಗರೇಟ್, ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಅಲ್ವಾ? 50 ಲಕ್ಷ ಕುಟುಂಬಗಳು ಅಡಿಕೆಯನ್ನು ನಂಬಿ ಜೀವನ ಮಾಡುತ್ತಿದ್ದಾರೆ. ಗುಟ್ಕಾ ನಿಷೇಧ ಮಾಡಿದ್ದೇ ತಡ ಅಡಿಕೆ ಬೆಲೆ ದಿಢೀರ್ ಕುಸಿದಿದೆ. ಹೀಗಾಗಿ ಈ ಸಂಬಂಧ ದೊಡ್ಡ ಮಟ್ಟದ ಹೋರಾಟವನ್ನು ದಾವಣಗೆರೆಯಲ್ಲಿ ಮಾಡಲಾಗುವುದು. ಪಕ್ಷಾತೀತವಾಗಿ ಎಲ್ಲ ರೈತರು ಹೋರಾಟದಲ್ಲಿ ಭಾಗಿಯಾಗಬೇಕು ಎಂದು ರೇಣುಕಾಚಾರ್ಯ ಕರೆ ನೀಡಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ ನಿಷೇಧ ನಿರ್ಧಾರ ನಮ್ಮದಲ್ಲ, FSSAI ಸೂಚನೆ: ಆಹಾರ ಇಲಾಖೆ ಸ್ಪಷ್ಟನೆ

ಸಿಎಂ ಭೇಟಿಯಾದ ಶಾಸಕ ಆರಗ ಜ್ಞಾನೇಂದ್ರ

ಗುಟ್ಕಾ ನಿಷೇಧದಿಂದ ಅಡಿಕೆ ಬೆಳಗಾರರಿಗೆ ತೊಂದರೆ ಆಗಿರುವ ಬಗ್ಗೆ ಸಿಎಂ ಡಿಕೆ ಶಿವಕುಮಾರ್​​ ಅವರನ್ನು ತೀರ್ಥಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಭೇಟಿಯಾಗಿದ್ದಾರೆ. ಆ ಬಳಿಕ ಮಾತನಾಡಿದ ಅವರು, ದೇಶದಲ್ಲಿ ಉತ್ಪಾದನೆಯಾಗುವೆ ಶೇ.70ರಷ್ಟು ಅಡಿಕೆಯನ್ನ ನಮ್ಮ‌ ರಾಜ್ಯದಲ್ಲಿ ಬೆಳೆಯುತ್ತಿದ್ದು, ಇದೊಂದು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ರಾಜ್ಯದ ಅಡಿಕೆ‌ ಬೆಳೆಗಾರರ ರಕ್ಷಣೆ ಮಾಡಬೇಕು, ಗುಟ್ಕಾ ಬ್ಯಾನ್ ಮಾಡಬಾರದು ಎಂದು ಮನವಿ ಮಾಡಿದ್ದೇವೆ. ಬೆಳೆಗಾರರ ಹಿತರಕ್ಷಣೆ ಮಾಡುತ್ತೇವೆ ಎಂದು ಸಿಎಂ ಕೂಡ ಭರವಸೆ ನೀಡಿದ್ದಾರೆ. ಯಾವುದೇ ರೀತಿಯಲ್ಲಿ ಬೆಳೆಗಾರರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಅಲ್ಲದೆ ಸಭೆ ಮಾಡುವ ಬಗ್ಗೆಯೂ ಭರವಸೆ ನೀಡಿರೋದಾಗಿ ಶಾಸಕರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More
Loading...
Unable to load recommendations.
Follow Us